Thursday, December 12, 2024

ಸತ್ಯ | ನ್ಯಾಯ |ಧರ್ಮ

ಪತಿಗೆ ಕಿರುಕುಳ ನೀಡುವ ಸಾಧನವಾಗಿ ಸೆಕ್ಷನ್ 498 ಎ ದುರುಪಯೋಗ: ಸುಪ್ರೀಂ ಕೋರ್ಟ್ ಕಳವಳ

ಹೊಸದೆಹಲಿ: ಕೆಲವು ವಿವಾಹಿತ ಮಹಿಳೆಯರು ತಮ್ಮ ಸ್ವಾರ್ಥಕ್ಕಾಗಿ ತಮ್ಮ ಪತಿ ಮತ್ತು ಅವರ ಸಂಬಂಧಿಕರಿಗೆ ಕಿರುಕುಳ ನೀಡಲು ಐಪಿಸಿ ಸೆಕ್ಷನ್ 498 ಎ ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.

ಪತ್ನಿಯ ಕಿರುಕುಳ ತಾಳಲಾರದೆ ಬೆಂಗಳೂರಿನ ಐಟಿ ವೃತ್ತಿಪರ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಾಗಲೇ ಸುಪ್ರೀಂ ಕೋರ್ಟ್ ಈ ರೀತಿ ಪ್ರತಿಕ್ರಿಯಿಸಿದೆ. ದಾರಾ ಲಕ್ಷ್ಮೀನಾರಾಯಣ, ಮತ್ತು ಇತರರು vs ತೆಲಂಗಾಣ ರಾಜ್ಯ, ಮತ್ತು ಇನ್ನೊಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್ ತೀವ್ರ ವಿಷಾದವನ್ನು ವ್ಯಕ್ತಪಡಿಸಿದೆ. ‌

ವಿವಾಹಿತ ಮಹಿಳೆಯರ ಮೇಲೆ ಅವರ ಪತಿ ಮತ್ತು ಅವರ ಸಂಬಂಧಿಕರು ಕ್ರೌರ್ಯ ಎಸಗಿದರೆ ಅವರಿಗೆ ಶಿಕ್ಷೆಯಾಗಬೇಕು ಎಂದು ಈ ಸೆಕ್ಷನ್ ಹೇಳುತ್ತದೆ, ಆದರೆ ಈ ಸೆಕ್ಷನ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಕೌಟುಂಬಿಕ ದೌರ್ಜನ್ಯ ಮತ್ತು ಕಿರುಕುಳದಿಂದ ಮಹಿಳೆಯರನ್ನು ರಕ್ಷಿಸುವುದು ಈ ಸೆಕ್ಷನ್ನಿನ ಮೂಲ ಉದ್ದೇಶವೆಂದು ಎಂದು ಹೇಳಲಾಗುತ್ತದೆ, ಆದರೆ ಕೆಲವು ಮಹಿಳೆಯರು ತಮ್ಮ ವಿವೇಚನಾರಹಿತ ಬೇಡಿಕೆಗಳನ್ನು ಈಡೇರಿಸುವಂತೆ ತಮ್ಮ ಪತಿ ಮತ್ತು ಅವರ ಕುಟುಂಬ ಸದಸ್ಯರನ್ನು ಒತ್ತಾಯಿಸಲು ಬಳಸುತ್ತಿದ್ದಾರೆ ಎಂದು ಕೋರ್ಟ್‌ ಹೇಳಿದೆ.

ಪತಿ ಮತ್ತು ಅವರ ಸಂಬಂಧಿಕರ ವಿರುದ್ಧ ವೈಯಕ್ತಿಕ ಗೆಲುವು ಗಳಿಸಲು ಸೆಕ್ಷನ್ 498 ಎ ಅನ್ನು ಸಾಧನವಾಗಿ ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಅದು ಹೇಳಿದೆ. ವಿವಾಹಿತ ದಂಪತಿಗಳು ಕೌಟುಂಬಿಕ ಹಿಂಸಾಚಾರದ ಅಸ್ಪಷ್ಟ ಮತ್ತು ಸಾಮಾನ್ಯ ಆರೋಪಗಳನ್ನು ಮಾಡುತ್ತಿದ್ದಾರೆ, ಅದನ್ನು ಪರಿಶೀಲಿಸದೆ ಬಿಟ್ಟರೆ, ಕಾನೂನು ಪ್ರಕ್ರಿಯೆಗಳ ದುರುಪಯೋಗಕ್ಕೆ ಕಾರಣವಾಗಬಹುದು ಎಂದು ಅದು ಎಚ್ಚರಿಸಿದೆ. ವಸೂಲಿ ಮಾಡಲು ಪತ್ನಿ ಅಥವಾ ಆಕೆಯ ಸಂಬಂಧಿಕರು ಇದನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಕೋರ್ಟ್‌ ಹೇಳಿದೆ.

ಟೆಕ್ಕಿ ಆತ್ಮಹತ್ಯೆಗೆ ಸಾರ್ವಜನಿಕರ ಆಕ್ರೋಶ

ಉತ್ತರ ಪ್ರದೇಶದ ಅತುಲ್ ಸುಭಾಷ್ (34) ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಸೋಮವಾರ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು 24 ಪುಟಗಳ ಆತ್ಮಹತ್ಯೆ ಪತ್ರವನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಮತ್ತು ಇ-ಮೇಲ್ ಮೂಲಕ ಹಲವರಿಗೆ ಹಂಚಿಕೊಂಡಿದ್ದಾರೆ. ಪತ್ನಿ ಹಾಗೂ ಆಕೆಯ ಸಂಬಂಧಿಕರು ತನಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನ ಸಂಬಂಧಿಕರು ಸೇರಿ ಕ್ರೌರ್ಯ, ಕಿರುಕುಳ ನೀಡಿದ್ದಾರೆ ಎಂದು ಪತ್ನಿ ಉತ್ತರ ಪ್ರದೇಶದಲ್ಲಿ ಪ್ರಕರಣ ದಾಖಲಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಈ ಬಗ್ಗೆ ವಿಡಿಯೋ ಮೂಲಕ ವಿವರಣೆಯನ್ನೂ ನೀಡಿದ್ದಾರೆ.

ನಮ್ಮ ದೇಶದಲ್ಲಿ ಪುರುಷರ ಮೇಲೆ ಕಾನೂನುಬದ್ಧ ಕಗ್ಗೊಲೆ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಉತ್ತರ ಪ್ರದೇಶದ ಜೌನ್‌ಪುರ ಕೌಟುಂಬಿಕ ನ್ಯಾಯಾಲಯದಲ್ಲಿ ಮಹಿಳಾ ನ್ಯಾಯಾಧೀಶರು ಲಂಚ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅತುಲ್ ಸುಭಾಷ್ ಗೆ ನ್ಯಾಯ ದೊರಕಿಸಿಕೊಡಬೇಕೆಂಬ ಆಗ್ರಹ ದೇಶಾದ್ಯಂತ ಹೆಚ್ಚುತ್ತಿದೆ.

ಈಗಾಗಲೇ ಈ ವಿಷಯದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page