Wednesday, October 2, 2024

ಸತ್ಯ | ನ್ಯಾಯ |ಧರ್ಮ

ಅನುಮತಿ ಇಲ್ಲದೆ ಪುತ್ತೂರು ವಿವೇಕಾನಂದ ಕಾಲೇಜಿಗೆ ಸ್ವಾಯತ್ತತೆ: ಮಂಗಳೂರು ವಿವಿಗೆ ಸರ್ಕಾರದಿಂದ ನೋಟೀಸ್

ಬೆಂಗಳೂರು: ಆರ್‌ಎಸ್‌ಎಸ್‌ ನಾಯಕ, ಹಿಂದುತ್ವವಾದಿ ಕಲ್ಲಡ್ಕ ಪ್ರಭಾಕರ ಭಟ್‌ ಅಧ್ಯಕ್ಷರಾಗಿರುವ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಇರುವ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳಿಗೆ ಸರ್ಕಾರದ ಅನುಮತಿ ಪಡೆಯದೆ ಮಂಗಳೂರು ವಿಶ್ವವಿದ್ಯಾನಿಲಯ ಸ್ವಾಯತ್ತ ಸ್ಥಾನಮಾನ ನೀಡಿತ್ತು. 

ಈ ಸ್ಥಾನಮಾನ ನೀಡುವ ಮುನ್ನ ರಾಜ್ಯ ಸರ್ಕಾರದ ಅನುಮತಿ ಪಡೆಯುವಂತೆ ಯುಜಿಸಿ ಹೇಳಿದ್ದರೂ ಮಂಗಳೂರು ವಿವಿ ನಿಯಮವನ್ನು ಕಡೆಗಣಿಸಿದೆ. ವಿವಿಯು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಅಧಿನಿಯಮ 2000ರ ಪ್ರಕರಣ 64 ಅನ್ವಯ ಸರ್ಕಾರದ ಪೂರ್ವ ಅನುಮತಿಯನ್ನು ಪಡೆಯಬೇಕು. ಕರ್ನಾಟಕ ರಾಜ್ಯ ಸರ್ಕಾರ ವಿವಿಗೆ ನೋಟೀಸು ನೀಡಿದೆ ಎಂದು ದಿ ಫೈಲ್‌ ವರದಿ ಮಾಡಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಕಾಲೇಜಿಗೆ ಮಂಗಳೂರು ವಿವಿ 2022-23 ರಿಂದ 2031-32 ರ ವರೆಗೆ ಸ್ವಾಯತ್ತತೆ ನೀಡಿತ್ತು. ಈ  ಸಂಬಂಧ ಅಗಸ್ಟ್‌ 10, 2022 ರಂದು ವಿವಿ ಪುತ್ತೂರಿನ ಈ ಕಾಲೇಜಿನ ಪ್ರಾಂಶುಪಾಲರಿಗೆ ಪತ್ರ ಬರೆದಿತ್ತು.

ವಿವಿಗೆ ನೀಡಿದ ನೊಟೀಸಿನಲ್ಲಿ ಏನಿದೆ? (ಇ- ಕ್ರಮಾಂಕ; ಇಡಿ 173 ಯುಡಿವಿ 2023, ದಿನಾಂಕ 30/09/2024)

ಶ್ರೀ ವಿವೇಕಾನಂದ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ನೀಡಲು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಪ್ರಕರಣ 64ರ ಅನ್ವಯ ವಿಶ್ವವಿದ್ಯಾಲಯವು ಸರ್ಕಾರದ ಪೂರ್ವಾನುಮತಿ ಪಡೆಯುವುದು ಅವಶ್ಯವಾಗಿರುತ್ತದೆ. ಆದರೆ ಮಂಗಳೂರು ವಿಶ್ವವಿದ್ಯಾಲಯವು ಸರ್ಕಾರದ ಪೂರ್ವಾನುಮತಿ ಪಡೆಯದೇ ಸ್ವಾಯತ್ತ ಸ್ಥಾನಮಾನ ನೀಡಿರುವುದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಪ್ರಕರಣ 64ರ ಸ್ಪಷ್ಟ ಉಲ್ಲಂಘನೆ ಮಾಡಿರುತ್ತದೆ ಎಂದು ನೊಟೀಸಿನಲ್ಲಿ ಹೇಳಲಾಗಿದೆ.

“ಈ ಹಿನ್ನೆಲೆಯಲ್ಲಿ ಸರ್ಕಾರದ ಪೂರ್ವಾನುಮತಿ ಪಡೆಯದೇ ತೆಗೆದುಕೊಂಡಿರುವಂತಹ ಈ ನಿರ್ಣಯಕ್ಕೆ ಕಾರಣಕರ್ತರಾದ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಪ್ರಕರಣ 8ರ ಅನ್ವಯ ಏಕೆ ಕ್ರಮ ಕೈಗೊಳ್ಳಬಾರದು ಎಂಬ ಬಗ್ಗೆ ಸೂಕ್ತ ಕಾರಣ, ಸ್ಪಷ್ಟಿಕರಣದೊಂದಿಗೆ ಲಿಖಿತ ಹೇಳಿಕೆಯನ್ನು 15 ದಿನದೊಳಗಾಗಿ ಸರ್ಕಾರಕ್ಕೆ ಸಲ್ಲಿಸಬೇಕು. ತಪ್ಪಿದ್ದಲ್ಲಿ ತಾವುಗಳು ಹೇಳುವುದು ಏನೂ ಇಲ್ಲವೆಂದು ಭಾವಿಸಿ ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು,” ಎಂದು ನೋಟೀಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page