Thursday, October 17, 2024

ಸತ್ಯ | ನ್ಯಾಯ |ಧರ್ಮ

ಸ್ಪೆಕ್ಟ್ರಂ ಹಂಚಿಕೆ ವಿವಾದ ; ಮುಖೇಶ್ ಅಂಬಾನಿ ವಿರುದ್ದ ತಿರುಗಿ ಬಿದ್ದ ಎಲಾನ್ ಮಸ್ಕ್

ಭಾರತದಲ್ಲಿ ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್ ಸ್ಪೆಕ್ಟ್ರಮ್ ಹಂಚಿಕೆಗೆ ಸಂಬಂಧಿಸಿದಂತೆ ಬಿಲಿಯನೇರ್‌ಗಳಾದ ಎಲಾನ್ ಮಸ್ಕ್ ಮತ್ತು ಮುಖೇಶ್ ಅಂಬಾನಿ ನಡುವಿನ ಕದನವು ಬಿಸಿಯೇರಿದೆ. ಅದರಂತೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಒಳಗೊಂಡ ವಿಚಾರಕ್ಕೆ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ.

ಉಪಗ್ರಹ ತರಂಗಾಂತರದ ಹರಾಜು ಪ್ರಕ್ರಿಯೆಯಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಅವರು ಸರ್ಕಾರದ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ ಎಂದು ಅಮೆರಿಕದ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಗಂಭೀರ ಆರೋಪ ಮಾಡಿದ್ದಾರೆ. ಈ ಟೀಕೆಯ ಬೆನ್ನಲ್ಲೇ ಭಾರತ ಹರಾಜು ಪ್ರಕ್ರಿಯೆ ಕೈಬಿಟ್ಟಿದೆ. ಈ ಬೆಳವಣಿಗೆ ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ವಾರ್ಷಿಕ ಶೇ 36ರ ವೃದ್ಧಿ ದರದಲ್ಲಿ ಬೆಳೆಯುತ್ತಿರುವ ಉಪಗ್ರಹ ಸೇವೆಯು 2030ರ ಹೊತ್ತಿಗೆ ₹16 ಸಾವಿರ ಕೋಟಿ ವಹಿವಾಟು ನಡೆಸುವ ಉದ್ಯಮವಾಗುವ ಸಾಧ್ಯತೆ ಇದ್ದು, ಇದನ್ನು ಪಡೆಯಲು ಜಗತ್ತಿನ ಇಬ್ಬರು ಘಟಾನುಘಟಿ ಬಿಲೇನಿಯರ್ ಗಳ ನಡುವೆ ಪೈಪೋಟಿ ನಡೆದಿದೆ ಎಂದೇ ಅಂದಾಜಿಸಲಾಗಿದೆ.

ಹೆಚ್ಚಿನ ವೇಗದ ಇಂಟರ್ನೆಟ್ ಕೊರತೆ ಇರುವ ಭಾರತದ ಗ್ರಾಮೀಣ ಪ್ರದೇಶಗಳಿಗೆ ಸ್ಟಾರ್‌ಲಿಂಕ್‌ನ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ವಿಸ್ತರಿಸುವ ಗುರಿಯನ್ನು ಎಲಾನ್ ಮಸ್ಕ್ ಒಡೆತನದ ಸಂಸ್ಥೆ ಹೊಂದಿದೆ. ಸ್ಪೆಕ್ಟ್ರಮ್ ಅನ್ನು ಹರಾಜು ಹಾಕುವುದು ಭೌಗೋಳಿಕ ನಿರ್ಬಂಧಗಳನ್ನು ವಿಧಿಸುತ್ತದೆ ಮತ್ತು ವೆಚ್ಚವನ್ನು ಹೆಚ್ಚಿಸುತ್ತದೆ ಎಂದು ಟೆಸ್ಲಾ ಬಿಲಿಯನೇರ್ ವಾದಿಸಿದ್ದಾರೆ. ಇದು ಸ್ಟಾರ್‌ಲಿಂಕ್‌ನಂತಹ ಕಂಪನಿಗಳಿಗೆ ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸಲು ಕಷ್ಟವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಆಡಳಿತಾತ್ಮಕ ಪರವಾನಗಿ ಹಂಚಿಕೆಯು ಸದ್ಯ ಜಾಗತಿಕ ಮಟ್ಟದಲ್ಲಿರುವ ಪದ್ಧತಿ ಎಂದು ಸ್ಟಾರ್‌ಲಿಂಕ್‌ ಎಂಬ ಬಾಹ್ಯಾಕಾಶ ಅನ್ವೇಷಣೆಯ ಉದ್ದಿಮೆ ಹೊಂದಿರುವ ಮಸ್ಕ್‌ ಹೇಳಿದ್ದಾರೆ.

ಇನ್ನು ಹರಾಜು ಪ್ರಕ್ರಿಯೆ ಪರವಾಗಿರುವ ಮುಖೇಶ್ ಅಂಬಾನಿ ಇದಕ್ಕೆ ತಿರುಗೇಟು ನೀಡಿ, ‘ಉಪಗ್ರಹದ ತರಂಗಾಂತರವನ್ನು ಒಬ್ಬರಿಗೆ ಹಂಚಿಕೆ ಮಾಡಲು ಭಾರತದ ಕಾನೂನಿನಲ್ಲಿ ಅವಕಾಶವಿಲ್ಲ. ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಸ್ಪರ್ಧೆಗೆ ಸಮನಾದ ವೇದಿಕೆ ಸಿಗಲಿದೆ’ ಎಂದು ಪ್ರತಿಪಾದಿಸಿದ್ದಾರೆ.

ಸ್ವದೇಶಿ ಬ್ರಾಡ್‌ಬ್ಯಾಂಡ್‌ ತರಂಗಾಂತರ ಹಂಚಿಕೆಯನ್ನು ಹರಾಜು ನಡೆಸದೇ, ಹಂಚಿಕೆ ಮಾಡುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಕ್ರಮಕ್ಕೆ ರಿಲಯನ್ಸ್‌ ಭಾನುವಾರ ಆಕ್ಷೇಪ ವ್ಯಕ್ತಪಡಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮಸ್ಕ್‌, ‘ಭಾರತವು ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ಹಾಗೂ ಡಿಜಿಟಲ್ ತಂತ್ರಜ್ಞಾನ ಸಂಬಂಧಿತ ವಿಶ್ವಸಂಸ್ಥೆಯ ಏಜೆನ್ಸಿಯ ಸದಸ್ಯ ರಾಷ್ಟ್ರವಾಗಿದೆ. ಅಲ್ಲಿನ ನಿಯಮದಂತೆ ತರಂಗಾಂತರವನ್ನು ಹಂಚಿಕೆ ಮಾಡಬೇಕು. ತರ್ಕಬದ್ಧವಾಗಿ, ಪರಿಣಾಮಕಾರಿ ಹಾಗೂ ಆರ್ಥಿಕವಾಗಿ ಅದುವೇ ಸರಿಯಾದ ಮಾರ್ಗ’ ಎಂದು ಪ್ರತಿಪಾಧಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page