Wednesday, October 16, 2024

ಸತ್ಯ | ನ್ಯಾಯ |ಧರ್ಮ

ಕ್ರೈಸ್ತರ “ಸಾಂತ್‌ಮಾರಿ” ದಿನದಂದು “ಜ್ಞಾನೋದಯ”! – ನಿಖಿಲ್ ಕೋಲ್ಪೆ

“..ಇಂದು ಸಂಬಂಧವೇ ಇಲ್ಲದ ಕೇಸರಿ ಧ್ವಜಗಳು ರಾರಾಜಿಸುವ ಇಲ್ಲಿನ ತುಳು ಸಂಸ್ಕೃತಿಯ ಭಾಗವಾಗಿರುವ ಬೂತಗಳ ನೇಮಗಳಲ್ಲಿ ಹಿಂದೆ ಬೇರೆ ಧರ್ಮಗಳವರಿಗೇ ಮೀಸಲಾದ ಕೆಲಸ, ಗೌರವಗಳಿದ್ದವು…”

ಯಾವುದೇ ಧಾರ್ಮಿಕ ಹಬ್ಬ ಬಂದಾಗ ಒಬ್ಬರಿಗೊಬ್ಬರು ಶುಭಾಶಯ ಕೋರುವುದು ಇದ್ದೇ ಇದೆ. ಮುಖ್ಯವಾಗಿ ಮಾಧ್ಯಮಗಳಲ್ಲಿ “ಹಿಂದೂ ಬಾಂಧವರಿಗೆ”, “ಮುಸ್ಲಿಂ ಬಾಂಧವರಿಗೆ”, “ಕ್ರೈಸ್ತ ಬಾಂಧವರಿಗೆ” ಶುಭಾಶಯಗಳು ಎಂಬ ಒಕ್ಕಣಿಕೆ ಇರುತ್ತದೆ. ಶುಭಕೋರುವುದರ ಆಶಯ ಮೂಲದಲ್ಲಿ ಒಳ್ಳೆಯದೇ. ಎಲ್ಲಾ ಮಾನವರು ಬಂಧುಗಳೇ ಎಂದು ಯೋಚಿಸುವ ನಮ್ಮಂತವರಿಗೆ ಇಲ್ಲಿಯೂ “ನಾವು ಬೇರೆ, ನೀವು ಬೇರೆ”, “ನಮ್ಮವರ ಹಬ್ಬ, ನಿಮ್ಮವರ ಹಬ್ಬ” ಎಂಬಂತ ಒಂದು ಪ್ರತ್ಯೇಕತೆಯ ಎಳೆ ಅಗೋಚರವಾಗಿ ಕಾಣುತ್ತದೆ. ಎಲ್ಲಾ ಹಬ್ಬಗಳು ನಮ್ಮ ಹಬ್ಬಗಳೇ ಆಗಬಾರದೇಕೆ? ಇರಲಿ. ಇಂದು ರಾಜಕೀಯಕ್ಕಾಗಿ ಮತ್ತು ಕೆಲವೇ ಜಾತಿಗಳ ಮೇಲ್ಮೆ ಉಳಿಸಿಕೊಳ್ಳುವುದಕ್ಕಾಗಿ ಧರ್ಮಗಳ ನಡುವೆ ದ್ವೇಷದ ವಿಷಬೀಜ ಬಿತ್ತಲಾಗುತ್ತಿರುವ ಸಂದರ್ಭದಲ್ಲಿ- ಬಹಿರಂಗವಾಗಿಯೇ ಇಂತಾ ದುಷ್ಟ ಕೆಲಸ ಮಾಡುತ್ತಿರುವ ಮಾಧ್ಯಮಗಳು ಮತ್ತು ರಾಜಕಾರಣಿಗಳೂ “ಬಾಂಧವರಿಗೆ ಶುಭಾಶಯ” ಕೋರುವುದು ಕ್ಲೀಷೆಯಂತೆಯೇ ಏಕೆ; ಒಂದು ಕರಾಳ ಅಪಹಾಸ್ಯದಂತೆ ಕಾಣುತ್ತದೆ.

ಹಿಂದೆ ಹಿಂದೂ, ಮುಸ್ಲಿಂ, ಕ್ರೈಸ್ತ ಹಬ್ಬಗಳ ಸಂದರ್ಭದಲ್ಲಿ ಎಲ್ಲಾ ಧರ್ಮಗಳ ಹಬ್ಬಗಳ ಸಂದರ್ಭದಲ್ಲಿ ಕನಿಷ್ಟ ಎಲ್ಲಾ ಧರ್ಮಗಳ ಹತ್ತಿರದ ಗೆಳೆಯರನ್ನು ಮನೆಗೆ ಕರೆದು ಊಟ ಹಾಕುವ ಸಂಪ್ರದಾಯ ವ್ಯಾಪಕವಾಗಿತ್ತು. ಇಲ್ಲಿ ಹಿಂದೂಗಳು ಎಂದರೆ, ಬರೇ “ಕೆಳಜಾತಿ”ಗಳ ಶೂದ್ರರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ದಲಿತರನ್ನು ಯಾರೂ ಕರೆಯುತ್ತಿರಲಿಲ್ಲ; ಮೇಲ್ಜಾತಿ ಎಂದು ಭ್ರಮಿಸಿಕೊಂಡವರು ಹೋಗುತ್ತಿರಲಿಲ್ಲ. ಎಲ್ಲರೂ ತಮ್ಮದೇ ಹಬ್ಬ ಎಂಬಂತೆ ಸಂಭ್ರಮಿಸುತ್ತಿದ್ದರು. ಇದಕ್ಕೆ ಹೊರತಾದವರು ಇರಲಿಲ್ಲವೆಂದಲ್ಲ. ಅಷ್ಟು ಮಾತ್ರವಲ್ಲ; ಜಾತ್ರೆ, ಉರೂಸುಗಳಲ್ಲಿ ಎಲ್ಲಾ ಸಮುದಾಯಗಳ ವ್ಯಾಪಾರವಿತ್ತು. ಕ್ರೈಸ್ತ ಮಹಿಳೆಯರು ತಮಗೇ ವಿಶಿಷ್ಟವಾದ “ತಂಬಡೆಕುಲ್ಲೆ” ಇತ್ಯಾದಿ ಸಿಹಿತಿಂಡಿಗಳು ಮತ್ತು ಮಲ್ಲಿಗೆ ಸಹಿತ ಹೂಗಳ ವ್ಯಾಪಾರ ಮಾಡುತ್ತಿದ್ದರು. ಅಲ್ಲಿಂದ ನಾವೀಗ ಬೇರೆ ಧರ್ಮಗಳವರು ತಮ್ಮ ಜಾತ್ರೆಗಳಲ್ಲಿ ವ್ಯಾಪಾರ ಮಾಡಬಾರದು ಎಂದು ಬಹಿರಂಗವಾಗಿ ಬೋರ್ಡ್ ಹಾಕುವ, ವ್ಯಾಪಾರಕ್ಕೆ ಬಂದ ಬಡವರ ಅಂಗಡಿಗಳನ್ನು ಹಾಳುಗೆಡಹುವುದು ಮಾತ್ರವಲ್ಲ; ವೈಯಕ್ತಿಕವಾಗಿ ಬಂದವರನ್ನು ಧರ್ಮ ಗುರುತಿಸಿ ಹೊಡೆಯುವ ನೀಚತನದ ಕಾಲವನ್ನು ಪ್ರವೇಶಿಸಿದ್ದೇವೆ.

ಇಂದು ಸಂಬಂಧವೇ ಇಲ್ಲದ ಕೇಸರಿ ಧ್ವಜಗಳು ರಾರಾಜಿಸುವ ಇಲ್ಲಿನ ತುಳು ಸಂಸ್ಕೃತಿಯ ಭಾಗವಾಗಿರುವ ಬೂತಗಳ ನೇಮಗಳಲ್ಲಿ ಹಿಂದೆ ಬೇರೆ ಧರ್ಮಗಳವರಿಗೇ ಮೀಸಲಾದ ಕೆಲಸ, ಗೌರವಗಳಿದ್ದವು. ಬೂತವು ದೈವದೇವರ ಗುಡಿ, ಗುಂಡಾರಗಳ ಬಗ್ಗೆ ಮಾತಾಡುವ ಹಾಗೆಯೇ, “ಬ್ಯಾರಿಲೆಗ್ ಪಳ್ಳಿ, ಕುಡುಂಬೆರೆಗ್ ಇಂಗ್ರೇಜಿ” (ಇಲ್ಲಿ ಬ್ಯಾರಿಲು ಎಂದರೆ, ಸ್ಥಳೀಯ ಮುಸ್ಲಿಮರು, ಪಳ್ಳಿ ಎಂದರೆ ಶಾಲೆ, ಮದರಸ, ಮಸೀದಿ; ಕುಡುಂಬೆರ್ ಎಂದರೆ, ಹಳೆಯ ತುಳುವಿನಲ್ಲಿ ಕ್ರೈಸ್ತರು, ಇಂಗ್ರೇಜಿ ಎಂದರೆ ಇಗರ್ಜಿ) ಕಟ್ಟಿಸಿಕೊಟ್ಟು, ಕಾಯಬೇಕು ಎಂದು ಊರಿನ ಯಜಮಾನರುಗಳಿಗೆ ತಾಕೀತು ಮಾಡುತ್ತಿತ್ತು. (ಆಧಾರ: ದಿ. ಅಮೃತ ಸೋಮೇಶ್ವರ ಅವರ ಲೇಖನ) ಕಾರ್ಕಳದ ಅತ್ತೂರು ಚರ್ಚಿನ ಜಾತ್ರೆಯಲ್ಲಿ ಇಂದಿಗೂ ಎಲ್ಲಾ ಧರ್ಮಗಳವರು ಭಾಗವಹಿಸುವುದನ್ನು ಕೋಮುವಾದಿಗಳಿಗೆ ನಿಲ್ಲಿಸಲು ಸಾಧ್ಯವಾಗಿಲ್ಲ. ಶಿವಸೇನೆ, ಬಿಜೆಪಿ ಹರಡಿದ ಕೋಮುವಿಷವೂ ಮುಂಬಯಿಯ ಬಾಂದ್ರಾದಲ್ಲಿರುವ ಮೌಂಟ್ ಮೇರಿ ಚರ್ಚಿನ ಜಾತ್ರೆಯಲ್ಲಿ ಎಲ್ಲಾ ಧರ್ಮಗಳವರು ಕಿಕ್ಕಿರಿದು ಸೇರುವುದನ್ನು ನಿಲ್ಲಿಸಲಾಗಿಲ್ಲ. ಈ ಕುರಿತು ಮುಂದೆ ನೋಡೋಣ. ಇಂತಾ ಅನೇಕ ಚರ್ಚುಗಳು ಸೇರಿದಂತೆ ಸರ್ವಧರ್ಮ ಸಮಭಾವದ ಬೇರೆಬೇರೆ ಧರ್ಮಗಳ ಪೂಜಾಸ್ಥಳಗಳು ಇಂದಿಗೂ ಇಲ್ಲಿ ಇವೆ.

ಅದಿರಲಿ; ಕ್ರಿಸ್ಮಸ್ ಮತ್ತು ಊರಿನ ಇಗರ್ಜಿಯ ಹಬ್ಬವಾದ “ಸಾಂತ್‌ಮಾರಿ” ದಿನದಂದು ಹಿಂದೆ ಕ್ರೈಸ್ತ ಮನೆಗಳ ಔತಣದಲ್ಲಿ ಬಹಳಷ್ಟು ಶೂದ್ರ ಮಿತ್ರರನ್ನು ಆಹ್ವಾನಿಸುತ್ತಿದ್ದರು. ಅವರಲ್ಲಿ ತಿಂದು, ಕುಡಿದು ಎಲ್ಲರೂ ಸಂಭ್ರಮಿಸುತ್ತಿದ್ದರು. ನಾವು ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಬರಬರುತ್ತಾ, ಈಗಿನ ಕೆಲ ವರ್ಷಗಳಲ್ಲಿ- ಇಂತವರಲ್ಲೇ ಕೆಲವರು- ಅಲ್ಲಿ ಕುಡಿದು, ತಿಂದು ತೇಗಿದವರೇ ಕೋಮು ಅಮಲು ಏರಿಸಿಕೊಂಡು ಕತ್ತಿ ಮಸೆಯಲು ಆರಂಭಿಸಿದ ಬಳಿಕ, ವಿಶ್ವಾಸ ದ್ರೋಹವನ್ನು ಮನಗಂಡ ಕ್ರೈಸ್ತರು, ಭ್ರಮನಿರಸನದಿಂದ ಎಂಬಂತೆ, ತೀರಾ ಹತ್ತಿರದವರನ್ನಲ್ಲದೇ ಬೇರೆಯವರನ್ನು ಆಹ್ವಾನಿಸುವುದನ್ನು ಬಹುತೇಕ ನಿಲ್ಲಿಸಿದ್ದಾರೆ. ಇಷ್ಟರ ಮಟ್ಟಿಗೆ ಕೋಮುವಾದಿಗಳು ಯಶಸ್ವಿಯಾಗಿದ್ದಾರೆ.

ಇಂತಾ ಒಂದು ಸಂದರ್ಭದಲ್ಲಿಯೇ ನನಗೆ ಜೀವನದ ಒಂದು “ಜ್ಞಾನೋದಯ” ಪ್ರಾಪ್ತವಾದದ್ದು.

ಹೈಸ್ಕೂಲಿನಲ್ಲಿಯೂ, ಕಾಲೇಜಿನಲ್ಲಿಯೂ ನನಗೆ ಹಲವಾರು ಕ್ರೈಸ್ತ ಗೆಳೆಯರಿದ್ದರು. ಆಗ ನಮಗೆ ಓಡಾಡುವಾಗ ಹೆಸರಿನ ಹೊರತು ಬೇರೆ ಧಾರ್ಮಿಕ ಐಡೆಂಟಿಟಿಯೇ ಇರಲಿಲ್ಲ. ಧಾರ್ಮಿಕ ವಿಷಯಗಳ ತಂಟೆಗೇ ಯಾರೂ ಹೋಗದೆ, ಸಹಜ ಎಂಬಂತೆ ಬದುಕುತ್ತಿದ್ದೆವು. ಪಿಯುಸಿಯಲ್ಲಿದ್ದಾಗ ಒಂದು ದಿನ ಕ್ಲಾಸ್‌ಮೇಟ್‌ಗಳಾಗಿದ್ದ ಇಬ್ಬರು ವಿನ್ಸೆಂಟ್‌ಗಳಲ್ಲಿ ಒಬ್ಬ- “ಸಾಂತ್‌ಮಾರಿ” ಎಂದು ನಾವು ಮೂವರು ಆತ್ಮೀಯ ಗೆಳೆಯರನ್ನು ಮನೆಗೆ ಊಟಕ್ಕೆ ಕರೆದ. ನಾನು, ಒಬ್ಬ ಕೊಡವ, ಒಬ್ಬ ಮಲಯಾಳಿ. ಮನೆಗೆ ಹೋಗಿ ಹಾಲ್‌ನಲ್ಲೇ ಪೋರ್ಕ್, ಚಿಕನ್ ಎಂದು ಭರ್ಜರಿ ಊಟ ಮಾಡಿದೆವು. ಮನೆಯವರೂ ಕುಶಿಯಿಂದ ಸತ್ಕಾರ ಮಾಡಿದರು. ನಮಗ್ಯಾರಿಗೂ ಆಗ ಕುಡಿಯುವ ರೋಗ ಹತ್ತಿರಲಿಲ್ಲ. ಕೊಡವರಂತೆ, ಆಗ ಕ್ರೈಸ್ತರಲ್ಲಿ ಕನಿಷ್ಟ ಹಬ್ಬಗಳ ದಿನಗಳಲ್ಲಾದರೂ ಕುಡಿಯುವುದು ಒಂದು ಸಾಮಾನ್ಯ ವಿಷಯವಾಗಿತ್ತು. ಈಗ ಬಹುಶಃ ಚರ್ಚುಗಳ ಬೋಧನೆಯಿಂದ ಇದು ಬಹುತೇಕ ಕಡಿಮೆಯಾದಂತೆ ಕಾಣುತ್ತದೆ. ನಾವು ಜೋರಾಗಿ ನಗುತ್ತಾ, ಮಾತನಾಡುತ್ತಾ, ಕಿರುಚುತ್ತಾ ಇದ್ದವರು- ಹೊರಡುವ ಹೊತ್ತಿಗಷ್ಟೇ ಮನೆ ನೋಡಲೆಂದು ಒಳಗೆ ಹೋದೆವು.

ಅವರದ್ದೊಂದು ಕೃಷಿಕ ಕುಟುಂಬ. ಒಂದು ದೇವರ ಸ್ಟ್ಯಾಂಡು, ಶಿಲುಬೆ, ಕೆಲವು ಮೂರ್ತಿಗಳು, ಮಾಲೆಗಳು ಎಲ್ಲವೂ ಇದ್ದವು. ಒಂದು ಮೂಲೆಯಲ್ಲಿ ಹತ್ತು ಹನ್ನೆರಡು ವರ್ಷಗಳ ಒಂದು ಮಗು ‌‌ಒಂದು ಚಾಪೆಯಲ್ಲಿ ಮಲಗಿದಂತಿತ್ತು. ಸ್ವಲ್ಪ ದಿಟ್ಟಿಸಿ ನೋಡಿದರೆ ಅದು ಮಗುವಿನಂತೆ ಕಾಣಲಿಲ್ಲ. ಅದು ಮಲಗಿದಂತೆಯೂ ಇರಲಿಲ್ಲ. ತನಗೆ ತಾನೇ ಅರ್ಥವಾಗದ ಭಾಷೆಯಲ್ಲಿ ಮೆತ್ತಗೆ ಮಾತನಾಡಿಕೊಳ್ಳುತ್ತಿತ್ತು.

ಹೊರಗೆ ಬಂದಾಗ ನಾನು ಗೆಳೆಯನಲ್ಲಿ ಅದು ಯಾರು, ಹುಷಾರಿಲ್ಲವೆ ಎಂದು ಕೇಳಿದೆ. ಅದಕ್ಕೆ ಅವನು, “ಅದು ನನ್ನ ಅಕ್ಕ. ಹುಟ್ಟಿದಾಗಿನಿಂದಲೂ ಹಾಗೆಯೇ” ಎಂದ. ನಾವೆಲ್ಲರೂ ತಲೆಗೆ ಸುತ್ತಿಗೆಯಿಂದ ಬಡಿದಂತೆ ದಂಗುಬಡಿದು ಹೋದೆವು. ಅಕ್ಕ! ಅಂದರೆ, ಸುಮಾರು ಹದಿನೆಂಟು-ಇಪತ್ತು ವರ್ಷಗಳು. ಇಷ್ಟು ವರ್ಷಗಳಲ್ಲಿ ಈ ಜೀವಿ ಎಂದಿಗೂ ತಂದೆ, ತಾಯಿ ಸೇರಿದಂತೆ ಯಾರನ್ನೂ ಗುರುತಿಸಿಲ್ಲ. ತನ್ನದೇ ಭಾಷೆಯಲ್ಲಿ ತನ್ನೊಂದಿಗೇ ಮಾತನಾಡುತ್ತಾ ಜೀವಿಸುತ್ತಿದೆ. ಕೊಟ್ಟದ್ದು ತಿನ್ನುತ್ತಿದೆ. ಯಾತಕ್ಕೋ ಬದುಕುತ್ತಿದೆ! ಯಾತಕ್ಕೆ?! ಗೆಳೆಯ ನಿರ್ಲಿಪ್ತವಾಗಿ ಎಲ್ಲವನ್ನೂ ವಿವರಿಸಿದ. ಮೈಯ ಸ್ವಾಧೀನ ಇಲ್ಲ ಅವಳಿಗೆ. ಆಗಾಗ ಶುಚಿ ಮಾಡಬೇಕು. ಮುಟ್ಟಿನ ದಿನಗಳೂ ಕಷ್ಟ ಇತ್ಯಾದಿ… ಬರೇ ಚಾಪೆ ಯಾಕೆ ಎಂದು ಮನಸ್ಸಿನ ಮೂಲೆಯಲ್ಲಿ ಅಂದುಕೊಂಡಿದ್ದು, ಈಗ ಯಾಕೆ ಎಂದು ಅರ್ಥವಾಯಿತು. ಹಲವಾರು ವಿಚಾರಗಳ ಸುನಾಮಿಯೇ ಬಹಳ ಕಾಲ ಮನಸ್ಸಿಗೆ ಹೊಡೆಯುತ್ತಲೇ ಇತ್ತು.

ಮೊದಲಿಗೆ ಕಾಡಿದ್ದು ಪಾಪಪ್ರಜ್ಞೆ. ಇಂತದ್ದೊಂದು ಜೀವಿ ಒಳಗೆ ಮಲಗಿರುವಾಗ- ನಾವೆಲ್ಲರೂ ಹೊರಗೆ ತಿಂದುಂಡು, ಚೀರಾಡಿ ಕುಪ್ಪಳಿಸುತ್ತಿದ್ದೆವಲ್ಲಾ! ಇರಲಿ; ಮನೆಯವರೂ ಇಷ್ಟು ವರ್ಷಗಳಲ್ಲಿ ಅದನ್ನೇ ಎದುರಿಟ್ಟುಕೊಂಡು ಬರೇ ದುಃಖದಲ್ಲಿ ಮುಳುಗಿರುತ್ತಾರೆಯೇ? ಆದರೂ, ವಿಷಾದದ ಛಾಯೆಯೊಂದು ಸದಾ ನೆರಳಿನಂತೆ ಹಿಂಬಾಲಿಸುತ್ತಲೇ ಇರಬೇಕಲ್ಲವೇ? ಮನೆಯವರು ಇಷ್ಟು ವರ್ಷಗಳ ಕಾಲ ಐಡೆಂಟಿಟಿಯೇ ಇಲ್ಲದ ಈ ಜೀವಿಯ ಶುಶ್ರೂಷೆಯನ್ನು ತಾಳ್ಮೆಯಿಂದ, ಗೆಳೆಯನಲ್ಲಿ ಕಂಡ ಒಂದು ರೀತಿಯ ನಿರ್ಲಿಪ್ತತೆಯಿಂದ ಮಾಡುತ್ತಿದ್ದಾರಲ್ಲ? ಕಾರಣವೇನು? ಕರುಳಿಬಳ್ಳಿ ಸಂಬಂಧವೇ? ಧಾರ್ಮಿಕ ಕರ್ತವ್ಯಪ್ರಜ್ಞೆಯೇ? ಎಲ್ಲರೂ ನಂಬುವ ದೇವರೊಂಬವನು ಇದ್ದರೆ, ಒಂದು ಮನುಷ್ಯ ಜೀವಿಯನ್ನು ಹೀಗೇಕೆ ಸೃಷ್ಟಿಸಿದ? ಯಾಕೆ ಇಷ್ಟು ಕಾಲ ಉಳಿಸಿದ? ಜೊತೆಗೆ ಫಲವಂತಿಕೆಯ ಸಂಕೇತವಾದ ಋತುಸ್ರಾವ ಬೇರೆ! ಯಾಕಾಗಿ? ಹೊರಗಿನ ಪ್ರಪಂಚದ ಸಂಪರ್ಕವೇ ಇಲ್ಲದ ಆ ಮನಸ್ಸಿನೊಳಗೆ ಏನು ಸುಳಿಯುತ್ತಿರಬಹುದು? ಇಂತಾ ಪ್ರಶ್ನೆಗಳು ಬಹುಕಾಲ ಕಾಡಿದವು.

ಈ ಅನುಭವವು ನನ್ನನ್ನೇನೂ ಧಾರ್ಮಿಕ ವ್ಯಕ್ತಿಯನ್ನಾಗಿ ಮಾಡಲಿಲ್ಲ. ಧರ್ಮದ ಹಂಗೇ ಇಲ್ಲದ ಆ ಜೀವಿಯಂತೆ, ಎಲ್ಲಾ ಮಾನವರ ಬದುಕುವ ಹಕ್ಕು, ಧರ್ಮ-ಸಂಬಂಧ- ನಂಬಿಕೆ ಏನೇ ಇರಲಿ, ಸಹ ಮಾನವರ ಕುರಿತು ನಮ್ಮ ಕರ್ತವ್ಯ, ಎಲ್ಲವುಗಳನ್ನೂ ಮೀರಿ ಮಾನವನ ಸಂಕಷ್ಟ, ದುಖ, ನೋವು, ಸಂತೋಷ, ಭಯ, ಆತಂಕಗಳ ಸಮಾನತೆ- ಇವುಗಳ ಕುರಿತು ಚಿಂತಿಸುವಂತೆ ಮಾಡಿತು. ಎಲ್ಲಾ ಧರ್ಮಗಳಲ್ಲಿ ಇಂತಾ ಸೆಲೆಯೊಂದಿದೆ. ಆದರೆ, ನಾವದನ್ನು ಮರೆತು ಮಠ, ಮಂದಿರಗಳನ್ನು ಕಟ್ಟಿಕೊಂಡು ತಾರತಮ್ಯದ ಶೋಷಣೆಯ ವ್ಯವಸ್ಥೆಯನ್ನು ಕಟ್ಟಿಕೊಂಡಿದ್ದೇವೆ ಎಂಬ ಸತ್ಯದ ಜ್ಞಾನೋದಯವಾಯಿತು.

ಆ ಕಾಲಕ್ಕೆ ತಕ್ಕ ಮಟ್ಟಿಗೆ ಗೀತೆ, ಪುರಾಣ, ಬೈಬಲ್, ಕುರಾನ್ ಓದಿದ್ದೆ. ಮಹಾವೀರ, ಬುದ್ಧರ ಬೋಧನೆಗಳ ಕುರಿತೂ ಕಿಂಚಿತ್ ತಿಳಿದಿತ್ತು. ಎಲ್ಲಾ ಧರ್ಮಗಳಲ್ಲಿ ಇರುವ ಶೋಷಣೆಗಳ ಅಂಶಗಳನ್ನು ಬದಿಗಿಟ್ಟು ಕೇವಲ ಸಮಾನತೆಯನ್ನು ಸಾರುವ, ಮಾನವ ಸೇವೆ ಮತ್ತು ಕರ್ತವ್ಯವನ್ನು ಸಾರುವ ಅಂಶಗಳನ್ನು ಮಾತ್ರ ಎತ್ತಿಕೊಳ್ಳಲು ಸಾಧ್ಯವಾಯಿತು. “ಸರ್ವೇಜನಾ ಸುಖಿನೋ ಭವಂತು” ಎಂಬಂತ ಉಪನಿಷದ್ ವಾಕ್ಯಗಳಾಗಲೀ, “ಉಣ್ಣುವ ಮೊದಲು ನೆರೆಯವರು ಉಂಡಿದ್ದಾರೋ ನೋಡು” ಎಂಬಂತ ಇಸ್ಲಾಮಿನ ನಿಯಮವಾಗಲೀ, “ನೆರೆಯವರನ್ನು ಪ್ರೀತಿಸು” ಎಂಬಂತ ಕ್ರೈಸ್ತ ತತ್ವವಾಗಲೀ ನನಗೆ ಇಷ್ಟವಾಗುವುದು ಅದಕ್ಕೆ. ಆಗ ಬುದ್ಧ, ಬಸವಣ್ಣನವರ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಬರೆದಿದ್ದಷ್ಟೇ ಗೊತ್ತಿದ್ದದ್ದು! ಯಾವುದೇ ಒಂದು ಧರ್ಮವನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗದಿರುವುದು ಇದೇ ಕಾರಣದಿಂದ. ಕ್ರೈಸ್ತ ಬೋಧನೆಗಳಲ್ಲಿ ನನಗೆ ಟೆನ್ ಕಮಾಂಡ್‌ಮಂಟ್ಸ್ ಮತ್ತು ಬೆಟ್ಟದ ಮೇಲಿನ ಪ್ರವಚನದ (Sermon on the Mount) ಅಂಶಗಳು ಇಷ್ಟವಾಗುತ್ತವೆ. ಗೆಳೆಯನ ಮನೆಯಲ್ಲಿ ಕಂಡ ಆ ಜೀವಕ್ಕೆ ನನ್ನ ಈ “ಜ್ಞಾನೋದಯ”ಕ್ಕಾಗಿ ಋಣಿಯಾಗಿದ್ದೇನೆ.

ಕರಾವಳಿಯ ಕ್ರೈಸ್ತರು ಇಲ್ಲಿನ ಸಾಮಾನ್ಯ ಜನರಿಗಿಂತ ಒಂದು ಹೆಜ್ಜೆ ಮುಂದೆಯೇ ಇದ್ದರು. ಅದು ಹೆಣ್ಣುಮಕ್ಕಳ ಶಿಕ್ಷಣ ಇರಲಿ, ಉಡುಗೆ ತೊಡುಗೆ ಇರಲಿ ಅಥವಾ ನಡವಳಿಕೆಯೇ ಇರಲಿ, ಇದು ನಿಜ. ನಾಲ್ಕು ದಶಕಗಳ ಹಿಂದೆ ಉಳಿದ ಹುಡುಗಿಯರು ಉದ್ದ ಲಂಗ, ಒಂದೇ ವಿನ್ಯಾಸದ ಬ್ಲೌಸು, ಹಾಫ್ ಸೀರೆ ಇತ್ಯಾದಿಗಳಿಗೆ ಸೀಮಿತರಾಗಿದ್ದರೆ, ಕ್ರೈಸ್ತ ಹೆಣ್ಣುಮಕ್ಕಳು ಹಾಫ್ ಸ್ಕರ್ಟ್, ಚೂಡಿದಾರ್, ಮತ್ತು ಅಪರೂಪಕ್ಕೆ ಪ್ಯಾಂಟು ಧರಿಸುತ್ತಿದ್ದರು. ಇದು ಅಸೂಯೆಯ ಕಾರಣದಿಂದಲೋ, ಮಡಿವಂತಿಕೆಯ ಕಾರಣದಿಂದಲೋ ಇತರರ ಅಸಹನೆಗೆ ಕಾರಣವಾಗುತ್ತಿತ್ತು. ಇದು ಕುಹಕಕ್ಕೆ ದಾರಿ ಮಾಡಿಕೊಡುತ್ತಿತ್ತು. ಉದಾಹರಣೆಗೆ ನನ್ನ ಆನುಭವ ಹೇಳಬೇಕೆಂದರೆ, ನನ್ನ ದೊಡ್ಡ ತಂಗಿ ಮೂವತ್ತೈದು ವರ್ಷಗಳ ಹಿಂದೆ ಚೂಡಿದಾರ್ ಹಾಕಲು ಆರಂಭಿಸಿದಾಗ ಕುಹಕ ಮಾಡಲಾಗಿತ್ತು: ಏನದು ಕ್ರೈಸ್ತ ಹುಡುಗಿಯರ ಹಾಗೆ ಡ್ರೆಸ್ ಮಾಡುವುದು ಎಂದು. ನಂತರ ಎಲ್ಲರೂ ಚೂಡಿದಾರ್, ಪಂಜಾಬಿ ಧರಿಸಲು ಆರಂಭಿಸಿದರು. ಇದೀಗ ಆಧುನಿಕತೆ ಎನಿಸಿತು. ಕೆಲ ವರ್ಷಗಳ ನಂತರ ನನ್ನ ತಂಗಿ ಇಂಜಿನಿಯರಿಂಗ್ ಸೇರಿ ಜೀನ್ಸ್ ಹಾಕಿದಾಗಲೂ ಇದೇ ಕತೆ ಮರುಕಳಿಸಿತು. ನಂತರ ಒಬ್ಬೊಬ್ಬರಾಗಿ ಎಲ್ಲರೂ ಆರಂಭಿಸಿದರು. ಈಗ ನಮ್ಮಂತ ಹಳ್ಳಿಯಲ್ಲಿ ಬಹುತೇಕ ಹೆಣ್ಣುಮಕ್ಕಳು ಜೀನ್ಸ್ ಸಹಿತ ಎಲ್ಲಾ ರೀತಿಯ ಫ್ಯಾಷನ್ ಉಡುಪುಗಳನ್ನು ಧರಿಸುತ್ತಾರೆ. ಯಾರೂ ಮಾತನಾಡದಷ್ಟು ಸಾಮಾನ್ಯವಾಗಿದೆ. ಹಿಂದೆ ನೈಟಿ ಬಂದಾಗಲೂ ಇದೇ ಆಗಿತ್ತು. ಈಗ ಹಳ್ಳಿ ಮುದುಕಿಯರೂ ಮನೆಯಲ್ಲಿ ನೈಟಿ ಧರಿಸುತ್ತಿದ್ದು, ಗದ್ದೆ ಕೆಲಸದಿಂದ ಹಿಡಿದು, ಬೇಕಾದರೆ ಪೇಟೆಯ ತನಕ ನೈಟಿಯಲ್ಲಿಯೇ ಹೋಗಿಬರುತ್ತಾರೆ. ಆದರೆ, ಈ ಬದಲಾವಣೆಗೆ, ಕರ್ಮಠ ಸಾಂಪ್ರದಾಯಿಕತೆ ಸಡಿಲಗೊಳ್ಳುವುದಕ್ಕೆ ಕಾರಣರಾದ ನನ್ನ ಕಾಲದ ಕ್ರೈಸ್ತ ಹುಡುಗಿಯರೇ ಮೊದಲಿಗೆ ಅವಹೇಳನಕ್ಕೆ ಗುರಿಯಾದವರು ಎಂಬುದನ್ನು ನೆನಪಿಸಬೇಕು. ಅವರನ್ನು ನೆನಪಿಸಿ ನಮಿಸುತ್ತೇನೆ.

ಇದೇ ರೀತಿಯಲ್ಲಿ ಹೆಣ್ಣುಮಕ್ಕಳ ನಡವಳಿಕೆಯಲ್ಲಿ ಕೂಡಾ. ಉದಾಹರಣೆಗೆ: ಗಂಡುಮಕ್ಕಳ ಜೊತೆ ನಿರ್ಭಿಡೆಯಿಂದ ಮಾತನಾಡುವುದರಲ್ಲಿ ಕೂಡಾ ಕ್ರೈಸ್ತ ಹುಡುಗಿಯರು ಮುಂದಿದ್ದರು. ಇದು ಹಳ್ಳಿ ಗಮಾರರ ಕಲ್ಪನೆ ಗರಿಗೆದರುವಂತೆ ಮಾಡುತ್ತಿದ್ದದ್ದೂ ಉಂಟು. ಅದೇ ನಾಲ್ಕು ದಶಕಗಳ ಹಿಂದೆ ಪ್ರಾಥಮಿಕ ಶಾಲೆಯಲ್ಲಿ ಹೆಣ್ಣು ಮಕ್ಕಳ ಡೆಸ್ಕನ್ನು (ಆರು, ಏಳನೇ ತರಗತಿಯಲ್ಲಿ ಡೆಸ್ಕು ಇತ್ತು) ಗಂಡು ಮಕ್ಕಳು ತಪ್ಪಿ ಮುಟ್ಟಿದರೂ ಮಹಾ ಪ್ರಮಾದ, ನಾಚಿಕೆಯ ವಿಷಯ ಎಂಬಂತೆ ಇಡೀ ಕ್ಲಾಸೇ ಗೊಳ್ಳೆಂದು ನಗುತ್ತಿತ್ತು. ಹಳ್ಳಿಗಳಲ್ಲಂತೂ ಪ್ರಾಯಕ್ಕೆ ಬಂದಂತ ಗಂಡು ಹೆಣ್ಣು ಪರಸ್ಪರ ನೋಡಿಶನಕ್ಕರೂ “ಕಟ್ಟಿ ಕೊಡುವ”, “ಆಯಗ್‌ಲಾ ಆಲೆಗ್‌ಲಾ ಎಡ್ಡೆ ಉಂಡು” (ಅವನಿಗೂ ಅವಳಿಗೂ “ಒಳ್ಳೆಯದಿದೆ”) ಎಂದು ಡಂಗುರ ಸಾರುವ ದುರಭ್ಯಾಸ ಇತ್ತು. ಆಗಲೂ ನಿರ್ಭಿಡೆಯಿಂದ ಮಾತನಾಡುತ್ತಿದ್ದವರು ಕ್ರೈಸ್ತ ಹುಡುಗಿಯರೇ. ಅದಕ್ಕಾಗಿ ಅವಹೇಳನಕ್ಕೆ, ತಾತ್ಸಾರಕ್ಕೆ ಕಾರಣರಾಗುತ್ತಿದ್ದವರೂ ಅವರೇ. ಆಗಿನ ಚಿತ್ರಗಳಲ್ಲಿ ಕೆಟ್ಟವರಿಗೆ ರಾಬರ್ಟ್, ಜೂಲಿ ಮುಂತಾದ ಹೆಸರುಗಳನ್ನೇ ಇಡುತ್ತಿದ್ದ ಚಿತ್ರರಂಗದ ಕಾಮಾಲೆ ಪೂರ್ವಗ್ರಹವೂ ಇದಕ್ಕೆ ಕಾರಣವಿರಬಹುದು. ಇಂದು ನಮ್ಮ ಹಳ್ಳಿಯಲ್ಲಿ ಹಿಂದಿನ ಇಂತಹ ಅಪಹಾಸ್ಯ ಇಲ್ಲದೇ ನೆರೆ ಹೊರೆಯ ಹೆಣ್ಣು ಗಂಡು ಮಕ್ಕಳು, ಹೆಂಗಸರು, ಗಂಡಸರು ನಿರ್ಭಿಡೆಯಿಂದ ಮಾತನಾಡುವುದು ಬಿಡಿ; ಒಂದೇ ಬೈಕಿನಲ್ಲಿ ಜೊತೆಗೆ ಉದ್ಯೋಗಕ್ಕೆ ಹೋಗಿಬರುವುದು ಮಾಡುತ್ತಾರೆ. ಸಂಕುಚಿತೆ ಇರುವುದು ಮನಸ್ಸಿನಲ್ಲಿ ಎಂಬುದನ್ನು ತಿಳಿದುಕೊಂಡಿದ್ದಾರೆ. ಹೆಣ್ಣು ಮಕ್ಕಳೂ ಸ್ಕೂಟರುಗಳನ್ನು ಓಡಿಸುತ್ತಾರೆ. ಕರಾವಳಿಯಲ್ಲಿ ನಾನಿರುವ ಕಡೆಯಲ್ಲಂತೂ ಇಂತಾ ಬೆಳವಣಿಗೆಗೆ ಕಾರಣರಾದವರೂ ಕ್ರೈಸ್ತ ಹೆಣ್ಣು ಮಕ್ಕಳೇ. ನನ್ನೊಡನೆ ಹೈಸ್ಕೂಲಲ್ಲೂ, ಕಾಲೇಜಲ್ಲೂ ಯಾವುದೇ ಇನ್ಹಿಬಿಷನ್ ಇಲ್ಲದೇ ಮಾತಾಡಿದ್ದೂ ಅವರೇ! ಅವರಿಗೂ ನನ್ನ ನಮನಗಳು. ಈ ರೀತಿಯಲ್ಲಿ ಕರಾವಳಿಯ ಶಿಕ್ಷಣ, ಆರೋಗ್ಯ ಮುಂತಾದ ವಿಕಾಸದ ಹಲವು ಮಜಲುಗಳಲ್ಲಿ ಕ್ರೈಸ್ತರೇ ಮುಂಗೋಳಿ (Clarion)ಗಳಾಗಿದ್ದಾರೆ. ಅದನ್ನವರು ಹೇಳಿಕೊಳ್ಳುವುದೂ ಇಲ್ಲ, ಉಳಿದವರು ನೆನಪಿಸಿಕೊಳ್ಳುವುದೂ ಇಲ್ಲ. ಅವುಗಳನ್ನು ಮುಂದೆ ನೋಡೋಣ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page