Tuesday, October 22, 2024

ಸತ್ಯ | ನ್ಯಾಯ |ಧರ್ಮ

16 ಮಕ್ಕಳು, ಸ್ಟಾಲಿನ್‌ ಹಾಗೂ ಕ್ಷೇತ್ರ ಮರು ವಿಂಗಡಣೆ!

ಹೊಸದಿಲ್ಲಿ, ಅಕ್ಟೋಬರ್ 21: ದೇಶದಲ್ಲಿ ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ಕುರಿತು ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ಜನಗಣತಿಯಂತೆ ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯನ್ನು ಕೇಂದ್ರ ಸದ್ಯದಲ್ಲೇ ಮಾಡಲಿದೆ ಎಂಬ ಪ್ರಚಾರ ನಡೆಯುತ್ತಿದೆ. ಹೀಗಾದರೆ ದಕ್ಷಿಣದ ರಾಜ್ಯಗಳಿಗೆ ದೊಡ್ಡ ಅನ್ಯಾಯವಾಗಲಿದೆ. ಇನ್ನೊಂದೆಡೆ ಲೋಕಸಭೆ ಜತೆಗೆ ಉತ್ತರದ ರಾಜ್ಯಗಳ ಪ್ರಭಾವವೂ ದೇಶದ ರಾಜಕೀಯದಲ್ಲಿ ಹೆಚ್ಚಾಗಲಿದೆ. ಕೇಂದ್ರದಲ್ಲಿ ಯಾರು ಅಧಿಕಾರದಲ್ಲಿರಬೇಕೆಂದು ನಿರ್ಧರಿಸುವಲ್ಲಿ ದಕ್ಷಿಣದ ರಾಜ್ಯಗಳ ಪಾತ್ರ ಕಡಿಮೆಯಾಗುತ್ತಿದೆ.

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಇತ್ತೀಚೆಗೆ ನೀಡಿದ ಹೇಳಿಕೆಯಿಂದಾಗಿ ಇದೀಗ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಸ್ಟಾಲಿನ್ ಹೇಳಿದ್ದು… ‘ಸಣ್ಣ ಸಂಸಾರ ಬೇಡ, 16 ಮಕ್ಕಳನ್ನು ಹೆತ್ತು ಸಾಕಬೇಕು ಎಂದು ಜನ ಭಾವಿಸುವ ಪರಿಸ್ಥಿತಿ ಇದೆ’.

ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯಾದರೆ ಜನಸಂಖ್ಯಾ ನಿಯಂತ್ರಣ ವಿಧಾನಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿರುವ ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಫೆಬ್ರವರಿಯಲ್ಲಿ ತಮಿಳುನಾಡು ಸರ್ಕಾರ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಿತ್ತು.

ಮುಂದಿನ ಚುನಾವಣೆ ವೇಳೆಗೆ ಮರುವಿಂಗಡಣೆ

ದೇಶದಲ್ಲಿ ಕೊನೆಯ ಬಾರಿಗೆ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆ ನಡೆದಿದ್ದು 1972ರಲ್ಲಿ. 1971ರ ಜನಗಣತಿಯನ್ನು ಪರಿಗಣಿಸಿ ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಯಿತು. ಈಗ 2026ರಲ್ಲಿ ಮತ್ತೊಮ್ಮೆ ಲೋಕಸಭೆ ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡಲು ಕೇಂದ್ರ ಬಯಸಿದೆ. ಜನಗಣತಿ ಇನ್ನೂ ಆರಂಭವಾಗದಿರುವ ಹಿನ್ನೆಲೆಯಲ್ಲಿ 2026ರಲ್ಲಿ ಇಲ್ಲದಿದ್ದರೆ ಮುಂದಿನ ಚುನಾವಣೆ ವೇಳೆಗೆ ಪುನರ್ ವಿಂಗಡಣೆಯಾಗುವ ಸಾಧ್ಯತೆ ಇದೆ. ಆದರೆ, ಸೀಟುಗಳ ಸಂಖ್ಯೆಯನ್ನು ಹೆಚ್ಚಿಸದೆ ಮರುಹಂಚಿಕೆ ಮಾಡಲಾಗುತ್ತದೆಯೇ ಅಥವಾ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಬೇಕಿದೆ.

ಒಂದು ಅಂದಾಜಿನ ಪ್ರಕಾರ, ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದರೆ 848 ಲೋಕಸಭಾ ಸ್ಥಾನಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಹೀಗೆ ಮಾಡಿದರೆ ಬಹುತೇಕ ಎಲ್ಲ ರಾಜ್ಯಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳು ಹೆಚ್ಚಾಗಲಿವೆ. 543 ಸ್ಥಾನಗಳನ್ನು ಇಟ್ಟುಕೊಂಡರೆ, ಕೆಲವು ರಾಜ್ಯಗಳಲ್ಲಿ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಇತರ ರಾಜ್ಯಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ.

ಉತ್ತರದ ರಾಜ್ಯಗಳಿಗೆ ಲಾಟರಿ

ಜನಸಂಖ್ಯೆಯ ಆಧಾರದ ಮೇಲೆ ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ಉತ್ತರದ ರಾಜ್ಯಗಳಿಗೆ ಲಾಟರಿಯಾಗಿ ಪರಿಣಮಿಸಲಿದೆ. ಅದರಲ್ಲೂ ಜನಸಂಖ್ಯೆ ಹೆಚ್ಚಿರುವ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಲೋಕಸಭೆ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ. ಸದ್ಯ ಈ ಎರಡು ರಾಜ್ಯಗಳಲ್ಲಿ 120 ಸೀಟುಗಳಿದ್ದು, ಅದು 222ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಅಂದರೆ ಸುಮಾರು ಶೇ.85ರಷ್ಟು ಏರಿಕೆಯಾಗಲಿದೆ. ಉತ್ತರ ಪ್ರದೇಶದಲ್ಲಿ ಪ್ರಸ್ತುತ 80 ಲೋಕಸಭಾ ಸ್ಥಾನಗಳಿದ್ದು, ಅದು 143ಕ್ಕೆ ಹೆಚ್ಚಾಗಬಹುದು. ಬಿಹಾರದಲ್ಲಿ ಸದ್ಯ 40 ಸ್ಥಾನಗಳಿದ್ದು, 79ಕ್ಕೆ ಏರಿಕೆಯಾಗಲಿದೆ. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ. ಇದು ಸಂಭವಿಸಿದರೆ, ಉತ್ತರದ ಯುಪಿ ಮತ್ತು ಬಿಹಾರದಂತಹ ಮೂರ್ನಾಲ್ಕು ರಾಜ್ಯಗಳು ಮಾತ್ರ ಕೇಂದ್ರ ರಾಜಕೀಯವನ್ನು ನಿರ್ದೇಶಿಸುವ ಮಟ್ಟದಲ್ಲಿ ಪ್ರಭಾವವನ್ನು ತೋರಿಸಬಹುದು.

ದಕ್ಷಿಣಕ್ಕೆ ಅನ್ಯಾಯ

ಸ್ವಾತಂತ್ರ್ಯಾನಂತರದ ಜನಸಂಖ್ಯೆಯ ಬೆಳವಣಿಗೆಯು ದೇಶದ ಪ್ರಮುಖ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ 1970ರ ದಶಕದಿಂದಲೂ ಸರಕಾರಗಳು ಜನಸಂಖ್ಯೆ ನಿಯಂತ್ರಣವನ್ನು ರಾಷ್ಟ್ರೀಯ ಗುರಿಯನ್ನಾಗಿಸಿ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಇವುಗಳನ್ನು ದಕ್ಷಿಣದ ರಾಜ್ಯಗಳು ಉತ್ತಮವಾಗಿ ಅನುಷ್ಠಾನಗೊಳಿಸಿದವು ಮತ್ತು ಜನಸಂಖ್ಯೆಯನ್ನು ನಿಯಂತ್ರಿಸಿದವು. ಇದು ಈಗ ದಕ್ಷಿಣದ ರಾಜ್ಯಗಳ ಪಾಲಿಗೆ ಶಾಪವಾಗುವ ಅಪಾಯವಿದೆ.

ಜನಸಂಖ್ಯೆಯ ಆಧಾರದ ಮೇಲೆ ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯಾದರೆ ದೇಶದ ರಾಜಕೀಯದಲ್ಲಿ ದಕ್ಷಿಣ ಭಾರತದ ಪ್ರಭಾವ ಸಾಕಷ್ಟು ಕಡಿಮೆಯಾಗಲಿದೆ. ಲೋಕಸಭೆ ಸ್ಥಾನಗಳ ಸಂಖ್ಯೆ 848ಕ್ಕೆ ಹೆಚ್ಚಾದರೆ ದಕ್ಷಿಣದ ರಾಜ್ಯಗಳ ಕ್ಷೇತ್ರಗಳ ಸಂಖ್ಯೆ ಈಗಿರುವ 129ರಿಂದ 165ಕ್ಕೆ ಏರಿಕೆಯಾಗಲಿದೆ. ಅಂದರೆ ಶೇ.28ರಷ್ಟು ಸೀಟುಗಳು ಹೆಚ್ಚಾಗಲಿವೆ. ತೆಲಂಗಾಣದಲ್ಲಿ 17ರಿಂದ 23, ಆಂಧ್ರಪ್ರದೇಶದಲ್ಲಿ 25ರಿಂದ 31, ಕರ್ನಾಟಕದಲ್ಲಿ 28ರಿಂದ 41 ಮತ್ತು ತಮಿಳುನಾಡಿನಲ್ಲಿ 39ರಿಂದ 49ಕ್ಕೆ ಏರಿಕೆಯಾಗಲಿದೆ. ಕೇರಳದ 20 ಸೀಟುಗಳ ಪೈಕಿ ಒಂದೇ ಒಂದು ಸೀಟು ಹೆಚ್ಚಾಗುವುದಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page