Friday, November 1, 2024

ಸತ್ಯ | ನ್ಯಾಯ |ಧರ್ಮ

ಕನ್ನಡ ಭಾಷೆ ಬೆಳೆಸುವ ಕಾರ್ಯದಲ್ಲಿ ಎಲ್ಲರೂ ಒಗ್ಗೂಡಬೇಕಿದೆ: ಸಚಿವ ಕೃಷ್ಣಬೈರೇಗೌಡ

ಬಳ್ಳಾರಿ, ನ.01: ಸಂವಿಧಾನವು ಎಲ್ಲಾ ಭಾಷೆಗಳಿಗೆ ಸಮಾನ ಗೌರವ ಸ್ಥಾನ ನೀಡಿದೆ. ಹಾಗಾಗಿ ನಮ್ಮ ನಾಡು-ನುಡಿ, ಸಾಹಿತ್ಯ-ಸಂಸ್ಕೃತಿ ಪ್ರತಿನಿಧಿಸುವ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಒಂದಾಗಬೇಕಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.


ಜಿಲ್ಲಾಡಳಿತ ವತಿಯಿಂದ ಡಾ.ರಾಜ್‌ಕುಮಾರ್ ರಸ್ತೆಯ ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜು ಮೈದಾನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟçಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.


ಸಂವಿಧಾನದಡಿ ಯಾವುದೇ ಭಾಷೆ ಮೇಲಲ್ಲ ಮತ್ತು ಕೀಳಲ್ಲ ಎಂಬುದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸಿದೆ. ಎಲ್ಲಾ ಭಾಷೆಗಳಿಗೂ ಸಮಾನ ಗೌರವ ಕಲ್ಪಿಸಿದೆ. ಕೇವಲ ಒಂದು ಭಾಷೆಯನ್ನು ಮಾತನಾಡಬೇಕು ಎಂಬುದು ಸಂವಿಧಾನಕ್ಕೆ ವಿರುದ್ಧವಾದ ಸಂಗತಿಯಾಗಿದೆ. ಕನ್ನಡ ಭಾಷೆಯನ್ನು ಕಡೆಗಣಿಸುವಂತಹ ಪ್ರಯತ್ನಗಳ ವಿರುದ್ಧ ನಾವೆಲ್ಲರೂ ಜಾಗೃತರಾಗಬೇಕಿದೆ ಎಂದು ಕರೆ ನೀಡಿದರು.


ದಕ್ಷಿಣ ಭಾರತದಲ್ಲಿ ಹರಡಿದ್ದ ಕನ್ನಡ ಭಾಷಿಕರ ಎಲ್ಲ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವು 1956 ರಲ್ಲಿ ಅಸ್ತಿತ್ವಕ್ಕೆ ಬಂದಿತು. 1956ರ ನವೆಂಬರ್ 1ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ರಾಜ್ಯದ ಉತ್ತರ ಭಾಗದ ಬಹಳಷ್ಟು ಜನರಿಗೆ ಮೈಸೂರು ರಾಜ್ಯ ಎಂಬ ಹೆಸರಿನ ಬದಲಾಗಿ ಬೇರೆ ಹೆಸರನ್ನು ರಾಜ್ಯಕ್ಕೆ ಇಡುವ ಇರಾದೆಯಿಂದ 1973ರ ನವೆಂಬರ್ 1ರಂದು ಮೈಸೂರು ರಾಜ್ಯ ಎಂಬುದು ಅಧಿಕೃತವಾಗಿ “ಕರ್ನಾಟಕ” ರಾಜ್ಯವಾಯಿತು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ಸಂದರ್ಭದ ಸವಿ ನೆನಪಿಗಾಗಿಯೇ ಪ್ರತಿವರ್ಷ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.


ಕರ್ನಾಟಕ ರಾಜ್ಯವನ್ನು ಕದಂಬರು, ಹೊಯ್ಸಳರು, ಚೋಳರು, ನಿಜಾಮರು ಹಾಗೂ ಒಡೆಯರ್ ರಾಜರು ಆಳಿದ್ದಾರೆ. ಇತಿಹಾಸದಲ್ಲಿ ಕೇವಲ ಉತ್ತರ ಭಾರತದ ಇತಿಹಾಸವನ್ನು ನಾವೆಲ್ಲರೂ ಅಧ್ಯಯನಿಸಿದ್ದೇವೆ. ಆದರೆ ಕನ್ನಡ ಭಾಷೆಗೆ ಭವ್ಯವಾದ ಇತಿಹಾಸವಿದೆ. ಕನ್ನಡಿಗರಾದ ನಾವು ಕರ್ನಾಟಕದ ಇತಿಹಾಸ ತಿಳಿದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.


ಕರ್ನಾಟಕವು ನಾಡು-ನುಡಿ, ಸಂಸ್ಕೃತಿಯ ತವರೂರಾಗಿ ತನ್ನದೇ ವೈವಿಧ್ಯತೆಯನ್ನು ಹೊಂದಿ ಕೋಟ್ಯಂತರ ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿದೆ. ಕನ್ನಡಿಗರು ನಮ್ಮ ಕನ್ನಡತನದಿಂದಲೇ ಗುರುತಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.


ಬಳ್ಳಾರಿ ಜಿಲ್ಲೆಯು ವೈವಿಧ್ಯತೆಯಿಂದ ಕೂಡಿದೆ. ಕನ್ನಡ, ತೆಲುಗು, ಉರ್ದು ಭಾಷೆ ಒಳಗೊಂಡಿದ್ದು, ಎಲ್ಲಾ ಸಂಸ್ಕೃತಿಗಳ ಸಮ್ಮಿಲನ ಈ ಜಿಲ್ಲೆಯು ಒಳಗೊಂಡಿದೆ ಎಂದು ಬಣ್ಣಿಸಿದರು.


ಸ್ತಬ್ಧಚಿತ್ರಗಳ ಅದ್ದೂರಿ ಮೆರವಣಿಗೆ:


69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸ್ತಬ್ಧಚಿತ್ರಗಳ ಅದ್ದೂರಿ ಮೆರವಣಿಗೆ ನಡೆಯಿತು.


ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಚಾಲನೆ ನೀಡಿದರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಸಾರಿಗೆ ಇಲಾಖೆ) ವತಿಯಿಂದ ವಿಧಾನ ಸೌಧ, ತೋಟಗಾರಿಕೆ ವತಿಯಿಂದ ಪರಿಸರ ಸಂರಕ್ಷಣೆಯ ಗಿಡಗಳು ಪ್ರದರ್ಶಿಸಿದರೆ ಮಹಾನಗರ ಪಾಲಿಕೆ ವತಿಯಿಂದ ಪ್ಲಾಸ್ಟಿಕ್ ಮುಕ್ತ ನಗರ-ಸ್ವಚ್ಛ ನಗರ ವಿಷಯದೊಂದಿಗೆ ಸ್ತಬ್ಧಚಿತ್ರ ರೂಪಿಸಲಾಗಿತ್ತು.


ಅದರಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಗಳನ್ನು ಉಳಿಸಿ, ಮಗಳನ್ನು ಬೆಳೆಸಿ ಎನ್ನುವ ಘೋಷ ವಾಕ್ಯದ ಸ್ತಬ್ಧಚಿತ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಡೆಂಗ್ಯೂ ಹಾಗೂ ಇತರೆ ರೋಗಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ, ಶಿಕ್ಷಣ ಇಲಾಖೆಯ ಮಕ್ಕಳು ಧರಿಸಿದ್ದ ವಿವಿಧ ಮಹನೀಯರ ವೇಷಭೂಷಣ ಸೇರಿದಂತೆ ಕೃಷಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು.


ವಿವಿಧ ಕನ್ನಡ ಪರ ಸಂಘಟನೆಗಳಿಂದ ಕನ್ನಡ ತಾಯಿ ಭುವನೇಶ್ವರಿ ದೇವಿ ಅವರ ಭಾವಚಿತ್ರ ಹಾಗೂ ಕರ್ನಾಟಕ ಏಕೀಕರಣದ ರೂವಾರಿ ಬಳ್ಳಾರಿಯ ಹೋರಾಟಗಾರ ಪಿಂಜಾರ ರಂಜಾನ್ ಸಾಬ್ ಅವರ ಭಾವಚಿತ್ರ ವಾಹನ ಕಾರ್ಯಕ್ರಮದ ವಿಶೇಷವಾಗಿತ್ತು.


ಕನ್ನಡ ನಾಡು-ನುಡಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಾಹಿತ್ಯ ಕ್ಷೇತ್ರ-ಬಸವರಾಜ ಮಸೂತಿ, ಕನ್ನಡ ಸೇವೆ-ಕಣ್ಣೂರು ಹೊನ್ನನ ಗೌಡ, ಸಂಗೀತ ಕ್ಷೇತ್ರ-ಲಕ್ಷ್ಮಿ ಪವನಕುಮಾರ, ಜಾನಪದ ಕ್ಷೇತ್ರ-ವೈ.ಚಿನ್ನಸ್ವಾಮಿ, ರಂಗಭೂಮಿ ಕ್ಷೇತ್ರ-ವೀಣಾ ಆದೋನಿ, ಬಯಲಾಟ ಕ್ಷೇತ್ರ-ಕೆ.ಎಂ.ಬಸವರಾಜಯ್ಯ, ಶಿಲ್ಪಕಲೆ ಕ್ಷೇತ್ರ-ಸುಮಿತ್ರಮ್ಮ ಪರಶುರಾಮ, ಶಿಕ್ಷಣ ಕ್ಷೇತ್ರ-ಮೆಹತಾಬ್ ಕಪ್ಪಗಲ್ಲು, ಪತ್ರಿಕೋದ್ಯಮ-ಸಿ.ಜೆ.ಹಂಪಣ್ಣ.


69ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಶಾಲಾ ಮಕ್ಕಳಿಗಾಗಿ ಆಯೋಜನೆ ಮಾಡಿದ್ದ ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.


ಬಳಿಕ ವಿವಿಧ ಕಲಾ ತಂಡಗಳ ವಾದ್ಯಗಳ ಕಲರವದೊಂದಿಗೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಕನ್ನಡ ಪ್ರೇಮ ಮೂಡಿಸಲಾಯಿತು.


ಕಾರ್ಯಕ್ರಮಕ್ಕೂ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿ ಮೊದಲ ಕನ್ನಡದ ಶಾಸನಗಳಲ್ಲಿ ಒಂದಾದ ಹಲ್ಮಿಡಿ ಶಾಸನದ ಪ್ರತಿರೂಪವನ್ನು ಅನಾವರಣಗೊಳಿಸಿದರು.


ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ.ಸುಕುಂ, ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿ.ಜೆ., ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಮಹಾನಗರ ಪಾಲಿಕೆಯ ಸದಸ್ಯರು, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಶಾಲಾ ಮಕ್ಕಳು, ಕನ್ನಡಾಭಿಮಾನಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page