Saturday, December 14, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್ ಪಕ್ಷದಿಂದ ದೇಶಕ್ಕೆ ಆಗಿರುವ ಹಾನಿ ಅಷ್ಟಿಷ್ಟಲ್ಲ: ಪ್ರಧಾನಿ ಮೋದಿ

ದೆಹಲಿ: ಭಾರತದ ಸಂವಿಧಾನ ಹಲವು ದೇಶಗಳಿಗೆ ಸ್ಫೂರ್ತಿ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನಮ್ಮ ಸಂವಿಧಾನವನ್ನು ಅನೇಕ ಮಹಾನ್ ವ್ಯಕ್ತಿಗಳು ಒಟ್ಟಾಗಿ ಬರೆದಿದ್ದಾರೆ ಎಂದು ಹೇಳಿದರು.

ಸಂವಿಧಾನ ಅಂಗೀಕರಿಸಿ 75 ವರ್ಷಗಳಾದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಮೋದಿ ಮಾತನಾಡಿದರು. ಪ್ರಜಾಪ್ರಭುತ್ವದ ಹಬ್ಬವನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತಿದ್ದು, ಇದು ದೇಶದ ಹೆಮ್ಮೆಯ ಕ್ಷಣಗಳಾಗಿವೆ ಎಂದರು. ಕಾಂಗ್ರೆಸ್ ಸರಕಾರ ಹಲವು ರೀತಿಯಲ್ಲಿ ಸಂವಿಧಾನವನ್ನು ಕೊಲ್ಲಲು ಯತ್ನಿಸುತ್ತಿದೆ ಎಂದು ಟೀಕಿಸಿದರು.

‘‘ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಪಾರ. ಆದಿವಾಸಿ ಮಹಿಳೆಯೊಬ್ಬರು ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯನ್ನು ಗೌರವಿಸಬೇಕು. ನಮ್ಮ ಸಂವಿಧಾನ ಎಲ್ಲ ರೀತಿಯಲ್ಲೂ ಮಹಿಳೆಯರಿಗೆ ಬೆಂಬಲ ನೀಡಿದೆ. ಪ್ರತಿಯೊಬ್ಬರೂ ದೇಶ ಅಭಿವೃದ್ಧಿ ಹೊಂದಬೇಕು ಎಂದು ಬಯಸುತ್ತಾರೆ. ಈ ದೇಶವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡಬೇಕು. ಜನರಲ್ಲಿ ಒಗ್ಗಟ್ಟು ದೇಶದ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಶ್ರೇಷ್ಠ ನೀತಿ. ಸ್ವಾತಂತ್ರ್ಯಾನಂತರ ನಾವು ಸ್ವಾರ್ಥಿಗಳಿಂದ ಅನೇಕ ಸಂಕಷ್ಟಗಳನ್ನು ಎದುರಿಸಿದ್ದೇವೆ. ಗುಲಾಮ ಮನಸ್ಥಿತಿಯ ಜನರು ದೇಶದ ಅಭಿವೃದ್ಧಿಗೆ ಅಡ್ಡಿಯಾಗಿದ್ದಾರೆ. ದೇಶದ ಏಕತೆಗೆ ಧಕ್ಕೆ ತರಲು ಕೆಲವರು ವಿಷಬೀಜ ನೆಟ್ಟಿದ್ದಾರೆ” ಎಂದು ಮೋದಿ ಹೇಳಿದರು.

ಬಡವರು ಉದ್ಯೋಗ ಅರಸಿ ಹಲವೆಡೆ ಅಲೆಯುತ್ತಿದ್ದು, ಬಡವರಿಗೆ ಯಾವುದೇ ತೊಂದರೆಯಾಗದಂತೆ ಒಂದೇ ರಾಷ್ಟ್ರ, ಒಂದೇ ಪಡಿತರ ಚೀಟಿ ವ್ಯವಸ್ಥೆ ತಂದಿದ್ದೇವೆ ಎಂದರು. “ಬಡವರು ಎಲ್ಲೇ ಇದ್ದರೂ ಸುಲಭವಾಗಿ ಪಡಿತರ ತೆಗೆದುಕೊಳ್ಳಬೇಕು. ನಾವು ಆಯುಷ್ಮಾನ್ ಕಾರ್ಡ್ ಮೂಲಕ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದೇವೆ. ದೇಶವನ್ನು ಡಿಜಿಟಲ್ ಇಂಡಿಯಾದತ್ತ ಮುನ್ನಡೆಸುತ್ತಿದ್ದೇವೆ. ನಮ್ಮ ಸಂವಿಧಾನ ಎಲ್ಲ ಭಾಷೆಗಳನ್ನೂ ಗೌರವಿಸಿದೆ. ರಾಜ್ಯಗಳ ಮಾತೃಭಾಷೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾತೃಭಾಷೆಯಲ್ಲಿ ಓದುವ ಮಕ್ಕಳಲ್ಲಿ ಸಮಗ್ರ ಅಭಿವೃದ್ಧಿ ಸಾಧ್ಯ” ಎಂದರು.

ಕಾಂಗ್ರೆಸ್‌ನಿಂದ ಆಗಿರುವ ಹಾನಿ ಅಷ್ಟಿಷ್ಟಲ್ಲ

ನಮ್ಮ ಸಂವಿಧಾನದ ಘನತೆಗೆ ಧಕ್ಕೆ ತರಲು ಮತ್ತು ಸಂವಿಧಾನ ರಚನೆಕಾರರ ಪ್ರಯತ್ನಕ್ಕೆ ಧಕ್ಕೆ ತರಲು ಕಾಂಗ್ರೆಸ್ ಪ್ರಯತ್ನಿಸಿದೆ. ಆ ಪಕ್ಷಕ್ಕೆ ವಿವಿಧತೆಯಲ್ಲಿ ಏಕತೆ ಎಂಬ ಪರಿಕಲ್ಪನೆ ಅರ್ಥವಾಗುತ್ತಿಲ್ಲ. ನಮಗೆ ಸಂವಿಧಾನದ ಶಕ್ತಿ ಮತ್ತು ಜನರ ಆಶೀರ್ವಾದವಿದೆ. ಜನ ನಮ್ಮ ಆಡಳಿತ ನೋಡಿ ಮೂರು ಬಾರಿ ಅಧಿಕಾರ ಕೊಟ್ಟಿದ್ದಾರೆ. ಜನರು ಎಷ್ಟೇ ಕಷ್ಟ ಬಂದರೂ ಸಂವಿಧಾನದ ರಕ್ಷಣೆಗೆ ನಿಂತರು. ದೇಶವನ್ನು 55 ವರ್ಷಗಳ ಕಾಲ ಒಂದೇ ಕುಟುಂಬದವರು ಆಳಿದರು. ಆ ಕುಟುಂಬ ಈ ದೇಶಕ್ಕೆ ಹಲವು ರೀತಿಯಲ್ಲಿ ಹಾನಿ ಮಾಡಿದೆ. 1947 ರಿಂದ 1952 ರವರೆಗೆ ನಮ್ಮಲ್ಲಿ ಚುನಾಯಿತ ಸರ್ಕಾರ ಇರಲಿಲ್ಲ. ಆ ಕಾಲದಲ್ಲಿ ಆ ಕುಟುಂಬ ಈ ದೇಶಕ್ಕೆ ಮಾಡಿದ ಹಾನಿ ಒಂದೆರಡಲ್ಲ. ಅವರು ಹಲವು ರೀತಿಯಲ್ಲಿ ಸಂವಿಧಾನವನ್ನು ಕೊಲ್ಲಲು ಪ್ರಯತ್ನಿಸಿದರು. ನೆಹರೂ ಅವರು ರಾಜ್ಯಗಳ ಸಿಎಂಗಳಿಗೆ ಸಂವಿಧಾನ ಬದಲಾವಣೆ ಕುರಿತು ಪತ್ರ ಬರೆದರು. ಬಾಬು ರಾಜೇಂದ್ರ ಪ್ರಸಾದ್ ಕೂಡ ತಪ್ಪು ಮಾಡುತ್ತಿದ್ದಾರೆ ಎಂದರು. ನೆಹರೂ ಅನೇಕ ಹಿರಿಯರ ಸಲಹೆಯನ್ನು ಕೇಳಲಿಲ್ಲ. ಸಂವಿಧಾನದ ಆಶಯಕ್ಕೆ ಧಕ್ಕೆ ತರಲು ಹಲವು ಪ್ರಯತ್ನಗಳು ನಡೆದಿವೆ ಎಂದು ಮೋದಿ ಹೇಳಿದರು.

ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು

ಅಂದಿನ ಕಾಂಗ್ರೆಸ್ ನಾಯಕರು 75 ಬಾರಿ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದರು. ತುರ್ತು ಪರಿಸ್ಥಿತಿ ಹೇರಿ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಸಾವಿರಾರು ಜನರನ್ನು ಜೈಲಿಗೆ ಕಳುಹಿಸಲಾಯಿತು. ನ್ಯಾಯಾಲಯಗಳ ಬಾಯಿ ಮತ್ತು ಪತ್ರಿಕೆಗಳ ಕತ್ತು ಹಿಸುಕಲಾಯಿತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಬಡ್ತಿಯನ್ನೂ ತಡೆಹಿಡಿಯಲಾಗಿತ್ತು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಲವು ಷಡ್ಯಂತ್ರಗಳನ್ನು ರೂಪಿಸಲಾಗಿದೆ. ನೆಹರೂ, ಇಂದಿರಾ ಮತ್ತು ರಾಜೀವ್ ಎಲ್ಲರೂ ಸಂವಿಧಾನದ ಆಶಯಕ್ಕೆ ಧಕ್ಕೆ ತಂದರು. ಪಕ್ಷದ ಅಧ್ಯಕ್ಷರೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು. ಇದು ಕಾಂಗ್ರೆಸ್ ಆಡಳಿತಕ್ಕೆ ಸಾಕ್ಷಿ’’ ಎಂದು ಮೋದಿ ಟೀಕಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page