Saturday, October 12, 2024

ಸತ್ಯ | ನ್ಯಾಯ |ಧರ್ಮ

Her story: ತಕ್ಕಡಿಯ ಆಚೆಗೂ ಈಚೆಗೂ..


“ದಿನವೆಲ್ಲ ದುಡಿದು ದಣಿದು ಬರುವ ಆಕೆಗೆ ಮನೆಗೆ ಹೋಗಬೇಕೆಂದರೆ ಒಮ್ಮೊಮ್ಮೆ ಭಯ ಕಾಡಿಬಿಡುತ್ತದೆ. ಸುಸ್ತು, ಕಾಲು ನೋವು, ಮಕ್ಕಳಾದ ಮೇಲೆ ಶುರುವಾಗಿರೋ ಬೆನ್ನು ನೋವು ಎಲ್ಲವೂ ಬಾಧಿಸುತ್ತಲೇ ಇರುತ್ತದೆ. ಹೇಗೋ ನಾಲ್ಕು ಜನವಿರೋ ಕಡೆ ಅನಾರೋಗ್ಯ ಕಾಣಿಸಬಾರದು ಎಂದು ಒಂದಿಷ್ಟಾದರೂ ಮುಖವಾಡ ಹಾಕಿ ಅಚ್ಚುಕಟ್ಟಾಗಿರುತ್ತಾಳೆ…” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ.. ಮುಂದೆ ಓದಿ

ಮನೆಗೆ ಹೋಗಿ ಒಂದಿಷ್ಟಾದರೂ ರಿಲ್ಯಾಕ್ಸ್‌ ಆಗೋಣ ಎನ್ನುವ ಹೊತ್ತಿಗೆ ಗಂಡ ಬರುತ್ತಾನೆ. “ಅವನಿಗೆ ಇಲ್ಲ ಅನ್ನೋಕೆ ಆಗೋದೇ ಇಲ್ಲ ಕಣೆ, ಇವತ್ತು ಸುಸ್ತು ಅಂತ ಹೇಳೋಕೆ ಹೋದರೆ ಮತ್ತೆ ಗಲಾಟೆ ಶುರುವಾಗತ್ತೆ, ಏನೋ ಕರ್ಮ ಅಂತ ಅನುಭವಿಸಿಬಿಡೋದು” ಎಂದು ನಿಟ್ಟುಸಿರು ಬಿಡುತ್ತಾಳೆ.


ಪರಿಚಯಸ್ಥೆ ಒಬ್ಬರು ಇದ್ದಕ್ಕಿದ್ದ ಹಾಗೆ ಇಷ್ಟು ದಿನ ಅವರಿಗೆ ಕಂಫರ್ಟೆಬಲ್‌ ಆಗಿರದ ಬಟ್ಟೆಗಳನ್ನು ತೊಡುವುದು, ಸಂಜೆಯಾದರೆ ಎಷ್ಟೇ ಹುಷಾರಿಲ್ಲದೇ ಇದ್ದರೂ ರೆಡಿ ಆಗಿ ಬಿಡುವುದು. ಇದ್ಯಾಕೆ ಇಷ್ಟು ವಿಚಿತ್ರವಾಗಿ ಆಡೋದು ಎಂದರೆ ಅವರಿಗೆ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿರೋ ಅಭದ್ರತೆ. ತನ್ನ ಗಂಡನ ಅಣ್ಣ ಹೆಂಡತಿಯ ಅನಾರೋಗ್ಯದ ಸಮಯದಲ್ಲಿ ಬೇರೆ ಯಾರದೋ ಜೊತೆ ಸಂಬಂಧ ಇರಿಸಿಕೊಂಡಿದ್ದ. ತಾನು ಕಾರಣ ಕೊಟ್ಟರೆ ಎಲ್ಲಿ ತನ್ನ ಗಂಡನೂ ಅದೇ ರೀತಿ ಮಾಡುತ್ತಾನೋ ಎಂಬ ಭಯಕ್ಕೆ ದೈಹಿಕವಾಗಿ ಹಿಂಸೆಯಾದರೂ, ನೋವಾದರೂ ಪರವಾಗಿಲ್ಲ ಸುಮ್ಮನಿರೋದು ವಾಸಿ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ.


National crime Records Bureau ದ ಅನುಸಾರ ಸುಮಾರು 70% ಭಾರತೀಯ ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಆ ದೌರ್ಜನ್ಯದ ಒಂದು ಮುಖ ವೈವಾಹಿಕ ಅತ್ಯಾಚಾರ.
ಭಾರತೀಯ ನ್ಯಾಯ ಸಂಹಿತೆಯ ಐಪಿಸಿ ಸೆಕ್ಷನ್ 375 ರ ಅಡಿಯಲ್ಲಿ, 18 ವರ್ಷ ದಾಟಿರುವ ತನ್ನ ಪತ್ನಿಯೊಂದಿಗೆ ಪುರುಷ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರವಲ್ಲ ಎಂದು ತಿಳಿಸಲಾಗಿದೆ. ವೈವಾಹಿಕ ಅತ್ಯಾಚಾರ ವಿನಾಯಿತಿ ( ಸೆಕ್ಷನ್‌ 63) ರ ಪ್ರಕಾರ ಇದನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಇದು ಮದುವೆ ಎನ್ನುವ ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಕೇಂದ್ರದ ವಾದ.

ಮದುವೆ ಎನ್ನುವ ಒಂದು ಸಾಮಾಜಿಕ ವ್ಯವಸ್ಥೆಯ ಒಳಗೆ ಪತಿ ಅಥವಾ ಪತ್ನಿಗೆ ತನ್ನ ಲೈಂಗಿಕ ಬಯಕೆಗಳನ್ನು ವ್ಯಕ್ತಪಡಿಸುವ ಒಂದು ಅವಕಾಶವಿರುತ್ತದೆ. ಅಪರಿಚಿತರೊಂದಿಗೋ ಅಥವಾ ಕೇವಲ ಪರಿಚಯಸ್ಥರೊಂದಿಗೆ ವ್ಯಕ್ತಪಡಿಸಲಾಗದ ಒಂದು ಸ್ವಾತಂತ್ರ್ಯ ಮದುವೆ ಎಂಬ ವ್ಯವಸ್ಥೆಯೊಳಗೆ ದೊರಕುವುದು ನಿಜ. ಹಾಗೆಂದ ಮಾತ್ರಕ್ಕೆ ಮೂಲಭೂತ ಹಕ್ಕುಗಳನ್ನು ಕೂಡ ವ್ಯವಸ್ಥೆಯಾಗಿ ಮದುವೆ ಎನ್ನುವುದು ಬದಲಾಗುವ ಅಗತ್ಯವಿಲ್ಲ.

ಈ ನರಕ ಹೆಂಗಸರದ್ದು ಮಾತ್ರವಲ್ಲ. ಗಂಡಸರಿಗೂ ತನ್ನನ್ನು ತಾನು ಒಬ್ಬ ಸಮರ್ಥ ಗಂಡು ಎನ್ನುವುದನ್ನು ನಿರೂಪಿಸಿಕೊಳ್ಳುವ ಒತ್ತಡವನ್ನು ಸಮಾಜ ಹುಟ್ಟುಹಾಕಿದೆ. ತನ್ನಿಂದ ತನ್ನ ಹೆಂಡತಿಗೆ, ಪ್ರೇಯಸಿಗೆ ಸುಖ ದೊರೆಯದೇ ಇದ್ದಲ್ಲಿ ಅವನನ್ನು ಒಂದೇ ಸಲಕ್ಕೆ ಗಂಡಸೇ ಅಲ್ಲ ಅಂದು ನಿವಾಳಿಸಿ ಬಿಸಾಕುತ್ತದೆ ಸಮಾಜ. ಅಂತಹ ಒಂದು ಅನುಭವವಾಗಿದ್ದಲ್ಲಿ ವಿಕೃತತೆ ಮುಂದಿನ ಎಲ್ಲಾ ಸಂಬಂಧಗಳಲ್ಲೂ ಆತನನ್ನು ಅತ್ಯಾಚಾರಿಯಾಗಿ, ಸಮಾಜ ಒಪ್ಪುವ ಗಂಡಸಾಗಿ ಬದಲಾಯಿಸಿಬಿಟ್ಟಿರುತ್ತದೆ.

ಮದುವೆ ಎಂಬ ಒಂದು ಚೌಕಟ್ಟಿನ ಒಳಗೆ ನಡೆಯುವ ಅತ್ಯಾಚಾರ ಅತ್ಯಾಚಾರವೂ ಅಲ್ಲ, ಅಪರಾಧವೂ ಅಲ್ಲ ಎನ್ನುವುದರ ಮೂಲಕ ವಿವಾಹದೊಳಗೆ ನಡೆಯುವ ಎಷ್ಟೆಲ್ಲ ಅಪರಾಧ, ಹಿಂಸೆ, ದೌರ್ಜನ್ಯಗಳನ್ನು ಮುಚ್ಚಿ ಹಾಕುವ ಅವಕಾಶಗಳನ್ನೂ ಕಲ್ಪಿಸಿಕೊಡಲಾಗುತ್ತಿದೆ. ಮದುವೆಯ ಹೆಸರಿನಲ್ಲಿ ಆಗುತ್ತಿರುವ ಮಾನಸಿಕ ದೈಹಿಕ ಹಿಂಸೆಗಳಿಗೆ ಧ್ವನಿ ಎತ್ತಲು ಸಾಧ್ಯವೇ ಆಗದ ವಾತಾವರಣವೂ ಉಂಟಾಗುತ್ತದೆ.

ಇಂದು ಎಷ್ಟೋ ಮನೆಗಳಲ್ಲಿ ಕುಡಿದು ಬರುವ ಗಂಡಂದಿರು ಹೆಂಡತಿಯರನ್ನು ಪಶುಗಳಂತೆ ಹಿಂಸಿಸಿ ಅತ್ಯಾಚಾರವೆಸಗುವುದು ಹೊಸದೇನಲ್ಲ. ಆಕೆಯ ಆರೋಗ್ಯ, ದೈಹಿಕ, ಮಾನಸಿಕ ಸ್ಥಿತಿ ಅದಕ್ಕೆ ಸ್ಪಂದಿಸುತ್ತಿದೆಯೇ ಎನ್ನುವುದರ ಕುರಿತು ಯಾವತ್ತೂ ಯೋಚಿಸುವ ಪರಿವೆಗೂ ಹೋಗದೆಯೇ ಆಕೆಯನ್ನು ಹಿಂಸಿಸಲಾಗುತ್ತದೆ. ಇದು ಬರೀ ಗ್ರಾಮೀಣ ಣಾಗದಲ್ಲೋ ಅಥವಾ ಅನಕ್ಷರಸ್ಥರ ಮನೆಯಲ್ಲಿನ ಕಥೆಯಲ್ಲ. ವಿದ್ಯಾವಂತರಲ್ಲೂ ತಮ್ಮ ಕೀಳರಿಮೆಗಳು, ಅಥವಾ ಇನ್ನೇನೋ ವಿಕೃತಿಗಳನ್ನು ಪತ್ನಿಯ ಮೇಲೆ ತೋರಿಸುವ ಗುಣವಿದ್ದು ಎಷ್ಟೋ ವಿದ್ಯಾವಂತ ಮಹಿಳೆಯರೇ ಇದಕ್ಕೆ ಬಲಿಯಾಗುತ್ತಿದ್ದಾರೆ. ಮಾನಸಿಕ, ದೈಹಿಕ ಆಘಾತಕ್ಕೆ ಒಳಗಾಗುವುದು ಒಂದು ಕಡೆಯಾದರೆ, ಎಷ್ಟೋ ಕಡೆಗಳಲ್ಲಿ ಇಂತಹ ಅತ್ಯಾಚಾರಗಳಿಂದ ಗರ್ಭಿಣಿಯರಿಗೆ ಗರ್ಭಪಾತವಾಗಿರುವ ಘಟನೆಗಳು ಸಹ ಇವೆ.

ವೈವಾಹಿಕ ಅತ್ಯಾಚಾರದಂತಹ ಪ್ರಕರಣಗಳಿಂದಾಗಿ ಲೈಂಗಿಕ ಕಾಯಿಲೆಗಳು, ಹೆಚ್‌ ಐವಿ ಯಂತಸ ಗಂಭೀರ ಆರೋಗ್ಯ ಸಮಸ್ಯೆಗಳು ಸಹ ಹರಡುವ ಸಾಧ್ಯತೆಗಳಿರುತ್ತವೆ, ಗರ್ಭಿಣಿ ಅಥವಾ ಬಾಣಂತಿಯರಿಗೆ ಹೆಚ್ಚಿನ ಅಪಾಯವಾಗುವ ಸಾಧ್ಯತೆಗಳು ಸಹ ಇರುತ್ತವೆ. ಅಸುರಕ್ಷಿತ ಲೈಂಗಿಕ ಸಂಪರ್ಕ ಮತ್ತು ಅತ್ಯಾಚಾರದಂತಹ ಘಟನೆಗಳಲ್ಲಿ ಅದು ಕೇವಲ ಮಹಿಳೆಗೆ ಮಾತ್ರವಲ್ಲದೆ, ಆಕೆ ಗರ್ಭಿಣಿಯಾಗಿದ್ದಲ್ಲಿ ಹುಟ್ಟುವ ಮಕ್ಕಳ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ.
ಮಹಿಳೆಯರಲ್ಲಿ ಅವರ ಖುತುಚತ್ರಕ್ಕೆ ಅನುಸಾರವಾಗಿ ಹಾರ್ಮೋನ್‌ ಗಳ ಬದಲಾವಣೆಯಾಗುತ್ತದೆ. ಕೆಲವೊಮ್ಮೆ ತಮಗೂ ಆಸೆ, ಬಯಕೆಗಳಿವೆ ಎನಿಸಿದರೆ ಕೆಲವೊಮ್ಮೆ ಯಾರೂ ಮುಟ್ಟುವುದೇ ಬೇಡ ಎನ್ನುವ ಮಟ್ಟಿಗೆ ಬದಲಾವಣೆಗಳಾಗಿರುತ್ತವೆ. ಜೊತೆಗೆ ಜವಾಬ್ದಾರಿ, ಒತ್ತಡಗಳು ಹೆಚ್ಚಿದ್ದಾಗ ಆಕೆ ಮಾನಸಿಕ ಸಾಂಗತ್ಯವನ್ನು ಮೊದಲು ಬಯಸೋದು. ತನ್ನ ಕಷ್ಟಗಳಿಗೆ, ನೋವುಗಳಿಗೆ ಕಿವಿಯಾಗಲಿ, ಜೊತೆಯಾಗಲಿ ಅನ್ನೋದು ಬಹಳಷ್ಟು ಕಾಡುವ ಸಮಸ್ಯೆ. ಆ ಮಾನಸಿಕ ಸಾಂಗತ್ಯ ಇಲ್ಲದಿದ್ದಾಗ ಅಂತಹ ಕಡೆ ಕೇವಲ ದೈಹಿಕ ಸಂಬಂಧ ತುಂಬಾ ದಿನ ಉಳಿಯೋದಕ್ಕೆ ಸಾಧ್ಯ ಇಲ್ಲ. ಅಲ್ಲಿ ಅತ್ಯಾಚಾರಗಳಂತಹ ಪರಿಸ್ಥಿತಿ ನಿರ್ಮಾಣವಾಗ್ತಾ ಹೋಗತ್ತೆ.

ವಿಶ್ವ ಆರೋಗ್ಯ ಸಂಸ್ಥೆಯ ಒಂದು ಅಧ್ಯಯನದ ಪ್ರಕಾರ ಪ್ರತಿ ಮೂವರಲ್ಲಿ ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ತನ್ನ ಸಂಗಾತಿಯಿಂದ ಅಥವಾ ಸಂಗಾತಿಯ ಹೊರತಾಗಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುತ್ತಾಳೆ. ಭಾರತದಲ್ಲಿನ National Family Health Surveys ಮತ್ತು National Crime Records Bureau ದ ದತ್ತಾಶಗಳನ್ನು ಪರಿಶೀಲಿಸಿದಾಗ ಭಾರದಲ್ಲಿ ನಡೆಯುತ್ತಿರುವ ವೈವಾಹಿಕ ಅತ್ಯಾಚಾರಗಳಲ್ಲಿ ಕೇವಲ 1% ಮಾತ್ರ ಪೋಲೀಸ್‌ ಠಾಣೆಗಳಲ್ಲಿ ವರದಿಯಾಗಿವೆ. ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅನುಸಾರ 29% ವಿವಾಹಿತ ಮಹಿಳೆಯರು ತಮ್ಮ ಪತಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.

ಯುಕೆ ಸೇರಿದಂತೆ ಜಗತ್ತಿನ ನೂರಕ್ಕೂ ಹೆಚ್ಚು ರಾಷ್ಟ್ರಗಳು ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಿವೆ. ಭಾರತ ಸೇರಿದಂತೆ ಇನ್ನೂ 35 ದೇಶಗಳು ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಿಲ್ಲ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳು, ಚರ್ಚೆಗಳ ಜೊತೆಗೆ ವಿವಾಹ ಎನ್ನುವುದು ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವುದು ಸಾಧ್ಯವೇ ಎನ್ನುವುದರ ಜೊತೆಗೆ ಇದರ ಇತರ ಆಯಾಮಗಳ ಕುರಿತು ಸಹ ಯೋಚಿಸಬೇಕಾದ ಅನಿವಾರ್ಯತೆ ಇದೆ.

ವೈವಾಹಿಕ ಅತ್ಯಾಚಾರ ಅಪರಾಧವಲ್ಲ ಎನ್ನುವವರಲ್ಲಿ,ಆ ಕುರಿತು ವರದಿ ಸಲ್ಲಿಸುವ ಸಮಿತಿಯಲ್ಲಾಗಲೀ ಅಥವಾ ಇವುಗಳನ್ನು ಪರಿಶೀಲಿಸಬೇಕಾದ ತಂಡದಲ್ಲಾಗಲೀ ಎಷ್ಟು ಜನ ಮಹಿಳೆಯರಿದ್ದಾರೆ ಎನ್ನುವುದರ ಜೊತೆಗೆ, ಮಹಿಳೆಯರ ಮಾನಸಿಕ ದೈಹಿಕ ಸ್ಥಿತಿಗಳ ಕುರಿತಾಗಿ ಮಹಿಳಾ ನೇತೃತ್ವದ ಸಮಿತಿ ಇರುವುದರ ಅಗತ್ಯ ಸಹ ಇದೆ.
ಅತ್ಯಾಚಾರದಂತಹ ಘಟನೆಯಿಂದಾಗಿ ಒಬ್ಬ ಮಹಿಳೆಯ ಮೇಲೆ ನಡೆಯುವ ಮಾನಸಿಕ, ದೈಹಿಕ ದೌರ್ಜನ್ಯ, ಆಕೆಯ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಜೊತೆ ಜೊತೆಗೆ, ಅತ್ಯಾಚಾರದಂತಹ ಕ್ರಿಯೆಯನ್ನು ಸಾಮಾನ್ಯವಾಗಿಸುವುದು, ಸಹಜವಾಗಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಗಳು ಕೂಡ ಚರ್ಚಿಸಬೇಕಾದ್ದೇ. ಹೆಣ್ಣಾಗಲೀ ಗಂಡಾಗಲೀ , ಮದುವೆಯೋ ಸಾಂಗತ್ಯವೋ ಏನೇ ಆಗಿದ್ದರೂ ತಮ್ಮ ತಮ್ಮ ಅಗತ್ಯಗಳನ್ನು, ಇಚ್ಛೆಗಳನ್ನು ಮುಕ್ತವಾಗಿ ಚರ್ಚಿಸಿ ಮಾತನಾಡುವ ಪರಿಸರ ನಿರ್ಮಾವಾಗುವುದು ಅಗತ್ಯ. ಹೆಣ್ಣು ತನ್ನ ಲೈಂಗಿಕ ಬಯಕೆಗಳು, ಅಗತ್ಯಗಳ ಕುರಿತು ಮುಕ್ತವಾಗಿ ತನ್ನ ಸಂಗಾತಿಯ ಜೊತೆಗೂ ಮಾತನಾಡಲು ಹಿಂಜರಿಯುವ ವಾತಾವರಣದಲ್ಲಿ ಗಂಡಿಗೆ ಅತ್ಯಾಚಾರ ಕೂಡ ಅಪರಾಧವಲ್ಲ ಎನ್ನುವುದು ವ್ಯವಸ್ಥೆಯ ತಕ್ಕಡಿಗೆ ಹಿಡಿದಿರುವ ಕನ್ನಡಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page