Thursday, October 24, 2024

ಸತ್ಯ | ನ್ಯಾಯ |ಧರ್ಮ

ಅನಿಷ್ಠ ಪಂಕ್ತಿ ಭೇದ, ಮಡೆಸ್ನಾನವನ್ನು ಪೋಷಿಸುವ ಪೇಜಾವರ ಶ್ರೀ ಸೆಕ್ಯುಲರಿಸಂ ಕುರಿತು ಮಾತನಾಡುವುದು ದುರಂತ – ಬಿ ಕೆ ಹರಿಪ್ರಸಾದ್

ಬೆಂಗಳೂರು: ಜಾತಿ ಗಣತಿ ಕುರಿತು ಪೇಜಾವರ ಮಠದ ಸ್ವಾಮಿ ವಿಶ್ವಪ್ರಸನ್ನ ತೀರ್ಥ ಅವರು “ಭಾರತ ಜಾತ್ಯತೀತ ರಾಷ್ಟ್ರವಾಗಿರುವಾಗ ಜಾತಿ ಗಣತಿ ಏಕೆ ಬೇಕು” ಎಂದು ಹೇಳಿರುವುದಕ್ಕೆ ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.

ಕಳೆದೆರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಿದ್ದು, ಸ್ವಾಮಿಯ ಹೇಳಿಕೆಯನ್ನು ಹಲವು ಪ್ರಜ್ಞಾವಂತರು ಟೀಕಿಸಿದ್ದಾರೆ. ಈ ಕುರಿತು ಕಾಂಗ್ರೆಸ್‌ ನಾಯಕ ಬಿ ಕೆ ಹರಿಪ್ರಸಾದ್‌ ಅವರೂ ಪ್ರತಿಕ್ರಿಯಿಸಿದ್ದು, “ಪೇಜಾವರ ಶ್ರೀಗಳು ಜಾತ್ಯಾತೀತತೆ ಬಗ್ಗೆ ಮಾತಾಡುವುದು ‌ʼಭೂತದ ಬಾಯಲ್ಲಿ ಭಗವದ್ಗೀತೆʼ ಕೇಳಿದಂತಿದೆ” ಎಂದು ಹೇಳಿದ್ದಾರೆ.

ನಿನ್ನೆ (ಅ.24) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬಿ ಕೆ ಹರಿಪ್ರಸಾದ್‌ ಅವರು “ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರ ಬಗ್ಗೆ ನಾವು ಯಾರೂ ಹೇಳಿಕೆ ನೀಡುತ್ತಿರಲಿಲ್ಲ. ಅವರು ಹಿರಿಯರು. ಆದರೆ, ಈಗಿನ ಸ್ವಾಮೀಜಿ ಅವರು ಅಯೋಧ್ಯೆಯಿಂದ ಹಿಡಿದು ಎಲ್ಲ ವಿಷಯಗಳ ಕುರಿತು ಹೇಳಿಕೆ ನೀಡುತ್ತಿದ್ದಾರೆ” ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ‘ಜಾತಿ ಗಣತಿ ಕುರಿತು ಮಾತನಾಡುವ ಮೊದಲು ತಮ್ಮ ಮಠದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಲಿ. ಸ್ವಾಮೀಜಿ ಅವರು ಪಂಕ್ತಿಭೋಜನ ಹಾಗೂ ಮಡೆಸ್ನಾನಕ್ಕೆ ಉತ್ತೇಜನ ನೀಡುತ್ತಾರೆ. ಸ್ವಾಮೀಜಿಗಳು ಸರ್ವ ಸಂಘ ಪರಿತ್ಯಾಗಿಗಳು ಎಂಬ ಮಾತಿದೆ. ಆದರೆ, ಈಗ ಸ್ವಾಮೀಜಿಗಳು ಬದಲಾಗಿದ್ದಾರೆ. ಅವರು ಕಾವಿ ಬಟ್ಟೆ ತ್ಯಜಿಸಿ ಬಂದರೆ ಅವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ” ಎಂದು ಹರಿಪ್ರಸಾದ್‌ ಹೇಳಿದ್ದಾರೆ.

“ಜಾತಿಗಣತಿಗಾಗಿ ಸರಕಾರವು ದೊಡ್ಡ ಮೊತ್ತ ವೆಚ್ಚ ಮಾಡಿ ವರದಿಯನ್ನು ಮುಚ್ಚಿಟ್ಟಿದೆ. ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಗಣತಿ ಏಕೆ ಬೇಕು. ಒಂದು ಕಡೆ ಜಾತಿ ಆಧಾರದಲ್ಲಿ ರಾಜಕೀಯ ಬೇಡ ಎಂದು ಮತ್ತೊಂದು ಕಡೆ ಜಾತಿಗಣತಿ ಬೇಕು ಎನ್ನುತ್ತಾರೆ. ಜಾತಿ ಗಣತಿ ಏಕೆ ಎಂದು ಅರ್ಥವಾಗುತ್ತಿಲ್ಲ” ಎಂದು ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page