Saturday, November 9, 2024

ಸತ್ಯ | ನ್ಯಾಯ |ಧರ್ಮ

Her Story – 9 : ಮಹಿಳೆ, ಬದುಕು ಮತ್ತು ಸ್ವಾತಂತ್ರ್ಯ

ಮೊನ್ನೆ ಮೊನ್ನೆಯಷ್ಟೇ ಇರಾನಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಹಿಜಾಬ್‌ ಹೇರಿಕೆಯ ವಿರುದ್ಧ ತನ್ನ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ತನ್ನ ಒಳ ಉಡುಪಿನವರೆಗೂ ಬಟ್ಟೆಗಳನ್ನು ಕಳಚಿ ಎದೆಗುಂದದೇ ನಿಂತ ಆಕೆಯನ್ನು ಇರಾನಿನ ಭದ್ರತಾ ಪಡೆ ಆಕೆಯನ್ನು ಬಂಧಿಸಿ ಮಾನಸಿಕ ಅಸ್ವಸ್ಥೆ ಎಂಬಂತೆ ಬಿಂಬಿಸಿದೆ.

ಇರಾನಿನ ಮೂಲಭೂತವಾದಿಗಳ ಹಿಜಾಬ್‌ ಹೇರಿಕೆಯ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಎದ್ದು ನಿಂತು ತನ್ನ ಬಟ್ಟೆಗಳನ್ನು ಕಳಚುವ ಮೂಲಕ ಪ್ರತಿಭಟಿಸಿದ್ದಾಳೆ. ಮಹಿಳೆಯ ಮೇಲಿನ ಧಾರ್ಮಿಕ ಹೇರಿಕೆಯ ಕುರಿತಾಗಿ ಧ್ವನಿಗಳು ಹೊರಡುತ್ತಲೇ ಇವೆ. ಅಷ್ಟೇ ವೇಗವಾಗಿ ಅವಿಗಳನ್ನು ಹತ್ತಿಕ್ಕುವ ಪ್ರಯತ್ನಗಳು ಕೂಡ ನಡೆಯುತ್ತಿವೆ.

ಇರಾನಿನಲ್ಲಿ ಧಾರ್ಮಿಕ ಮೂಲಭೂತವಾದ ಮತ್ತು ಹಿಜಾಬ್‌ ಹೇರಿಕೆಯ ವಿರುದ್ಧದ ಚಳವಳಿಗಳ ದೊಡ್ಡ ಇತಿಹಾಸವೇ ಇದೆ. 1979 ರ ಇರಾನಿಯನ್‌ ಚಳವಳಿಗಳ ಮೊದಲು ಹಿಜಾಬ್‌ ಹೇರಿಕೆಯಾಗಿರಲಿಲ್ಲ, ಕೆಲವು ಮಹಿಳೆಯರು ತಲೆ ಮುಚ್ಚುವ ವಸ್ತ್ರವನ್ನು ಧರಿಸುತ್ತಿದ್ದರು. 1979ರ ನಂತರಲ್ಲಿ ನಿಧಾನವಾಗಿ ಹಿಜಾಬ್‌ ಕಡ್ಡಾಯವಾಯಿತು. 1980ರಲ್ಲಿ ಎಲ್ಲಾ ಕಛೇರಿಗಳಲ್ಲಿ ಹಿಜಾಬ್‌ ಕಡ್ಡಾಯವಾಯಿತು, 1983ರಲ್ಲಿ ಎಲ್ಲ ಮಹಿಳೆಯರಿಗೆ ಹಿಜಾಬ್‌ ಕಡ್ಡಾಯವಾಯಿತು.

2014ರಲ್ಲಿ ನಡೆಸಿದ ಸಮೀಕ್ಷೆಯೊಂದನ್ನು 2018ರಲ್ಲಿ ಅಧ್ಯಕ್ಷರಾದ ಹಸನ್‌ ರುಹಾನಿಯವರು ಪ್ರಕಟಿಸಿದರು, ಅದರಲ್ಲಿ 49.8% ಇರಾನಿ ಜನರು ಹಿಜಾಬ್‌ ಹೇರಿಕೆಗೆ ವಿರೋದ ವ್ಯಕ್ತಪಡಿಸಿದ್ದರು.

2017ನೇ ಡಿಸೆಂಬರಿನಲ್ಲಿ ಗರ್ಲ್‌ ಆಫ್‌ ಇಂಗೆಲಾಬ್‌ ಸ್ಟ್ರೀಟ್‌ ಎಂದೇ ಜನಪ್ರಿಯವಾದ ವಿದಾ ಮೊಹಾವೇದ್‌ ಎನ್ನುವ ಯುವತಿಯೊಬ್ಬಳು ಒಂದು ಕೋಲಿಗೆ ಬಿಳಿಯ ಸ್ಕಾರ್ಫ್‌ ಕಟ್ಟಿ ಪ್ರತಿರೋದಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಯಿತು. ಅದಾದ ನಂತರದಲ್ಲಿ 2018ರವರೆಗೂ ಈ ಕುರಿತು ಹಲವಾರು ಪ್ರತಿಭಟನೆಗಳು ನಡೆದವು.

2022ನೇ ಸೆಪ್ಟೆಂಬರ್‌ ನಲ್ಲಿ 22 ವರ್ಷದ ಮಹ್ಸಾ ಅಮಿನಿ ಎಂಬ ಯುವತಿಯೊಬ್ಬಳು ಇರಾನಿನಲ್ಲಿ ಹಿಜಾಬ್‌ ಥರಿಸಿದ ಕಾರಣ (ಅ)ನೈತಿಕ ಪೋಲೀಸ್‌ ಗಿರಿಗೆ ಒಳಗಾಗಿ ಸಾವನ್ನಪ್ಪಿದಳು. ಇರಾನಿನ ಅಧಿಕಾರಿಗಳು ಆಕೆಯನ್ನು ಬಂದಿಸಿದ ಕೂಡಲೇ ಆಕೆಗೆ ಹೃದಯಾಘಾತವಾಯಿತು, ನಂತರದಲ್ಲಿ ಆಸ್ಪತ್ರೆಗೆ ವರ್ಗಾಯಿಸುವ ಹೊತ್ತಿಗೆ ಆಕೆ ಕೋಮಾಗೆ ಜಾರಿದ್ದಳು ಎಂದು ವರಿ ಮಾಡಿದರೂ, ಪ್ರತ್ಯಕ್ಷದರ್ಶಿಗಳು ಆಕೆಯನ್ನು ಅಮಾನವೀಯವಾಗಿ ಹಿಂಸಿಸಿದ ಕಾರಣದಿಂದ ಆಕೆ ಸಾವನ್ನಪ್ಪಿದಳು ಎಂದು ತಿಳಿಸುತ್ತಾರೆ. ವೈದ್ಯಕೀಯ ವಿವರಗಳ ಆಧಾರದ ಮೇಲೆ ಆಕೆಯನ್ನು ಬಂಧಿಸುವ ಸಂದರ್ಭದಲ್ಲಿ ಆಕೆಯ ತಲೆಗೆ ಹಲ್ಲೆ ಮಾಡಿದ್ದುದರಿಂದ ಆಕೆಗೆ ತೀವ್ರವಾದ ಗಾಯಗಳಾಗಿದ್ದವು ಎಂದು ವರದಿ ಮಾಡಲಾಗಿದೆ.

ಈ ಘಟನೆಯ ಈ ಹಿಂದಿನ ಎಲ್ಲ ಘಟನೆಗಳಿಗಿಂತ ಹೆಚ್ಚಿನ ಮಟ್ಟದಲ್ಲಿ ಪ್ರತಿಭಟನೆಗೆ ಕಾರಣವಾಯಿತು. ಮಹಿಳಾ ಪ್ರತಿಭಟನಾಕಾರರು ತಮ್ಮ ಹಿಜಾಬ್ ಗಳನ್ನು ತೆಗೆದು ಮತ್ತು ಕೂದಲುಗಳನ್ನು ಕತ್ತರಿಸುವ ಮೂಲಕ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಸುಮಾರು 450ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಇರಾನಿಯನ್‌ ಭದ್ರತಾ ಪಡೆ ಕೊಂದಿದೆ ಎಂದು ವರದಿಗಳು ತಿಳಿಸುತ್ತವೆ. ದೇಶಾದ್ಯಂತ ಪ್ರತಿಭಟನಾಕಾರರನ್ನು ಗುಂಡಿಟ್ಟು ಕೊಲ್ಲಲಾಯಿತು ಎಂದು ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ವರದಿ ಮಾಡಿದೆ.

ಈ ಫಟನೆಯು ವಿಶ್ವದಾದ್ಯಂತ ಸುದ್ದಿಯಾಗುವುದರ ಜೊತೆಗೆ ʼಮಹಿಳೆ, ಬದುಕು ಮತ್ತು ಸ್ವಾತಂತ್ರ್ಯ(Women, Life, Freedom) ಚಳುವಳಿಗೆ ದಾರಿ ಮಾಡಿಕೊಟ್ಟಿತು. ಮಹಿಳೆಗೆ ತನ್ನ ಉಡುಪು, ಜೀವ ಮತ್ತು ಸಮಾಜದಲ್ಲಿ ಬದುಕುವ ಎಲ್ಲ ಸ್ವಾತಂತ್ರ್ಯವೂ ಇರಬೇಕೆಂದು ಫೋಷಣೆಗಳನ್ನು ಕುರ್ದಿಶ್‌, ಪರ್ಶಿಯನ್‌, ಅಜೇ಼ರಿ ಮತ್ತು ಬಲೋಚಿ ಭಾಷೆಗಳಲ್ಲಿ ಈ ಘೋಷಣೆಗಳನ್ನು ಕೂಗಲಾಯಿತು. ಸಾವಿರಾರು ಪ್ರತಿಭಟನಾಕಾರರ ಬಂಧನ, ನೂರಾರು ಜನರ ಸಾವಿಗೆ ಕಾರಣವಾದ ಈ ಚಳಿವಳಿಗೆ ಜಾಗತಿಕ ಬೆಂಬಲ ಸಿಕ್ಕಿದ್ದಲ್ಲದೇ, 2023ಯ ಸ್ವಾತಂತ್ರ್ಯ ಪ್ರಶಸ್ತಿಯೂ ದೊರಕಿತು.

ಈ ಚಳವಳಿ ಇರಾನಿನ ಯುವಜನತೆಯಲ್ಲಿ ಸಾಮಾಜಿಕ ಪ್ರತಿರೋಧವನ್ನು ಹುಟ್ಟುಹಾಕಿತು. ಮಹಿಳೆಯ ಹಕ್ಕುಗಳು ಅವರ ಭವಿಷ್ಯಕ್ಕೆ ಸಂಪೂರ್ಣ ಅಗತ್ಯವಿದೆ ಮತ್ತು ಬಡತನ, ಅಭದ್ರತೆ ಮತ್ತು ನಿರುದ್ಯೋಗವನ್ನು ದೂರಮಾಡಲು ಮಹಿಳೆಯ ಹಕ್ಕುಗಳ ಪ್ರತಿಪಾದನೆ ಅಗತ್ಯ ಎನ್ನುವ ಚರ್ಚೆಗಳು ಆರಂಭವಾಗುತ್ತವೆ. ಮೇ 28, 2024ರಂದು ಲಾಸ್‌ ಏಂಜಲೀಸ್‌ ನಲ್ಲಿ ಪ್ರತಿ ಸೆಪ್ಟೆಂಬರ್‌ 16ನ್ನು ಮಹ್ಸಾ ದಿನವೆಂದು ನೆನೆಯಬೇಕೆಂದು ನಿರ್ಧರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಜರ್ಮನಿಯಲ್ಲಿ ಸುಮಾರು ಒಂದು ಲಕ್ಷ ಜನ ರ್ಯಾಲಿಯಲ್ಲಿ ಭಾಗಿಯಾಗಿ ಈ ಚಳವಳಿಯನ್ನು ಬೆಂಬಲಿಸುತ್ತಾರೆ. ಜೊತೆಗೆ ವಾಷಿಂಗ್ಟನ್‌ ಮತ್ತು ಲಾಸ್‌ ಏಂಜಲೀಸ್‌ ನಲ್ಲೂ ಚಳವಳಿಗಳು ಮುನ್ನೆಲೆಗೆ ಬರುತ್ತವೆ. .

ಇರಾನಿಯನ್‌ ಅದಿಕಾರಿಗಳ ಪ್ರತಿರೋಧದ ಹೊರತಾಗಿಯೂ ಈ ಚಳುವಳಿ ಚಾಲ್ತಿಯಲ್ಲಿರಲು ಬಹಳಷ್ಟು ಹೆಣಗಾಡಬೇಕಾಯಿತು. ಬಿಬಿಸಿ ಮುಂತಾದ ಮಾಧ್ಯಮಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನಗಳೂ ನಡೆದವು. ಆದರೆ, ನಿದಾನವಾಗಿ ಚಳುವಳಿ ಮೌನವಾಯಿತು.

ಮೊನ್ನೆ ಮೊನ್ನೆಯಷ್ಟೇ ಇರಾನಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಹಿಜಾಬ್‌ ಹೇರಿಕೆಯ ವಿರುದ್ಧ ತನ್ನ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ತನ್ನ ಒಳ ಉಡುಪಿನವರೆಗೂ ಬಟ್ಟೆಗಳನ್ನು ಕಳಚಿ ಎದೆಗುಂದದೇ ನಿಂತ ಆಕೆಯನ್ನು ಇರಾನಿನ ಭದ್ರತಾ ಪಡೆ ಆಕೆಯನ್ನು ಬಂಧಿಸಿ ಮಾನಸಿಕ ಅಸ್ವಸ್ಥೆ ಎಂಬಂತೆ ಬಿಂಬಿಸಿದೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎನ್ನುವ ಹೇಳಿಕೆ ಕೊಡಲಾಗಿದೆ. ಆದರೆ ಈ ಘಟನೆಯ ನಂತರ ಮೌನವಷ್ಟೇ ಇರುವುದು ವಿಷಾದನೀಯ.

ಧಾರ್ಮಿಕ ಮೂಲಭೂತವಾದಕ್ಕೆ ಮೊದಲು ಬಲಿಯಾಗುವುದು ಮಹಿಳೆಯರು. ಯಾವುದೇ ಧರ್ಮವಿರಲಿ, ಜಾತಿಯಿರಲಿ, ಮನುಸ್ಮೃತಿಯಿಂದ ಹಿಜಾಬ್‌ ನ ವರೆಗೂ ಹೇರಿಕೆಯಾಗುವುದು ಮಹಿಳೆಯರ ಮೇಲೆ. ಮಹಿಳೆ ಏನು ಧರಿಸಬೇಕು, ಹೇಗೆ ಬದುಕಬೇಕು ಎನ್ನುವುದರ ಆಯ್ಕೆ ಸಂಪೂರ್ಣವಾಗಿ ಅವಳದೇ ಆಗಿರಬೇಕು ಮತ್ತು ಅದನ್ನು ನಿರ್ಧರಿಸುವ ಹಕ್ಕು ಕೂಡ ಅವಳದೇ ಆಗಿರಬೇಕು. ಪುರುಷ ಪ್ರಧಾನ ವ್ಯವಸ್ಥೆಯ ಬಿಗಿ ಮುಷ್ಟಿಯಿಂದ ಹೊರಬಂದು ಮತ್ತೆ ದನಿಗಳು ಒಕ್ಕೊರಲಿನಿಂದ ಅದೇ ಸಾಲುಗಳನ್ನು ಕೂಗಬೇಕಿವೆ. ಮಹಿಳೆ, ಬದುಕು ಮತ್ತು ಸ್ವಾತಂತ್ರ್ಯ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page