Thursday, October 31, 2024

ಸತ್ಯ | ನ್ಯಾಯ |ಧರ್ಮ

ಆದಾಯ ಸಂಗ್ರಹದಲ್ಲಿ ದಾಖಲೆ ಬರೆದ ಕರ್ನಾಟಕ ಸರ್ಕಾರ

2024- 25ರ ಮೊದಲ ಏಳು ತಿಂಗಳಲ್ಲಿ ಕರ್ನಾಟಕವು ಆರ್ಥಿಕ ನಿರ್ವಹಣೆಯಲ್ಲಿ ಅಮೋಘ ಸಾಧನೆ ಮಾಡಿದೆ. ಆರ್ಥಿಕ ವರ್ಷದ 7 ತಿಂಗಳಲ್ಲಿಯೇ ಶೇ.53ರಷ್ಟು ಗುರಿ ಮುಟ್ಟುವ ಮೂಲಕ ಆದಾಯ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನಕ್ಕೇರಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯ 1.95 ಲಕ್ಷ ಕೋಟಿ ರು. ಆದಾಯ ಸಂಗ್ರಹದ ಗುರಿ ಹೊಂದಿದ್ದು, ಅಕ್ಟೋಬರ್ ಅಂತ್ಯದ ವೇಳೆಗೆ 1.03 ಲಕ್ಷ ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಮೂಲಕ ನಿಗದಿತ ಗುರಿಯ ಶೇ. 53ರಷ್ಟು ಸಾಧಿಸಿದಂತಾಗಿದೆ. ಈ ಅಂಕಿ ಅಂಶಗಳು ಗ್ರಾಹಕರ ಬೇಡಿಕೆ ಹೆಚ್ಚಳ ಮತ್ತು ಆರ್ಥಿಕ ಚಟುವಟಿಕೆಗಳು ಚುರುಕುಗೊಂಡಿರುವುದನ್ನು ಸ್ಪಷ್ಟಪಡಿಸಿದೆ.

ವಿದೇಶಿ ಬಂಡವಾಳ ಹೂಡಿಕೆ
ಕರ್ನಾಟಕ ಸರ್ಕಾರದ ಉದ್ಯಮ ಸ್ನೇಹಿ ನೀತಿ ಹಾಗೂ ಉತ್ತಮ ಆರ್ಥಿಕ ನೀತಿಗಳಿಂದಾಗಿ ವಿದೇಶಿ ಬಂಡವಾಳ ಹೂಡಿಕೆಯಲ್ಲೂ ಹೆಚ್ಚಿನ ಪ್ರಗತಿ ಸಾಧ್ಯವಾಗಿದೆ. 2024-25 ರ ಪ್ರಥಮ ತ್ರೈಮಾಸಿಕದಲ್ಲಿ ರಾಜ್ಯ 2.2 ಬಿಲಿಯನ್‌ ರೂ. ನೇರ ವಿದೇಶಿ ಬಂಡವಾಳ ಹರಿದು ಬಂದಿದ್ದು, ರಾಷ್ಟ್ರ ಮಟ್ಟದಲ್ಲಿ ಗುಜರಾತ್‌ ರಾಜ್ಯವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದೆ.

ಗ್ಯಾರಂಟಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಹಣ :
52,009 ಕೋಟಿರೂ.ಗಳ ಬಜೆಟ್ ಮೊತ್ತದಲ್ಲಿ 24,235 ಕೋಟಿರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡುವ ಮೂಲಕ ಸರಕಾರವು ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸುವ ವಿಚಾರವಾಗಿ ಟೀಕಾಕಾರರ ಬಾಯಿ ಮುಚ್ಚಿಸಿದೆ. ಇ-ಆಡಳಿತ ಮಾದರಿಗಳ ಪರಿಣಾಮಕಾರಿ ಬಳಕೆಯಿಂದ ಫಲಾನುಭವಿಗಳನ್ನು ನಿಖರವಾಗಿ ಗುರುತಿಸುವ ಮೂಲಕ ಹಾಗೂ ಅಸಮರ್ಥತೆಯನ್ನು ನಿವಾರಿಸುವ ಮೂಲಕ ಕಲ್ಯಾಣ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಸಹಕಾರಿಯಾಗಿವೆ ಎಂದು ಸರ್ಕಾರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಬಂಡವಾಳ ಹೂಡಿಕೆಗಳ ನಡುವೆ ಸಮತೋಲನ ಸಾಧಿಸುವ ಮೂಲಕ ಕರ್ನಾಟಕ ರಾಜ್ಯ ಸುಸ್ಥಿರ ಅಭಿವೃದ್ಧಿಯ ಹೊಸ ಮಾದರಿಯನ್ನು ಪರಿಚಯಿಸಿದೆ. ಮೂಲಸೌಕರ್ಯ ಅಭಿವೃದ್ದಿ, ಆರ್ಥಿಕ ಸುಧಾರಣೆಗಳು, ಎಲ್ಲರನ್ನು ಒಳಗೊಂಡ ಅಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದುವ ಮೂಲಕ ರಾಜ್ಯ ದೂರಗಾಮಿ ಆರ್ಥಿಕ ಅಭಿವೃದ್ಧಿ ಮತ್ತು ಹಣಕಾಸು ನಿರ್ವಹಣೆಯಲ್ಲಿ ಮುಂಚೂಣಿಗೆ ಬರಲು ಸಾಧ್ಯವಾಗಿದೆ.

ಈ ಸಮತೋಲಿತ ಅಭಿವೃದ್ದಿ ಮಾದರಿಯಿಂದಾಗಿ ಜನರ ಜೀವನ ಗುಣಮಟ್ಟ ಸುಧಾರಿಸಲು ಸಾಧ್ಯವಾಗಿದೆ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಆವಿಷ್ಕಾರ ಕ್ಷೇತ್ರದಲ್ಲಿ ತನ್ನ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಾಧ್ಯವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page