Tuesday, October 8, 2024

ಸತ್ಯ | ನ್ಯಾಯ |ಧರ್ಮ

ಪೊಲಿಟಿಕಲ್ ಹಾಟ್ ಸ್ಪಾಟ್ ಆದ ಸತೀಶ್ ಜಾರಕಿಹೊಳಿ ಮನೆ ; ಪ್ರಭಾವಿ ನಾಯಕರ ದೌಡು

ರಾಜ್ಯ ರಾಜಕಾರಣದಲ್ಲಿ ಮುಡಾ ಪ್ರಕರಣದ ಗದ್ದಲ ನಿಧಾನವಾಗಿ ತಣ್ಣಗಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಬದಲಾವಣೆ ಚರ್ಚೆಯ ಬಿಸಿ ಜೋರಾಗಿದೆ. ಸಚಿವ ಸತೀಶ್ ಜಾರಕಿಹೊಳಿಯವರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಭೇಟಿಯ ಬಳಿಕ ಈ ಚರ್ಚೆ ಶುರುವಾಗಿದೆ.

ಇನ್ನೊಂದು ಕಡೆ ಸತೀಶ್ ಜಾರಕಿಹೊಳಿ ದೆಹಲಿ ಭೇಟಿಯ ನಂತರ ದಲಿತ ಸಂಘರ್ಷ ಸಮಿತಿ ಕಾರ್ಯಕ್ರಮದಲ್ಲೂ ‘ಮುಂದಿನ ಮುಖ್ಯಮಂತ್ರಿ’ ಕೂಗು ಕೇಳಿದೆ. ಆ ನಂತರ ಒಬ್ಬೊಬ್ಬೇ ನಾಯಕರು ಸತೀಶ್ ಜಾರಕಿಹೊಳಿ ಮನೆ ಕಡೆ ಪ್ರತ್ಯಕ್ಷರಾಗುತ್ತಿದ್ದಾರೆ. ಇಂದು ಬೆಳಿಗ್ಗೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದ್ದು ಸಹ ಹಲವು ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಬಿವೈ ವಿಜಯೇಂದ್ರ ಇದೊಂದು ಅಫಿಷಿಯಲ್ ಭೇಟಿ ಎಂಬ ಹೇಳಿಕೆ ಕೊಟ್ಟಿದ್ದರೂ, ತಮ್ಮದೇ ಪಕ್ಷದ ನಾಯಕರಿಂದ “ಅಡ್ಜಸ್ಟಮೆಂಟ್ ರಾಜಕಾರಣ” ದ ಕಳಂಕ ಹೊತ್ತಿರುವಾಗ ಸತೀಶ್ ಜಾರಕಿಹೊಳಿ ಭೇಟಿ ಹಲವು ಚರ್ಚೆಗೆ ಕಾರಣವಾಗಿದೆ.

ಸತೀಶ್ ಭೇಟಿ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿಕಾರಿಪುರದ ಮುಖಂಡರ ಜೊತೆ ಭೇಟಿಯಾಗಿದ್ದೆ. ನಮ್ಮ ಜಿಲ್ಲೆಯಲ್ಲಿ ಎರಡು ಹೈವೇ ಟೋಲ್​​​ಗಳು ಬಂದಿವೆ. ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಭೇಟಿ ಮಾಡಿದ್ದೆ ಎಂದು ಹೇಳಿದ್ದಾರೆ.

ಇನ್ನೊಂದು ಕಡೆ ಮಾಜಿ ಸಂಸದ ಡಿಕೆ ಸುರೇಶ್​​ ಕೂಡ ಸತೀಶ್​​ ಜಾರಕಿಹೊಳಿ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದಾರೆ. ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ಕನಕಪುರ ಅಭಿವೃದ್ಧಿ ವಿಚಾರವಾಗಿ ಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಲೋಕೋಪಯೋಗಿ ಇಲಾಖೆಗೆ ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡಿದ ತಕ್ಷಣ ಕೊಡ್ತೇವೆ ಎಂದು ಹೇಳಿದ್ದಾರೆ. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ ಎಂದಿದ್ದಾರೆ.

ಎರಡು ದಿನಗಳ ಹಿಂದೆ ಡಿಕೆ ಸುರೇಶ್ ಐದು ವರ್ಷಗಳ ಕಾಲ ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ ಎಂಬುದನ್ನು ಪುನರುಚ್ಚರಿಸಿದ್ದರು. ಇದರ ಅರ್ಥ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಯೇ ಇಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದ್ದರೂ, ರಾಜ್ಯ ನಾಯಕರು ಮುಖ್ಯಮಂತ್ರಿ ಬದಲಾವಣೆಗೆ ಪರೋಕ್ಷವಾಗಿ ಹೈಕಮಾಂಡ್ ಗೆ ಪಟ್ಟು ಹಾಕಿರಬಹುದು ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಅವರಿಂದ ಕೈತಪ್ಪುವ ಮುಖ್ಯಮಂತ್ರಿ ಹುದ್ದೆ ಅಹಿಂದ ವರ್ಗಕ್ಕೇ ಸಿಗಬೇಕು ಎಂಬ ಒತ್ತಾಯ ಕೂಡ ರಾಜ್ಯವ್ಯಾಪಿ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಹೆಸರು ಅಗ್ರಪಂಕ್ತಿಯಲ್ಲಿ ನಿಂತಿದೆ. ಅಹಿಂದ ವರ್ಗ, ಮೇಲಾಗಿ ದಲಿತ ಸಮುದಾಯ ಕೂಡ ಸತೀಶ್ ಜಾರಕಿಹೊಳಿ ಹಿಂದೆ ಇರುವುದರಿಂದ ಕಾಂಗ್ರೆಸ್ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಬಗ್ಗೆ ಚಿಂತಿಸಿದೆ ಎನ್ನಲಾಗಿದೆ.

ಕಳೆದ ಕೆಲ ದಿನಗಳಿಂದ ಸಚಿವರನ್ನ ಪ್ರತ್ಯೇಕವಾಗಿ ಸತೀಶ್ ಜಾರಕಿಹೊಳಿ ಭೇಟಿ ಆಗ್ತಿದ್ದಾರೆ. ಮುಂದಿನ ರಾಜಕೀಯ ತಂತ್ರಗಾರಿಕೆ ಸಿದ್ಧತೆ ಮಾಡಿಕೊಂಡಿದ್ದಾರೆ, ಈ ಹಿನ್ನೆಲೆಯಲ್ಲಿ ಡಿಕೆ ಬ್ರದರ್ಸ್ ಅಲರ್ಟ್ ಆಗಿದ್ದಾರೆ. ಇದರ ಭಾಗವಾಗಿಯೇ ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಡಿಕೆ ಶಿವಕುಮಾರ್ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಧ್ಯ ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಆಕಾಂಕ್ಷಿ ಆಗಿರುವ ಡಿಕೆ ಶಿವಕುಮಾರ್ ಅವರಿಗೆ ಮುನ್ನೆಲೆಗೆ ಬಂದಿರುವ ಸತೀಶ್ ಜಾರಕಿಹೊಳಿ ಹೆಸರೂ ಸಹ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page