Thursday, October 10, 2024

ಸತ್ಯ | ನ್ಯಾಯ |ಧರ್ಮ

ಕ್ರಿಪ್ಟೋ ಕರೆನ್ಸಿ ಮೇಲೆ ಕೋಟಿಗಟ್ಟಲೆ ಹೂಡಿಕೆ ; ಕಟ್ಟುನಿಟ್ಟಿನ ಕ್ರಮದ ಮುನ್ಸೂಚನೆ; ಮಲೆನಾಡಿಗರೇ ಎಚ್ಚರ!

ಕ್ರಿಪ್ಟೋ ಕರೆನ್ಸಿ. ಭಾರತದಲ್ಲಿ ಸದ್ದೇ ಇಲ್ಲದೇ ಹಳ್ಳಿ ಹಳ್ಳಿಗಳಿಗೂ ಸ್ವಸಹಾಯ ಸಂಘಗಳಷ್ಟೇ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಒಂದು ದೊಡ್ಡ ಜಾಲ. ಬಹುತೇಕ ತಳ ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗಗಳು ಈ ಕ್ರಿಪ್ಟೋ ಕರೆನ್ಸಿ ಉದ್ಯಮಕ್ಕೆ ಹಣ ಹೂಡಿದ್ದಾರೆ. ಆದರೆ ಈ ಕ್ರಿಪ್ಟೋ ಕರೆನ್ಸಿ ಭಾರತದ ಹಣಕಾಸು ವ್ಯವಸ್ಥೆಯ ಯಾವ ಕಾನೂನಿನ ಅಡಿಯಲ್ಲೂ ಕೆಲಸ ಮಾಡದೇ ನ್ಯಾಯಬದ್ಧವಲ್ಲದ ಉದ್ಯಮ ಎಂಬುದು ಹಲವರಿಗೆ ತಿಳಿಯದ ಸಂಗತಿಯಾಗಿದೆ.

ಕ್ರಿಪ್ಟೋಕರೆನ್ಸಿ ಅಥವಾ ಕ್ರಿಪ್ಟೋ ಎಂಬುದು ಕ್ರಿಪ್ಟೋಗ್ರಫಿಯಿಂದ ಸುರಕ್ಷಿತವಾಗಿರುವ ವರ್ಚುವಲ್ ಕರೆನ್ಸಿಯಾಗಿದೆ. ವೈಯಕ್ತಿಕ ಮಾಲೀಕತ್ವದ ದಾಖಲೆಗಳನ್ನು ಗಣಕೀಕೃತ ಡೇಟಾಬೇಸ್‌ನಲ್ಲಿ ಸಂಗ್ರಹಿಸುವ ವಿನಿಮಯದ ಮಾಧ್ಯಮವಾಗಿ ಕಾರ್ಯನಿರ್ವಹಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಕ್ರಿಪ್ಟೋಕರೆನ್ಸಿಗಳ ವಿಶಿಷ್ಟ ಲಕ್ಷಣವೆಂದರೆ ಯಾವುದೇ ದೇಶದ ಸರ್ಕಾರಿ ಏಜೆನ್ಸಿಗಳ ಕಡೆಯಿಂದ ಕ್ರಿಪ್ಟೋ ಕರೆನ್ಸಿಗಳಿಗೆ ಯಾವುದೇ ಹಸ್ತಕ್ಷೇಪ ಮತ್ತು ಕಾನೂನುಗಳು ಅನ್ವಯವಾಗದಂತೆ ಪ್ರತಿರಕ್ಷಿತವಾಗಿರಿಸಿದೆ. ಈ ಎಲ್ಲಾ ಅಂಶಗಳ ಒಳಗೊಂಡ ಹಿನ್ನೆಲೆಯಲ್ಲಿ ವಿದೇಶಿ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಈಗಾಗಲೇ ಒಂಬತ್ತು ವಿದೇಶಿ ಕ್ರಿಪ್ಟೋ ಕರೆನ್ಸಿ ಪ್ಲಾಟ್‌ಫಾರ್ಮ್‌ಗಳಿಗೆ ಮನಿ ಲಾಂಡರಿಂಗ್‌ ವಿರೋಧಿ ಕಾಯಿದೆ ಅಡಿಯಲ್ಲಿ ಕಟ್ಟುನಿಟ್ಟಿನ ಶೋಕಾಸ್‌ ನೋಟಿಸ್‌ ನೀಡಿ ನಿರ್ಬಂಧಿಸಿದೆ.

ಇಷ್ಟಾದರೂ ಸಹ ಎರಡೇ ದಿನಗಳ ಹಿಂದೆ ಯುಬಿಐಟಿ ಕ್ರಿಪ್ಟೋಕರೆನ್ಸಿ ಯೋಜನೆಗೆ ಉತ್ತೇಜನ ನೀಡಿದ್ದಕ್ಕಾಗಿ ಮತ್ತು ಹೂಡಿಕೆದಾರರಿಗೆ ಹೆಚ್ಚಿನ ಆದಾಯದ ಭರವಸೆ ನೀಡಿ ಆಮಿಷ ಒಡ್ಡಿದ್ದಕ್ಕಾಗಿ ತೆಲಂಗಾಣದ ದಾಸರಿ ರಮೇಶ್ (40), ಬೊಮ್ಮಿಡಿ ಧನುಂಜಯ್ (34) ಮತ್ತು ಕಿರಂ ವೆಂಕಟೇಶ್ (31) ಅವರನ್ನು ಬಂಧಿಸಲಾಗಿದೆ..

ಸುಮಾರು ₹ 50 ಕೋಟಿ ಮೊತ್ತದ ಹಗರಣದಲ್ಲಿ ಜಿಲ್ಲೆಯ ಸುಮಾರು 5,000 ಜನರನ್ನು ಬಂಧಿಸಿದ್ದಕ್ಕಾಗಿ ಭಾರತೀಯ ಸೇನೆಯ ಮಾಜಿ ಅಧಿಕಾರಿ, ಅಬಕಾರಿ ಸಬ್ ಇನ್‌ಸ್ಪೆಕ್ಟರ್, ಪೊಲೀಸ್ ಪೇದೆ ಮತ್ತು ಇಬ್ಬರು ಸರ್ಕಾರಿ ಶಿಕ್ಷಕರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ ವಾರಗಳ ನಂತರ ಮತ್ತೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ಈ ಮೂವರು ವಂಚನೆಯ ಪಿರಮಿಡ್ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ನೇಮಕಾತಿ ಮತ್ತು ಹಣವನ್ನು ಸಂಗ್ರಹಿಸುವಲ್ಲಿ ತೊಡಗಿದ್ದರು ಎನ್ನಲಾಗಿದೆ.

ಕ್ರಿಪ್ಟೋಕರೆನ್ಸಿ ಹೂಡಿಕೆಯ ನೆಪದಲ್ಲಿ ಹೂಡಿಕೆದಾರರನ್ನು ವಂಚಿಸಿರುವ ಬ್ರಿಜ್ ಮೋಹನ್ ಸಿಂಗ್ ಎಂಬಾತ ದೇಶದ ವಿವಿಧ ಭಾಗಗಳಲ್ಲಿ ಪದೇ ಪದೇ ಅಪರಾಧಿಯಾಗಿರುವ ಬ್ರಿಜ್ ಮೋಹನ್ ಸಿಂಗ್ ಈ ಹಗರಣವನ್ನು ರೂಪಿಸಿದ್ದ ಎಂದು ನಿರ್ಮಲ್ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಡಾ.ಜಿ.ಜಾನಕಿ ಶರ್ಮಿಳಾ ಬಹಿರಂಗಪಡಿಸಿದ್ದಾರೆ.

ನಡೆಯುತ್ತಿರುವ ತನಿಖೆಯ ಭಾಗವಾಗಿ, ನಿರ್ಮಲ್ ಪೊಲೀಸರು ವಂಚನೆಯ ಯೋಜನೆಗೆ ಸಂಬಂಧಿಸಿದ 11 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ. ಹಗರಣಕ್ಕೆ ಸಂಬಂಧಿಸಿದ ಹಣಕಾಸಿನ ವಹಿವಾಟುಗಳನ್ನು ಪೊಲೀಸರು ಟ್ರ್ಯಾಕ್ ಮಾಡುತ್ತಿದ್ದು, ಉಳಿದ ಖಾತೆಗಳನ್ನು ಫ್ರೀಜ್ ಮಾಡುವ ಮತ್ತು ಆಸ್ತಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ.

ಸಧ್ಯ ಈ ವಂಚನೆಯ ಜಾಲ ಕರ್ನಾಟಕದಲ್ಲೂ ಕೆಲಸ ಮಾಡುತ್ತಿದೆ. ಈಗಾಗಲೇ ತಿಳಿಸಿದಂತೆ ಬಹುತೇಕ ಮಲೆನಾಡು ಭಾಗದ ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗಗಳ ಜನರು ಈ ನಿಶೇಧಿತ ವಲಯಕ್ಕೆ ಕೋಟ್ಯಂತರ ರೂಪಾಯಿಗಳ ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಮುಖವಾಗಿ ಭಾರತದ ಯಾವುದೇ ಕಾನೂನು ತೆರಿಗೆ ಸಂಬಂಧಿತ ಅಂಶಗಳು ಇದಕ್ಕೆ ಅನ್ವಯ ಆಗದ ಹಿನ್ನೆಲೆಯಲ್ಲಿ ಅಲ್ಪಸ್ವಲ್ಪ ಉಳಿತಾಯದ ಹಣವನ್ನೂ ಸಹ ಇದರ ಮೇಲೆ ವಿನಿಯೋಗಿಸಿದ್ದಾರೆ.

ತಿಂಗಳಿಗೆ ಇಂತಿಷ್ಟು ಹಣ ಬಂದರೆ ಸಾಕು, ನಮ್ಮ ಅಸಲು ಹಣ ಸುರಕ್ಷಿತವಾಗಿ ಇದೆ ಎಂದುಕೊಂಡಿರುವ ಬಹುತೇಕ ಹೂಡಿಕೆದಾರರಿಗೆ ಇದೊಂದು ಕಾನೂನು ಬಾಹಿರ ಉದ್ಯಮ ಎಂಬುದರ ಅರಿವಿಲ್ಲದಂತಾಗಿದೆ. ಅರಿವು ಇದ್ದವರೂ ಸಹ ಇದರ ಮೇಲೆ ಹೂಡಿಕೆ ಮಾಡಿ, ಇನ್ನಷ್ಟು ಜನಕ್ಕೆ ಹೂಡಿಕೆಗೆ ಉತ್ತೇಜನ ನೀಡುತ್ತಿದ್ದಾರೆ. ಆದರೆ ಸೂಕ್ತ ರೀತಿಯ ತನಿಖೆ ನಡೆದು, UBIT ಮೇಲೂ ಅಂತರ್ಜಾಲದಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಹೇರಿದರೆ ಇದರ ಮೇಲೆ ಹೂಡಿರುವ ಬಿಲಿಯನ್ ಗಟ್ಟಲೆ ಹಣ ಯಾರೋ ಅನಾಮಿಕರ ಪಾಲಾಗುವುದಂತೂ ಸುಳ್ಳಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page