Wednesday, September 25, 2024

ಸತ್ಯ | ನ್ಯಾಯ |ಧರ್ಮ

ಬದ್ಲಾಪುರ ಎನ್‌ಕೌಂಟರ್‌ | ‘ಸೇಡು ತೀರಿಸಿಕೊಂಡಿದ್ದೇವೆ’ ಎನ್ನುವ ಒಕ್ಕಣೆಯಿರುವ ಗನ್ ಹಿಡಿದ ದೇವೇಂದ್ರ ಫಡ್ನವಿಸ್ ಪೋಸ್ಟರುಗಳನ್ನು ಹಾಕಿಸಿದ ಬಿಜೆಪಿ!

ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪೋಸ್ಟರ್‌ಗಳು ಎಲ್ಲೆಡೆ ಚರ್ಚೆಗೆ ಕಾರಣವಾಗಿವೆ. ಬಂದೂಕು ಹಿಡಿದಿರುವ ಫೋಟೋಗಳ ಜತೆಗೆ ‘ನಾವು ಸೇಡು ತೀರಿಸಿಕೊಂಡಿದ್ದೇವೆ’ ಎಂದು ಬರೆಯಲಾಗಿದೆ.

ಬದ್ಲಾಪುರದ ಶಾಲೆಯೊಂದರಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಇಬ್ಬರು ಬಾಲಕಿಯರ ಮೇಲೆ ಶೌಚಾಲಯದಲ್ಲಿ ಕಸಗುಡಿಸುವ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಆರೋಪಿ ಅಕ್ಷಯ್ ಶಿಂಧೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸತ್ತಿದ್ದ. ಈ ಹಿನ್ನೆಲೆಯಲ್ಲಿ ಈ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.

ಬುಧವಾರ ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಪೋಸ್ಟರುಗಳು ಕಾಣಿಸಿಕೊಂಡಿವೆ. ಈ ಪೋಸ್ಟರ್‌ಗಳನ್ನು ‘ಬದ್ಲಾ ಪೂರಾ’ (ಸೇಡು ಪೂರ್ಣಗೊಂಡಿದೆ) ಎಂಬ ಅರ್ಥವನ್ನು ಹೊಮ್ಮಿಸುವಂತೆ ಚಿತ್ರಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವುದರಿಂದ ಬಿಜೆಪಿ ನಾಯಕರು ಈ ಪೋಸ್ಟರ್‌ಗಳನ್ನು ಹಾಕಿದ್ದಾರೆ ಎಂದು ಹೇಳಲಾಗಿದೆ. ಸಂತ್ರಸ್ತ ಬಾಲಕಿಯರ ಶಾಲೆಯ ತುಷಾರ್ ಆಪ್ಟೆ ಈ ಬ್ಯಾನರನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಬಿಜೆಪಿಯ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಂದು ಹೇಳಲಾಗಿದೆ.

ಏತನ್ಮಧ್ಯೆ, ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್ ಶಿಂಧೆ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿರುವ ಬಗ್ಗೆ ಪ್ರತಿಪಕ್ಷಗಳು ಅನುಮಾನ ವ್ಯಕ್ತಪಡಿಸಿವೆ. ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ, ಕಿಂಡರ್ ಗಾರ್ಟನ್ ಶಾಲೆ ನಡೆಸುತ್ತಿರುವ ಟ್ರಸ್ಟ್‌ನ ಕಾರ್ಯದರ್ಶಿ ಬಿಜೆಪಿ ನಾಯಕ ತುಷಾರ್ ಆಪ್ಟೆ ಅವರನ್ನು ರಕ್ಷಿಸಲು ಸರ್ಕಾರ ಅಕ್ಷಯ್ ಶಿಂಧೆಯನ್ನು ಕೊಂದಿದೆ ಎಂದು ಆರೋಪಿಸಿದ್ದಾರೆ.

ಮತ್ತೊಂದೆಡೆ, ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ, ಕೈಕೋಳ ಹಾಕಿದ್ದ ಆರೋಪಿಯು ಚಲಿಸುತ್ತಿದ್ದ ವಾಹನದಲ್ಲಿ ಪೊಲೀಸರಿಂದ ಪಿಸ್ತೂಲ್ ಕಿತ್ತುಕೊಳ್ಳಲು ಹೇಗೆ ಸಾಧ್ಯವಾಯಿತು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಗುಂಡು ತಗುಲಿ ಓರ್ವ ಪೊಲೀಸ್ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಪೊಲೀಸರೂ ಸುರಕ್ಷಿತವಾಗಿಲ್ಲ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಬೇಕು’ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಈ ಹಿಂದೆ ಬದ್ಲಾಪುರ್‌ ಹೆಸರಿನ ಕ್ರೈಮ್‌ ಸೀರೀಸ್‌ ಒಂದು ಬಿಡುಗಡೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page