Tuesday, October 1, 2024

ಸತ್ಯ | ನ್ಯಾಯ |ಧರ್ಮ

ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಮೇಲೆ ರಾಜಕೀಯ ದಾಳಿ ! ಸಮಾಜದ ಹೊಣೆಗಾರಿಕೆ ಏನು?

“‘ಲೋಕಾಯುಕ್ತದ ರಕ್ಷಣೆ’ ಎಂದು ಆಗಾಗ ಬೀದಿಗಿಳಿದ/ಚರ್ಚಿಸಿದ ನಾಗರಿಕ ಸಮಾಜವು ಲೋಕಾಯುಕ್ತದ ಮೇಲೆ ದಾಳಿ ಆಗುವಾಗಲೂ ಪ್ರತಿಕ್ರಿಯೆ ನೀಡುವುದು ಸಾಮಾಜಿಕ ಹೊಣೆಗಾರಿಕೆಯಾಗಿದೆ. ಅದರ ಭಾಗವಾಗಿ ಈ ಲೇಖನ !” ಪತ್ರಕರ್ತರಾದ ನವೀನ್ ಸೂರಿಂಜೆಯವರ ಲೇಖನ

ಲೋಕಾಯುಕ್ತದ ಎಡಿಜಿಪಿಯಾಗಿರುವ ಚಂದ್ರಶೇಖರ್ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಕೆಲಸ ಮಾಡಿದವರು. ಕೋಮುಗ್ರಸ್ತ ಕರಾವಳಿಯಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದ ನಾಲ್ವರು ಐಪಿಎಸ್ ಗಳನ್ನು ಅಲ್ಲಿಯ ಜನ ನೆನಪಿಟ್ಟುಕೊಳ್ಳುತ್ತಾರೆ. ಡಾ. ಸುಬ್ರಹ್ಮಣ್ಯೇಶ್ವರ ರಾವ್, ಗೋಪಾಲ್ ಹೊಸೂರು, ಅಮಿತ್ ಸಿಂಗ್ ಮತ್ತು ಚಂದ್ರಶೇಖರ್ ಈ ನಾಲ್ವರು ಅಧಿಕಾರಿಗಳು !

‘ಜನರ ಐಪಿಎಸ್ ಅಧಿಕಾರಿ’ ಎಂದೇ ಗುರುತಿಸಲ್ಪಡುವ ಚಂದ್ರಶೇಖರ್ ಪ್ರಚಾರದಿಂದ ದೂರ ಉಳಿದವರು. ಪತ್ರಿಕಾಗೋಷ್ಟಿಗಳನ್ನು ನಡೆಸಿದ್ದು ಕಡಿಮೆ. ಜನರ ಮಧ್ಯೆ ಕೆಲಸ ಮಾಡಲು ಕೆಲವರು ಮಾಧ್ಯಮವನ್ನು ಆಯ್ದುಕೊಂಡರೆ ಚಂದ್ರಶೇಖರ್ ನೇರ ಜನರ ಬಳಿ ಹೋದರು. ಮಂಗಳೂರಿನಲ್ಲಿ ‘ಕಮಿಷನರ್ ಕಚೇರಿಯಲ್ಲಿ ಫೋನ್ ಇನ್’ ಕಾರ್ಯಕ್ರಮವನ್ನು ಮೊದಲ ಬಾರಿ ರೂಪಿಸಿದವರು ಐಪಿಎಸ್ ಚಂದ್ರಶೇಖರ್. ಇದು ಸಾರ್ವಜನಿಕರಿಗೆ ಎಷ್ಟು ಪ್ರಯೋಜನವಾಯ್ತು ಎಂದರೆ ನಗರ ವ್ಯಾಪ್ತಿಯ ಹಳ್ಳಿ ಹಳ್ಳಿಯಿಂದ ನೇರವಾಗಿ ಜನ ಕಮಿಷನರ್ ಗೆ ದೂರು ನೀಡಿ ಪರಿಹಾರ ಕಂಡುಕೊಂಡರು. ಪೊಲೀಸ್ ಇನ್ಸ್ ಪೆಕ್ಟರ್ ಗಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ದೂರುಗಳಿಗೆ ಮರುಜೀವ ಬಂತು. ಕೋಮುಗಲಭೆಗಳ ನಿಯಂತ್ರಣಕ್ಕೂ ಇದು ಸಹಕಾರಿಯಾಯ್ತು ! ಜನರ ಜೊತೆ, ಜನಚಳವಳಿಗಳ ನಾಯಕರ ಜತೆ ಸಂವಾದಿಸುತ್ತಲೇ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ವಿರುದ್ದ ಈಗ ಕೇಂದ್ರದ ಪ್ರಭಾವಿ ಸಚಿವ ಹೆಚ್ ಡಿ ಕುಮಾರಸ್ವಾಮಿ ಆರೋಪಗಳನ್ನು ಮಾಡಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರ ಮೇಲಿರುವ ಹಗರಣಕ್ಕೂ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಮೇಲೆ ಅವರು ಮಾಡಿರುವ ಆರೋಪಕ್ಕೂ ಸಂಬಂಧವೇ ಇಲ್ಲ. ಯಾವುದೇ ಆರೋಪಿ ತನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿ ತನಿಖಾಧಿಕಾರಿ ಮೇಲೆಯೇ ಆರೋಪಿಸಿದರೆ ಮಾತ್ರ ಆಗ ತನಿಖಾಧಿಕಾರಿ ಆ ಕೇಸಿನ ವಿಚಾರಣೆಯಿಂದ ಹಿಂದೆ ಸರಿಯುವುದು ನೈತಿಕತೆ. ಆದರೆ ತನಿಖಾಧಿಕಾರಿ ಮೇಲೆ ತನಗೆ ಸಂಬಂಧವಿಲ್ಲದ ವಿಷಯದ ಬಗ್ಗೆ ಆರೋಪಿಸಿ ತನಿಖಾಧಿಕಾರಿಯ ವಿರುದ್ದ ಅಪಪ್ರಚಾರ ಮಾಡುವುದು ‘ತನಿಖೆಯ ಮೇಲೆ ಪ್ರಭಾವ ಬೀರುವ ಕೃತ್ಯ’ ಎಂದು ಭಾವಿಸಬೇಕು. ಈ ರೀತಿ ತನಿಖಾಧಿಕಾರಿಯನ್ನು ಬೆದರಿಸುವುದು ಆರೋಪಿಯ ‘ಜಾಮೀನು ನಿರಾಕರಣೆ’ ಗೆ ಸೂಕ್ತ ಪ್ರಕರಣವಾಗಿದೆ.

ಇಷ್ಟಕ್ಕೂ ಕುಮಾರಸ್ವಾಮಿಯವರು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ದ ಆರೋಪಿಸಿದ ಪ್ರಕರಣದಲ್ಲಿ ಹುರುಳಿದೆಯೇ ? ಪಿಎಸಿಎಲ್ ಭೂ ಹಗರಣದ ಆರೋಪಿಯಾಗಿರುವ ಅಮಾನತ್ತುಗೊಂಡ ಇನ್ಸ್ ಪೆಕ್ಟರ್ ಕಿಶೋರ್ ಕುಮಾರ್ ಎಂಬವರು ಆಗ ಐಜಿಪಿಯಾಗಿದ್ದ ಚಂದ್ರಶೇಖರ್ ವಿರುದ್ದ 20 ಕೋಟಿ ಲಂಚ ಬೇಡಿಕೆಯ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದರು. 2023 ನವೆಂಬರ್ 06 ರಂದು ನ್ಯಾಯಾಲಯವು ಚಂದ್ರಶೇಖರ್ ಹೆಸರನ್ನು ಕೈಬಿಟ್ಟಿದೆ. ಇದನ್ನು ಹೆಚ್ ಡಿ ಕುಮಾರಸ್ವಾಮಿಯವರು ಗೊತ್ತಿದ್ದೂ ಮರೆಮಾಚಿದ್ದಾರೆ.

ಕುಮಾರಸ್ವಾಮಿಯವರ ಇನ್ನೊಂದು ಆರೋಪ ಇರುವುದು ಶ್ರೀಧರ್ ಎಂಬವರು ಎಡಿಜಿಪಿ ಚಂದ್ರಶೇಖರ್ ವಿರುದ್ದ ದಾಖಲಿಸಿದ್ದ ಪಿಸಿಆರ್ ಎಫ್ಐಆರ್ ಕುರಿತಾಗಿ ! ತನ್ನ ವಿರುದ್ದ ತನಿಖೆ ಮಾಡುತ್ತಿರುವ ಲೋಕಾಯುಕ್ತ ಎಡಿಜಿಪಿಯಂತಹ ಅಧಿಕಾರಿಯನ್ನು ಮಣಿಸಲು ಕೇಂದ್ತ ಸಚಿವರೊಬ್ಬರು ರೌಡಿಶೀಟರ್ ಮೊರೆ ಹೊಂದಂತಿದೆ ! ಶ್ರೀಧರ್ ಒಬ್ಬ ರೌಡಿ ಶೀಟರ್ ! ರೌಡಿ ಶೀಟರ್ ಒಬ್ಬ ಐಪಿಎಸ್ ಅಧಿಕಾರಿ ವಿರುದ್ದ ಸಮರ ಸಾರಿದ್ದಾನೆ ಎಂದರೆ ಆ ಐಪಿಎಸ್ ಅಧಿಕಾರಿ ಸರಿಯಾದ ಮಾರ್ಗದಲ್ಲಿ ಇದ್ದಾರೆ ಎಂದರ್ಥ. ರೌಡಿ ಶೀಟರ್ ಶ್ರೀಧರ್ ಆನೇಕಲ್ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿ ಚಂದ್ರಶೇಖರ್ ವಿರುದ್ದ ಎಫ್ಐಆರ್ ದಾಖಲಿಸುತ್ತಾರೆ. ರೌಡಿಶೀಟರ್ ದಾಖಲಿಸಿದ ಪಿಸಿಆರ್ ರದ್ದುಕೋರಿ ಎಡಿಜಿಪಿ ಚಂದ್ರಶೇಖರ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತಾರೆ.

ಎಡಿಜಿಪಿ ಚಂದ್ರಶೇಖರ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ 28.06.2024 ರಂದು ನೀಡಿದ ಆದೇಶದ ಸಾರಾಂಶ ಈ ರೀತಿ ಇದೆ :- “ಎಡಿಜಿಪಿ ಚಂದ್ರಶೇಖರ್ ಕರ್ತವ್ಯದ ಭಾಗವಾಗಿ ದೂರುದಾರರ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ. ದೂರುದಾರ ಶ್ರೀಧರ್ ಕಾನೂನು ಬಾಹಿರ ಕೆಲಸಗಳನ್ನು ಮಾಡುತ್ತಿದ್ದು, ರೌಡಿಶೀಟರ್ ಆಗಿದ್ದಾರೆ. ಈತ ಹಲವು ಅಕ್ರಮಗಳಲ್ಲಿ ತೊಡಗಿರುವ ಕಾರಣದಿಂದ ಪೊಲೀಸ್ ಅಧಿಕಾರಿಯಾದ ಚಂದ್ರಶೇಖರ್ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಚಂದ್ರಶೇಖರ್ ವಿರುದ್ದ ಪಿಸಿಆರ್ ದಾಖಲಿಸಲಾಗಿದೆ. ಹಾಗಾಗಿ ಪಿಸಿಆರ್ ಜಾರಿಯಲ್ಲಿದ್ದರೆ ಕಾನೂನಿನ ದುರುಪಯೋಗವಾಗುತ್ತದೆ. ಆದ್ದರಿಂದ ಮುಂದಿನ ವಿಚಾರಣೆಯವರೆಗೆ ಪಿಸಿಆರ್ ಗೆ ತಡೆಯಾಜ್ಞೆ ನೀಡಲಾಗಿದೆ” ಎಂದು ಹೈಕೋರ್ಟ್ ಆದೇಶ ಹೇಳುತ್ತದೆ. ಹೈಕೋರ್ಟ್ ನ ತಡೆಯಾಜ್ಞೆ ಆದೇಶವೇ ಏಕಕಾಲಕ್ಕೆ ದೂರುದಾರನ ಮತ್ತು ಐಪಿಎಸ್ ಚಂದ್ರಶೇಖರ್ ಅವರ ಇತಿಹಾಸ ಹೇಳುತ್ತದೆ !

“ನಾನು ಸಂಪೂರ್ಣ ಮಾಹಿತಿ ಇಲ್ಲದೇ, ದಾಖಲೆಗಳನ್ನು ನೋಡದೇ ಎಡಿಜಿಪಿ ಚಂದ್ರಶೇಖರ್ ವಿರುದ್ದ ಮಾತನಾಡಿಲ್ಲ” ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಹಾಗಿದ್ದರೆ ತನ್ನ ಮೇಲಿನ ತನಿಖೆಯನ್ನು ದಾರಿ ತಪ್ಪಿಸಲು, ತನಿಖಾಧಿಕಾರಿಯನ್ನು ಬೆದರಿಸಲು ರೌಡಿಶೀಟರ್ ಪ್ರಕರಣವನ್ನು ಕೇಂದ್ರದ ಸಚಿವರು ಉದ್ದೇಶಪೂರ್ವಕವಾಗಿ ಬಳಸಿಕೊಂಡರೇ ?

“ನನ್ನ ವೈಯಕ್ತಿಕ ಕೇಸ್ ವಿಚಾರವಾಗಿ ನಾನು ಲೋಕಾಯುಕ್ತ ಎಡಿಜಿಪಿ ವಿರುದ್ದ ಹೋರಾಟ ಮಾಡ್ತಿರೋದಲ್ಲ. ರಾಜ್ಯಪಾಲರ ಕಚೇರಿಯಲ್ಲಿ ತನಿಖೆ ಮಾಡುವ ಮೂಲಕ ರಾಜ್ಯಪಾಲರ ಕಚೇರಿಗೆ ಅಗೌರವ ಮಾಡಲು ಹೊರಟಿದ್ದಾರೆ. ಅದರ ವಿರುದ್ದ ಹೋರಾಟ” ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯಪಾಲರ ಕಚೇರಿಗೆ ಕಳುಹಿಸಿದ ಲೋಕಾಯುಕ್ತ ಪತ್ರಗಳು ಸೋರಿಕೆಯಾಗಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದಾಗ ಲೋಕಾಯುಕ್ತ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದ್ದಾರೆ. ಲೋಕಾಯುಕ್ತ ಕಚೇರಿಯಿಂದ ದಾಖಲೆಗಳ ಸೋರಿಕೆಯಾಗಿಲ್ಲ, ರಾಜಭವನ ಸಿಬ್ಬಂದಿಯಿಂದಲೇ ದಾಖಲೆ ಸೋರಿಕೆ ನಡೆದಿದೆ ಎಂದು ಪ್ರಾಥಮಿಕವಾಗಿ ಗೊತ್ತಾಗಿದೆ. ಹಾಗಾಗಿ ಅನುಮತಿ ನೀಡಿದರೆ ರಾಜಭವನ ಸಿಬ್ಬಂದಿಯ ವಿಚಾರಣೆ ನಡೆಸಿ ಸೋರಿಕೆ ಪ್ರಕರಣದ ಸತ್ಯಾಸತ್ಯತೆ ಹೊರಗೆಡವಬಹುದು ಎಂಬುದು ಎಡಿಜಿಪಿ ಚಂದ್ರಶೇಖರ್ ನಿಲುವು. ಅದರಲ್ಲಿ ತಪ್ಪೇನಿದೆ ? ರಾಜಭವನಕ್ಕೆ ಅಗೌರವವಾಗುವುದು ಏನಿದೆ ? ಸಂವಿದಾನದ ಆರ್ಟಿಕಲ್ 361 (1)(2)(3) ಪ್ರಕಾರ ರಾಜ್ಯಪಾಲರಿಗೆ ಮಾತ್ರ ವಿಚಾರಣೆ, ಬಂಧನ, ಕೋರ್ಟ್ ಗಳಿಂದ ವಿನಾಯಿತಿ ಇದೆಯೇ ಹೊರತು ರಾಜಭವನದ ಸಿಬ್ಬಂದಿಗಳಿಗೆ ಇಲ್ಲ. ಹಾಗಾಗಿ ಸೋರಿಕೆಯ ಕ್ರೈಂ ನಡೆದಿದ್ದರೆ ವಿಚಾರಣೆಯಾದರೆ ತಪ್ಪೇನು ?

ರೌಡಿಶೀಟರ್, ರಾಜ್ಯಪಾಲರು, ಅಮಾನತ್ತುಗೊಂಡ ಇನ್ಸ್ ಪೆಕ್ಟರ್ ಗಳನ್ನು ಬಳಸಿಕೊಂಡು ಲೋಕಾಯುಕ್ತ ಎಡಿಜಿಪಿ ಮೇಲೆ ಪ್ರಹಾರ ನಡೆಸಿ ತನ್ನ ಹಗರಣ ಮುಚ್ಚಿಕೊಳ್ಳಲು ಕೇಂದ್ರ ಸಚಿವರೊಬ್ಬರು ಪ್ರಯತ್ನಿಸುತ್ತಿರುವುದು ವಿಪರ್ಯಾಸ. ‘ಲೋಕಾಯುಕ್ತದ ರಕ್ಷಣೆ’ ಎಂದು ಆಗಾಗ ಬೀದಿಗಿಳಿದ/ಚರ್ಚಿಸಿದ ನಾಗರಿಕ ಸಮಾಜವು ಲೋಕಾಯುಕ್ತದ ಮೇಲೆ ದಾಳಿ ಆಗುವಾಗಲೂ ಪ್ರತಿಕ್ರಿಯೆ ನೀಡುವುದು ಸಾಮಾಜಿಕ ಹೊಣೆಗಾರಿಕೆಯಾಗಿದೆ. ಅದರ ಭಾಗವಾಗಿ ಈ ಲೇಖನ !

Related Articles

ಇತ್ತೀಚಿನ ಸುದ್ದಿಗಳು

You cannot copy content of this page