Friday, October 25, 2024

ಸತ್ಯ | ನ್ಯಾಯ |ಧರ್ಮ

ಮರಕುಂಬಿ ದುರ್ಘಟನೆ ; 10 ವರ್ಷದ ಹಿಂದಿನ ಗಲಾಟೆ ಪ್ರಕರಣಕ್ಕೆ 98 ಮಂದಿಗೆ ಜೀವಾವಧಿ ತೀರ್ಪು : ಘಟನೆಯ ಪೂರ್ಣ ವಿವರ ಇಲ್ಲಿದೆ

ಆ ಪುಟ್ಟ ಗ್ರಾಮದಲ್ಲಿ ಕಳೆದ 10 ವರ್ಷಗಳ ಹಿಂದೆ ನಡೆದ ದಲಿತರು ಮತ್ತು ಸವರ್ಣಿಯರ ಗಲಾಟೆ ಪ್ರಕರಣ ಇದೀಗ ತಾರ್ಕಿಕ ಅಂತ್ಯ ಕಂಡಿದೆ. ದಲಿತರ ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಭಾಗಿಯಾಗಿದ್ದ 98 ಅಪರಾಧಿಗಳಿಗೆ ಇದೀಗ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ : ಅದು 2014 ಅಕ್ಟೋಬರ್ 28 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮ ಅಕ್ಷರಶಃ ಧಗದಗಿಸಿತ್ತು.‌ ಗ್ರಾಮದ ಗುಡಿಸಲುಗಳಿಗೆ ಬೆಂಕಿ ಬಿದ್ದಿತ್ತು. ಇಡೀ ಗ್ರಾಮದ ದಲಿತರು ಹಾಗೂ ಸವರ್ಣಿಯರ ನಡುವಿನ ಗಲಾಟೆಯಿಂದ ಇಡಿ ಗ್ರಾಮ ರಣಾಂಗಣವಾಗಿತ್ತು. ದಲಿತರು ಕ್ಷೌರದ ಅಂಗಡಿ ಮತ್ತು ಹೋಟೆಲ್ ಪ್ರವೇಶಕ್ಕೆ ಸಂಬಂಧಿಸಿದಂತೆ, ದಲಿತರು ಮತ್ತು ಗ್ರಾಮದ ಸವರ್ಣೀಯರ ನಡುವೆ ಗಲಾಟೆ ನಡೆದಿತ್ತು. ನಂತರ ಗಂಗಾವತಿಯ ಚಿತ್ರಮಂದಿರದಲ್ಲಿ ಆರಂಭವಾದ ಗಲಾಟೆ ಮರಕುಂಬಿ ಗ್ರಾಮದಲ್ಲಿ ದಲಿತರ ಕೇರಿಗೆ ನುಗ್ಗಿ ಗುಡಿಸಲುಗಳಿಗೆ ಬೆಂಕಿ‌ ಇಡುವ ಹಂತಕ್ಕೆ ತಲುಪಿತ್ತು.

ತನಿಖೆ ಚುರುಕು ಗೊಳಿಸಿದ್ದ ಪೊಲೀಸರು: ಇನ್ನು ಮರಕುಂಬಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣಿಯರ ಮದ್ಯೆ ಗಲಾಟೆ ಹಿನ್ನೆಲೆ ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟು ತನಿಖೆ ಆರಂಭಿಸಿದ್ದರು. ಆದರೆ,‌ ಅದೇ ರಾತ್ರಿ ಆರೋಪಿಗಳು ದಲಿತರ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ ಇಟ್ಟಿದ್ದರು ಎಂದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿರಲಿಲ್ಲ. ತನಿಖೆ ನಡೆಸಿದ ಪೊಲೀಸರು ಒಟ್ಟು 117 ಜನರ ವಿರುದ್ಧ ದೋಷಾರೋಪ‌ ಪಟ್ಟಿ ಸಲ್ಲಿಸಿದ್ದರು.

ವಾದ-ವಿವಾದ ಆಲಿಸಿ ತೀರ್ಪು ಪ್ರಕಟಿಸದ ನ್ಯಾಯಾಧೀಶರು: ಅಕ್ಟೋಬರ್ 21 ರವರೆಗೆ ವಾದ ವಿವಾದ ಆಲಿಸಿದ ನ್ಯಾಯಾಧೀಶರು, ಅಂದೇ ಎಲ್ಲ‌ ಆರೋಪಿಗಳಿಗೆ ನೀವು ಅಪರಾಧ ಮಾಡಿರುವುದು ಸಾಬೀತಾಗಿದೆ. ಆದರೆ ಶಿಕ್ಷೆಯ ಪ್ರಮಾಣವನ್ನ ಅಕ್ಟೋಬರ್ 24 ಪ್ರಕಟಿಸುವುದಾಗಿ ಹೇಳಿ, ಎಲ್ಲ 101 ಆರೊಪಿಗಳನ್ನು ನ್ಯಾಯಾಂಗ ಬಂಧನಕ್ಕೆ‌ ಕಳುಹಿಸಿದ್ದರು. 101 ಜನ ಅಪರಾಧಿಗಳನ್ನ ಪೊಲೀಸರು ನ್ಯಾಯಾಲಯಕ್ಕೆ ಬಿಗಿಬಂದೋಬಸ್ಥನಲ್ಲಿ ಕರೆತರಲಾಗಿತ್ತು, ಅಪರಾದಿಗಳ ಸಮ್ಮುಖದಲ್ಲೇ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಘೋಷಣೆ ಮಾಡಿದ್ದಾರೆ.

10 ವರ್ಷಗಳ ಬಳಿಕ ಬಂತು ತೀರ್ಪು: ಈ ಪ್ರಕರಣ ಈಗ ಸುದಿರ್ಘ ಹತ್ತು ವರ್ಷಗಳ ವಾದ ವಿವಾದಗಳ ಆಲಿಸಿದ ಕೊಪ್ಪಳ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ್ ಜಿ ಅವರು ಪ್ರಕರಣದಲ್ಲಿ ಬಾಗಿಯಾಗಿದ್ದ 101 ಜನ ಆರೋಪಿಗಳನ್ನ ಅಪರಾದಿ ಎಂದು ಘೋಷಣೆ ಮಾಡಿದೆ, 98 ಜನರಿಗೆ ಜೀವಾವದಿ ಶಿಕ್ಷೆ ಜೊತೆ 5 ಸಾವಿರ ದಂಡ ಹಾಗೂ ಮೂರು ಜನ ಅಪರಾದಿಗಳಿಗೆ 5 ವರ್ಷ ಶಿಕ್ಷೆ ಹಾಗೂ 2 ಸಾವಿರ ದಂಡ ವಿದಿಸಿ ಆದೇಶ ಹೊರಡಿಸಿದ್ದಾರೆ.

ತೀರ್ಪಿನ ನಂತರ ಸಂಬಂಧಿಕರ ಆಕ್ರೋಶ-ಕಣ್ಣೀರು: ತೀರ್ಪು ಕಾಯ್ದಿರಿಸಿದ ಹಿನ್ನೆಲೆ ಇಡೀ ಮರಕುಂಬಿ ಗ್ರಾಮದ ಜನರು ನ್ಯಾಯಾಲಯದ ನ್ಯಾಯಾಲಯದ ಆವರಣದಲ್ಲಿ ಸೇರಿದ್ದರು. ಜೀವಾವದಿ ಶಿಕ್ಷೆ ಪ್ರಕಟವಾಗ್ತಿದ್ದಂತೆ ಅಪರಾದಿಗಳ ಸಂಬಂದಿಕರು ಆಕ್ಷೇಪ ವ್ಯಕ್ತಪಡಿಸಿದರು. ಸಂಭಂದಿಕರಿಗೆ ಶಿಕ್ಷೆ ಪ್ರಕಟವಾದ ಹಿನ್ನೆಲೆ ನ್ಯಾಯಾಲಯದ ಆವರಣದಲ್ಲೆ ಕಣ್ಣಿರು ಹಾಕಿದ್ರು. ಘಟ‌ನೆ ನಡೆದು 10 ವರ್ಷಗಳು ಕಳೆದಿವೆ.‌ ಆ ಘಟನೆಯ ಬಳಿಕ ಗ್ರಾಮದಲ್ಲಿ ಎಲ್ಲರೂ ಒಟ್ಟಾಗಿ ಜೀವನ ಮಾಡುತ್ತಿದ್ದರು.‌

ಆದರೆ ಈಗ ನ್ಯಾಯಾಲಯದ ತೀರ್ಪಿನ ಬಳಿಕ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಜಾತಿ ನಿಂದನೆ ಹಾಗೂ ಅಸ್ಪ್ರಶ್ಯತೆ ಆಚರಣೆ ಪ್ರಕರಣದಲ್ಲಿ, ಇಷ್ಟು ಜನರಿಗೆ ಜೀವಾವದಿ ಶಿಕ್ಷೆಯಾಗಿರೋದು ದೇಶದಲ್ಲೆ ಇದು ಮೊದಲ ಪ್ರಕರಣ ಎನ್ನಲಾಗಿದೆ. ಎಂದೋ ಮಾಡಿದ ಅಪರಾಧ ಕೃತ್ಯಕ್ಕೆ ಇಂದು ಶಿಕ್ಷೆ ಎಂದು ಕೊರಗಿದರೂ ಅಪರಾಧ ಅಪರಾಧವೇ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕೊನೆಯಯಿಲ್ಲದಂತಾಗಿದೆ. ಮರಕುಂಬಿ ಗ್ರಾಮದಲ್ಲಿ ನಡೆದ ಈ ಘಟನೆ ಮತ್ತು ಅದಕ್ಕೆ ಬಂದ ತೀರ್ಪಿನ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆ ನಡೆಯದಿರಲಿ. ಈ ತೀರ್ಪು ಮುಂದಿನ ಇಂತಹ ಕೃತ್ಯಕ್ಕೆ ಎಚ್ಚರಿಕೆ ಗಂಟೆಯಾಗಿರಲಿ ಎಂದು ಪ್ರಜ್ಞಾವಂತ ಸಮುದಾಯ ಅಭಿಪ್ರಾಯ ಪಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page