Wednesday, October 9, 2024

ಸತ್ಯ | ನ್ಯಾಯ |ಧರ್ಮ

ಹರಿಯಾಣ: ತನ್ನ ಕಾಲಿನ ಮೇಲೆ ತಾನೇ ಕಲ್ಲು ಎತ್ತಿ ಹಾಕಿಕೊಂಡ ಕಾಂಗ್ರೆಸ್!‌

ಬಹು ನಿರೀಕ್ಷಿತ ಹರಿಯಾಣ ಚುನಾವಣೆಯ ಎಣಿಕೆ ಮುಗಿದಿದೆ. ಎಲ್ಲ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿ ಬಿಜೆಪಿ ತಾನು ಗೆದ್ದು ಬೀಗಿದೆ ಮತ್ತು ಇದೇ ಮೊದಲ ಬಾರಿಗೆ ಹರ್ಯಾಣದಲ್ಲಿ ಪಕ್ಷವೊಂದು ಮೂರನೇ ಬಾರಿಗೆ ಸರ್ಕಾರವನ್ನು ರಚಿಸಲಿದೆ

ಹಾಗಿದ್ದರೆ ಕಾಂಗ್ರೆಸ್‌ ಸೋಲಲು ಕಾರಣವೇನು? ಎಕ್ಸಿಟ್‌ ಪೋಲ್‌ ಈ ಮಟ್ಟಿಗೆ ಹೇಗೆ ತಲೆ ಕೆಳಗಾಯಿತು? ಬಿಜೆಪಿ ರಾಜಕೀಯ ನಿಪುಣರ ಲೆಕ್ಕಗಳೆಲ್ಲ ತರಗೆಲೆಯಂತೆ ಹಾರಿ ಹೋಗುವಂತಹ ಫಲಿತಾಂಶವನ್ನು ಹೇಗೆ ಪಡೆಯಿತು? ಬನ್ನಿ ಒಂದೊಂದಾಗಿ ಕಾರಣಗಳನ್ನು ತಿಳಿದುಕೊಳ್ಳೋಣ.

ಜಾಟ್‌ ಮತ್ತು ಇತರರು

ಕಾಂಗ್ರೆಸ್‌ ಸೋಲಿಗೆ ಮೊದಲ ಕಾರಣ ಭೂಪಿಂದರ್‌ ಹೂಡಾ ಅವರನ್ನು ಪರೋಕ್ಷವಾಗಿ ಮು‍ಖ್ಯಮಂತ್ರಿ ಅಭ್ಯರ್ಥಿ ಎನ್ನುವಂತೆ ಬಿಂಬಿಸಿದ್ದು. ಇದರ ಲಾಭ ಪಡೆದ ಬಿಜೆಪಿ ತಾನು ಜಾಟ್‌ ಸಮುದಾಯವನ್ನು ಹೊರತುಪಡಿಸಿದ ಮತಗಳ ಮೇಲೆ ಗಮನವನ್ನು ಕೇಂದ್ರೀಕರಿಸಿತು. ಇತರ ಸಮುದಾಯಗಳನ್ನು ಜಾಟ್‌ ಮತಗಳ ವಿರುದ್ಧ ಒಟ್ಟುಗೂಡಿಸುವಲ್ಲಿ ಯಶಸ್ವಿಯಾದ ಬಿಜೆಪಿ ಜಾಟ್‌ ಪ್ರಾಬಲ್ಯದ ಸ್ಥಳಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಾಲು ಮುರಿದು ಕೂರಿಸಿತು.

ಅಸಂಧ್, ದಾದ್ರಿ, ಯಮುನಾನಗರ, ಸಫಿಡಾನ್, ಸಮಲ್ಖಾ, ಗೊಹಾನಾ, ರಾಯ್, ಫತೇಹಾಬಾದ್, ತೋಷಮ್, ಬಧ್ರಾ, ಮಹೇಂದ್ರಗಢ ಮತ್ತು ಬರ್ವಾಲಾ ಮುಂತಾದ ಸ್ಥಾನಗಳಲ್ಲಿ ಕಾಂಗ್ರೆಸ್‌ ಇದೇ ಕಾರಣದಿಂದಾಗಿ ಸಣ್ಣ ಅಂತರಗಳಿಂದ ತನ್ನ ಸೀಟುಗಳನ್ನು ಕಳೆದುಕೊಂಡಿದೆ.

ಬಿಜೆಪಿಯ ಮೈಕ್ರೋ ಮ್ಯಾನೇಜ್ಮೆಂಟ್‌ ಇಲ್ಲಿ ಆ ಪಕ್ಷವನ್ನು ಕೈ ಹಿಡಿದಿದೆ. ಜಾಟ್‌ ಸಮುದಾಯವನ್ನು ಅಧಿಕಾರದಿಂದ ದೂರವಿಡುವುದಕ್ಕಾಗಿ ಉಳಿದ ಸಣ್ಣ ಸಮುದಾಯಗಳು ಮೌನವಾಗಿ ತಮ್ಮ ಮತವನ್ನು ಬಿಜೆಪಿಯತ್ತ ಹರಿಬಿಟ್ಟವು. ಇದು ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿತು.

ಹರಿಯಾಣದ ರಾಜಕೀಯದ ಮೇಲೆ ತೀವ್ರ ಕಣ್ಣಿಟ್ಟಿರುವ ಹಿರಿಯ ಪತ್ರಕರ್ತ ಆದೇಶ್ ರಾವಲ್ ಅವರ ಪ್ರಕಾರ, “ಹರಿಯಾಣದಲ್ಲಿ ಸುಮಾರು 22 ಪ್ರತಿಶತದಷ್ಟು ಜಾಟ್ ಮತಗಳಿವೆ. ಇಲ್ಲಿ ಜಾಟ್‌ ಸಮುದಾಯ ದೊಡ್ಡ ಮಟ್ಟದಲ್ಲೇ ರಾಜಕೀಯವಾಗಿ ದನಿಯೆತ್ತುತ್ತದೆ ಎನ್ನುವದನ್ನು ಗಮನಿಸಬೇಕು.”

ಗುಂಪುಗಾರಿಕೆ

ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದೊಳಗಿನ ಗುಂಪುಗಾರಿಕೆಯೂ ಪ್ರಮುಖ ಕಾರಣ. ಭೂಪಿಂದರ್ ಸಿಂಗ್ ಹೂಡಾ ಅವರ ಪಾಳಯದವರು ಯಾರು ಮತ್ತು ಕುಮಾರಿ ಸೆಲ್ಜಾ ಅವರ ಆಪ್ತರು ಯಾರು ಎಂಬ ರೀತಿಯಲ್ಲಿ ರಾಜ್ಯದ ಕಾಂಗ್ರೆಸ್ ಅಭ್ಯರ್ಥಿಗಳನ್ನು ನೋಡಲಾಗಿತ್ತು.

ಇದಲ್ಲದೆ ದೇಶದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೆಂದರೆ ಹೈಕಮಾಂಡ್‌ ಅಭ್ಯರ್ಥಿಗಳು ಎನ್ನುವ ಭಾವನೆಯೂ ಇದೆ.

ಹರ್ಯಾಣದಲ್ಲಿ ಗುಂಪುಗಾರಿಕೆ ಮತ್ತು ತಪ್ಪಾದ ಟಿಕೆಟ್ ಹಂಚಿಕೆಯಿಂದಾಗಿ ಕಾಂಗ್ರೆಸ್ ಸುಮಾರು 13 ಸ್ಥಾನಗಳನ್ನು ಕಳೆದುಕೊಂಡಿದೆ ಎಂದು ಪತ್ರಕರ್ತ ಹೇಮಂತ್ ಅತ್ರಿ ಹೇಳುತ್ತಾರೆ. ಇದರಲ್ಲಿ ಭೂಪಿಂದರ್ ಸಿಂಗ್ ಹೂಡಾ, ಕುಮಾರಿ ಸೆಲ್ಜಾ ಮತ್ತು ಕಾಂಗ್ರೆಸ್ ಹೈಕಮಾಂಡ್ ಮೂರೂ ಕಡೆಯವರ ಅಭ್ಯರ್ಥಿಗಳಿದ್ದರು.

ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಲೇ ಇದ್ದವು. ಹಲವು ಕಾಂಗ್ರೆಸ್ ನಾಯಕರು ಚುನಾವಣೆ ಗೆಲ್ಲುವ ಮುನ್ನವೇ ಮುಖ್ಯಮಂತ್ರಿ ಹುದ್ದೆಯತ್ತ ಹೆಚ್ಚು ಗಮನಹರಿಸಿದ್ದರು.

ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಈ ಚುನಾವಣೆಗಳ ದೊಡ್ಡ ಪಾಠವೆಂದರೆ ಯಾರೂ ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರಬಾರದು ಎಂದು ಹೇಳಿದ್ದಾರೆ. ನಿಸ್ಸಂಶಯವಾಗಿ, ಅವರ ಮಾತಿನ ಗುರಿ ಕಾಂಗ್ರೆಸ್ ಮೇಲೆಯೇ ಇದೆ. ಹರಿಯಾಣದಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಮೈತ್ರಿ ಬಗ್ಗೆ ಚರ್ಚೆ ನಡೆದಿತ್ತು, ಆದರೆ ಎರಡು ಪಕ್ಷಗಳ ನಡುವೆ ಸೀಟು ಹಂಚಿಕೆ ಬಗ್ಗೆ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ಸೀಟು ಹಂಚಿಕೆ

    ಈ ಬಾರಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಬದಲಾಯಿಸಿದೆ. ಈ ಪೈಕಿ 16 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿಯು ತನ್ನ ಹಳೆಯ 27 ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಮತ್ತು ಸುಮಾರು 22 ಹೊಸ ಸ್ಥಾನಗಳನ್ನು ಗೆದ್ದಿದೆ.

    “ಇತ್ತ ಕಾಂಗ್ರೆಸ್‌ ತನ್ನ ಹಾಲಿ ಶಾಸಕರ ಟಿಕೆಟ್‌ ರದ್ದುಗೊಳಿಸಲಿಲ್ಲ, ಪರಿಣಾವಾಗಿ ದರ ಅರ್ಧದಷ್ಟು ಅಭ್ಯರ್ಥಿಗಳು ಸೋತರು. ಅಭ್ಯರ್ಥಿಗಳನ್ನು ಬದಲಾಯಿಸದಿರುವುದು ಕಾಂಗ್ರೆಸ್‌ಗೆ ದೊಡ್ಡ ನಷ್ಟವಾಗಿದೆ” ಎನ್ನುವುದು ಅತ್ರಿಯವರ ಅಭಿಪ್ರಾಯ.

    2019ರ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 90 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಮತ್ತು 40 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಬಿಜೆಪಿ 89 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. 2019ರಲ್ಲಿ ಕಾಂಗ್ರೆಸ್ 90ರಲ್ಲಿ 31 ಸ್ಥಾನಗಳನ್ನು ಗೆದ್ದಿತ್ತು.

    ಈ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್ ಶೇ.43 ಮತಗಳನ್ನು ಪಡೆದರೆ ಬಿಜೆಪಿ ಶೇ.46 ಮತಗಳನ್ನು ಪಡೆದಿದೆ. ಅಂದರೆ ಎರಡು ಪ್ರಮುಖ ಪಕ್ಷಗಳ ನಡುವಿನ ಮತಗಳ ವ್ಯತ್ಯಾಸ ತೀರಾ ಕಡಿಮೆ.

    ಕಾಂಗ್ರೆಸ್‌ ಪಕ್ಷದಿಂದ ಅಂತರ ಕಾಯ್ದುಕೊಂಡ ದಲಿತ ಮತದಾರರು


    ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಸುಮಾರು 44 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗರಿಷ್ಠ ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ 42 ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿದೆ. ಈ ವಿಷಯದಲ್ಲೂ ಎರಡು ಪಕ್ಷಗಳ ನಡುವಿನ ವ್ಯತ್ಯಾಸವು ತೀರಾ ಕಡಿಮೆ ಇತ್ತು. ತಜ್ಞರ ಪ್ರಕಾರ ಲೋಕಸಭೆ ಚುನಾವಣೆಯಲ್ಲಿ ದಲಿತರ ಹೆಚ್ಚಿನ ಮತಗಳು ಕಾಂಗ್ರೆಸ್ ಪಾಲಾಗಿದ್ದವು, ಆದರೆ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಈ ಮತ ಕಾಂಗ್ರೆಸ್‌ನಿಂದ ದೂರವಾದಂತಿದೆ.

    ಈ ವರ್ಷದ ಲೋಕಸಭಾ ಚುನಾವಣೆಯಲ್ಲಿ ಮಾಯಾವತಿ ಅವರ ಬಿಎಸ್ಪಿ ಹರಿಯಾಣದಲ್ಲಿ ಕೇವಲ ಶೇಕಡಾ 1ರಷ್ಟು ಮತಗಳನ್ನು ಗಳಿಸಿದೆ. ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ, ಅದು ರಾಜ್ಯದಲ್ಲಿ ತನ್ನ ಶೇಕಡಾವಾರು ಮತಗಳಿಕೆಯನ್ನು ಹೆಚ್ಚಿಸಿಕೊಂಡಿದೆ.

    ಅಷ್ಟೇ ಅಲ್ಲ, ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ತನ್ನ ವೋಟ್‌ ಬ್ಯಾಂಕನ್ನು ಸುಮಾರು ಒಂದು ಪ್ರತಿಶತದಷ್ಟು ಹಿಗ್ಗಿಸಿಕೊಂಡಿದೆ.

    ಉದಾಹರಣೆಗೆ, ರಾಜ್ಯದ ಅಸಂಧ್ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯ ನಂತರ, ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್‌ ಅಭ್ಯರ್ಥಿಗಿಂತಲೂ 2300ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರೆ, ಬಿಎಸ್ಪಿ ಈ ಸ್ಥಾನದಲ್ಲಿ 27 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದೆ. ಈ ಸ್ಥಾನದ ಬಗ್ಗೆ ಅಧಿಕೃತ ಫಲಿತಾಂಶವನ್ನು ಇನ್ನೂ ಘೋಷಿಸಲಾಗಿಲ್ಲ.

    “ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ದಲಿತರು ಕಾಂಗ್ರೆಸ್‌ ಪಕ್ಷಕ್ಕೆ ಮತ ಚಲಾಯಿಸಿದ್ದರು. ಮೂರು ತಿಂಗಳೊಳಗೆ ದಲಿತ ಮತಗಳು ತನ್ನಿಂದ ದೂರವಾಗಲು ಕಾರಣವೇನು ಎಂದು ಕಾಂಗ್ರೆಸ್ ಯೋಚಿಸಬೇಕು” ಎಂದು ಆದೇಶ್‌ ರಾವಲ್‌ ಹೇಳುತ್ತಾರೆ.

    ಆಧಾರ: ಬಿಬಿಸಿ

    Related Articles

    ಇತ್ತೀಚಿನ ಸುದ್ದಿಗಳು

    You cannot copy content of this page