Monday, December 16, 2024

ಸತ್ಯ | ನ್ಯಾಯ |ಧರ್ಮ

ಮಧ್ಯಪ್ರದೇಶ: ಇಡಿ ದಾಳಿಯ ನಂತರ ಉದ್ಯಮಿ ದಂಪತಿಯ ಆತ್ಮಹತ್ಯೆ

ನವದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ತಮ್ಮ ಕಚೇರಿ ಮೇಲೆ ದಾಳಿ ನಡೆಸಿದ ಎಂಟು ದಿನಗಳ ನಂತರ, ಮಧ್ಯಪ್ರದೇಶದ ಉದ್ಯಮಿ ಮನೋಜ್ ಪರ್ಮಾರ್ ಮತ್ತು ಅವರ ಪತ್ನಿ ನೇಹಾ ಪರ್ಮಾರ್ ಡಿಸೆಂಬರ್ 13, ಶುಕ್ರವಾರ ಬೆಳಿಗ್ಗೆ ಸೆಹೋರ್ ಜಿಲ್ಲೆಯ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿರುವ ಕಾರಣ ತಮ್ಮನ್ನು ಗುರಿಯಾಗಿಸಿದ್ದಾರೆ ಎಂದು ತಮ್ಮ ಆತ್ಮಹತ್ಯೆ ಪತ್ರದಲ್ಲಿ ದಂಪತಿ ಬರೆದಿದ್ದಾರೆ ಮತ್ತು ತಮ್ಮ ಮೂವರು ಮಕ್ಕಳನ್ನು ನೋಡಿಕೊಳ್ಳುವಂತೆ ಪಕ್ಷಕ್ಕೆ ವಿನಂತಿಸಿದ್ದಾರೆ.

ಈ ಬಗ್ಗೆ ಇಡಿ ಶನಿವಾರ ಹೇಳಿಕೆ ನೀಡಿದ್ದು, ಈ ಎರಡು ಆತ್ಮಹತ್ಯೆಯಲ್ಲಿ ತಮ್ಮ ಪಾತ್ರವಿಲ್ಲ, ಮನೋಜ್ ಓರ್ವ “ಸಾಮಾನ್ಯ ಅಪರಾಧಿ” ಎಂದು ತನ್ನ ಮೇಲಿನ ಆರೋಪವನ್ನು ನಿರಾಕರಿಸಿದೆ.

ಅದೇ ದಿನ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಉದ್ಯಮಿ ದಂಪತಿಯ ಮಕ್ಕಳೊಂದಿಗೆ ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ ಅವರ ಸೆಲ್‌ಫೋನ್ ಮೂಲಕ ಮಾತನಾಡಿದರು.

“ನಮ್ಮನ್ನು ಬಿಜೆಪಿಗೆ [ಭಾರತೀಯ ಜನತಾ ಪಕ್ಷ] ಸೇರುವಂತೆ ನನ್ನ ತಂದೆಗೆ ಒತ್ತಡ ಹೇರಲಾಗುತ್ತಿತ್ತು, ಆದರೆ ಅವರು ಅದನ್ನು ಮಾಡುವ ಬದಲು ತಮ್ಮ ಜೀವವನ್ನೇ ತೆಗೆದುಕೊಂಡರು. ಬಿಜೆಪಿ ಸೇರಲು ಇಡಿ ಅವರ ಮೇಲೆ ನಿರಂತರ ಒತ್ತಡ ಹೇರಿತ್ತು,” ಎಂದು ಹಿರಿಯ ಪುತ್ರ ಜತಿನ್ ಪರ್ಮಾರ್ ರಾಹುಲ್‌ ಗಾಂಧಿಗೆ ತಿಳಿಸಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ .

ದಂಪತಿಯ ಏಕೈಕ ಪುತ್ರಿ ಜಿಯಾ ಪರ್ಮಾರ್ ಅವರು ಗಾಂಧಿಯೊಂದಿಗೆ ದೂರವಾಣಿಯಲ್ಲಿ ಮಾತನಾಡುವಾಗ ಕಣ್ಣೀರಿಟ್ಟರು. “ನಮ್ಮ ಹೆತ್ತವರನ್ನು ಕಳೆದುಕೊಂಡ ನಂತರ, ನೀವು ನಮ್ಮ ಏಕೈಕ ಭರವಸೆ. ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ನಾವು ನಿಮ್ಮನ್ನು ಭೇಟಿ ಮಾಡಿದ್ದೆವು ಮತ್ತು ಆಗ ಏನನ್ನೂ ಕೇಳಲಿಲ್ಲ, ಆದರೆ ಈಗ ನೀವು ನಮ್ಮನ್ನು ಭೇಟಿ ಮಾಡಬೇಕೆಂದು ನಾವು ಬಯಸುತ್ತೇವೆ,” ಎಂದು ರಾಹುಲ್‌ ಗಾಂಧಿಯವರಲ್ಲಿ ಕೋರಿದ್ದಾರೆ.

ಕಿರಿಯ 12 ವರ್ಷದ ಯಶ್ ಪರ್ಮಾರ್ ಸೇರಿದಂತೆ ಮೂವರು ಮಕ್ಕಳಿಗೆ ತಮ್ಮ ಮತ್ತು ಕಾಂಗ್ರೆಸ್ ಪಕ್ಷ ಬೆಂಬಲವನ್ನು ನೀಡುವುದಾಗಿ ರಾಹುಲ್ ಗಾಂಧಿಯವರು ಭರವಸೆ ನೀಡಿದರು. ಅವರು ದುರಂತದ ಬಗ್ಗೆಯೂ ವಿಚಾರಿಸಿದರು. ಮರಣಾನಂತರದ ಸಂಸ್ಕಾರಗಳು ಯಾವಾಗ ಮುಗಿಯುತ್ತದೆ ಎಂದು ಗಾಂಧಿಯವರು ಪಟ್ವಾರಿಯವರನ್ನು ಕೇಳಿದರು. ವೀಡಿಯೋವೊಂದರಲ್ಲಿ, ಪಟ್ವಾರಿ ಅವರು ಸೆಹೋರ್ ಜಿಲ್ಲೆಯ ಅಷ್ಟಾ ಪಟ್ಟಣಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದರೆ ಮಕ್ಕಳನ್ನು ದೆಹಲಿಗೆ ಕರೆತರುವುದಾಗಿ ಗಾಂಧಿಗೆ ಹೇಳುತ್ತಿರುವುದು ಕಂಡುಬಂದಿದೆ.

ಡಿಸೆಂಬರ್ 5 ರಂದು, ಇಡಿಯ ಭೋಪಾಲ್ ವಲಯ ಕಚೇರಿಯು ಸೆಹೋರ್ ಮತ್ತು ಇಂದೋರ್‌ನಲ್ಲಿ ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಿತು, ಅದರ ತನಿಖೆಯ ಭಾಗವಾಗಿ ಮನೋಜ್ ಮತ್ತು ಇತರರ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ), 2002 ರ ಅಡಿಯಲ್ಲಿ ಕೇಸ್‌ ದಾಖಲಿಸಿತು.

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಅಧಿಕಾರಿಯೊಬ್ಬರ ನೆರವಿನೊಂದಿಗೆ ಮನೋಜ್ ಅವರು ಪ್ರಧಾನ ಮಂತ್ರಿ ಉದ್ಯೋಗ, ಜನರೇಷನ್ ಪ್ರೋಗ್ರಾಂ ಮತ್ತು ಮುಖ್ಯಮಂತ್ರಿ ಯುವ ಉದ್ಯಮಿ ಯೋಜನೆ ಅಡಿಯಲ್ಲಿ 6 ಕೋಟಿ ರೂಪಾಯಿ ಸಾಲವನ್ನು ವಂಚಿಸಿದ್ದಾರೆ ಎಂದು ಆರೋಪಿಸಿ ಡಿಸೆಂಬರ್ 2017 ರಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ದಾಖಲಿಸಿದ ಎಫ್‌ಐಆರ್‌ನಿಂದ ಈ ಪ್ರಕರಣವು ಹುಟ್ಟಿಕೊಂಡಿದೆ. ಎಫ್‌ಐಆರ್ ರದ್ದುಗೊಳಿಸುವಂತೆ ಪರ್ಮಾರ್ ನ್ಯಾಯಾಲಯದ ಮೊರೆ ಹೋಗಿದ್ದರು, ಆದರೆ ಎರಡು ವರ್ಷಗಳ ಹಿಂದೆ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ ಎಂದು ವರದಿಯಾಗಿದೆ.

ಡಿಸೆಂಬರ್ 7 ರಂದು ಪತ್ರಿಕಾ ಪ್ರಕಟಣೆಯಲ್ಲಿ, ಆಪಾದಿತ ಬ್ಯಾಂಕ್ ವಂಚನೆಯ ಯೋಜನೆಯ ಫಲಾನುಭವಿಗಳಾಗಿರುವ ಪ್ರಮುಖ ವ್ಯಕ್ತಿಗಳ ನಿವಾಸಗಳನ್ನು ಶೋಧ ನಡೆಸಿರುವುದಾಗಿ ಇಡಿ ಹೇಳಿದೆ. 3.5 ಲಕ್ಷ ರೂಪಾಯಿಗಳನ್ನು ಒಳಗೊಂಡಿರುವ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡುವುದರೊಂದಿಗೆ “ವಿವಿಧ ದೋಷಾರೋಪಣೆಯ ದಾಖಲೆಗಳು ಮತ್ತು ಸ್ಥಿರ ಮತ್ತು ಚರ ಆಸ್ತಿಗಳ ವಿವರಗಳನ್ನು” ವಶಪಡಿಸಿಕೊಂಡಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಮನೋಜ್ ಅವರ ವಿರುದ್ಧ ಹಲವಾರು ಇತರ ಕ್ರಿಮಿನಲ್ ಮೊಕದ್ದಮೆಗಳಿದ್ದು ಅವರೊಬ್ಬ “ಸಾಮಾನ್ಯ ಅಪರಾಧಿ” ಎಂದು ಇಡಿ ಹೇಳಿದೆ.

ಡಿಸೆಂಬರ್ 9 ಮತ್ತು 10 ರಂದು ತಮ್ಮ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ದಂಪತಿಗೆ ಸಮನ್ಸ್ ನೀಡಲಾಗಿತ್ತು, ಆದರೆ ಅವರು ಹಾಜರಾಗಲು ವಿಫಲರಾಗಿದ್ದಾರೆ ಎಂದು ಇಡಿ ಹೇಳಿಕೊಂಡಿದೆ. ಬದಲಾಗಿ, ಅವರ ಸೋದರಳಿಯ ಸಮನ್ಸ್ ಮುಂದೂಡಲು ವಿನಂತಿಸಿದರು, ಡಿಸೆಂಬರ್ 12 ಕ್ಕೆ ಮತ್ತೆ ಸಮನ್ಸ್ ನೀಡಲಾಯಿತು. ಮನೋಜ್ ಅವರು ಆ ದಿನ ಹಾಜರಾಗುವುದಾಗಿ ದೃಢಪಡಿಸಿದ್ದರು, ಆದರೆ ಹಾಜರಾಗಲು ಮತ್ತೆ ವಿಫಲರಾದರು, ಆಮೇಲೆ ದಂಪತಿಯೊಂದಿಗೆ ಯಾವುದೇ ಹೆಚ್ಚಿನ ಸಂಪರ್ಕವನ್ನು ಮಾಡಲಾಗಿಲ್ಲ ಎಂದು ಇಡಿ ತನ್ನ ಹೇಳಿಕೆಯಲ್ಲಿ ಹೇಳಿದೆ.

ದಂಪತಿಗಳು ತಮ್ಮ ಮೂವರು ಮಕ್ಕಳೊಂದಿಗೆ ಡಿಸೆಂಬರ್ 12, ಗುರುವಾರ ಸುಸ್ನರ್‌ನಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ತಡರಾತ್ರಿ ಸೆಹೋರ್ ಜಿಲ್ಲೆಯ ತಮ್ಮ ನಿವಾಸಕ್ಕೆ ಮರಳಿದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ . ಮಕ್ಕಳು ಮಲಗಲು ಹೋದ ನಂತರ, ದಂಪತಿಗಳು ತಮ್ಮ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಶುಕ್ರವಾರ ಬೆಳಗ್ಗೆ ನಿದ್ದೆಯಿಂದ ಏಳದಿದ್ದ ಇವರನ್ನು ನೋಡಲು ಅವರ ಹಿರಿಯ ಮಗ ಹೋದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ದಾಳಿಯ ವೇಳೆ ಇಡಿ ಅಧಿಕಾರಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮನೋಜ್ ಐದು ಪುಟಗಳ ಡೆತ್‌ ನೋಟ್ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ. ಅಧಿಕಾರಿಗಳು ಅವರ ಮನೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಫೋಟೋ ನೋಡಿದ್ದಾರೆ, ಇದು ದಾಳಿಗೆ ಕಾರಣ ಎಂದು ಹೇಳಿರುವುದನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಟೈಪ್ ಮಾಡಲಾದ ಮತ್ತು ಮುದ್ರಿತ ಸೂಸೈಡ್ ನೋಟ್ ಭಾರತದ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ನಾಯಕರನ್ನು ಉದ್ದೇಶಿಸಿ ಬರೆಯಲಾಗಿದೆ.

ಮನೋಜ್‌ ಅವರು ರಾಹುಲ್ ಗಾಂಧಿಯನ್ನು ಉದ್ದೇಶಿಸಿ, “ನಿಮ್ಮನ್ನು ಸೇರಿ ಮತ್ತು ಕಾಂಗ್ರೆಸ್‌ಗಾಗಿ ಕೆಲಸ ಮಾಡಿರುವುದೇ” ಇಡಿ ಅವರಿಗೆ ಕಿರುಕುಳ ನೀಡಲು ಕಾರಣ ಎಂದು ಹೇಳಿದ್ದಾರೆ.

“ನನ್ನ ಸಾವಿನ ನಂತರ, ಈ ಮಕ್ಕಳ ಜವಾಬ್ದಾರಿ ನಿಮ್ಮದು ಮತ್ತು ಕಾಂಗ್ರೆಸ್‌ನದು, ಆದ್ದರಿಂದ ಪಕ್ಷವು ತನ್ನ ಕಾರ್ಯಕರ್ತರೊಂದಿಗೆ ನಿಲ್ಲುತ್ತದೆ ಎಂಬ ಸಂದೇಶವು ಹೊರಬೀಳುತ್ತದೆ” ಎಂದು ಅವರು ಬರೆದಿದ್ದಾರೆ.

‘ಕಾಂಗ್ರೆಸ್ ಸಾರ್ವಜನಿಕರ ಪಕ್ಷ. ನಾವು ಅವರನ್ನು ನೋಡಿಕೊಳ್ಳುತ್ತೇವೆ” ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಮುಖ್ಯಸ್ಥ ಪಟ್ವಾರಿ ಪಿಟಿಐಗೆ ತಿಳಿಸಿದರು. ಪರ್ಮಾರ್ ದಂಪತಿಯ ಸಾವು ಆತ್ಮಹತ್ಯೆಯಲ್ಲ, ಆದರೆ ರಾಜ್ಯ ಪ್ರಾಯೋಜಿತ ಕೊಲೆ ಎಂದು ಆರೋಪಿಸಿದ ಅವರು, ವ್ಯಕ್ತಿಗಳಿಗೆ ಕಿರುಕುಳ ನೀಡಲು ಮತ್ತು ಅವರನ್ನು ಬಿಜೆಪಿಗೆ ಸೇರುವಂತೆ ಒತ್ತಾಯಿಸಲು ಇಡಿಯನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದುಅವರು ಆರೋಪಿಸಿದರು.

ಕಾಂಗ್ರೆಸ್ ಹಿರಿಯ ನಾಯಕರಾದ ದಿಗ್ವಿಜಯ ಸಿಂಗ್ ಮತ್ತು ಕಮಲ್ ನಾಥ್ ಅವರು ಮನೋಜ್ ಮತ್ತು ಅವರ ಪತ್ನಿಯ ಸಾವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇದನ್ನು ರಾಜಕೀಯ ಕಿರುಕುಳ ಆರೋಪಿಸಿದ್ದಾರೆ. ಸಿಂಗ್ ಶುಕ್ರವಾರ X ನಲ್ಲಿ ಪೋಸ್ಟ್ ಮಾಡಿದ್ದು, ತಾವು ದಂಪತಿಗಳಿಗೆ ವಕೀಲರನ್ನು ವ್ಯವಸ್ಥೆಗೊಳಿಸಿದ್ದರು, ಆದರೆ ಅವರು “ತುಂಬಾ ಭಯಪಟ್ಟರು” ಅವರು “ಆತ್ಮಹತ್ಯೆ ಮಾಡಿಕೊಂಡರು” ಎಂದು ಬರೆದುಕೊಂಡಿದ್ದಾರೆ

ಶನಿವಾರದ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಬಿಜೆಪಿ ಸರ್ಕಾರ ಮತ್ತು ಇಡಿ ಅಧಿಕಾರಿಗಳ ಕಿರುಕುಳದಿಂದ ಮನೋಜ್ ತಮ್ಮ ಪತ್ನಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ .

ಕಮಲ್ ನಾಥ್ , “ಪರ್ಮಾರ್ ದಂಪತಿಗಳು ಮಾಡಿದ ಏಕೈಕ ತಪ್ಪು ಎಂದರೆ ಅವರ ಮಕ್ಕಳು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಶ್ರೀ ರಾಹುಲ್ ಗಾಂಧಿಗೆ ಪಿಗ್ಗಿ ಬ್ಯಾಂಕ್ ಅನ್ನು ಉಡುಗೊರೆಯಾಗಿ ನೀಡುವಂತೆ ಮಾಡಿದ್ದು,” ಎಂದು ಬರೆದಿದ್ದಾರೆ.

ಬಿಜೆಪಿ ವಕ್ತಾರ ಆಶಿಶ್ ಅಗರ್ವಾಲ್ ಪ್ರತಿಕ್ರಿಯಿಸಿ, “ಸಾವಿನ ಮೇಲೆ ರಾಜಕೀಯ ಮಾಡುವುದು ಕಾಂಗ್ರೆಸ್ಸಿಗರ ರಣಹದ್ದಿನಂತ ಹಳೆಯ ಚಾಳಿ. ಅದು ತನ್ನ ವೈಯಕ್ತಿಕ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ,” ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page