Thursday, June 13, 2024

ಸತ್ಯ | ನ್ಯಾಯ |ಧರ್ಮ

ಪ್ರೊ.ಗಂಗಾಧರ ಮೂರ್ತಿಯವರ ನಿಧನಕ್ಕೆ ಸಿದ್ದರಾಮಯ್ಯ ಅವರ ಸಂತಾಪ

ಚಿಂತಕರಾದ ಕನ್ನಡದ ಖ್ಯಾತ ಚಿಂತಕರೂ, ಬರಹಗಾರರಾದ ಪ್ರೊ.ಗಂಗಾಧರ ಮೂರ್ತಿಯವರು ಹೃದಯಾಘಾತದಿಂದ ನಮ್ಮನ್ನೆಲ್ಲಾ ಅಗಲಿರುವುದು ದುಃಖ ತಂದಿದೆ. ಇವರ ಅಗಲಿಕೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ.

ವಯೋಸಹಜ ಅರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಚೇತರಿಸಿಕೊಳ್ಳಬಹುದು ಎನ್ನುವ ವಿಶ್ವಾಸ ನನಗಿತ್ತು. ನಿನ್ನೆ ಮಧ್ಯಾಹ್ನದಿಂದ ಆರೋಗ್ಯದಲ್ಲಿ ಏರುಪೇರು ಆಗುತ್ತಿತ್ತು. ಆದರೆ ಇಷ್ಟು ಬೇಗ ನಮ್ಮನ್ನು ಅಗಲಬಹುದು ಎನ್ನಿಸಿರಲಿಲ್ಲ. ಇವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿ ಆಗಿದ್ದೇನೆ.

77 ವರ್ಷದ ಗಂಗಾಧರ ಮೂರ್ತಿಯವರು ನಾಲ್ಕು ದಶಕಗಳಿಂದ ಕನ್ನಡದ ಅಂಗಳದಲ್ಲಿ ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ, ಜನ ಚಳುವಳಿ, ವಿಚಾರವಾದಿ ಚಳುವಳಿಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು.

ಬರಹಗಾರರಾಗಿ, ಅನುವಾದಕರಾಗಿ, ಸಂಪಾದಕರಾಗಿ ಕನ್ನಡ ಸಾಹಿತ್ಯಕ್ಕೆ ನೀಡಿದ ವಿಶೇಷ ಕೊಡುಗೆಗಳು ಕನ್ನಡದ ವಿವೇಕವನ್ನು ಹೆಚ್ಚಿಸಿದೆ. ಈ ಮಣ್ಣಿನ ಅರಿವನ್ನು ವಿಸ್ತರಿಸಿದೆ.

‘ಭಾರತ ಜ್ಞಾನ ವಿಜ್ಞಾನ ಸಮಿತಿ’ಯು ಪ್ರಕಟಿಸುತ್ತಿದ್ದ ಮಾಸ ಪತ್ರಿಕೆಗೆ ಕಳೆದ 12 ವರ್ಷಗಳಿಂದ ಪ್ರಧಾನ ಸಂಪಾದಕರಾಗಿ ದುಡಿದಿದ್ದ ಇವರ ಕಾರಣದಿಂದ ನಾಡಿನ ವೈಜ್ಞಾನಿಕ ಮನೋಭಾವ ಕೂಡ ಹೆಚ್ಚಿದೆ.

1938 ರ ಧ್ವಜ ಸತ್ಯಾಗ್ರಹ ಹತ್ಯಾಕಾಂಡದ ನಂತರ ‘ಕರ್ನಾಟಕದ ಜಲಿಯನ್ ವಾಲಾಭಾಗ್’ ಎಂದೇ ಕರೆಯಲಾಗುವ ವಿದುರಾಶ್ವತ್ಥದಲ್ಲಿ ರೂಪುಗೊಳ್ಳುತ್ತಿರುವ ಸ್ವತಂತ್ರ್ಯ ಸ್ಮಾರಕ ಸಂಕೀರ್ಣದ ಪರಿಕಲ್ಪನೆ ಮತ್ತು ವಿನ್ಯಾಸಕಾರರಾಗಿ ಭಾರತ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಚಿತ್ರಪಟ ಗ್ಯಾಲರಿ ನಿರ್ಮಾಣ, ಥೀಮ್ ಗ್ರಂಥಾಲಯ ಸಂಯೋಜನೆಯಲ್ಲಿ ತೊಡಗಿಸಿಕೊಂಡಿದ್ದರು. ಇವರು ಕನ್ನಡ ಅಕ್ಷರ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಚಳವಳಿಯ ಅವಿಭಾಜ್ಯವಾಗಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರಾಗಿ ಸುಮಾರು 30 ಬೊಧನೆ ಮಾಡಿದ್ದಾರೆ. ’’ನವ್ಯ ಕತೆಗಳು” ಅವರು ಬರೆದ ವಿಮರ್ಶಾ ಲೇಖನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ ನೀಡಿ ಗೌರವಿಸಿದೆ. ಅನುವಾದ ಕ್ಷೇತ್ರದಲ್ಲಿ ಇವರ ಸೇವೆ ಗಮನಿಸಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರಶಸ್ತಿ ನೀಡಿ ಗೌರವಿಸಿದೆ. ಸೂಫಿ ಕಲ್ಚರ್ ಸಂಪಾದಕ  ಸಮಿತಿಯಲ್ಲಿ ಪ್ರವಾಚಕರಾಗಿದ್ದರು.

Related Articles

ಇತ್ತೀಚಿನ ಸುದ್ದಿಗಳು