Monday, November 18, 2024

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು – 41: ಇನ್ನಷ್ಟು ಹಳ್ಳಿ ಬದುಕಿನ ಪ್ರಾಣಿ ಕತೆಗಳು!

“..ಕಾಡುಹಂದಿಯ ಮಾಂಸವೆಂದರೆ, ನಾಲಗೆಯಲ್ಲಿ ನೀರೂರುವವರು ಬಹಳಷ್ಟಿದ್ದಾರೆ! ಹಿಂದೆಯೂ, ಈಗಲೂ ಇವರು ಹಂದಿಗೆ ಉರುಳು ಇಡುತ್ತಿದ್ದದ್ದು, ಇಡುತ್ತಿರುವುದು ಬೆಳೆಗಳ ರಕ್ಷಣೆಗೋ, ಬಾಯಿ ರುಚಿಗೋ ಎಂಬುದು “ಮಿಲಿಯನ್ ಡಾಲರ್ ಪ್ರಶ್ನೆ”!..” ಲೇಖಕರಾದ ನಿಖಿಲ್ ಕೋಲ್ಪೆಯವರ ಬರಹದಲ್ಲಿ, ತಪ್ಪದೇ ಓದಿ

ನಮ್ಮ ಹಳ್ಳಿಯ ಪರಿಸರದಲ್ಲಿ ಈಗ ಹುಲಿ, ಚಿರತೆಗಳಂತ ದೊಡ್ಡ ಪ್ರಾಣಿಗಳು ಇಲ್ಲ. ನನ್ನ ಬಾಲ್ಯದಲ್ಲಿಯೇ ಅಂದರೆ, ಐದು ದಶಕಗಳ ಹಿಂದೆಯೇ ಅವು ಕತೆಗಳಾಗಿದ್ದವು. ಅಜ್ಜಿಯರು ಅಂಗಳಕ್ಕೆ ಬರುತ್ತಿದ್ದ, ಕಾಲುದಾರಿಗಳಲ್ಲಿ ಎದುರಾಗುತ್ತಿದ್ದ ಹುಲಿ, ನಮ್ಮೂರನ್ನುಇಡೀ ಗ್ರಾಮವನ್ನು ಪ್ರತ್ಯೇಕಿಸಿರುವ ಕೋಂಗಲಪಾದೆ ಎಂಬ ಉದ್ದಗಿನ ಚಿಕ್ಕ ಬೆಟ್ಟದ ತುದಿಯಲ್ಲಿ ಇದ್ದ “ಪಿಲಿ ಮಾಟೆ”ಯಲ್ಲಿ ಇದ್ದ ಹುಲಿಗಳು, ಅವುಗಳ ಘರ್ಜನೆ… ಹೀಗೆ ಹಲವಾರು ಕತೆಗಳನ್ನು ಅವರು ಹೇಳುತ್ತಿದ್ದರಾದರೂ, ಯಾರನ್ನೂ ಹುಲಿ ಹಿಡಿದ ಒಂದೂ ಕತೆಯನ್ನು ಹೇಳಿರಲಿಲ್ಲ! ಪಾದೆ ಎಂದರೆ ಬಂಡೆ. ಬಾಲ್ಯದಲ್ಲಿ ನಮಗೆ ಈ ಕೋಂಗಲ ಪಾದೆ, ಈ ಪಿಲಿ ಮಾಟೆ ಅಂದರೆ, ಹುಲಿಯ ಗುಹೆ ಹಲವು ಕಲ್ಪನೆಗಳನ್ನು ಕೆರಳಿಸುವ ತಾಣಗಳಾಗಿದ್ದವು. ನಾನಂತೂ ಶಿಲಾಯುಗಕ್ಕೇ ಹೋಗಿ ಮನಸ್ಸಿನೊಳಗೆ ಜೀವಿಸುತ್ತಿದ್ದೆ. ಆದರೆ, ಬೆಡಿ ಗಿರಿಯಪ್ಪಣ್ಣನ ಹುಲಿಬೇಟೆ ಕತೆಗಳು ಕೇಳಿ ಬರುತ್ತಿದ್ದವು. ಬೆಡಿ ಎಂದರೆ ಕೋವಿ. ನಾನು ಬಾಲಕನಾಗಿದ್ದಾಗ ಈ ವಯಸ್ಸಾಗಿದ್ದ ಈ ಗಿರಿಯಪ್ಪಣ್ಣ ಹೆಗಲಲ್ಲಿ ಒಂದು ಖಾಕಿ ಚೀಲ ನೇತಾಡಿಸಿಕೊಂಡು, ಕೈಯಲ್ಲಿ ಒಂದು ಜೋಡುನಳಿಕೆಯ ಕೋವಿ ಹಿಡಿದುಕೊಂಡು, ಗತ್ತಿನಲ್ಲಿ ಸುತ್ತಾಡುವುದನ್ನು ಕಂಡಿದ್ದೇನೆ. ಆಗ ಅವರು ಮೊಲ ಇತ್ಯಾದಿಗಳನ್ನು ಬೇಟೆಯಾಡುತ್ತಿದ್ದರು. ಇವರು ಹುಲಿ ಹೊಡೆದ ಬಗ್ಗೆ ನನಗೆ ಡೌಟಾಗುತ್ತಿತ್ತು.

ಇನ್ನೊಬ್ಬರು ಮೇಸ್ತ್ರಿ ಗಿರಿಯಪ್ಪಣ್ಣ. ಅವರ ಅಸ್ತ್ರ ಬಲೆ. ಅವರ ಬಳಿ ಮೀನಿನಿಂದ ಹಿಡಿದು- ಅಳಿಲು, ಮೊಲ, ನರಿ ಹಿಡಿಯುವ ಬಲೆಗಳು ಇದ್ದವು. ಕಳೆದ ಸಲ ಹೇಳಿದ್ದ ಅಲ್ಪುಚ್ಚೆ ಅಂದರೆ, ದೊಡ್ಡ ಗಾತ್ರದ ಕಾಡು ಬೆಕ್ಕು ಬಿದ್ದಿದ್ದದ್ದುಶ ಇವರದ್ದೇ ಬಲೆಗೆ! ಬಾಲ್ಯದಲ್ಲೊಂದು ದಿನ ಇವರ ಅಳಿಲು ಬೇಟೆ ಕಣ್ಣಾರೆ ಕಂಡೆ. ನಮ್ಮ ಮನೆಯ ಸುತ್ತಲೂ ಬೆಟ್ಟು ಗದ್ದೆಗಳು, ಸುತ್ತಲೂ ಮಣ್ಣಿನ ಅಗಳು. ಈ ಅಗಳಲ್ಲಿ ನೀರು ಹರಿದು ಹೋಗಲು ಸೂಂಬುಗಳು (ತೂಬು). ಅಲ್ಲೆಲ್ಲಾ ಒಂದು ಭಾರೀ ಮಾವಿನ ಮರ ಸಹಿತ ಹಲವಾರು ಮರಗಳು. ಈ ಮರಗಳಲ್ಲಿ ಲೆಕ್ಕವಿಲ್ಲದಷ್ಟು ಅಳಿಲುಗಳು. ಅಳಿಲುಗಳು ಉಳಿಸಿದ್ದು ಮಾತ್ರ ನಮಗೆ. ಈ ಗಿರಿಯಪ್ಪಣ್ಣ ಮತ್ತು ಒಂದಿಬ್ಬರು ಬಂದವರೇ ಈ ತೂಬುಗಳಿಗೆ ಹೊರಗಿನಿಂದ- ಸಪೂರ, ಉದ್ದ, ಸುರಂಗದಂತಾ ಬಲೆಗಳನ್ನು ಕಟ್ಟಿದರು. ನಂತರ ಮರಗಳಿಗೆ ಹತ್ತಿ ಅಳಿಲುಗಳನ್ನು ಬೆದರಿಸಲಾರಂಭಿಸಿದರು. ಅಳಿಲುಗಳು ಚೆಲ್ಲಾಪಿಲ್ಲಿಯಾಗಿ ಈ ಯಮದೂತರಿಂದ ತಪ್ಪಿಸಿಕೊಳ್ಳಲು ಈ ತೂಬುಗಳ ಒಳಗೆ ಓಡಿ, ಹಿಂದೆ ಬರಲಾಗದೇ ಸಿಕ್ಕಿಬಿದ್ದವು. ಗಿರಿಯಪ್ಪಣ್ಣ ಒಂದೊಂದೊದರ ಕತ್ತು ಹಿಸುಕಿ, ಚೀಲದೊಳಗೆ ಹಾಕಿಕೊಳ್ಳುವುದು ನೋಡಿ, ಕರುಳು ಕಿವುಚಿ, ತಂದೆಯವರ ಮೇಲೆ ಅಸಾಧ್ಯ ಸಿಟ್ಟು ಬಂತು. ಮಾವಿನಹಣ್ಣು ಹಾಳುಮಾಡುತ್ತವೆ ಎಂದು ಅವರೇ ಹಿಡಿಸಿದರೋ ಎಂಬ ಸಂಶಯವೂ ಉಂಟಾಯಿತು. ಆದರೆ, ತಂದೆಯವರು ಸ್ವತಃ ಅಳಿಲು ಸಾಕುತ್ತಿದ್ದರೆಂದೂ, ಮಂಗಳೂರಿಗೆ ಹೋದರೂ ಒಂದು ಅಳಿಲು ಅವರ ಜೇಬಿನಲ್ಲೇ ಇದ್ದು ಮೈ, ತಲೆ ಮೇಲೆಲ್ಲಾ ಓಡಾಡುತ್ತಿತ್ತು ಎಂದು ತಾಯಿ ಹಿಂದೆ ಹೇಳಿದ್ದು ನೆನಪಾಯಿತು. ವಿಷಾದವೆಂದರೆ ಸುಮಾರು ಇಪ್ಪತ್ತು ವರ್ಷಗಳ ನಂತರ ನಾನು ಮೊನ್ನೆಯಷ್ಟೇ ಅಪರೂಪಕ್ಕೆ ಒಂದು ಅಳಿಲು ನೋಡಿದೆ. ಗುಬ್ಬಚ್ಚಿಯದ್ದೂ ಇದೇ ಕತೆ. ಚಾವಡಿಯ ನಾಲ್ಕೂ ಮೂಲೆಗಳಲ್ಲಿ ಕಟ್ಟಿದ್ದ ಕಂಗಿನ ಹಾಳೆಗಳಲ್ಲಿ ಅವು ಆರಾಮದ ಸಂಸಾರ ಮಾಡುತ್ತಿದ್ದವು. ಭತ್ತದ ರಾಶಿಗಳಿರುತ್ತಿದ್ದ ಮನೆಯಲ್ಲಿ ಅವುಗಳ ಓಡಾಟ, ಚಿಂಯ್ ಪಿಂಯ್ ಸದಾ ಇರುತ್ತಿತ್ತು. ನಂತರ ದಶಕಗಳ ಕಾಲ ಮರೆಯಾದ ಗುಬ್ಬಚ್ಚಿಗಳು ಇತ್ತೀಚೆಗೆ ಪೇಟೆಗಳ ದಿನಸಿ ಅಂಗಡಿಗಳ ಸುತ್ತ ಕಾಣಿಸಿಕೊಳ್ಳಲು ಆರಂಭಿಸಿವೆ.

ನಮ್ಮೂರಿನಲ್ಲಿ ಹಲವು ಗಿರಿಯಪ್ಪನವರೂ ಇದ್ದರೂ, ಖ್ಯಾತನಾಮ ಮೂವರು ಗಿರಿಯಪ್ಪರಲ್ಲಿ ಇನ್ನೊಬ್ಬರು ಗಂಡಂಗ್ ಗಿರಿಯಪ್ಪಣ್ಣ. ತಾಳೆ ಶೇಂದಿ (ಕಲಿ) ಗುತ್ತಿಗೆ ಹಿಡಿದಿದ್ದರು. ಬಂಗಾರಪ್ಪ ಸರಕಾರ “ಮೂರುವವನೇ ಮಾರುವವನು” ಕಾನೂನು ತರುವ ತನಕ ನಮ್ಮ ತಾಲೂಕು ಯಾಕೆ, ಇಡೀ ಜಿಲ್ಲೆಯಲ್ಲಿಯೇ ನಂ.1 ಶೇಂದಿ ಉತ್ಪಾದನೆಯ ಗ್ರಾಮಗಳಾಗಿದ್ದ ನಮ್ಮ ನರಿಕೊಂಬು ಮತ್ತು ಶಂಬೂರು ಗ್ರಾಮಗಳ ಮೂರ್ತೆದಾರರು (ಶೇಂದಿ ಇಳಿಸುವ ಬಿಲ್ಲವರು) ಇವರ ಗಡಂಗಿಗೇ ಶೇಂದಿ ಹಾಕಬೇಕಿತ್ತು. ಮನೆಯಲ್ಲಿ ಮಾರಿದರೆ, ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾದರೆ, ಅಬಕಾರಿ ದಾಳಿಯಾಗುತ್ತಿತ್ತು. ಈ ಗಂಡಂಗುಗಳಿಗೂ, ಈ ಬೇಟೆಗಳಿಗೂ ಶೇಂದಿ-ಚಾಕಣ ಸಂಬಂಧ ಇರುವುದರಿಂದ ಇವರ ಹೆಸರುಗಳ ಉಲ್ಲೇಖಿಸಿದೆ. ಈ ಕುರಿತ ಸ್ವಾರಸ್ಯಕರ ಘಟನೆ ಮುಂದೆ ಹೇಳುವೆ.

ನಮ್ಮ ಊರಲ್ಲಿ ಹಿಂದೆಯೂ, ನಂತರವೂ ಈ ಕಾಡುಹಂದಿಗಳ ಉಪಟಳ ವಿಪರೀತ . ಹಿಂದೆ ಸಂಖ್ಯೆಯ ಕಾರಣದಿಂದ ಇದ್ದರೆ, ಈಗ ಸಂಖ್ಯೆ ಕಡಿಮೆ ಇದ್ದರೂ ಕಾಡುಗಳು ನಾಶವಾಗಿ ಅವುಗಳಿಗೆ ನಾಡುಗಳೇ ಗತಿಯಾಗಿರುವುದರಿಂದ, ರಾತ್ರಿ ಹೊತ್ತಿನಲ್ಲಿ ಗದ್ದೆ ತೋಟಗಳಿಗೆಲ್ಲಾ ನುಗ್ಗುತ್ತವೆ ತೋಟಗಳನ್ನು ತಮ್ಮ ದಾಡೆಗಳಿಂದ ಉತ್ತು, ಬಾಳೆ ಹಿಂಡಿಲುಗಳನ್ನೇ ಉರುಳಿಸಿ ಹಾಕುತ್ತವೆ. ಗದ್ದೆಗಳಲ್ಲಿ ಭತ್ತ ಮೆಲ್ಲುವುದಷ್ಟೇ ಅಲ್ಲ, ಎಲ್ಲೆಲ್ಲೂ ಉರುಳಾಡಿ ರಣರಂಗ ಮಾಡಿಬಿಡುತ್ತವೆ! ಹೀಗಾಗಿ ಇವು ಬರುವ ಗಂಡಿಗಳಲ್ಲಿ ಗೇರ್ ವಯರ್‌ಗಳಿಂದ ಉರುಳು ಇಡುವುದು ಸಾಮಾನ್ಯ- ಹಿಂದೆ ಫಾರೆಸ್ಟಿನವರಿಗೆ ಹೆದರಿ; ಆದರೆ, ಈಗ ಅವರನ್ನು ಕ್ಯಾರೇ ಅನ್ನುವವರಿಲ್ಲ. ಅವರು ಬರುವಾಗ ಹಂದಿಯು ಗೊಬ್ಬರವಾಗಿರುತ್ತದೆ! ಹಿಂದಿನಂತೆ ಜನರು ಬೆಳಗ್ಗೆ “ಗುಡ್ಡೆಗೆ ಹೋಗದೆ” ಶೌಚಾಲಯಕ್ಕೆ ಹೋಗುವುದರಿಂದ ಅದೂ ಸಿಗಲಾರದು. ಮೇಲಾಗಿ, ಹಿಂದೆ ಮಾಂಸವನ್ನು “ಬೇಟೆಯ ನಿಯಮ”ದಂತೆ ಊರಿಡಿ ಹಂಚುತ್ತಿದ್ದರೆ, ಈಗ ಗುಟ್ಟು ಗೊತ್ತಿದ್ದವರೇ ಹಂಚಿಕೊಳ್ಳುವುದರಿಂದ ಯಾರಿಗೂ ಏನೂ ತಿಳಿಯದು. ಯಾರೂ ಬಾಯಿ ಬಿಡುವುದಿಲ್ಲ!

ನಮ್ಮಲ್ಲಿ ಯಾರಲ್ಲೂ ಕೋವಿಗಳು ಇಲ್ಲ. ಹಾಗಾಗಿ, ರೈತರು ಈ ಹಂದಿಗಳನ್ನು ದೂರವಿಡಲು ಕಂಡುಕೊಂಡ ಹೊಸ ಉಪಾಯವೆಂದರೆ, ಸೀರೆಯಂಗಡಿ ತೆರೆಯುವುದು. ಅದೆಂದರೆ, ಇದ್ದಬದ್ದ ಹಳೆಯ ಬಣ್ಣಬಣ್ಣದ ಸೀರೆಗಳನ್ನು ಗದ್ದೆಯ ಸುತ್ತಲೂ ಉದ್ದಕ್ಕೆ ಕಟ್ಟುವುದು. ಈ ಅಂಗಡಿಯಲ್ಲಿ ಅವಳ ಹಳೆಯ- ಮನೆ ಸೀರೆ, ಇವಳ ಜರತಾರಿ ದಾರೆಸೀರೆ, ಇನ್ನೊಬ್ಬಳ ದಿಬ್ಬಣ ಸೀರೆ, ಮತ್ತೊಬ್ಬಳ ಬಯಕೆ (ಸೀಮಂತ) ಸೀರೆ ಎಲ್ಲವನ್ನೂ ನೀವು ಕಾಣಬಹುದು. ಹಿಂದೆ ಒಂದೆರಡು ಸೀರೆಗಳಿಗೂ ಬರವಿದ್ದ, ಬೇರೆಯವರ ಹಳೆ ಸೀರೆ ಉಡುತ್ತಿದ್ದ ಬಹಳಷ್ಟು ಮಹಿಳೆಯರಿದ್ದ ನಮ್ಮೂರಿನಲ್ಲಿ- ಸ್ವಾತಂತ್ರ್ಯೋತ್ತರದಲ್ಲಿ ಇಷ್ಟು ಪ್ರಗತಿ ಆಗಿದೆ. ಇದರ ಫಲಾನುಭವಿಗಳು ಕಳೆದ ಎಪ್ಪತ್ತು ವರ್ಷಗಳಲ್ಲಿ ಏನು ಮಾಡಿದರು…. ಎಂದು ಭಜನೆ ಮಾಡುತ್ತಾ, ಈಗಿನ ಸ್ಥಿತಿಯ ಕುರಿತು ಗೊಣಗುತ್ತಿದ್ದರೂ, ಪಾಕಿಸ್ತಾನದ ಧ್ಯಾನ, ಮುಸ್ಲಿಮರ ಧ್ಯಾನ ಮಾಡುವವರೇ! ಅದನ್ನೇ ದೇಶಪ್ರೇಮವೆಂದು ತಿಳಿದುಕೊಂಡವರು! (ನಮ್ಮ ಊರಿನಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಇಲ್ಲ; ಆದರೂ!).

ನಮ್ಮೂರಿನಲ್ಲಿ ಹಂದಿ ಸಾಕುವವರು ಇಲ್ಲವೇ ಇಲ್ಲ. ಈಗ ವೈನ್ ಶಾಪ್‌ಗಳಲ್ಲಿ ಧಾರಾಳವಾಗಿ ತಿನ್ನುತ್ತಿದ್ದರೂ, ಮನೆಗಳಲ್ಲಿ ಇಲ್ಲ. ಹಿಂದೆ ಊರಿನ ಮಾರಿಪೂಜೆಗೆ ಕಡಿದ ಹಂದಿಯ ಮಾಂಸವನ್ನು ಸ್ವಲ್ಪಸ್ವಲ್ಪವೇ ಎಲ್ಲರಿಗೂ ಹಂಚುತ್ತಿದ್ದರು. ಅದನ್ನು ಮನೆಯಲ್ಲೇ ಅಡುಗೆ ಮಾಡಿ ಪ್ರಸಾದವೆಂದು ತಿನ್ನುತ್ತಿದ್ದರು. ಆಗ ನಮ್ಮ ಮನೆಯಲ್ಲಿ ಉಳಿದವರು ತಿನ್ನದಿದ್ದರೂ, ನನ್ನ ಅಜ್ಜಿಗೆ ಬಹಳ ಇಷ್ಟ. ಅಡುಗೆ ಮನೆಯ ಪಾತ್ರಗಳನ್ನು ಬೋರಲು ಹಾಕುತ್ತಿದ್ದ “ದೆಂಗ” ಅಂದರೆ, ಹಲಗೆ ಸಾಲುಗಳ ಕೊನೆಯಲ್ಲಿ ಹಂದಿಯ ಎಣ್ಣೆ , ಅಂದರೆ, ಅಡುಗೆ ಮಾಡುವಾಗ ತೆಗೆದ ಕೆಂಪಾದ ಕೊಬ್ಬು ತುಂಬಿದ ಬಾಟ್ಲಿಯೊಂದು ಸದಾ ಹುರಿ ಹಗ್ಗದಲ್ಲಿ ನೇಣು ಹಾಕಿಕೊಂಡು ಇರುತ್ತಿತ್ತು. ಉಳುವ ಕೋಣಗಳ ಹೆಗಲಿನಲ್ಲಿ ಬಾವು (ದಡ್ಡು) ಬಂದಾಗ ಇದುವೇ ಮದ್ದು! “ಅಪ್ಪಿಯಕ್ಕ, ಒಂತೆ ಪಂಜಿದ ನೈ ಕೊರ್ಪಾರ?” (ಅಪ್ಪಿಯಕ್ಕ , ಸ್ವಲ್ಪ ಹಂದಿಯ ತುಪ್ಪ (!) ಕೊಡ್ತೀರಾ?” ಎಂದು ಕೇಳಿಕೊಂಡು ಬರುತ್ತಿದ್ದರು. ಬ್ರಾಹ್ಮಣರ ಮನೆಯ ಕೋಣಗಳಿಗೂ ಇದೇ ಮದ್ದು! ಈಗ ಕೆಲವರು- “ನಾವು ಮನೆಯೊಳಗೆ ಮಾಡುವುದಿಲ್ಲ” ಎಂಬ ಹೆಗ್ಗಳಿಕೆ ತೋರಿ, ಹೊರಗೆ ಅಡುಗೆ ಮಾಡಿ ತಿಂದು ಮನೆಯೊಳಗೆ ಹೋಗುತ್ತಾರೆ! ಹೊಟ್ಟೆಯ ಒಳಗೆ ಇರುವುದೆಲ್ಲವೂ ಪವಿತ್ರ! ಹೊರಗೆ ತಿಂದರಾಯಿತು ಅಷ್ಟೇ! ವೈನ್ ಶಾಪ್‌‌ಗಳಲ್ಲಿ ಹೊಟ್ಟೆ ಬಿರಿಯುವಂತೆ ತಿನ್ನುತ್ತಾರೆ! ಮುಸ್ಲಿಮರಿಗೆ ಹಂದಿ ಆಗುವುದಿಲ್ಲವಾದುದರಿಂದ, ಹಂದಿ ತಿಂದರೆ ಅವರ ಮೇಲೆ ಸೇಡು ತೀರಿಸಿದಂತೆ ಎಂದು ತಮ್ಮ ವರಾಹ ಪ್ರಿಯತೆಯನ್ನು ಸಮರ್ಥಿಸುವವರೂ ಇಲ್ಲದಿಲ್ಲ. ವೈದಿಕರು ವರಾಹಾವತಾರ, ದೈವವಾದ ಪಂಜುರ್ಲಿ (ವರಾಹ ಎಂದರೆ, ತುಳುವಿನಲ್ಲಿ ಪಂಜಿ) ಇತ್ಯಾದಿ ಸಂಬಂಧ ಕಲ್ಪಿಸಿದರೂ ಅದು ಇವರಿಗೆ ನಾಟದು. ಆದರೆ, ಅವರದ್ದೇ ಚಾಕರಿ ಮಾಡುತ್ತಾರೆ.

ಇಷ್ಟೆಲ್ಲಾ ಇದ್ದರೂ, ಕಾಡುಹಂದಿಯ ಮಾಂಸವೆಂದರೆ, ನಾಲಗೆಯಲ್ಲಿ ನೀರೂರುವವರು ಬಹಳಷ್ಟಿದ್ದಾರೆ! ಹಿಂದೆಯೂ, ಈಗಲೂ ಇವರು ಹಂದಿಗೆ ಉರುಳು ಇಡುತ್ತಿದ್ದದ್ದು, ಇಡುತ್ತಿರುವುದು ಬೆಳೆಗಳ ರಕ್ಷಣೆಗೋ, ಬಾಯಿ ರುಚಿಗೋ ಎಂಬುದು “ಮಿಲಿಯನ್ ಡಾಲರ್ ಪ್ರಶ್ನೆ”! ಕೆಲವು ದಶಕಗಳ ಹಿಂದೆ ನಮ್ಮ ಮನೆಯಾಚೆಗಿನ ಪಿದಾಯಿ ಗುಡ್ಡೆ ಎಂಬ ಕಾಡಿನಲ್ಲಿ (ಈಗ ಬಹುತೇಕ ಬಯಲಾಗಿದೆ) ಭಾರೀ ಗಾತ್ರದ, ಕೊಬ್ಬಿದ ಕರಿಹಂದಿಯೊಂದು ಉರುಳಿಗೆ ಬಿತ್ತು. ಮಾಂಸವನ್ನು ಧಾರಾಳತನದಿಂದ ಹಂಚಲಾಯಿತು. ನಮ್ಮ ಮನೆಗೂ ಸ್ವಲ್ಪ ತಂದುಕೊಟ್ಟರು. ಈ ಸುದ್ದಿ ಕಿವಿಯಿಂದ ಕಿವಿಗೆ ಗುಟ್ಟಿನಲ್ಲೇ ನಾಲ್ಕೂರು ಹಬ್ಬಿತು. ಒಂದು ವಾರದ ನಂತರ ಪೊಲೀಸರು ಬಂದರು! ಫಾರೆಸ್ಟಿನವರು ಬರದೆ, ಪೊಲೀಸರು ಬಂದದ್ದು ನೋಡಿ ಎಲ್ಲರಿಗೂ ನಡುಕ ಆರಂಭವಾಯಿತು, ಸಾಕ್ಷಿ ವಸ್ತುಶಃ ಮಣ್ಣಾಗಿತ್ತಾದರೂ, ಪೊಲೀಸರನ್ನು ಯಮದೂತರಂತೆ ಕಾಣುತ್ತಿದ್ದ ಕಾಲ! ಕೊನೆಗೆ ತಂದೆಯವರ ಮಧ್ಯಸ್ಥಿಕೆಯಲ್ಲಿ ರಾಜಿಯಾಯಿತು. ಅಸಲಿ ವಿಷಯ ಏನೆಂದರೆ, ಆ ಕೊಬ್ಬಿದ ಕರಿಹಂದಿ ನಿಜವಾಗಿಯೂ ಕಾಡುಹಂದಿಯಾಗಿರದೇ ಗಡಂಗ್ ಗಿರಿಯಪ್ಪಣ್ಣ ಸಾಕಿದ್ದ ಹಂದಿಯಾಗಿತ್ತು! ಕೊಬ್ಬಿ ಮದವೇರಿದ ಅದು, ಸರಿಯಾದವರು ಸಿಕ್ಕಿದರೆ, ಒಂದು ಕೈ ನೋಡಿಯೇ ಬಿಡುತ್ತೇನೆ ಎಂದು ಕಾಡುಮೇಡು ಅಲೆಯುತ್ತಿತ್ತಂತೆ. ಕರ್ರಗೆ ಕೂದಲು ಬೆಳೆಸಿಕೊಂಡು ಸಾಕ್ಷಾತ್ ಕಾಡುಹಂದಿಯಂತೆಯೇ ಇತ್ತು! ಕೊನೆಗೆ, ಮಾಂಸ ತಿಂದವರೆಲ್ಲ ವಂತಿಕೆ ಹಾಕಿ ಗಿರಿಯಪ್ಪಣ್ಣನಿಗೆ ಕೊಡುವುದೆಂದು ಇತ್ಯರ್ಥವಾಯಿತು. ಆಗ ಹೆಚ್ಚು ಹಣ ಯಾರ ಹತ್ತಿರ ಇರುತ್ತದೆ! ಹಣ ಕಡಿಮೆಯಾದರೂ, ತಂದೆಯ ದಾಕ್ಷಿಣ್ಯ ಮತ್ತು ಹಿಂದೆ ಅವರ ಹಿರಿಯರು ಮಾಡಿದ್ದ ಉಪಕಾರ ನೆನೆದು ಗಿರಿಯಪ್ಪಣ್ಣ ಒಪ್ಪಿಕೊಂಡರು. ನಂತರ ಬಹಳ ಕಾಲ, ರಕ್ಷಿತ್ ಶೆಟ್ಟಿಯ “ಬೋಡಾ ಶೀರ?”ದಂತೆ, “ಬೋಡಾ ಕಾಡ್‌ಪಂಜಿದ ಮಾಸ?” (ಬೇಕಾ ಕಾಡುಹಂದಿಯ ಮಾಂಸ?) ಎಂಬ ಡಯಲಾಗ್ ತಮಾಷೆಯಾಗಿ ನಮ್ಮೂರಿನಲ್ಲಿ ಚಾಲ್ತಿಯಲ್ಲಿತ್ತು.

ಎರಡು ಬಲವಾದ, ಚೂಪು ದಾಡೆ ಹಲ್ಲುಗಳಿರುವ ಕಾಡುಹಂದಿ ಮನುಷ್ಯರನ್ನು ಕಂಡರೆ ಸಾಮಾನ್ಯವಾಗಿ ಓಡುತ್ತದೆ. ಆದರೆ, ಅಪಾಯ ಮನಗಂಡರೆ ನೇರ ಮುಖಾಮುಖಿಯಾದರೆ, ಯಾವ ಪ್ರಾಣಿಯನ್ನೂ ಕ್ಯಾರೇ ಅನ್ನದೆ ದಾಳಿ ಮಾಡುತ್ತದೆ. ಹುಲಿ ಮತ್ತು ಕಾಡುಹಂದಿ ಅಕ್ಕಪಕ್ಕದಲ್ಲಿದ್ದು ಎದುರಾದರೆ, ಹುಲಿಗೆ ಗುಂಡು ಹೊಡೆಯದೇ ಕಾಡುಹಂದಿಯನ್ನು ಹೊಡೆಯಬೇಕೆಂದೂ, ಕೋಪಗೊಂಡ ಅದು ಹುಲಿಯ ಮೇಲೆ ಎರಗುತ್ತದೆ ಮತ್ತು ನಾವಾಗ ಓಡಬೇಕು ಎಂದೂ ಕೆಲವು ಹಿರಿಯರು ತಮ್ಮ ಥಿಯರಿ ಮಂಡಿಸುವುದನ್ನು ಬಾಲ್ಯದಲ್ಲಿ ಕೇಳಿದ್ದೆ. ಇದು ನಿಜವೋ, ಅವರು ರೀಲು ಬಿಡುತ್ತಿದ್ದದ್ದೋ ನನಗಿನ್ನೂ ಗೊತ್ತಿಲ್ಲ! ಆದರೆ, ಎರಡು ಬಾರಿ ಕಾಡುಹಂದಿಗಳ ಜೊತೆ ಮುಖಾಮುಖಿಯಾಗಿ ನನ್ನ ಹೃದಯ ಬಾಯಿಗೆ ಬಂದಿತ್ತು. (ನೀವು ಹೃದಯದ ಬದಲು ಬೇರೆ ಎರಡನ್ನು ಊಹಿಸಿದರೂ ನನ್ನ ಅಡ್ಡಿಯಿಲ್ಲ!)

ಒಂದು ಸಲ ರಾತ್ರಿ ಹೊತ್ತಿನಲ್ಲಿ ನಾನು ಒಬ್ಬನೇ ಬಯಲು, ಕಾಡು ದಾರಿಯಲ್ಲಿ ಯಕ್ಷಗಾನ ಬಯಲಾಟ ನೋಡಲೆಂದು ಒಬ್ಬನೇ ಪಕ್ಕದೂರಿಗೆ ಹೋಗುತ್ತಿದ್ದೆ. ಉಳಿದವರೆಲ್ಲರೂ ಹೋಗಿ ಆಗಿತ್ತು. ರಸ್ತೆಯಲ್ಲಿ ಸುತ್ತಾಗಿ ಹೋಗಲು ನಾಲ್ಕೈದು ಕಿಲೋ ಮೀಟರ್ ಆಗುತ್ತದೆ. ಈ ಕಾಲುದಾರಿಯಲ್ಲಿ ಒಂದು ಕಿ.ಮೀ. ಮಾತ್ರ. ಚಿಕ್ಕಂದಿನಲ್ಲಿ ಪ್ರತೀ ವರ್ಷ ಗುಂಪಾಗಿ ಹೋಗುತ್ತಿದ್ದುದರಿಂದ ಈ ದಾರಿ ಪರಿಚಯ ಇತ್ತು. ಆದರೆ, ನಂತರ ಬಹಳಷ್ಟು ವರ್ಷ ಹೋಗದೇ ಇದ್ದುದರಿಂದ ದಾರಿ ತಪ್ಪಿತು. ಹಿಂದೆ ದಾರಿ ಇದ್ದಲ್ಲಿ ಮನೆ, ತೋಟಗಳಾಗಿವೆ! ಕೊನೆಗೆ, ಕಾಡಿನಲ್ಲಿ ಸವೆದಿರುವುದೇ ಹಾದಿ ಎಂದು ಒಂದು ದಾರಿಯಲ್ಲಿ ಹೋದರೆ, ಅಡ್ಡವಾಗಿ ಒಂದು ಬೇಲಿ ಹಾಕಿದ ತೋಟ. ಚೆಂಡೆಯ ಸದ್ದು ಅದೇ ದಿಕ್ಕಿನಲ್ಲಿ ಕೇಳಿಸುತ್ತಿತ್ತು. ಏನು ಮಾಡುವುದು? ಪಕ್ಕದಲ್ಲೇ ಒಂದು ಹೆಚ್ಚು ಸವೆಯದ ದಾರಿಯಲ್ಲಿ ಮುಂದುವರಿದೆ. ನೋಡುತ್ತೇನೆ ಅದೊಂದು ಡೆಡ್ ಎಂಡ್! ಅದು ಕಾಡು ಹಂದಿ ಮಾಡಿದ ದಾರಿ! ಬ್ಯಾಟರಿ ವೀಕಾಗಿದ್ದ ಟಾರ್ಚ್ ಬೆಳಕಿನಲ್ಲಿ ಒಂದು ಕಾಡು ಹಂದಿ ಕಾಲು ಕೆರೆಯುತ್ತಾ, ಸ್ವಲ್ಪ ದೂರದಲ್ಲೇ ಎದುರೇ ನಿಂತು ದುರುಗುಟ್ಟಿ ನೋಡುತ್ತಿದೆಚ. ಸುತ್ತಲೂ ಮರಿಗಳು! ಮರಿಹಾಕಿದ ಯಾವುದೇ ಪ್ರಾಣಿ ಅಪಾಯಕಾರಿ! ಎದೆ ಧಸ್ಸಕ್ಕೆಂದಿತು! ನನ್ನ ಸ್ವಂತ ಬ್ಯಾಟರಿಯೂ ಒಮ್ಮೆಲೇ ವೀಕಾದರೂ, ಓಡಬಾರದೆಂದು ಗೊತ್ತಿತ್ತು. ಒಂದೊಂದೇ ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ, ಹಿಂದೆ ಹಿಂದೆ ಬಂದವನೇ, ಬದುಕಿದೆಯಾ ಬಡ ಜೀವವೇ ಎಂದು ತೋಟದ ಬೇಲಿ ಹಾರಿ, ಅಲ್ಲೊಂದು ಮನೆಗೆ ಹೋದರೆ, ಅವರು ಒಮ್ಮೆಲೇ ಪ್ರತ್ಯಕ್ಷನಾದ ನನ್ನನ್ನೇ ಕಾಡುಪ್ರಾಣಿಯಂತೆ ನೋಡಿದರು! ಪರಿಚಯ ಹೇಳಿ, ಆಟಕ್ಕೆ ಬಂದವನು, ದಾರಿ ತಪ್ಪಿದೆ ಎಂದಾಗ, ಗುರುತು ಸಿಕ್ಕಿ, ದಾರಿ ತೋರಿಸಿದರು.

ಇನ್ನೊಮ್ಮೆ “ಮುಂಗಾರು” ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ, ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ, ಲೈಬ್ರರಿಯಲ್ಲಿ ಸೊಳ್ಳೆಗಳಿಂದ ಕಡಿಸಿಕೊಳ್ಳುತ್ತಾ ಸ್ವಲ್ಪ ಮಲಗಿ, ವಾಡಿಕೆಯಂತೆ ಪತ್ರಿಕೆ ಪ್ರಿಂಟಾದ ನಂತರ ನಮ್ಮ ಕಡೆ ಹೋಗುವ ಪತ್ರಿಕೆ ವಿತರಣೆಯ ಕಾರಿನಲ್ಲಿ ನಮ್ಮೂರ ಹತ್ತಿರದ ಮೆಲ್ಕಾರ್ ಪೇಟೆಯಲ್ಲಿ ಇಳಿದೆ. ಅಲ್ಲಿಂದ ಒಂದೂವರೆ ಕಿ.ಮೀ. ಗದ್ದೆ ಬದುವಿನಲ್ಲಿ ನಡೆಯಬೇಕು. ರಾತ್ರಿಯ ಮೂರು ಗಂಟೆ ಆಗಿರಬಹುದು. ಟಾರ್ಚ್ ಹಿಡಿದುಕೊಳ್ಳುವ ಅಭ್ಯಾಸ ಇರಲಿಲ್ಲ. ಎಂತಾ ಕತ್ತಲಲ್ಲೂ ಕಾಲಂದಾಜಲ್ಲೇ ನಡೆಯುವುದು ಅಭ್ಯಾಸವಾಗಿತ್ತು. ಆ ದಿನ ಒಳ್ಳೆಯ ತಿಂಗಳ ಬೆಳಕಿತ್ತು. ಮನೆಯ ಹತ್ತಿರ ಬರುತ್ತಿದ್ದಂತೆ ಏಕಾಏಕಿ- ಗದ್ದೆ ಬದುವಿನ ಪಕ್ಕದಲ್ಲೇ ದೊಡ್ಡ ಎಮ್ಮೆ ಕರು ಗಾತ್ರದ ಭಯಂಕರ ಆಕೃತಿಯೊಂದು ನಿಂತಿರುವುದು ಕಂಡಿತು! ಧಸಕ್ಕನೇ ಕಲ್ಲಿನ ಮೂರ್ತಿಯಂತೆ ನಿಂತೆ. ನಾಲ್ಕಾರು ಸೆಕೆಂಡ್‌ಗಳಾಗಿರಬಹುದು; ನನಗೆ ನಿಮಿಷಗಳಂತೆ ಕಂಡಿತ್ತು. ಅದೊಂದು ಭಾರೀ ಕಾಡುಹಂದಿ! ಅದರ ಕೋರೆದಾಡೆಗಳು ಹಾಲಿನಂತಾ ಬೆಳದಿಂಗಳಲ್ಲಿ ಹೊಳೆಯುತ್ತಿವೆ! ಆಯ್ತು, ನನ್ನ ಕತೆ ಮುಗಿಯಿತು ಎಂದು ಯೋಚಿಸುವಷ್ಟರಲ್ಲಿ, ನನ್ನಷ್ಟೇ ಆಶ್ಚರ್ಯಾಘಾತಕ್ಕೆ ಒಳಗಾಗಿದ್ದ ಅದು ಧಡ್ ಧಡ್ ಧಡ್ ಎಂದು ಓಡಿ ಹೋಯಿತು. ಅದರ ಹಿಂದೆಯೇ ದೊಡ್ಡ ಹಿಂಡೊಂದು ಗದ್ದೆಯ ನಡುವಿನಿಂದ ಭಾರೀ ಸದ್ದಿನೊಂದಿಗೆ ಓಡಿಹೋಯಿತು! ನಾನು ಸುರಕ್ಷಿತವಾಗಿ ಮನೆ ಸೇರಿದೆ, ಇದನ್ನು ಬರೆಯಲು ಎಂದು ಬೇರೆ ಹೇಳಬೇಕಾಗಿಲ್ಲ ತಾನೆ!? ನಾನಂತೂ ಬೆವರಿಹೋಗಿದ್ದೆ.

ಪ್ರಾಣಿ ಕತೆಗಳಿಗೆ ಹುಲಿ, ಆನೆಗಳಂತಾ ದೊಡ್ಡ ಪ್ರಾಣಿಗಳೇ ಆಗಬೇಕೆಂದಿಲ್ಲ! ಹಾವಿನಿಂದ ಗೆದ್ದಲಿನ ತನಕವೂ ಹಲವು ಕತೆಗಳಿವೆ. ನನ್ನನ್ನು ಯಾವುದಾದರೂ ನರಪ್ರಾಣಿ ಹಿಡಿಯದಿದ್ದರೆ ಮುಂದೆ ನೋಡೋಣ!

Related Articles

ಇತ್ತೀಚಿನ ಸುದ್ದಿಗಳು

You cannot copy content of this page