Thursday, December 19, 2024

ಸತ್ಯ | ನ್ಯಾಯ |ಧರ್ಮ

ಡಾ.ಅಂಬೇಡ್ಕರ್ ಎಂಬ ಡಿಮ್ಯಾಂಡು!

ಎಂಭತ್ತರ ದಶಕದ ನಂತರದಲ್ಲಿ ಯಾವಾಗ ಬಾಬಾಸಾಹೇಬರ ಪುಸ್ತಕಗಳು ಹೆಚ್ಚು ಜನರಿಗೆ ತಲುಪುತ್ತಾ ಬಂದವೋ ಆಗ ಮೊದಲಿಗೆ ಬೆತ್ತಲಾದದ್ದು ಕಮ್ಯೂನಿಸ್ಟರು! ಡಾ.ಅಂಬೇಡ್ಕರ್ ಅವರನ್ನು ಮೊದಲಿಗೆ ಲೆಕ್ಕಕ್ಕೆ ತೆಗೆದುಕೊಳ್ಳದಿದ್ದ ಇವರು ವಿದೇಶಿ ಚಿಂತಕರ ಚಿತ್ರಪಟಗಳನ್ನು ದಲಿತರ ಕೈಗಿಟ್ಟು ಮಾರ್ಕ್ಸ್, ಲೆನಿನ್ ಮುಂತಾದವರ ಫೋಟೋಗಳನ್ನು ದಲಿತರ ಎದೆಗಳಿಗೆ ನೇತುಹಾಕಿಬಿಟ್ಟರು! ಕರ್ನಾಟಕದ ದಲಿತ ಚಳುವಳಿ ದಿಕ್ಕು ತಪ್ಪಿದ್ದು ಸಹ ಇಲ್ಲೇ! ಕೇವಲ‌ ಪ್ರತಿಕ್ರಿಯಾತ್ಮಕ ಹೋರಾಟವೊಂದೆ ದಲಿತರ ಸಮಸ್ಯೆಗಳಿಗೆ ಪರಿಹಾರ ಅಂತ ಈಗಲೂ ಸಹ ಅದೇ ಎಡಪಂಥೀಯ ಚಳುವಳಿಗಳ ನೆರಳಿನ ಬಹಳಷ್ಟು ದಲಿತ ಪ್ರಾಧ್ಯಾಪಕರು, ಚಿಂತಕರು ಎನಿಸಿಕೊಂಡವರು ಭಾವಿಸಿರುವುದುಂಟು. ಬಹುಶಃ ಭಾರತದಲ್ಲಿ ಮಾನ್ಯವಾರ್ ಕಾನ್ಷಿರಾಮ್ ಅವರ ಬಹುಜನ ಚಳುವಳಿಯ ಪ್ರಭಾವದಿಂದ ಫುಲೆ-ಅಂಬೇಡ್ಕರ್ ಚಳುವಳಿಯೊಂದು ದೇಶಾದ್ಯಂತ ಸಂಚರಿಸಿತು.‌ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಹೆಚ್ಚು ಹೆಚ್ಚು ಚರ್ಚೆಗೊಳಗಾದಂತೆಲ್ಲಾ ದಲಿತಪರ ಎಂಬ ಮುಖವಾಡ ಹೊತ್ತಿದ್ದ ಕಮ್ಯುನಿಸ್ಟರು ಸೋತು ಸುಣ್ಣವಾದರು. ಬಾಬಾಸಾಹೇಬರು ವಿಚಾರಗಳಿಂದಾಗಿ ಕಾಂಗ್ರೆಸ್ ಕ್ರಮೇಣ ತನ್ನ ಬಲ ಕಳೆದುಕೊಳ್ಳುತ್ತಾ ಬಂದಿತು.‌ ಆದರೆ ದಲಿತರು ಮಾತ್ರ ಸೈದ್ಧಾಂತಿಕವಾಗಿ, ರಾಜಕೀಯವಾಗಿ ತನ್ನ ಏಕನೆಲೆಯೊಂದನ್ನು ಗುರುತಿಸಿಕೊಳ್ಳುವಲ್ಲಿ ವಿಫಲರಾದರು.


ಕಳೆದ ದಶಕದಿಂದೀಚೆಗೆ ಬಹುಜ‌ನ ಚಳುವಳಿಯ ನಾಯಕರುಗಳ ನಡೆ, ವಿಫಲತೆ, ಅದರ ಪರಿಣಾಮದಿಂದಾಗಿ ದೇಶಾದ್ಯಂತ ಚಳುವಳಿಯ ಫಲಿತಾಂಶಗಳು ಸೊನ್ನೆ ಸುತ್ತಿಕೊಂಡಿದ್ದಾಗಿದೆ.‌ ಈಗ ಬಹುಜನ ಚಳುವಳಿಯ ಯಾವುದೇ ನಾಯಕರಿಗೂ ಚಳುವಳಿಯೇ ಬೇಕಿಲ್ಲ, ತಮ್ಮ ಸಮುದಾಯದ ಹಿತಚಿಂತನೆಗೂ ಸಮಯವಿಲ್ಲ. ಇದರ ನಡುವೆ ಅಸಂಖ್ಯಾತ ದಲಿತ ಜನಸಮೂಹ ತಮ್ಮ ಪಾಡಿಗೆ ತಾವು ಬದುಕಿನ ನೊಗ ಹೊತ್ತು ದಿನಗಳನ್ನು ದೂಡುತ್ತಾ ಸಾಗಿವೆ. ಸರ್ಕಾರಗಳು ಯಾವುದೇ‌ ಇರಲಿ, ದಲಿತರ ಮೇಲಿನ ದೌರ್ಜನ್ಯ ಗಳು ಮಾತ್ರ ಇನ್ನೂ ನಿಂತಿಲ್ಲ ಎಂಬುದನ್ನು ಎನ್‌ಸಿಆರ್‌ಬಿ ವರದಿಗಳು ಹೇಳುತ್ತಲೇ ಇವೆ.‌ ಈಗ ಬದಲಾದ ಕಾಲಘಟ್ಟಕ್ಕೆ ಒಂದು ವಿಚಾರವಾಗಿ, ಎಚ್ಚರವಾಗಿ, ವಿಮೋಚನೆಯ ದಿಕ್ಕಾಗಿ ಉಳಿಯಬೇಕಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೋಟ್ಯಾಂತರ ಜನರ ಭಾವನೆಯಾಗಿ ಮಾತ್ರ ಉಳಿದಿದ್ದಾರೆ ಅಷ್ಟೇ. ಈ ಭಾವನೆಗೆ ಸಮಾಜದಲ್ಲಿ ತುಂಬಾ ಡಿಮ್ಯಾಂಡಿದೆ. ಈ ಡಿಮ್ಯಾಂಡನ್ನು ಆಧರಿಸಿ ಕೆಲವು ದಲಿತ ನಾಯಕರೆನಿಸಿಕೊಂಡವರು ಒಂದಷ್ಟು ಜನ ಬಿಜೆಪಿ ಪಕ್ಷಕ್ಕೆ, ಮತ್ತೊಂದಿಷ್ಟು ಜನ ಕಾಂಗ್ರೆಸ್ ಪಕ್ಷಕ್ಕೆ, ಇಲ್ಲೆಲ್ಲೂ ಅವಕಾಶವಿಲ್ಲದ ಮತ್ತಷ್ಟು ಜನ ಇತರ ಸಣ್ಣ ಪುಟ್ಟ ಪಕ್ಷಗಳ ಬುಟ್ಟಿಗೆ ದಲಿತರ ಮತಗಳನ್ನು ತುಂಬಿಸುವ ಕೆಲಸವನ್ನು ನಿಷ್ಠೆಯಿಂದ ಮಾಡುತ್ತ ತಮ್ಮ ಡಿಮ್ಯಾಂಡನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿಯೇ ತಮಗೆ ಬೇಕಾದಂತೆ ಸೈದ್ಧಾಂತಿಕ ನಿರೂಪಣೆಗಳು ಬದಲಾಗುತ್ತವೆ, ದಲಿತರ ರಾಜಕೀಯ ಅವಕಾಶಗಳ ವ್ಯಾಖ್ಯಾನವೂ ಬದಲಾಗುತ್ತದೆ.‌ ಅದಕ್ಕೆಲ್ಲಾ ಡಾ.ಅಂಬೇಡ್ಕರ್ ಅವರ ಬರಹಗಳ ಪುಟಗಳೇ ಸಾಕ್ಷಿಯೂ ಆಗುತ್ತವೆ, ಇಲ್ಲಿ ತಮಗೆ ಬೇಕಾದಂತೆ ಎಲ್ಲವೂ ಬದಲಾಗುತ್ತವೆ!


ಡಾ. ಅಂಬೇಡ್ಕರ್ ಎಂಬ ಭಾವನೆಗೆ ಇರುವ ಈ ಡಿಮ್ಯಾಂಡನ್ನು ಅರಿತಿರುವ ಎಲ್ಲಾ ಪಕ್ಷದ ರಾಜಕಾರಣಿಗಳು ಮತಕ್ಕಾಗಿ ಅಥವಾ ಇತರ ಜಾತಿಗಳನ್ನು ತಮ್ಮ ಪಕ್ಷದ ಅಡಿಯಲ್ಲಿ ಒಗ್ಗೂಡಿಸುವ ಸಲುವಾಗಿಯೂ ಇದನ್ನು ಒಂದು ಭಾವನಾತ್ಮಕ ವಿಷಯವನ್ನಾಗಿ ಬಳಸುತ್ತಲೇ ಇದ್ದಾರೆ. ನೆನ್ನೆ ಅಮಿತ್ ಶಾ ಮಾಡಿದ್ದು ಅದೇನೆ. ದಲಿತರ ಮತಗಳಿಗಾಗಿ ಅಂಬೇಡ್ಕರ್ ಪಂಚತೀರ್ಥ ಮಾಡೋದೆ ಇವರೆ, ಈಗ ಅಂಬೇಡ್ಕರ್ ಅವರ ಹೆಸರನ್ನು ಲೇವಡಿ ಮಾಡೋದು ಇವರೆ! ಯಾವಾಗ ಬೇಕೋ ಆಗ ಅಂಬೇಡ್ಕರ್ ಅವರನ್ನು ನಾವು ಮೆರೆಸುವುದು ಗೊತ್ತು, ಮರೆಸುವುದೂ ಗೊತ್ತು ಎಂಬ ಜಿದ್ದಿಗೆ ಬಿದ್ದಂತಿರುವ ಈ ರಾಜಕೀಯ ಪಕ್ಷಗಳ ಲಾಭ ನಷ್ಟದ ಆಟಗಳಿಗೆ ದಲಿತರ ಭಾವನೆಗಳನ್ನು ಕೆರಳಿಸುವ, ಅರಳಿಸುವ ತಾಕತ್ತು ಇದೆ ಅನ್ನೋದಾದರೆ, ಅದೇ ಸರಿ ಅನ್ನೋದಾದರೆ ಪ್ರತಿಯೊಬ್ಬ ದಲಿತನೂ ಸುಮ್ಮನೇ ಸತ್ತುಬಿಡಬೇಕು ಅಷ್ಟೇ, ‌ಇಲ್ಲವೆ ಇದೇ ಡಾ.ಅಂಬೇಡ್ಕರ್ ಎಂಬ ಡಿಮ್ಯಾಂಡನ್ನು ಬಳಸಿಕೊಂಡು ಸಮಾಜದಲ್ಲಿ ಗಟ್ಟಿಯಾಗಿ ಎದ್ದು ನಿಲ್ಲುವ ಹೊಸ ಚಳುವಳಿಯೊಂದನ್ನು ಕಟ್ಟಬೇಕು. ಯಾರಿದ್ದಾರೆ ಎಲ್ಲಾ ಆಸೆಗಳ ತೊರೆದು ತ್ಯಾಗ ಮಾಡಿ ಹೊಸ ಚಳುವಳಿಯೊಂದನ್ನು ಈಗ ಕಟ್ಟುವವರು???

  • ಅಂಕಣ: ಅಪ್ಪಗೆರೆ ಡಿ ಟಿ ಲಂಕೇಶ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page