Friday, November 22, 2024

ಸತ್ಯ | ನ್ಯಾಯ |ಧರ್ಮ

ಶಿಕ್ಷಣ ಮಾದ್ಯಮವಾಗಿ ಉರ್ದುವಿಗಿಂತಕನ್ನಡ ಉತ್ತಮ (ಪಾಷಾಭಿಪ್ರಾಯ ಅಂಕಣ-07)

ಪ್ರೊ. ರೆಹಮಾನ್ ಪಾಷ

ನಮ್ಮ ರಾಜ್ಯದಲ್ಲಿ ಉರ್ದು ಎಂದರೆ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಉರ್ದು ಮಾಧ್ಯಮದಲ್ಲಿ ಓದಿದ ‘ಹೆಚ್ಚಿನ ಮಕ್ಕಳು ಐದನೇ ತರಗತಿಯ ನಂತರ ಶಾಲೆಯನ್ನು ಬಿಟ್ಟುಬಿಡುತ್ತಾರೆ’ ಎಂಬ ವಾಸ್ತವವು ಒಂದು ಸಮುದಾಯದ ಸ್ಥಿತಿಯನ್ನೂ ಬಿಂಬಿಸುತ್ತದೆ ಎಂಬುದು ಆತಂಕದ ವಿಚಾರ.

ಪ್ರಾಥಮಿಕ ಶಿಕ್ಷಣವನ್ನು ಮಗುವಿನ ಮನೆಭಾಷೆಯಲ್ಲಿ ನೀಡಿದರೆ ಅತ್ಯುತ್ತಮ ಎಂದು ಎಲ್ಲರೂ ಹೇಳುತ್ತೇವೆ. ಆದರೆ, ಈ ನಡುವೆ ಕೆಲವು ವಾಸ್ತವಗಳನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲ. ಉರ್ದುವನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಹೇಳುವುದಾದರೆ, ರಾಜ್ಯದಲ್ಲಿ ಮುಸ್ಲಿಂ ಸಮುದಾಯದವರು ಮನೆಯಲ್ಲಿ ಬಳಸುವ ಮಾತನ್ನು ‘ಉರ್ದು’ ಎನ್ನುತ್ತೇವೆ. ಹೀಗೆಂದ ಕೂಡಲೇ ನೀವು ಸಿನಿಮಾಗಳಲ್ಲಿ ಶಾಯರಿಗಳಲ್ಲಿ ಕೇಳಿಸಿಕೊಳ್ಳಬಹುದಾದ ಉರ್ದು ಎಂದು ಭಾವಿಸಬೇಡಿ. ಅಲ್ಲದೆ ಈ ಮನೆಮಾತಿನ ಉರ್ದು ಭಾಷೆಯು ಕುಟುಂಬ, ಸಮುದಾಯ, ಧಾರ್ಮಿಕ ಆಚರಣೆಗಳಂತಹ ಅಗತ್ಯವನ್ನು ಪೂರೈಸುವಷ್ಟೇ ಸಮರ್ಥವಾಗಿರುತ್ತದೆ. ಆದರೆ, ಉರ್ದು ಮಾಧ್ಯಮದ ಪ್ರಾಥಮಿಕ ಶಿಕ್ಷಣದಲ್ಲಿ, ಪಠ್ಯಪುಸ್ತಕಗಳಲ್ಲಿ ಬಳಕೆಯಾಗುವ ಶಾಲಾ ಉರ್ದು ಈ ಗ್ರಾಮ್ಯ ರೀತಿಯ ಉರ್ದುವಿಗಿಂತ ಬಹಳ ಭಿನ್ನ.

ಉರ್ದು ಭಾಷೆಯ ಇನ್ನೊಂದು ವೈಶಿಷ್ಟ್ಯವೆಂದರೆ ಅದರ ಲಿಪಿ ವ್ಯವಸ್ಥೆ. ಉರ್ದು ಭಾಷೆಯನ್ನು ಪರ್ಶಿಯೋ-ಅರೇಬಿಕ್ ಲಿಪಿಯಲ್ಲಿ ಬಲಗಡೆಯಿಂದ ಎಡಗಡೆಗೆ ಬರೆಯಲಾಗುತ್ತದೆ. ಇದು ಆಲ್ಫಬೆಟಿಕ್ ಲಿಪಿ ವ್ಯವಸ್ಥೆಯಾದ್ದರಿಂದ ಕೇವಲ 36 ಮೂಲಾಕ್ಷರಗಳಿದ್ದರೂ, ಇದನ್ನು ಕಲಿಯುವುದು ಕನ್ನಡಕ್ಕಿಂತ ಕಷ್ಟ. ಇನ್ನು ಇದನ್ನು ಕಲಿಸಲು ಉರ್ದುವಿನಲ್ಲಿ ಶಿಕ್ಷಣ ಪಡೆದ ಶಿಕ್ಷಕರ ಕೊರತೆ, ಒಟ್ಟಾರೆ ಶಿಕ್ಷಕರ ಕೊರತೆ ಇಂಥ ಸಮಸ್ಯೆಗಳಿಂದಾಗಿಯೂ ಉರ್ದು ಮಾಧ್ಯಮದಲ್ಲಿ ಓದುವ ಮಕ್ಕಳು ಉಳಿದವರೊಂದಿಗಿನ ತುಲನೆಯಲ್ಲಿ ಹಿಂದುಳಿಯುತ್ತಾರೆ. ಐದನೇ ತರಗತಿಯವರೆಗೆ ಉರ್ದು ಮಾಧ್ಯಮದಲ್ಲಿ ಓದಿ, ಒಂದು ಭಾಷೆಯಾಗಿ ಕನ್ನಡವನ್ನು ಹಾಗೋ ಹೀಗೋ ಕಲಿತಿದ್ದರೂ ಈ ಮಕ್ಕಳಿಗೆ ಮುಂದೆ ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮಕ್ಕೆ ಹೊರಳಿಕೊಳ್ಳಲು ಹೆಚ್ಚು ಕಷ್ಟವಾಗುತ್ತದೆ.
ಆದರೂ, ಮುಸ್ಲಿಂ ಪೋಷಕರು ತಮ್ಮ ಮಕ್ಕಳನ್ನು ಉರ್ದು ಮಾಧ್ಯಮದ ಶಾಲೆಗೆ ಏಕೆ ಕಳಿಸುತ್ತಾರೆ?

ಭಾರತ ಸಂವಿಧಾನದ ವಿಧಿ 350ಎ, ಭಾಷಾ ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಮಾಡುವುದು ಸರ್ಕಾರದ ಜವಾಬ್ದಾರಿ ಎಂದಿದೆ. ಮಗು ಮನೆಯಲ್ಲಿ ಮೊದಲು ಕರಗತ ಮಾಡಿಕೊಳ್ಳುವ ಭಾಷೆಯೇ ‘ಮಾತೃಭಾಷೆ’. ಆದರೆ, ಶಾಲೆಗಳಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸಿದ ಆದೇಶದ ವಿರುದ್ಧ ಖಾಸಗಿ ಶಾಲಾ ಸಂಸ್ಥೆಗಳು ಸುಪ್ರೀಂ ಕೋರ್ಟ್‌ನಲ್ಲಿ ಹೂಡಿದ ವ್ಯಾಜ್ಯದಲ್ಲಿ, ನ್ಯಾಯಾಲಯವು ಭಾಷಾ ಅಲ್ಪಸಂಖ್ಯಾತರ ಹಿತವನ್ನು ಕಾಪಾಡುವ ನೆಪದಲ್ಲಿ ವಿಧಿ 350 ಎ-ಯನ್ನು ಆಧಾರವಾಗಿಟ್ಟುಕೊಂಡು 2014ರ ಮೇ 6ರಂದು ನೀಡಿದ ಒಂದು ಮಹತ್ವದ ತೀರ್ಪಿನಲ್ಲಿ, ಮಾತೃಭಾಷೆ ಕನ್ನಡವಲ್ಲದ ಮಕ್ಕಳು ತಮ್ಮ ತಮ್ಮ ಮಾತೃಭಾಷೆಯ ಮಾಧ್ಯಮದಲ್ಲಿ ಓದಬಹುದು ಎಂದು ಹೇಳಿತು. ‘ವೈಯಕ್ತಿಕ ಪ್ರಕರಣಗಳಲ್ಲಿ ಮಗುವಿನ ಆ ಭಾಷೆ ಯಾವುದು ಎಂಬುದನ್ನು ಪೋಷಕರು ತೀರ್ಮಾನಿಸುತ್ತಾರೆ’ ಎಂಬ ಮಾತನ್ನೂ ಸೇರಿಸಿತು. ಇದು ವಾಸ್ತವ
ವಾಗಿ ಅನುಕೂಲಕರವಾಗಿ ಪರಿಣಮಿಸಿದ್ದು ಕನ್ನಡೇತರ ಭಾರತೀಯ ಭಾಷಾ ಮಾಧ್ಯಮದ ಶಾಲೆಗಳಿಗಲ್ಲ, ಬದಲಿಗೆ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ನಡೆಸುತ್ತಿರುವ ಶೈಕ್ಷಣಿಕ ವ್ಯಾಪಾರಿಗಳಿಗೆ. ಕನ್ನಡೇತರ ಭಾಷಿಕ ಮಕ್ಕಳಷ್ಟೇ ಅಲ್ಲ, ಕನ್ನಡ ಅಭಿಮಾನದ ಬಗ್ಗೆ ಮೈಯುಬ್ಬಿಸಿಕೊಂಡು ಏರುಧ್ವನಿಯಲ್ಲಿ ಮಾತಾಡುವ ಕನ್ನಡ ಕಲಿಗಳೂ ತಮ್ಮ ಮಕ್ಕಳನ್ನು ಸೇರಿಸುವುದು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ.

ಇವರೆಲ್ಲರೂ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಪೋಷಕರು. ಆದರೆ, ತೀರಾ ಬಡ ಪೋಷಕರಿಗೆ ಈ ತರಹದ ಆಯ್ಕೆಯ ಭಾಗ್ಯವಿರುವುದಿಲ್ಲ. ಅವರು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಗೆ ಕಳಿಸುತ್ತಾರೆ. ಆದರೆ ಉರ್ದು ಮಾಧ್ಯಮ ಶಾಲೆಗಳಿಗೆ ಸೇರುವ ಮಕ್ಕಳ ಸನ್ನಿವೇಶವೇ ಬೇರೆ. ಇರುವ ಶಾಲೆಗಳಲ್ಲಿ ಹಾಜರಾತಿ ಉಳಿಸಿಕೊಳ್ಳಬೇಕು, ಅಲ್ಲಿರುವ ಶಿಕ್ಷಕರಿಗೆ ಕೆಲಸ ಬೇಕು ಎಂಬ ಕಾರಣಕ್ಕೆ, ಬೇರೆಬೇರೆ ಕನ್ನಡ ಮಾಧ್ಯಮ ಶಾಲೆಗಳಿಗೆ ಹೋಗಬಹುದಾಗಿದ್ದ ಮಕ್ಕಳು ಈ ಶಾಲೆಗಳಿಗೆ ಸೇರುತ್ತಾರೆ. ಜೊತೆಗೆ ಉರ್ದು ಎನ್ನುವುದು ಕುರಾನಿನ (ಅರೇಬಿಕ್) ಭಾಷೆಗೆ ಹತ್ತಿರವಾದ್ದರಿಂದ ಅದು ‘ನಮ್ಮ ಭಾಷೆ’ ಎಂಬ ಧಾರ್ಮಿಕ ಭಾವನೆಯೂ ಇಲ್ಲಿ ಕೆಲಸ ಮಾಡುತ್ತದೆ.

ನಮ್ಮ ಮನೆಮಾತು ಉರ್ದು ಆಗಿದ್ದರೂ ನಮ್ಮ ಮಕ್ಕಳು ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ಓದಿದರು. ನಮ್ಮ ಮಕ್ಕಳು, ಮನೆಮಾತು ಉರ್ದುವಿನ ಜೊತೆ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಚೆನ್ನಾಗಿ ಕಲಿತಿದ್ದರು. ಇದರ ಪ್ರಯೋಜನವನ್ನು ಪಡೆಯುವ ಸಲುವಾಗಿಯೇ ಮಾಡಿದ ತಾರ್ಕಿಕ ನಿರ್ಣಯ ಇದಾಗಿತ್ತು. ರಾಜ್ಯದ ಹೆಚ್ಚಿನ ಉರ್ದು ಭಾಷೀಯರು ಸಹಜವಾಗಿಯೇ ಕನ್ನಡದಲ್ಲಿ ಸಮರ್ಥ ದ್ವಿಭಾಷಿಗಳು. ಇದರ ಪ್ರಯೋಜನವನ್ನು ಪಡೆದು ಮುಸ್ಲಿಂ ಮಕ್ಕಳನ್ನೂ ಮೊದಲಿಂದಲೇ ಕನ್ನಡ ಮಾಧ್ಯಮದಲ್ಲಿ ಓದಿಸುವುದು ಹೆಚ್ಚು ಒಳ್ಳೆಯದು. ಉರ್ದುವನ್ನು ಬೇಕಾದರೆ ಒಂದು ಭಾಷೆಯಾಗಿ ಕಲಿಯಬಹುದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page