Monday, June 17, 2024

ಸತ್ಯ | ನ್ಯಾಯ |ಧರ್ಮ

ʼಜನಸ್ಪಂದನೆʼಯಲ್ಲಿ ಕಾಂಗ್ರೆಸ್‌ ಕುರಿತು ಆರೋಪ: ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ರಾಜ್ಯ ಸರ್ಕಾರದ ಮೂರು ವರ್ಷದ ಆಡಳಿತದ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಜನಸ್ಪಂದನ ಸಮಾವೇಶ ಹಮ್ಮಿಕೊಂಡಿದ್ದು, ಸಮಾವೇಶದಲ್ಲಿ ಬಿಜೆಪಿ ನಾಯಕರುಗಳು ಕಾಂಗ್ರೆಸ್‌ ಪಕ್ಷದ ಮೇಲೆ ಆರೋಪ ಮಾಡಿರುವ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಜನಸ್ಪಂದನವಂತೆ ಜನಸ್ಪಂದನ. ಇದು ಜನಸ್ಪಂದನ ಅಲ್ಲ ಜನ ಮರ್ದನ. ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುಸಂಘರ್ಷದಿಂದ ಬಿಜೆಪಿ ಸರ್ಕಾರ ರಾಜ್ಯದ ಜನರ ಮರ್ದನ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರವನ್ನು ಪ್ರಶ್ನಿಸುವ ವಿರೋಧ ಪಕ್ಷಗಳ ಮೇಲೆ ಸಿಬಿಐ, ಇಡಿ, ಐಟಿ ದಾಳಿಗಳಾಗುತ್ತಿವೆ, ಪ್ರಶ್ನಿಸುವ ನಾಗರಿಕರ ಮೇಲೆ ಸುಳ್ಳು ಕೇಸ್ ಗಳನ್ನು ಹಾಕಿ ಜಾಮೀನು ಇಲ್ಲದೆ ಜೈಲಿಗೆ ತಳ್ಳಲಾಗುತ್ತಿದೆ. ಹಾಗಾದರೆ ಜನರ ಸ್ಪಂದನಕ್ಕೆ ಅವಕಾಶ ಎಲ್ಲಿದೆ? ಜನತೆಗೆ ಮುಕ್ತವಾಗಿ ಮಾತನಾಡಲು ಅವಕಾಶ ಕೊಟ್ಟರೆ ಜನಾಕ್ರೋಶದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾತ್ರವಲ್ಲ ಬಿಜೆಪಿ ಸರ್ಕಾರವೇ ಕೊಚ್ಚಿಹೋಗಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮುಂದುವರೆದು ಟ್ವೀಟ್‌ ಮಾಡಿರುವ ಅವರು, ರಾಜ್ಯದ ಗುತ್ತಿಗೆದಾರರ ಸಂಘ, ಶಿಕ್ಷಣ ಸಂಸ್ಥೆಗಳ ಒಕ್ಕೂಟ ಪ್ರಧಾನಿ ಅವರಿಗೆ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆಯುತ್ತಿದ್ದಾರೆ. ರಾಜ್ಯದ ಹೈಕೋರ್ಟ್ ಒಂದಲ್ಲ ಎರಡಲ್ಲ ಹಲವು ಬಾರಿ ನೇರವಾಗಿ ಭ್ರಷ್ಟಾಚಾರಕ್ಕಾಗಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇನ್ನು ಯಾವ ಸಾಕ್ಷಿ ಬೇಕು?  ಎಂದು ಪ್ರಶ್ನಿಸಿದ್ದಾರೆ.

ಹೈಕಮಾಂಡ್ ಗೆ 2000 ಕೋಟಿ ಕೊಟ್ಟರೆ ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಬಹುದು ಎಂದು ಹೇಳಿದ್ದು ಬಿಜೆಪಿ ಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ನಾವಲ್ಲ. ಮಾಜಿ ಮುಖ್ಯಮಂತ್ರಿಗಳ ಮಗ ಲಂಚ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿರುವುದು ಕೂಡಾ ಅದೇ ಶಾಸಕ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 2 ಸಾವಿರ ಕೋಟಿ ಕಿಕ್ ಬ್ಯಾಕ್ ಆರೋಪ ಮಾಡಿದ್ದೂ ಸಹ ಬಿಜೆಪಿ ಶಾಸಕ ಎಚ್.ವಿಶ್ವನಾಥ್. ಪಿ.ಎಸ್.ಐ ನೇಮಕಾತಿ ಹಗರಣದಲ್ಲಿ ವಸೂಲಿ ಮಾಡಿದ ಲಂಚವನ್ನು ಸರ್ಕಾರಕ್ಕೆ ನೀಡಿದ್ದೇನೆ ಎಂದು ಹೇಳಿದ್ದು ಬಿಜೆಪಿ ಶಾಸಕ ಬಸವರಾಜ ದಡೆಸುಗೂರ್. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮತ್ತವರ ಮಕ್ಕಳು ನನ್ನ ಖಾತೆಯಲ್ಲಿ ಕೈ ಆಡಿಸುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಿದ್ದು ಆಗಿನ ಸಚಿವ ಕೆ.ಎಸ್.ಈಶ್ವರಪ್ಪ ಎಂದು ಕಾಂಗ್ರೆಸ್‌ ಪಕ್ಷದಮೇಲೆ ಆರೋಪ ಮಾಡಿದವರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

40% ಕಮಿಷನ್ ಕೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡದ್ದು ಈಶ್ವರಪ್ಪನಿಗೆ ಆತ್ಮೀಯನಾಗಿದ್ದ ಗುತ್ತಿಗೆದಾರ. ಸರ್ಕಾರಿ ಕಾಮಗಾರಿಗಳಲ್ಲಿ 40% ಕಮಿಷನ್ ನೀಡಬೇಕಾಗುತ್ತದೆ, ಇಲ್ಲದೇ ಇದ್ದಿದ್ದರೆ ಬಿಲ್ ಪಾಸ್ ಮಾಡುತ್ತಿಲ್ಲ ಎಂದು ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಧೈರ್ಯದಿಂದ ಬಹಿರಂಗವಾಗಿಯೇ ಆರೋಪ ಮಾಡುತ್ತಿರುವುದು ನಾವಲ್ಲ, ರಾಜ್ಯದ ಸರ್ಕಾರಿ ಗುತ್ತಿಗೆದಾರರ ಸಂಘದವರು ಎಂದು ಕಿಡಿಕಾರಿದರು.

ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ರುಪ್ಸಾ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಲಂಚ ಪಡೆದು ಖಾಸಗಿ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿ ನೀಡಿದ್ದ ಇಲಾಖೆಯೇ ಅಕ್ರಮ ಮುಚ್ಚಿಹಾಕಲು ಲಂಚ ಕೇಳುತ್ತಿದೆಯಂತೆ. ಇದರಲ್ಲಿ ಬಿ.ಸಿ. ನಾಗೇಶ್ ಪಾಲೆಷ್ಟು? ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಅವರ ಪಕ್ಷದ ಶಾಸಕರು, ಸಚಿವರೇ ಸಾಕ್ಷಿ ನೀಡುತ್ತಿದ್ದಾರೆ. ಇವರನ್ನು ಸಾಲಾಗಿ ವೇದಿಕೆಯಲ್ಲಿ ನಿಲ್ಲಿಸಿ ಜನಸ್ಪಂದನ ಮಾಡಿದರೆ ಕಾರ್ಯಕ್ರಮ ಯಶಸ್ವಿಯಾಗಬಹುದು. ಬೇಕಿದ್ದರೆ ಗುತ್ತಿಗೆದಾರರ ಸಂಘದ ಅಧ್ಯಕ್ಷರನ್ನೂ ಕರೆಸಿ ಎಂದು ವ್ಯಂಗ್ಯವಾಡಿದ್ದಾರೆ.

ಪಿಎಸ್ಐ ನೇಮಕಾತಿಯ ಹಗರಣ ಈಗ ರಾಷ್ಟ್ರೀಯ ಸುದ್ದಿಯಾಗಿದೆ. ಈ ಹಗರಣದಲ್ಲಿ ಸಚಿವರು, ಮಾಜಿ ಸಚಿವರು ಮತ್ತು ಅವರ ಮಕ್ಕಳು ಸೇರಿದ ಹಾಗೆ ಎಲ್ಲರೂ ಭಾಗಿಯಾಗಿದ್ದಾರೆ. ಇದರಿಂದ ಉದ್ಯೋಗ ವಂಚಿತರಾದ 54,000 ಯುವಜನರಿಂದ ಜನಸ್ಪಂದನ ನಡೆಸಿ ಎಂದು  ಸಿದ್ದರಾಮಯ್ಯ ಸವಾಲ್‌ ಹಾಕಿದರು.

ಬಿಜೆಪಿ ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ (NCRB) ಪ್ರಕಾರ ಭ್ರಷ್ಟಾಚಾರದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಇದು ದಾಖಲಾಗಿರುವ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಮತ್ತು ಲಂಚ ಸ್ವೀಕಾರದ ಪ್ರಕರಣಗಳ ಆಧಾರದಲ್ಲಿ ನಡೆದ ಸಮೀಕ್ಷೆ. ಬಿಡಿಎ ಇನ್ನೊಂದು ಲಂಚದ ಕೂಪ. ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ನಾಲ್ಕು ಮಂದಿಗೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ದುಬಾರಿ ಮೌಲ್ಯದ ಪರ್ಯಾಯ ನಿವೇಶನಗಳನ್ನು ಬಿಡಿಎ ಹಂಚಿಕೆ ಮಾಡಿದೆ. ಹಾಗಾದರೆ ಎತ್ತಂಗಡಿಯಾಗಿರುವ ಬಿಡಿಎ ಆಯುಕ್ತ ರಾಜೇಶ್ ಗೌಡರ ಸ್ಪಂದನ ಕೇಳಿಬಿಡಿ ಎಂದು ಹೇಳಿದರು.

2021 ರಲ್ಲಿ ಕೆಪಿಎಸ್ಸಿ ನಡೆಸಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ನೇಮಕಾತಿ ಪರೀಕ್ಷೆಗಳಲ್ಲೂ ಅಕ್ರಮ. ಎಫ್‌ಡಿಎ, ಎಸ್‌ಡಿಎ, ಪಿಡಬ್ಯ್ಲುಡಿ, ಜೆಇ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ನೇಮಕದ ಲಿಖಿತ ಪರೀಕ್ಷೆಯಲ್ಲೂ ಅಕ್ರಮ. ಸಿಐಡಿ ಚಾರ್ಜ್ ಶೀಟ್ ನಲ್ಲಿ ಎಲ್ಲವೂ ಬಯಲಾಗಿದೆ. ಬೆಂಗಳೂರು ಉಪನೋಂದಣಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ, ಅಕ್ರಮವಾಗಿ ದಾಖಲೆಗಳ ನೋಂದಣಿ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ವಿಚಾರಣೆ ಆರಂಭಿಸಿದ್ದಾರೆ. ವಿಚಾರಣೆ ಮುಗಿದ ನಂತರ ಯಾರ ತಲೆ ಉರುಳುತ್ತೋ ಕಾದು ನೋಡೋಣ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬಿಬಿಎಂಪಿ  ಬಿಜೆಪಿಯ ಭ್ರಷ್ಟಾಚಾರಕ್ಕೆ ಹೆಡ್ ಆಫೀಸ್ ಆಗಿದೆ. ರಾಜಕಾಲುವೆ, ರಸ್ತೆ, ಮೂಲಭೂತ ಸೌಕರ್ಯ, ಘನತ್ಯಾಜ್ಯ ನಿರ್ವಹಣೆಯಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ವಾರ್ಷಿಕ ಲೆಕ್ಕ ಪರಿಶೋಧನಾ ವರದಿ ಹೇಳಿದೆ. ಅಂಗನವಾಡಿ ಮಕ್ಕಳ ಪಾಲಿನ ಮೊಟ್ಟೆಯ ಹಣದಲ್ಲೂ ಭ್ರಷ್ಟಾಚಾರ. ಆರೋಪ ಹೊತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾಜೊಲ್ಲೆ ಮೇಲೆ ಯಾವ ಕ್ರಮವೂ ಇಲ್ಲ. ಬದಲಿಗೆ ಮಕ್ಕಳಿಗೆ ಕೊಡುವ ಮೊಟ್ಟೆಯನ್ನೇ ನಿಲ್ಲಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು