Friday, December 13, 2024

ಸತ್ಯ | ನ್ಯಾಯ |ಧರ್ಮ

ಪಂಚಮಸಾಲಿ ಮೀಸಲು ಹೋರಾಟ| ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ: ಮುಖ್ಯಮಂತ್ರಿ

ವಿಜಯಪುರ, ಡಿಸೆಂಬರ್ 13: ಕಾನೂನು ಕೈಗೆ ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಜಯಪುರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.

ಪಂಚಮಸಾಲಿ ಸಮುದಾಯದವರು ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಕಲ್ಪಿಸುವಂತೆ ಕೇಳುವುದಕ್ಕೆ, ಚಳವಳಿ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ಶಾಂತಿಯುತವಾಗಿ ಪ್ರತಿಭಟನೆಯಾಗಬೇಕು. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು.

ಮುಖ್ಯಮಂತ್ರಿಗಳು ಹೃದಯಹೀನರು ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿರುವ ಬಗ್ಗೆ ಮಾತನಾಡಿ ಈ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕಾನೂನಿನ ಮುಂದೆ ಎಲ್ಲರೂ ಸಮಾನರು

ಸ್ವಾಮೀಜಿಯಾಗಲಿ, ಯಾರಾದರೂ ಆಗಿರಲಿ.‌ ಎಲ್ಲರಿಗೂ ಕಾನೂನು ಒಂದೇ. ನನಗೂ, ಸ್ವಾಮೀಜಿಗೂ ಎಲ್ಲರಿಗೂ ಒಂದೇ. ಸಂವಿಧಾನದ 14 ನೇ ವಿಧಿಯ ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಕಾನೂನಿನ ಸಮಾನ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ ಎಂದರು.

ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತೇವೆ

ಪ್ರವರ್ಗ 2ಎ ಅಡಿಯಲ್ಲಿರುವ ಸಮುದಾಯಗಳು ಪಂಚಮಸಾಲಿ ಸಮುದಾಯವನ್ನು 2 ಎ ಗೆ ಸೇರಿಸಲು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅವರ ಅಭಿಪ್ರಾಯ ಹೇಳಲು ಅವರಿಗೆ ಸ್ವಾತಂತ್ರ್ಯವಿದೆ. ಸ್ವಾಮೀಜಿಗಳಿಗೂ ಅವರ ಅಭಿಪ್ರಾಯ ತಿಳಿಸಲು ಸ್ವಾತಂತ್ರ್ಯವಿದೆ. ಅಂತಿಮವಾಗಿ ಸಂವಿಧಾನ ಪ್ರಕಾರ ನಡೆದುಕೊಳ್ಳುತ್ತೇವೆ ಎಂದರು.

ಪ್ರತಿಭಟನಾಕಾರರು ಕಲ್ಲು ಹೊಡೆದಿರುವ ಫೋಟೋಗಳಿವೆ

ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ವೇಳೆ ಪಂಚಮಸಾಲಿ ಸಮುದಾಯದ ಜನರ ಮೇಲೆ ಪೊಲೀಸ್ ಕಲ್ಲು ಹೊಡೆದಿದ್ದಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅವರು ಕಲ್ಲು ಹೊಡೆದಿರುವುದು, ಬ್ಯಾರಿಕೇಡ್ ತಳ್ಳಿ ಒಳಗೆ ನುಗ್ಗುವುದರ ಫೋಟೋಗಳನ್ನು ತೋರಿಸುತ್ತೇವೆ. ಸ್ವಾಮೀಜಿಗಳು ರಸ್ತೆಯಲ್ಲಿ ಏಕೆ ಕುಳಿತುಕೊಂಡಿದ್ದಾರೆ? ಪ್ರತಿಭಟನಾಕಾರರು ಕಲ್ಲು ತೂರದಿದ್ದರೆ 20ಕ್ಕೂ ಹೆಚ್ಚು ಪೊಲೀಸರಿಗೆ ಗಾಯ ಹೇಗಾಯಿತು. ಪೊಲೀಸರೇ ಕಲ್ಲು ಎಸೆದುಕೊಂಡಿದ್ದಾರೆಯೇ ? ಎಂದು ಪ್ರಶ್ನಿಸಿದರು. ನಾನು ಹೇಳಿರುವುದಕ್ಕೆ ಸಾಕ್ಷಿಯಿದೆ ಎಂದರು.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮುಂದೆ ಹೋಗಬೇಕು

ಮೀಸಲಾತಿ ಮುಂದೇನು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಪಂಚಮಸಾಲಿ ಸಮಾಜದವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮುಂದೆ ಹೋಗಬೇಕು. ಬಿಜೆಪಿ ಕಾಲದಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗಡೆಯವರ ವರದಿಯಲ್ಲಿ ಈಗಿರುವಂತೆಯೇ ಪ್ರವರ್ಗ 2ಎ 2ಬಿ ಇರಬೇಕು. ಇದಕ್ಕೆ ಹೊಸ ಸೇರ್ಪಡೆಯಾಗಬಾರದು 2ಬಿ ಯಲ್ಲಿರುವ 4% ಮೀಸಲಾತಿಯನ್ನು ರದ್ದು ಮಾಡಬಾರದು ಎಂದು ಹೇಳಿದ್ದಾರೆ.

ಹೋರಾಟಕ್ಕೆ ಬಿಜೆಪಿ ಬೆಂಬಲ

ಬಿಜೆಪಿ ಅವಧಿಯಲ್ಲಿ ಆಗಿದ್ದಕ್ಕೆ ಅಂದು ಪ್ರತಿಭಟನೆ ಏಕಾಗಲಿಲ್ಲ? ಈಗ ಅದೇ ಬಿಜೆಪಿಯವರು ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಮುಸಲ್ಮಾನರಿಗೆ ಇದ್ದ ಶೇ.4 ರ ಮೀಸಲಾತಿಯನ್ನು ರದ್ದುಮಾಡಿ 3ಎ ಒಕ್ಕಲಿಗರಿಗೆ 2% ಮತ್ತು 3ಬಿ ಪ್ರವರ್ಗಗಳಿಗೆ ಲಿಂಗಾಯತರಿಗೆ 2% ಮೀಸಲಾತಿ ನೀಡಿದರು. ಇದನ್ನು ಪ್ರಶ್ನಿಸಿ ಮುಸಲ್ಮಾನರಾದ ರಸೂಲ್ ಎಂಬ ವ್ಯಕ್ತಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವೇಳೆ ಹಿಂದಿನ ಬಿಜೆಪಿ ಸರ್ಕಾರವೇ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದನ್ನು ಸಿಎಂ ಉಲ್ಲೇಖಿಸಿದರು.

ಸಂಧಾನಕ್ಕೆ ಸಚಿವರನ್ನು ಕಳುಹಿಸಲಾಗಿತ್ತು

ಪಂಚಮಸಾಲಿ ಹೋರಾಟವನ್ನು ಟ್ರ್ಯಾಕ್ಟರ್ ತರುವ ಮೂಲಕ ಮಾಡುತ್ತೇವೆ ಎಂದು ಮೊದಲೇ ತಿಳಿಸಿದ್ದರು. ನ್ಯಾಯಾಲಯ ಹೋರಾಟವನ್ನು ಶಾಂತಿಯುತವಾಗಿ , ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆಸಲು ಸೂಚನೆ ನೀಡಿತ್ತು. ಆದರೆ ಹೋರಾಟಗಾರರು ಕಾನೂನನ್ನು ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸಿದರು. ಸ್ಥಳಕ್ಕೆ ಮಹದೇವಪ್ಪ ಸೇರಿದಂತೆ ಮೂರು ಸಚಿವರನ್ನು ಕಳುಹಿಸಲಾಗಿತ್ತು ಎಂದು ಮುಖ್ಯಮಂತ್ರಿಗಳು ವಿವರಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page