Monday, October 28, 2024

ಸತ್ಯ | ನ್ಯಾಯ |ಧರ್ಮ

ʼಹಠಮಾರಿ ಹೆಣ್ಣುʼಗಳಲ್ಲಿನ ತಾಯ್ತನ: ಕೊಟ್ಟುಕ್ಕಾಳಿ ಸಿನಿಮಾ ವಿಮರ್ಶೆ

ಎಂ. ನಾಗರಾಜಶೆಟ್ಟ

ʼ ಅದೇನು ಕತೆ ಇಲ್ಲದ ಸಿನಿಮಾ? ಅದನ್ನು ಯಾರು ನೋಡ್ತಾರೆ ʼ ಎಂದು ಕೇಳುವ ಪ್ರೇಕ್ಷಕರಿದ್ದಾರೆ. ಚಿತ್ರದಲ್ಲಿ ಗಟ್ಟಿ ಕತೆ ಇರಬೇಕು; ಆದಿ, ಮಧ್ಯ, ಅಂತ್ಯ ಇರಬೇಕು ಎನ್ನುವವರೂ ಬಹಳ ಮಂದಿ. ಈ ರೀತಿಯ ಸಿನಿಮಾಗಳನ್ನು ನೋಡಿ, ನೋಡಿ ಅಭ್ಯಾಸವಾದವರಿಗೆ ಕತೆ ಇರದ ಚಿತ್ರಗಳು ಇಷ್ಟವಾಗುವುದಿಲ್ಲ. ಕತೆ ಇರದ ಸಿನಿಮಾಗಳು ಕಲಾತ್ಮಕ, ಸಮಾನಾಂತರ (Parallel) ಚಿತ್ರಗಳೇ ಆಗಿರಬೇಕು ಎಂದೇನಿಲ್ಲ. ಒಂದೆಳೆಯ ವಸ್ತುವನ್ನಿಟ್ಟುಕೊಂಡು ಅದ್ದೂರಿಯ, ಮನರಂಜನೆಯನ್ನೇ ಉದ್ದೇಶವಾಗಿಟ್ಟುಕೊಂಡ ಚಿತ್ರಗಳು ತಯಾರಾಗಿವೆ. ನಿರೂಪಣೆಯ ರೀತಿಯಲ್ಲಿ, ಅನುಭವವನ್ನು ದಾಟಿಸುವ ವಿಧಾನದಲ್ಲಿ, ದೃಶ್ಯಗಳ ಕಟ್ಟುವಿಕೆಯಲ್ಲಿ ತಮ್ಮದೇ ರೀತಿಯನ್ನು ಕಂಡುಕೊಂಡ ನಿರ್ದೇಶಕರಿಗೆ ಕತೆ ಬೇಕೆಂದೇನಿಲ್ಲ.

ಚೊಚ್ಚಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ ಪಿ ಎಸ್‌ ವಿನೋತ್‌ ರಾಜ್‌ ಇಂತಹ, ಭಿನ್ನ ಹಾದಿಯನ್ನು ತುಳಿಯುವ ನಿರ್ದೇಶಕರಲ್ಲಿ ಒಬ್ಬರು. ಅವರ ʼ ಕೂಜಂಗಲ್‌ʼ ( Pebbles) ಚಿತ್ರ ಮನೆ ಬಿಟ್ಟು ಹೋದ ಹೆಂಡತಿಯನ್ನು ಹುಡುಕಿಕೊಂಡು ಗಂಡ ಮತ್ತು ಮಗ ಕಾಲ್ನಡಿಗೆಯಲ್ಲಿ ಹೋಗುವ ಘಟನೆಯ ಸುತ್ತ ಹೆಣೆಯಲಾಗಿದೆ. ಇದು ಥಿಯೇಟರ್‌ನಲ್ಲಿ ಪ್ರದರ್ಶಿತಗೊಳ್ಳದಿದ್ದರೂ ಹಲವು ಚಿತ್ರೋತ್ಸವಗಳಲ್ಲಿ ತೆರೆ ಕಂಡು ಪ್ರಶಸ್ತಿಗಳನ್ನು ಬಾಚಿಕೊಂಡ ಚಿತ್ರ. ಪಿ ಎಸ್‌ ವಿನೋತ್‌ ರಾಜ್‌ರವರ ಎರಡನೇಯ ಚಿತ್ರ ಶಿವ ಕಾರ್ತಿಕೇಯನ್‌ ನಿರ್ಮಾಣದ ʼ ಕೊಟ್ಟುಕ್ಕಾಳಿʼ (Adament Girl). ಈ ಚಿತ್ರ ಥಿಯೇಟರ್ ಗಳಲ್ಲಿ ತೆರೆ ಕಂಡಿದ್ದಲ್ಲದೆ ಓಟಿಟಿಯಲ್ಲೂ ಲಭ್ಯವಿದೆ.

ತಮಿಳು ಚಿತ್ರರಂಗದಲ್ಲಿ ಹೊಸ ಬಗೆಯ ಚಿತ್ರಗಳಿಗೆ ಕಾರಣರಾದ ಪಾ ರಂಜಿತ್, ಮಾರಿ ಸೆಲ್ವರಾಜ್, ವೆಟ್ರಿಮಾರನ್ ರಂತೆ ತಮ್ಮ ಮೊದಲ ಚಿತ್ರದಿಂದಲೇ ಕುತೂಹಲ ಹುಟ್ಟಿಸಿದ ಪಿ ಎಸ್ ವಿನೋತ್ ರಾಜ್ ಎರಡನೇ ಚಿತ್ರದಲ್ಲೂ ಅದನ್ನು ಕಾಪಿಟ್ಟುಕೊಳ್ಳಲು ಸಫಲರಾಗಿದ್ದಾರೆ. ಅವರಿಗೂ, ಈಗಾಗಲೇ ಹೆಸರು ಮಾಡಿರುವ ಪಾ ರಂಜಿತ್ ಮತ್ತಿತರರಿಗೂ ಸ್ಪಷ್ಟವಾಗಿ ತೋರುವ ಭಿನ್ನತೆಯಿಂದರೆ ವಿನೋತ್ ರಾಜ್ ಸಾಮಾಜಿಕ ಸಮಸ್ಯೆಯನ್ನು ವೈಯಕ್ತಿಕ/ ಕುಟುಂಬದ ನೆಲೆಗಟ್ಟಲ್ಲಿ ಶೋಧಿಸಿದರೆ, ಇತರರು ಸಮಾಜವನ್ನು ವ್ಯಕ್ತಿಗಳ ಮೂಲಕ ಮುಖಾಮುಖಿಯಾಗಿಸುತ್ತಾರೆ. ವಿನೋತ್ ರಾಜ್ ರವರ ಮುಂದಿನ ಪಯಣದ ಬಗ್ಗೆ ಕುತೂಹಲ ಇರಿಸಿಕೊಂಡೇ ಈ ವರೆಗೆ ಅವರು ನಿರ್ದೇಶಿಸಿದ ಎರಡು ಚಿತ್ರಗಳಿಗಷ್ಟೇ ಅನ್ವಯಿಸಿ ಈ ಮಾತುಗಳನ್ನು ಹೇಳಬಹುದು.

ಈ ಬಗೆಯ ಚಿತ್ರ ನಿರ್ದೇಶನದಿಂದ ಪಿ ಎಸ್ ವಿನೋತ್ ರಾಜ್ ಗೆ ಸಾಕಷ್ಟು ಅನುಕೂಲಗಳೂ ಒದಗಿವೆ. ʼ ಕೂಜಂಗಲ್ʼ ನ ಅಪ್ಪ ಮಗನ ಕಾಲ್ನಡಿಗೆಯ ಪಯಣ ʼ ಕೊಟ್ಟುಕ್ಕಾಳಿʼ ಯಲ್ಲಿ ಅಟೋರಿಕ್ಷ (ಟಂಟಂ?) ಪ್ರಯಾಣವಾದರೆ, ಎರಡೂ ಚಿತ್ರದಲ್ಲಿ ರೂಪಕಗಳು ಇಡುಕಿರಿದಿವೆ. ಇದರಿಂದ ಮಿತ ಅವಕಾಶದಲ್ಲಿ, ತೀವ್ರತೆಯಿಂದ ನೋಡುಗನೊಂದಿಗೆ ಸಂವಾದಿಸಲು ನಿರ್ದೇಶಕನಿಗೆ ಸಾಧ್ಯವಾಗಿದೆ.

ʼ ಕೂಜಂಗಲ್ʼ ನಂತೆ ʼ ಕೊಟ್ಟುಕ್ಕಾಳಿʼ ಚಿತ್ರದಲ್ಲೂ ಅಬ್ಬರಕ್ಕೂ, ಆತುರಕ್ಕೂ, ಬಹಳ ದೂರ. ಮೊದಲ ಭಾಗ- ಮೀನಾ, ಅವಳ ಮಾವ ಪಾಂಡಿ, ತಾಯಿ ಶಾಂತಿ, ಅವಳ ತಂಗಿಯರು, ಗಂಡ ಮತ್ತು ಇತರ ಪಾತ್ರಗಳ ಸ್ವಭಾವವನ್ನು ಪರಿಚಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ- ನಿಧಾನವೆಂದು ಅನ್ನಿಸಿದರೂ ಈ ಕ್ರಮವೇ ವಿಶಿಷ್ಟ. ಚಿತ್ರದ ಪ್ರಾರಂಭದಲ್ಲಿ, ಕೋಳಿ ಕೂಗುವ ಹೊತ್ತಿಗೆ ಮೀನಾಳ ತಾಯಿ ಗುಡಿ ಮುಂದೆ ದೀಪ ಹಚ್ಚಿ ನಡೆದುಕೊಂಡು ಬಂದು ಪ್ರಸಾದ ಹಚ್ಚುತ್ತಾಳೆ. ಮೀನಾ ಕಾಲಿಗೆ ಗುಂಡು ಕಲ್ಲು ಕಟ್ಟಿದ್ದ ಹುಂಜ ತಪ್ಪಿಸಿಕೊಳ್ಳಲು ಹೆಣಗಾಡುವುದನ್ನು ನೆಟ್ಟ ನೋಟದಿಂದ ನೋಡುತ್ತಿರುತ್ತಾಳೆ. ಅವಳದು ಭಾವನೆಗಳಿಲ್ಲದ, ನೆಟ್ಟ ನೋಟ. ಪಾಂಡಿ, ಕುತ್ತಿಗೆಗೆ ಲೇಪ ಹಚ್ಚುವ ಮೀನಾಳ ಚಿಕ್ಕಮ್ಮ ಆಡಿದ ಮಾತಿಗೆ ಸಿಡಿದೆದ್ದು ಆಕ್ರಮಣ ಮಾಡುತ್ತಾನೆ; ಇದು ಅವನ ಸ್ವಭಾವ.

ಆಟೋ ಪ್ರಯಾಣದಲ್ಲಿ ಒಬ್ಬೊಬ್ಬರ ಸ್ವಭಾವಗಳೂ ತೆರೆಯುತ್ತಾ ಹೋಗುತ್ತವೆ. ದೃಷ್ಟಿ ಕದಲಿಸದೆ, ನಿರ್ವಿಕಾರದಿಂದಿರುವ ಮೀನಾ ಮಾತನ್ನೇ ಆಡುವುದಿಲ್ಲ. ಅವಳ ತಾಯಿ, ಚಿಕ್ಕಮ್ಮಂದಿರು ವಟಗುಟ್ಟುತ್ತಿರುತ್ತಾರೆ. ಮಗ ಕಾರ್ತಿಯನ್ನು ಕರೆದುಕೊಂಡು ಬಂದ ಚಿಕ್ಕಮ್ಮನಿಗೆ ಹದಿನೈದು ದಿನಗಳಿಂದ ಹೊಡೆದರೂ ಬಡಿದರೂ ಸುಮ್ಮನೇ ಇರುವ ಮೀನಾ ಮೇಲೆ ಸಿಟ್ಟು. ತಾಯಿಗೆ ಮಗಳ ಮೇಲೆ ಮಮತೆ ಇದ್ದರೂ ಊರ ದೇವರು, ಮಂತ್ರವಾದಿ ಸರಿ ಮಾಡುವನೆಂಬ ನಂಬಿಕೆಯಲ್ಲಿ ಎಲ್ಲರನ್ನು ಎದುರಿಸಲಾರಳು. ತಂದೆಯ ದೃಷ್ಟಿಯಲ್ಲಿ ಮೀನಾಗೆ ಓದಿಸಿದ್ದೇ ತಪ್ಪು; ಹೈಸ್ಕೂಲ್ ಮುಗಿಸಿ ಮನೆಯಲ್ಲಿ ಕೂರಿಸಿದ್ದರೆ ಎಲ್ಲಾ ಸರಿ ಹೋಗುತ್ತಿತ್ತು.

ದಾರ ಕಟ್ಟಿ ಸ್ಟಾರ್ಟ್ ಮಾಡಬೇಕಾದ ಆಟೋರಿಕ್ಷಾದ ಮುಂದಿನಿಂದ ಹೋಗುತ್ತಿದ್ದ ದ್ವಿಚಕ್ರ ವಾಹನದಲ್ಲಿ ಮೂವರನ್ನು ಕಂಡ ಪೋಲಿಸಪ್ಪ ನಿಲ್ಲಿಸಲು ಹೇಳುತ್ತಾನೆ. ದೆವ್ವ ಬಿಡಿಸಲು ಕರೆದೊಯ್ಯುವುದಾಗಿ ಹೇಳಿದಾಗ ಬಿಡುಗಡೆ ಸಿಗುತ್ತದೆ. ಕುಲ ದೇವತೆಯನ್ನು ಬೇಡಿ ಹಿಂತಿರುಗುವಾಗ ಬೈಕ್ ಓಡಿಸುವ ಪಾಂಡಿಯ ಕಣ್ಣಿಗೆ ಕೀಟ ಬೀಳುತ್ತದೆ. ಅತ ಬೈಕ್ ಬಿಟ್ಟು ಆಟೋ ಹತ್ತುತ್ತಾನೆ. ಆಟೋಗೆ ಸ್ಟಾರ್ಟ್ ಆಗುವ ಕಾಯಿಲೆಯಾದರೆ ಬಲಿ ಕೊಡಲು ತಂದ ಹುಂಜ ನಿಶ್ಚಲವಾದಂತೆ ಕಾಣುತ್ತದೆ. ಬಾಲಕ ಕಾರ್ತಿಗೆ ಹೇಲುವುದಕ್ಕೆ ಅವಸರವಾದರೆ ಅವನ ಅಮ್ಮನಿಗೆ ಪೀರಿಯೆಡ್ಸ್. ಈ ತಾಪತ್ರಯಗಳ ನಡುವೆ ಬೈಕಲ್ಲಿ ಬರುತ್ತಿರುವ ಇಬ್ಬರಿಗೆ ಎಣ್ಣೆ ಹೊಡೆಯುವ ಕಾತರ…

ಹೀಗೆ ದಾರಿಯುದ್ದಕ್ಕೂ ಒಂದಲ್ಲ ಒಂದು ಘಟನೆಗಳು ಜರಗುತ್ತಿದ್ದು ಅವನ್ನು ಅತ್ಯಂತ ಸಾವಧಾನದಿಂದ ವ್ಯಕ್ತಿಗಳ ಸ್ವರೂಪಕ್ಕೆ ಪಾತಾಳ ಗರಡಿ ಹಿಡಿಯುತ್ತಾ ನಿರ್ದೇಶಕ ನಿರೂಪಿಸುತ್ತಾ ಹೋಗುತ್ತಾನೆ. ತಾರು ರಸ್ತೆ, ಕಚ್ಚಾ ರಸ್ತೆಗಳ ಪಯಣದಲ್ಲಿ ಕಡೆದ ಮಾತುಗಳಲ್ಲಿ ವಿಷ, ಅಮೃತ ಎರಡೂ ಇವೆ. ಮಾತಿಲ್ಲದವಳೆಂದರೆ ಮೀನಾ ಮಾತ್ರಾ. ಒಂದೆರಡು ಶಬ್ದಗಳನ್ನು ಬಿಟ್ಟರೆ ಮಾತನಾಡುವುದು ಅವಳ ಕಣ್ಣುಗಳು!

ʼ ಕೊಟ್ಟುಕ್ಕಾಳಿʼ ಚಿತ್ರದಲ್ಲಿ ಪಿ ಎಸ್ ವಿನೋತ್ ರಾಜ್ ಹೇಳಿಕೆಗಳ ಗೊಡವೆಗೆ ಹೋಗದೆ ದೃಶ್ಯಗಳಲ್ಲೆ ವೈರುಧ್ಯಗಳನ್ನು ಸೃಷ್ಟಿಸುವ ಮೂಲಕ ನೋಡುಗನ ತಿಳಿವಿಗೆ ಸವಾಲು ಹಾಕುತ್ತಾರೆ. ಹೆಣ್ಣು ಮಕ್ಕಳೆಂದರೆ ಅಸಡ್ಡೆ ಪಡುವವನ ಕಣ್ಣಿಗೆ ಕೀಟ ಬಿದ್ದಾಗ ಅದನ್ನು ತೆಗೆಯಲು ಹೆಣ್ಣೇ ಬೇಕು. ಕ್ಯಾಮರಾ ತೀರಾ ಹತ್ತಿರಕ್ಕೆ ಚಲಿಸಿ ನಾಲಿಗೆಯಲ್ಲಿ ಕೀಟವನ್ನು ಹೊರ ತೆಗೆಯುವ ಕ್ರಿಯೆಯಲ್ಲಿ ನೋಡುಗನ ನಾಲಿಗೆ ಹೊರ ಚಾಚಿದರೂ ಅಶ್ಚರ್ಯವಿಲ್ಲ, ಅಂತಹ ಸಮೀಪ ದೃಶ್ಯವಿದು!

ಹೆಣ್ಣಿಗೆ ಎಲ್ಲೆಂದರಲ್ಲಿ ಉಚ್ಚೆ ಮಾಡುವ ಅವಕಾಶ ಇಲ್ಲ. ಆದರೆ ಗಂಡಸರು ನಿಂತಲ್ಲಿ, ಕೂತಲ್ಲಿ ಆರಾಮವಾಗಿ ಉಚ್ಚೆ ಮಾಡುತ್ತಾ ಕಾಲಹರಣ ಮಾಡಬಲ್ಲರು. ಮುಟ್ಟಾದವಳಿಗೆ ಗುಡಿಯ ಹತ್ತಿರ ಹೋಗುವ ಅವಕಾಶವೂ ಇಲ್ಲ. ಗಂಡಸರು ಎಣ್ಣೆ ಹೊಡೆದು ಎಲ್ಲೆಂದರಲ್ಲಿ ಹೋಗಬಹುದು! ಹೆಣ್ಣು ಮಕ್ಕಳ ಎದುರು ಎಗರಾಡಿ, ಕೈ ಮಾಡುವವನು ಗೂಳಿ ಎದುರಾದಾಗ ಕೈ ಚೆಲ್ಲುತ್ತಾನೆ. ಗಂಡಸರೆಲ್ಲಾ ಸೇರಿ ಟಂಟಂ ಅಟೋವನ್ನೇ ಎತ್ತಿ ತಿರುಗಿ ನಿಲ್ಲಿಸುತ್ತಾರೆ; ಅದರೆ ಒಬ್ಬಳು ಹೆಣ್ಣು ಮಗಳ ಮನ ಪರಿವರ್ತನೆಗೆ ದೇವರ, ಮಾಂತ್ರಿಕನ ಮೊರೆ ಹೋಗುತ್ತಾರೆ! ಇವೆಲ್ಲಾ ದೃಶ್ಯಕಟ್ಟುಗಳನ್ನು ಒಂದರ ನಂತರ ಒಂದರಂತೆ ಸಹಜತೆಗೆ ಊನವಾಗದಂತೆ ಹೆಣೆಯಲಾಗಿದೆ.

ರಸ್ತೆಗೆ ಅಡ್ಡವಾಗಿ ಗೂಳಿ ನಿಲ್ಲುವುದು, ಅದನ್ನು ಓಡಿಸಲು ಒಬ್ಬಿಬ್ಬರು ಪ್ರಯತ್ನಿಸಿ ಕೈ ಚೆಲ್ಲುವುದು ಚಿತ್ರದ ಹೃದಯ ಭಾಗದಂತೆ ಕಾಣುತ್ತದೆ. ಒಬ್ಬಳು ಚಿಕ್ಕ ಹುಡುಗಿ, ಎಂಟೊಂಬತ್ತರ ಬಾಲೆ- ಮನೆಯಿಂದ ಓಡೋಡಿ ಬಂದು ಗೂಳಿಯ ಮೈ ತಟ್ಟಿ ಅದನ್ನು ಗೆಳೆಯನಂತೆ ಕರೆದುಕೊಂಡು ಹೋಗುವುದು, ಹೋಗುವಾಗ ಅವಳು ನೀನು ಬಿಟ್ಟರೆ ನನಗೆ ಆಟಕ್ಕೆ ಇನ್ನಾರು? ಎಂದು ಕೇಳುವುದು ಬಹಳಷ್ಟನ್ನು ಹೇಳುತ್ತದೆ. ಚಿತ್ರ ಕ್ಲೈಮಾಕ್ಸ್ ಕೊನೆಯಲ್ಲೇ ಇರಬೇಕೆಂದಿಲ್ಲ. ಈ ದೃಶ್ಯವೇ ಕ್ಲೈಮಾಕ್ಸ್ ತರ ಇದೆ.

ಚಿತ್ರದ ಕೊನೆಯ ದೃಶ್ಯದಲ್ಲಿ ಹೆಣ್ಣಿನ ಬಯಕೆಗಳಿಗೆ ಕವಡೆ ಕಾಸಿನ ಬೆಲೆ ಕೊಡದ ಗಂಡು ಸಮಾಜ ಎಲ್ಲರೆದುರು ಶೋಷಣೆಯಾಗುತ್ತಿದ್ದರೂ ಕಂಡೂ ಕಾಣದಂತೆ ಮೂಕವಾಗಿರುವುದು ಶತಮಾನಗಳ ನೆನಪನ್ನು ಕೆದಕುತ್ತದೆ. ಕೋಳಿಯ ಕತ್ತು ಕೊಯ್ಯುವುದು ಭೀತಿಯನ್ನು ಹುಟ್ಟಿಸುವಂತೆ, ತಮ್ಮಿಂದಾಗದ ಕೆಲಸಕ್ಕೆ ಮೂಕ ಪಕ್ಷಿ, ಪ್ರಾಣಿಗಳನ್ನು ಬಲಿ ಕೊಡುವ ಕ್ರಿಯೆ ಇಬ್ಬಂದಿತನವನ್ನು ಚುಚ್ಚಿ ಬಯಲು ಮಾಡುತ್ತದೆ. ನೇರವಾಗಿ ಏನನ್ನೂ ಪ್ರಕಟ ಪಡಿಸದೆ ದೃಶ್ಯ ಮಾತ್ರದಲ್ಲಿ ಹೇಳುವ ಕಲೆಗಾರಿಕೆ ಪರದೆಯಲ್ಲಿ ಸಾಕ್ಷಾತ್ಕಾರಗೊಳ್ಳುತ್ತಾ ಹೋಗುತ್ತದೆ.

ʼ ಕೊಟ್ಟುಕ್ಕಾಳಿʼ ತೀರ್ಮಾನಕ್ಕೆ ಧಾವಿಸದೆ ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ. ನೇರವಾಗಿ ಹೇಳುವುದು ಚಿತ್ರದ ಕಟ್ಟುವಿಕೆಗೆ ಹೊರತಂತಿದ್ದರೂ ಮೇಲು ಕೀಳಿನ ಜಾತಿ ಸಮಸ್ಯೆ ಚಿತ್ರದ ಧಾತುವಿನಲ್ಲಿದೆ. ಗಂಡಾಳಿಕೆಯ ಅಬ್ಬರ ಕ್ಷಣ ಕ್ಷಣಕ್ಕೂ ರಾಚುವುದರೊಂದಿಗೆ ಅದನ್ನು ಒಪ್ಪುವ, ಅಂಗೀಕರಿಸುವ, ಉತ್ತೇಜಿಸುವ ಹೆಣ್ಣುಗಳೂ ಇದ್ದಾರೆ. ತಾಯಿಯ ಎದೆ ಪ್ರೀತಿ ಏಟು ತಿನ್ನಲೂ ಹೇಸುವುದಿಲ್ಲ; ಮಗಳು ಓಡಿ ಹೋಗಲೂ ಕುಮ್ಮಕ್ಕು ನೀಡುತ್ತದೆ. ದೇವರ ನಂಬಿಕೆಯನ್ನು, ಮೂಢ ಆಚರಣೆಯನ್ನು ಒಂದೇ ತಕ್ಕಡಿಯಲ್ಲಿಡುವ ಚಿತ್ರ ಅವೆರಡರ ಹುಸಿಯನ್ನು ಆಚರಣೆಯ ರೀತಿಯಲ್ಲಿಯೇ ಬಗೆಯುತ್ತದೆ.

ಚಿತ್ರದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಕೆಯಾಗಿರುವುದು ಹುಂಜದ ರೂಪಕ. ಚಿತ್ರದ ಪೋಸ್ಟರ್ ನಲ್ಲಿಯೇ ಬಳಕೆಯಾದ ಕೆಂಪು ಹುಂಜ ಕಲ್ಲು ಕಟ್ಟಿದ ಕಾಲನ್ನು ಎಳೆಯುತ್ತಾ, ಬಿಡಿಸಿ ಓಡುವುದು, ಕೊನೆಯಲ್ಲಿ ಬೆಚ್ಚಗೆ ಅತ್ತಿತ್ತ ಕೊಂಕುತ್ತಾ ಕೂರುವಲ್ಲಿ ನಿತ್ರಾಣ ಆಗುವುದು, ಕಾಳು ಕುಕ್ಕುವುದು… ಇವೆಲ್ಲ ಚಿತ್ರಣಕ್ಕೂ ಕೆಂಪುತೊಟ್ಟ ಮೀನಾಳಿಗೂ ಸಮೀಕರಣ ಇದೆ. ಅದಕ್ಕೂ ನೀರು ಕುಡಿಸುತ್ತಾರೆ, ಮೀನಾಳೂ ನೀರು ಕುಡಿಯುತ್ತಾಳೆ!

ಚಿತ್ರದಲ್ಲಿ ನೆನಪಲ್ಲಿ ಉಳಿಯುವ ಇನ್ನೊಂದು ಪಾತ್ರ ಬಾಲಕ ಕಾರ್ತಿ. ಅವನಲ್ಲಿ ಪುಟ್ಟ ಹೃದಯವಿದೆ. ಅವನು ಕೋಳಿಗೆ ಕಾಳು ತಂದರೆ ಹಿರಿಯರು ಮಣ್ಣು ಕಟ್ಟಿಕೊಳ್ಳುತ್ತಾನೆ. ಮೀನಾಗೆ ಹೊಡೆಯುವಾಗ ಅವನ ಕಣ್ಣು ತುಂಬಿಕೊಳ್ಳುತ್ತದೆ; ಅವಳು ನಕ್ಕಾಗ ಹೂವಂತೆ ಅರಳುತ್ತದೆ!

ʼ ಕೂಜಂಗಲ್ʼ ಸಿನಿಮಾಕ್ಕಿಂತ ಅಶಯದಲ್ಲಿ, ದೃಶ್ಯಕಟ್ಟಿನಲ್ಲಿ ʼ ಕೊಟ್ಟುಕ್ಕಾಳಿ ʼ ಮಿಗಿಲೆನಿಸುವಂತಿದೆ. ಕೆಲವು ಕೋರೆಗಳು: ಮತ್ತೆ ಮತ್ತೆ ಅಟೋವನ್ನು ದಾರದಲ್ಲಿ ಸ್ಟಾರ್ಟ್ ಮಾಡುವುದು, ತಾಯಿಯನ್ನು ಹೊರತು ಪಡಿಸಿ ಹೆಂಗಸರೆಲ್ಲಾ ಗಂಡಸರ ಪಕ್ಷ ವಹಿಸುವುದು ಅನಗತ್ಯ ಎನಿಸಿದರೆ, ದಾರಿಯಲ್ಲಿ ಕಾಣ ಸಿಗುವ ಮೈನೆರೆಯುವ ಸಮಾರಂಭದ ದೃಶ್ಯದಲ್ಲಿ ಕೃತಕತೆ ಇದೆ. ಇದರೊಡನೆಯೂ ಒಟ್ಟಂದಕ್ಕೆ ಬಾಧೆಯಾಗದಂತೆ ಅಪರೂಪದ ಅನುಭವ ನೀಡುವಲ್ಲಿ ಚಿತ್ರದ ಯಶಸ್ಸಿದೆ.

ಮೀನಾ ( ಅನ್ನಾ ಬೆನ್), ಪಾಂಡಿ (ಸೂರಿ) ಈ ಎರಡು ಪಾತ್ರಗಳನ್ನು ನುರಿತವರು ಮಾಡಿದ್ದರೆ ಉಳಿದೆಲ್ಲವನ್ನೂ ನಿರ್ವಹಿಸಿದವರು ತೆರೆಗೆ ಹೊಸಬರು. ಅವರೆಲ್ಲರ ನಟನೆ ಚಿತ್ರಕ್ಕೆ ಪೋಷಕವಾಗಿದ್ದರೆ ಚಿತ್ರಕ್ಕೆ ಶಕ್ತಿ ತುಂಬುವವರು ಅನ್ನಾಬೆನ್ ಮತ್ತು ಸೂರಿ. ಅನ್ನಾ ಬೆನ್ ರೆಪ್ಪೆ ಬಡಿಯದೆ, ನಿರ್ಭಾವುಕವಾಗಿಯೇ ಭಾವನೆಗಳನ್ನು ಪಡಿ ಮೂಡಿಸಿದರೆ, ಗೊಗ್ಗರು ದನಿಯ, ದರ್ಪದ ಗಂಡು ಸೂರಿ ಶುದ್ಧ ಒರಟ. ಬಿ ಶಕ್ತಿವೇಲ್ ರವರ ಸಿನಿಮಾಟೋಗ್ರಫಿ ದೂರದ, ಸನಿಹದ, ಮಧ್ಯದ ದೃಶ್ಯಗಳನ್ನು ಸಮರ್ಪಕವಾಗಿ ಬಿಂಬಿಸುತ್ತದೆ. ಆಟೋ ಪಯಣದಲ್ಲಿ ಸಂಕಲನ ಚೂರೇ ಚೂರು ಚುರುಕಾಗಿರಬೇಕಾಗಿತ್ತೆಂದು ಅನಿಸುತ್ತದೆ. ಹಾಡುಗಳಿಲ್ಲದ ಸಿನಿಮಾದಲ್ಲಿ ಹಳೆಯ ತಮಿಳು ಚಿತ್ರದ ಗೀತೆಯೊಂದನ್ನು ಸಂದರ್ಭಕ್ಕೆ ಅನುಸಾರ ಬಳಸಿಕೊಳ್ಳಲಾಗಿದೆ. ಮುಂಜಾನೆಯ ಕೋಳಿಯ ಕೂಗಿನಿಂದ ಕತ್ತು ಕೊಯಿದ ಹುಂಜದ ರೆಕ್ಕೆ ಬಡಿತದ ವರೆಗೆ ಹಾಸುಹೊಕ್ಕಾಗಿರುವ ಹಿನ್ನೆಲೆ ಸಂಗೀತದಲ್ಲಿ ಆಟೋದ ಕರಕರ ಶಬುದ ಚಿತ್ರ ಪೂರ್ತಿ ಧ್ವನಿಸುತ್ತದೆ.

ಕತೆ ಬಿಟ್ಟು ಅನೇಕ ಕತೆಗಳ ಗೊಂಚಲನ್ನು ತೆರೆದು ತೋರಿಸುವ ಚಿತ್ರ ನೂರು ನಿಮಿಷಗಳ ಸಮಯವನ್ನು ಮರೆಸುತ್ತದೆ. ಸಿನಿಮಾ ಮುಗಿಯುವ ಹೊತ್ತಿಗೆ ಜಡ್ಡುಗಟ್ಟಿದ ಸಮಾಜಕ್ಕೆ ಸಡ್ಡು ಹೊಡೆಯುವ ಇಂತಹ ʼ ಹಠಮಾರಿ ಹೆಣ್ಣುʼ ( Adament Girl) ಇನ್ನಷ್ಟು ಬೇಕೆನಿಸುವುದಂತೂ ಖಂಡಿತ!

Related Articles

ಇತ್ತೀಚಿನ ಸುದ್ದಿಗಳು

You cannot copy content of this page