Thursday, December 19, 2024

ಸತ್ಯ | ನ್ಯಾಯ |ಧರ್ಮ

ಮುಂಬಯಿ ದೋಣಿ ಢಿಕ್ಕಿ; 13 ಸಾವು: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ

ಗೇಟ್‌ವೇ ಆಫ್ ಇಂಡಿಯಾ ಬಳಿ ಪ್ರಯಾಣಿಕರಿದ್ದ ದೋಣಿಗೆ ಸ್ಪೀಡ್‌ಬೋಟ್ ಡಿಕ್ಕಿ ಹೊಡೆದು 13 ಮಂದಿ ಪ್ರಯಾಣಿಕರು ಮೃತಪಟ್ಟ ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ದುರ್ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಂಬೈನಲ್ಲಿ ದೋಣಿ ಅಪಘಾತದಲ್ಲಿ ಸಾವನ್ನಪ್ಪಿದ ಪ್ರತಿಯೊಬ್ಬರ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಗಳ ಪರಿಹಾರವನ್ನು ಪ್ರಧಾನಿ ಘೋಷಿಸಿದ್ದಾರೆ. ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರು ಸಿಎಂ ದೇವೇಂದ್ರ ಫಡ್ನವೀಸ್ ಅವರು, ‘ಮುಂಬಯಿ ಬಳಿ ಬುಚರ್ ಐಲ್ಯಾಂಡ್‌ನಲ್ಲಿ ಮಧ್ಯಾಹ್ನ 3.55ರ ವೇಳೆಗೆ ನೌಕಾಪಡೆಯ ಬೋಟ್ ‘ನೀಲ್‌ಕಮಲ್’ ಹೆಸರಿನ ದೋಣಿಗೆ ಡಿಕ್ಕಿ ಹೊಡದು ಅವಘಡ ಸಂಭವಿಸಿದೆ. ಸಂಜೆ 7.30ರ ಮಾಹಿತಿ ಪ್ರಕಾರ 101 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. 10 ಮಂದಿ ಪ್ರಯಾಣಿಕರು ಹಾಗೂ 3 ಮಂದಿ ನೌಕಾಪಡೆಯ ಸಿಬ್ಬಂದಿ ಸೇರಿ ಒಟ್ಟು ದುರಂತದಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಶೋಧಕಾರ್ಯ ಮುಂದುವರಿದಿದೆ. ನಾಪತ್ತೆಯಾದವರ ಹೆಚ್ಚಿನ ವಿವರ ನಾಳೆ ಬೆಳಗ್ಗೆ ಲಭ್ಯವಾಗಲಿದೆ’ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಮೃತರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಮಧ್ಯಾಹ್ನ ಮುಂಬೈ ಬಂದರಿನಲ್ಲಿ ಇಂಜಿನ್ ಟ್ರಯಲ್ಸ್ ನಡೆಸುತ್ತಿದ್ದಾಗ, ನೌಕಾಪಡೆಯ ಸ್ಪೀಡ್ ಬೋಟ್ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಪ್ರಯಾಣಿಕರು ಸಂಚರಿಸುತ್ತಿದ್ದ ದೋಣಿಗೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ನೌಕಾಪಡೆ ತಿಳಿಸಿದೆ.

ನೌಕಾ ಪಡೆಯ 11 ದೋಣಿಗಳು, ಕರಾವಳಿ ಪೊಲೀಸರ ಮೂರು ದೋಣಿಗಳು ಹಾಗೂ ಕರಾವಳಿ ಭದ್ರತಾ ಪಡೆಯ ಒಂದು ಹಡಗನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಹೆಚ್ಚುವರಿಯಾಗಿ 4 ಹೆಲಿಕಾಪ್ಟರ್‌ಗಳು, ಸ್ಥಳೀಯ ಮೀನುಗಾರರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಕ್ಷಿಸಿರುವ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಹಲವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ತಿಳಿಸಿವೆ.

ಈ ನಡುವೆ ದೋಣಿಯಲ್ಲಿ ಸಿಬ್ಬಂದಿ ಸೇರಿ 90ಕ್ಕೂ ಹೆಚ್ಚು ಜನರಿದ್ದರು ಎಂದು ಮುಂಬಯಿ ಮುನ್ಸಿಪಲ್ ಕಾರ್ಪೋರೇಷನ್ ತಿಳಿಸಿದೆ.

ಇನ್ನು ನೌಕಾಪಡೆಯ ಸ್ಪೀಡ್‌ ಬೋಟ್‌ ವೇಗವಾಗಿ ಬಂದು ದೋಣಿಗೆ ಡಿಕ್ಕಿಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ. ದೋಣಿಯಲ್ಲಿದ್ದ ಬಹುತೇಕರು ಲೈಫ್ ಜ್ಯಾಕೆಟ್ ಧರಿಸಿದ್ದರಿಂದ, ಸಾವಿನ ದವಡೆಯಿಂದ ಪಾರಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page