Monday, December 23, 2024

ಸತ್ಯ | ನ್ಯಾಯ |ಧರ್ಮ

ಒಬ್ಬರಲ್ಲ, ಹತ್ತು ಗುಕೇಶ್ ಗಳು ಬೇಕು! (ನಾಗಾಂಕಣ -9)

  • ಎಂ ನಾಗರಾಜ ಶೆಟ್ಟಿ

ಹದಿಹರೆಯದ ತರುಣನೊಬ್ಬ ಮೊದಲ ಬಾರಿ 64 ಕೋಣೆಗಳ ಒಡೆಯನಾಗಿ ಅಳಿಸಲಾರದ ಸಾಧನೆ ಮಾಡಿದ್ದಾನೆ. 8 X 8 ರ ಚಚ್ಚೌಕದ ಹಾಸಿನಲ್ಲಿ ಈ ವರೆಗೆ 18 ಆಟಗಾರರು ವಿಶ್ವ ಚಾಂಪಿಯನ್‌ ಗಳಾಗಿದ್ದರೂ 18 ವರ್ಷದವರಿಗೆ ವಿಶ್ವ ಚಾಂಪಿಯನ್‌ ಪಟ್ಟ ಒಲಿದಿರಲಿಲ್ಲ. ಚೆಸ್‌ ನಲ್ಲಿ ಮುಂದೆಯೂ ಹಲವರು ವಿಶ್ವಚಾಂಪಿಯನ್‌ ಆಗಬಹುದು. ಆದರೆ ಹದಿನೆಂಟರ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್‌ ಆಗುವುದು ಸುಲಭವಲ್ಲ. ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಗುಕೇಶ್‌ ದೊಮ್ಮರಾಜು ಹೆಸರು ಚೆಸ್ ದಾಖಲೆಗಳಲ್ಲಿ ಅಚ್ಚಳಿಯದೆ ಉಳಿಯುತ್ತದೆ.

ಚೆಸ್‌ ಇತರೆಲ್ಲ ಆಟಗಳಿಗೆ ಹೋಲಿಸಿದರೆ ಪ್ರತ್ಯಕ್ಷ ವೀಕ್ಷಣೆಗೆ ಹೆಚ್ಚು ಅವಕಾಶವಿಲ್ಲದ, ಇಬ್ಬರು ಆಟಗಾರರ ಮೇಲಷ್ಟೇ ಕೇಂದ್ರೀಕೃತವಾದ ಆಟ. ಈ ಬಾರಿ ಕೆಲವು ಮಾಧ್ಯಮಗಳು ಚಾಂಪಿಯನ್‌ ಶಿಪ್‌ ಪಂದ್ಯಗಳ ನೇರ ಪ್ರಸಾರ ಮಾಡಿದ್ದರೂ, ಆಸಕ್ತರು- ಪರಿಣತರಷ್ಟೇ ಗಮನವಿಟ್ಟು ನೋಡುವ ಚೆಸ್‌ ಬುದ್ಧಿವಂತರ ಆಟ ಎನ್ನುವ ಹೆಗ್ಗಳಿಕೆ ಪಡೆದಿದೆ. ಅಪಾರ ತಾಳ್ಮೆ, ಏಕಾಗ್ರತೆ, ಸಮಚಿತ್ತತೆಯನ್ನು ಬಯಸುವ ಈ ಆಟ ಅವಸರದ ಮಂದಿಗಲ್ಲ. ರಾಪಿಡ್‌ ಚೆಸ್‌ ಇತ್ಯಾದಿ ಶೀಘ್ರ ಆಟದ ಮಾದರಿಗಳಿವೆಯಾದರೂ ಸಿದ್ಧತೆ ಇರದೆ ಇವು ಯಾವುದೂ ಎಟಕುವಂತದ್ದಲ್ಲ.

ಎದುರು ಬದುರು ಕೂತು – ಮುಖ ನೋಡಿದರೂ ಮಾತನಾಡದೆ, ಹಾಸಿನ ಮೇಲೆ ಹರಡಿದ ಕಾಲಾಳುಗಳು ಅನೆ, ಕುದುರೆ, ಒಂಟೆ, ಮಂತ್ರಿ, ರಾಜರನ್ನು ತದೇಕ ಚಿತ್ತದಿಂದ ನೋಡುತ್ತಾ ಇದರ ಮೇಲೆಯೇ ಜಗತ್ತಿನ ಅಳಿವು, ಉಳಿವು ನಿಂತಿದೆ ಎಂದು ಎಲ್ಲವನ್ನೂ ಮರೆತು ಕಣ್ತೆರೆದು ಧೇನಿಸುವ ಆಟವಿದು. ಸತಿ- ಪತಿ, ಪ್ರಿಯತಮ- ಪ್ರಿಯತಮೆ ಯಾರೂ ಜೀವನದಲ್ಲಿ ಒಮ್ಮೆಯಾದರೂ ಗಂಟೆಗಟ್ಟಲೆ ಈ ರೀತಿ ಕುಳಿತಿರಲು ಸಾಧ್ಯವೇ? ಹಾಗೊಂದು ವೇಳೆ ಕುಳಿತರೆ ಸೋಡಾಚೀಟಿ ಗ್ಯಾರಂಟಿಯೇನೋ! ಚೆಸ್ ಆಟದಲ್ಲಿ ಸೋಡಾಚೀಟಿ ಇಲ್ಲದಿದ್ದರೂ ಆಟವನ್ನು ನಿಲ್ಲಿಸಿ ಹೊರಡಬಹುದು.

ಗುಕೇಶ್ ಮೇಲುಗೈ ಹೊಂದಲು ಆಟವನ್ನು ನಿಲ್ಲಿಸಲು (ಡ್ರಾ ಮಾಡಲು) ಒಪ್ಪದ ಆತನ ಸಾಮಯಿಕ ಜಾಣ್ಮೆಯೇ ಕಾರಣವೆನ್ನಲಾಗುತ್ತಿದೆ. ಗುಕೇಶನ ಜಾಣ್ಮೆಯ ಕುರಿತು ಆಗಲೇ ಪುಟಗಟ್ಟಲೇ ಬರೆದಾಗಿದೆ. ಆತನ ವೈದ್ಯ ತಂದೆಯ ತ್ಯಾಗ, ಉದ್ಯೋಗದಲ್ಲಿರುವ ತಾಯಿಯ ಶ್ರಮ, ನೀಡಲಾದ ತರಬೇತಿ ಮತ್ತು ಗುಕೇಶನ ಮನಸ್ಥಿತಿಯ ಕುರಿತು ಎಲ್ಲರೂ ತಿಳಿದುಕೊಂಡಿದ್ದಾರೆ. ಇದರಿಂದ ಗೊತ್ತಾಗುವ ವಿಷಯವೆಂದರೆ ಅಂತರ್ ರಾಷ್ಟ್ರೀಯ ಚೆಸ್ ಎಲ್ಲರಿಗಲ್ಲ ಎನ್ನುವುದು. ಎಷ್ಟು ಜನರಿಗೆ ಬಾಲ್ಯದಲ್ಲೇ ಶಾಲೆ ಬಿಡಿಸಿ ಓದಿಗೆ ಮನೆಯಲ್ಲೇ ಏರ್ಪಾಡು ಮಾಡಲು ಸಾಧ್ಯವಿದೆ? ಅತ್ಯುನ್ನತ ಮಟ್ಟದ ತರಬೇತಿ ಒದಗಿಸುವ ಅನುಕೂಲವಿದೆ? ರಾಷ್ಟ್ರ, ಅಂತರ್ ರಾಷ್ಟ್ರದ ಪಂದ್ಯಗಳಿಗೆ ಕರೆದುಕೊಂಡು ಹೋಗುವ ಸಾಮರ್ಥವಿದೆ?

ಭಾರತೀಯರು ಚೆಸ್ ಆಟದಲ್ಲಿ ಕುಶಲಿಗರು ಎಂದು ಹೇಳಲಾಗುತ್ತದೆ. ಇದು ಪೂರ್ಣ ಸತ್ಯವಲ್ಲದಿದ್ದರೂ ಚೆಸ್ ನ ಉಗಮ ನಮ್ಮಲ್ಲೇ ಎನ್ನುವುದಕ್ಕೆ ಆಧಾರಗಳಿವೆ. ಚದುರಂಗ ಎಂದು ಕತೆಯಲ್ಪಡುತ್ತಿದ್ದ ಭಾರತೀಯ ಚೆಸ್ ಏಳನೇ ಶತಮಾನದಲ್ಲಿ ಪರ್ಶಿಯನ್ನರನ್ನು ಆಕರ್ಷಿಸಿತು. ಕಾಲಾಂತರದಲ್ಲಿ ಅರಬ್ ದೇಶಗಳಲ್ಲಿ ಜನಪ್ರಿಯತೆ ಗಳಿಸಿ ಐರೋಪ್ಯರ ಗಮನ ಸೆಳೆಯಿತು. ಚದುರಂಗ ಚೆಸ್ ಆಗಿ ನಿಯಮಗಳು ರೂಪಿಸಲ್ಪಟ್ಟು, ಸ್ಪರ್ಧಾತ್ಮಕ ಆಟವಾಗಲು ಯುರೋಪಿಯನ್ನರೇ ಕಾರಣ. ಸಾಮಾನ್ಯ ಜನರಿಗೆ ವಿದ್ಯೆ,ಸಂಸ್ಕೃತ ಕಾವ್ಯಗಳ ಓದು ಎಟುಕದಂತೆ ಮಾಡಿದ ರೀತಿಯಲ್ಲೇ ಚದುರಂಗವೂ ಕೆಲವರ ಸೊತ್ತಾಗಿದ್ದು, ಭಾರತಕ್ಕಿಂತ ಹೆಚ್ಚಾಗಿ ಇತರೆಡೆ ಅದು ಜನಪ್ರಿಯವಾಗಲು ಕಾರಣವಾಗಿರಬಹುದೇ? ಈಗ ಚದುರಂಗ ಎನ್ನುವ ಹೆಸರನ್ನೇ ಬಳಸಲಾಗುತ್ತಿಲ್ಲ, ಅದೀಗ ಚೆಸ್!

ಅಂತರ್ ರಾಷ್ಟ್ರೀಯ ಚೆಸ್ ಪಂದ್ಯಾವಳಿಯಲ್ಲಿ ಮೊದಲ ಸಲ ವಿಜೇತನಾದವನು ಆಸ್ಟ್ರೀಯಾ ಮೂಲದ ವಿಲ್ಹೆಲ್ಮ್ ಸ್ಟೈನ್ಜ್. ಆತ 1886 ರಲ್ಲಿ ಮೊದಲ ಚೆಸ್ ಚಾಂಪಿಯನ್ ಆದ ಬಳಿಕ ಮೂರು ದಶಕದ ವರೆಗೆ ಸತತವಾಗಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡ. ಸೋವಿಯತ್ ರಷ್ಯಾ ವಿಶ್ವ ಚಾಂಪಿಯನ್ ಶಿಪ್ ಪಂದ್ಯಗಳಲ್ಲಿ ಹೆಚ್ಚು ಪದಕ ಗಳಿಸಿದ ಕೀರ್ತಿಗೆ ಪಾತ್ರವಾಗಿದೆ. ಅದು ಚೆಸ್ ಒಲಿಂಪಿಯಾಡ್ ತೆರೆದ ವಿಭಾಗದಲ್ಲಿ 18 ಬಾರಿ ಚಿನ್ನ ಗೆದ್ದಿದೆ. ರಷ್ಯಾ ಒಕ್ಕೂಟ 1980 ರಿಂದ 1990 ರ ವರೆಗೆ ಆರು ಬಾರಿ ಒಲಿಂಪಿಯಾಡ್ ಚಾಂಪಿಯನ್ ಆಗಿತ್ತು. ಆದರೆ ಸೋವಿಯೆಟ್ ಯೂನಿಯನ್ ಒಡೆದು ಪ್ರತ್ಯೇಕ ರಾಷ್ಟ್ರಗಳಾದ ನಂತರ ಆರು ಸಲವಷ್ಟೇ ಚಿನ್ನ ಗೆಲ್ಲಲು ಸಾಧ್ಯವಾಗಿದೆ. ರಷ್ಯಾ ಒಕ್ಕೂಟದ ಸಂದರ್ಭದಲ್ಲಿ ಸರಕಾರವೇ ವ್ಯವಸ್ಥೆ ಮಾಡಿದ್ದ ಮಾದರಿ ತರಬೇತಿ ಚೆಸ್ ಶಾಲೆಗಳಿದ್ದವು. ನುರಿತ ಆಟಗಾರರ ಮಾರ್ಗದರ್ಶನದಿಂದ ಪ್ರತಿಭಾನ್ವಿತ ಆಟಗಾರರು ರೂಪುಗೊಳ್ಳುತ್ತಿದ್ದರು. ಸೋವಿಯತ್ ಒಕ್ಕೂಟ 1990 ರಲ್ಲಿ ವಿಭಜನೆಯಾಗುತ್ತಿದ್ದಂತೆ ಸರಕಾರದ ಆರ್ಥಿಕ ನೆರವು ನಿಂತು ಹೋಗಿ ಚೆಸ್ ಶಾಲೆಗಳು ಮುಚ್ಚಿ ಹೋದವು. ತರಬೇತುದಾರರು, ಅಟಗಾರರು ಬೇರೆ, ಬೇರೆ ದೇಶಗಳಲ್ಲಿ ನೆಲೆ ಕಂಡುಕೊಂಡರು. ಇದರಿಂದಾಗಿ ಒಂದು ಕಾಲದಲ್ಲಿ ಚೆಸ್ ಆಟದಲ್ಲಿ ಪ್ರಾಬಲ್ಯ ಮೆರೆದಿದ್ದ ರಷ್ಯಾ ಸೊರಗಲಾರಂಭಿಸಿತು.

ಸೋವಿಯಟ್ ರಷ್ಯಾದ ಕಾಲದ ಚೆಸ್ ಪಂದ್ಯಗಳಲ್ಲಿ ಚೆಸ್ ಪ್ರಿಯರ ಮನಸ್ಸು ಸೂರೆಗೊಂಡಿದ್ದು ಅಮೇರಿಕಾದ ಬಾಬಿ ಫಿಶರ್ ಮತ್ತು ಸೋವಿಯಟ್ ಒಕ್ಕೂಟದ ಬೋರಿಸ್ ಸ್ಪಾಸ್ಕಿಯ ನಡುವೆ 1972 ರಲ್ಲಿ ನಡೆದ ಚಾಂಪಿಯನ್ ಶಿಪ್ ಹೋರಾಟ. ಅಮೇರಿಕಾದಲ್ಲಿ ಹುಟ್ಟಿದವರು ಯಾರೂ ಆ ವರೆಗೆ ಅಂತರ್ರಾಷ್ಟ್ರೀಯ ಚೆಸ್ ಪಂದ್ಯಾವಳಿಯಲ್ಲಿ ಗೆದ್ದಿರಲಿಲ್ಲ. ಶತಮಾನದ ಪಂದ್ಯ ಎಂದು ಹೆಸರಾದ ಆ ಅಟದಲ್ಲಿ ಗೆದ್ದು ಫಿಶರ್ ಇತಿಹಾಸ ನಿರ್ಮಿಸಿದರು. ಇದು ಬಾಬಿ ಫಿಶರ್ ಗೆ ಅಪಾರ ಜನಪ್ರಿಯತೆ ಗಳಿಸಿ ಕೊಟ್ಟಿತು. ಹಲವು ವರ್ಷಗಳ ನಂತರ 1992 ರಲ್ಲಿ ಅನಧಿಕೃತ ವಿಶ್ವ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಮತ್ತೆ ಫಿಶರ್ ಮತ್ತು ಬೋರಿಸ್ ಸ್ಪಾಸ್ಕಿ ಸೆಣಸಾಡಿದರು. ಇದರಿಂದ ಆತ ವಿಶ್ವದ ಅಗ್ರಮಾನ್ಯ ಚೆಸ್ ಆಟಗಾರನೆಂದು ಮತ್ತೊಮ್ಮೆ ಸಾಬೀತಾಯಿತು.

ಆವರೆಗೆ ಯಾರೂ ಗಳಿಸಿದ ಪ್ರಸಿದ್ಧಿ, ಸಂಪತ್ತು ಗಳಿಸಿದ ಫಿಶರ್ ಗೆ ಬೌದ್ಧಿಕ ಸಾಮರ್ಥ್ಯ, ಕುಶಲತೆ ಮತ್ತು ತಾಳ್ಮೆ ಇತ್ತು. ಆದರೆ ಆತ ಕ್ರಮೇಣ ಮಾನಸಿಕ ಒತ್ತಡಕ್ಕೆ ಒಳಗಾದರು. ಶೀತಲ ಸಮರದ ಕಾಲದಲ್ಲಿ ಕಮ್ಯುನಿಷ್ಟ್ ರಷ್ಯಾವನ್ನು ಮಣಿಸಬೇಕೆಂದಿದ್ದ ಅಮೇರಿಕ ಮತ್ತು ಇತರ ಬಂಡವಾಳಶಾಹಿ ರಾಷ್ಟ್ರಗಳಿಗೆ ಚೆಸ್ ಆಟದ ಪಾನ್ ನಂತೆ ಆತ ಬಳಕೆಯಾದರು. ನಿರೀಕ್ಷೆಗಳ ಭಾರ, ವೈಯಕ್ತಿಕ ಸಮಸ್ಯೆಗಳು ಸೇರಿ ಬಾಬಿ ಫಿಷರ್ ಖಿನ್ನತೆಗೊಳಗಾಗಬೇಕಾಯಿತು.

ಬಾಬಿ ಫಿಶರ್ ನ ಮಾನಸಿಕ ವಿಕಲ್ಪದ ಉದಾಹರಣೆಯೊಂದಿಗೆ ಚೆಸ್ ಆಟದೊಂದಿಗೆ ಬೆಸೆಯಲಾಗಿರುವ ಮಾನಸಿಕ ಸ್ಥಿರತೆ, ಮನೋದಾರ್ಡ್ಯದ ಕುರಿತ ನಂಬಿಕೆಗಳನ್ನು ಪರಿಶೀಲಿಸಬಹುದು. ಪದಬಂಧ, ಸುಡೋಕು ಆಟಗಳಂತೆ ಚೆಸ್ ಕೂಡಾ ಏಕಾಗ್ರತೆಗೆ, ಮೆದುಳಿನ ಚುರುಕುತನಕ್ಕೆ, ಕ್ರಿಯಾಶೀಲತೆಗೆ ನೆರವು ನೀಡುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಬಹುದು. ಬುದ್ಧಿವಂತಿಕೆಯ ಪ್ರಮಾಣ (IQ) ಹಿಗ್ಗುತ್ತದೆ ಎಂದೂ ಹೇಳಲಾಗುತ್ತದೆ. ಕೆಲವು ಪ್ರಯೋಗಗಳಿಂದ ಮೆದುಳಿನ ಎರಡೂ ಭಾಗಗಳೂ- ತಾರ್ಕಿಕ ಮತ್ತು ಸೃಜನಶೀಲ- ಚುರುಕುಗೊಳ್ಳುತ್ತವೆ ಎಂದೂ ತಿಳಿಯುತ್ತದೆ.

ಇವು ಮೆದುಳಿನ ಚಟುವಟಿಕೆಯನ್ನು ಉತ್ತೇಜಿಸುವ ಅಂಶಗಳಾದರೂ ಚೆಸ್ ಆಟದಿಂದ ಬುದ್ಧಿವಂತರನ್ನು ಸೃಷ್ಟಿಸಬಹುದು ಎನ್ನಲಾಗದು. ಆಟವನ್ನು ಆನಂದಿಸುವ ಗಣ್ಯರು, ವಿಜ್ಞಾನಿಗಳು ತಮ್ಮ ಬಿಡುವನ್ನು ಸದುಪಯೋಗ ಪಡಿಸಲು, ಏಕಾಗ್ರತೆ ಹೆಚ್ಚಿಸಲು ಚೆಸ್ ಆಡಬಹುದು. ಆದರೆ ಇದರಿಂದ ಬುದ್ಧಿವಂತರಾಗುತ್ತಾರೆ, ಮಾನಸಿಕ ಸ್ಥಿರತೆ ಉಳಿಯುತ್ತದೆ ಎಂದೆಲ್ಲಾ ಎನ್ನಲಾಗದು.

ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಗೆದ್ದ ಗುಕೇಶ್ ನ ಮಾತುಗಳು ಇದನ್ನೇ ಸಮರ್ಥಿಸುತ್ತವೆ. ʼ ಚೆಸ್ ಚಾಂಪಿಯನ್ ಶಿಪ್ ಗಳಲ್ಲಿ ಕೇವಲ ಚೆಸ್ ಕುಶಲತೆಯಷ್ಟೇ ಅಲ್ಲ, ಮಾನಸಿಕ ಮತ್ತು ಭಾವನಾತ್ಮಕ ಒತ್ತಡಗಳೂ ಇರುತ್ತವೆ. ಇದನ್ನು ನಿಭಾಯಿಸಲು ಮೈಂಡ್ ಕಂಡೀಶನಿಂಗ್ ಕೋಚ್ ಪ್ಯಾಡಿ ಆಪ್ಟನ್ ಸಹಾಯ ಮಾಡಿದರು ʼ ಎಂದು ಗುಕೇಶ್ ತಮ್ಮ ಮೆಂಟಲ್ ಟ್ರೈನರ್ ರನ್ನು ನೆನೆಯುತ್ತಾರೆ. ಪ್ಯಾಡಿ ಆಪ್ಟನ್ ಕೇವಲ ಚೆಸ್ ಗೆ ಸಂಬಂಧ ಪಟ್ಟ ಮೈಂಡ್ ಕಂಡೀಶನರ್ ಅಲ್ಲ. ಅವರು ಅಥ್ಲೆಟಿಕ್, ಒಲಿಂಪಿಕ್, ಕ್ರಿಕೆಟ್, ಹಾಕಿ ತಂಡಗಳ ಕ್ರೀಡಾಪಟುಗಳ ಮಾನಸಿಕ ಸ್ಥಿರತೆಯ ನಿರ್ವಹಣೆಗೂ ಸಹಾಯ ಮಾಡಿದ್ದಾರೆ. ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಮುಂತಾದವರೂ ಇವರಿಂದ ಸಲಹೆ ಪಡೆದಿದ್ದಾರೆ. ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಭಾಗವಹಿಸುವ ಒತ್ತಡವನ್ನು ನಿಭಾಯಿಸಲು ಸಾಕಷ್ಟು ಮಾನಸಿಕ ಸಿದ್ಧತೆ ಬೇಕು. ಚೆಸ್ ಕೂಡಾ ಇದಕ್ಕೆ ಹೊರತಲ್ಲ. ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಕ್ರೀಡೆಯಾದ ಚೆಸ್ ಇಬ್ಬರೇ, ಯಾವಾಗ, ಎಲ್ಲಿ ಬೇಕಾದರೂ ಆಡಬಹುದಾದ ಸರಳ ಆಟವಾಗಿ ಉಳಿದಿಲ್ಲ. ಪರಿಣತರಿಂದ ತರಬೇತಿ, ನಿರಂತರ ಪ್ರಯತ್ನ, ಮಾನಸಿಕ ದೃಢತೆ, ಓದು ಎಲ್ಲವೂ ಬೇಕಾಗುತ್ತದೆ.

ವಿಶ್ವನಾಥನ್ ಆನಂದ್ 2000 ರಲ್ಲಿ ಮೊದಲ ಬಾರಿಗೆ ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆದ್ದ ಬಳಿಕ ಭಾರತ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತು. ಭಾರತದ ಸ್ಪರ್ಧಿಗಳು ವಿಶ್ವ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸತೊಡಗಿದರು. ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದು ತಮಿಳುನಾಡು. ತಮಿಳುನಾ̧ಡು ಸರಕಾರ ಸ್ಪೋರ್ಟ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ತಮಿಳುನಾಡು (SADT) ಮೂಲಕ ಚೆಸ್ ಆಟಕ್ಕೆ ಹೆಚ್ಚಿನ ಬೆಂಬಲ ನೀಡುವುದಲ್ಲದೆ ಅರ್ಹ ಆಟಗಾರರಿಗೆ ಆರ್ಥಿಕ ನೆರವನ್ನೂ ನೀಡುತ್ತಿದೆ. ಇದರ ಫಲಾನುಭವಿಗಳಲ್ಲಿ ಗುಕೇಶ್, ಪ್ರಜ್ಞಾನಂದ, ಅರ್ಜುನ್ ಇರಿಗೈಸಿ, ವಿಶ್ವನಾಥನ್ ಮುಂತಾದ ಆಟಗಾರರೂ ಸೇರಿದ್ದಾರೆ. ಪ್ರಮುಖ ಆಟಗಾರರಿಗೆ ಕ್ಯಾಂಡಿಡೇಟ್ ಟೂರ್ನಮೆಂಟಲ್ಲಿ ಭಾಗವಹಿಸಲು ಅಗತ್ಯವಾದ ಅಂಕಗಳು ಇರಲಿಲ್ಲ ಎನ್ನುವುದನ್ನು ಮನಗಂಡು 2023 ರಲ್ಲಿ ಚೆನ್ನೈ ಗ್ರಾಂಡ್ ಮಾಸ್ಟರ್ಸ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಗುಕೇಶ್ ಈ ಸ್ಪರ್ಧೆಯಲ್ಲಿ ಗೆದ್ದು ಕ್ಯಾಂಡಿಡೇಟ್ ಟೂರ್ನಮೆಂಟ್ 2024 ರಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದರು.

18 ವರ್ಷದ ಕಿರಿಯ ವಯಸ್ಸಿನ ಗುಕೇಶ್ ನ ಸಾಧನೆ ಅಪೂರ್ವವಾದುದು; ದೇಶಕ್ಕೆ ಹೆಮ್ಮೆ ತರುವಂಥದ್ದು. ಆದರೆ ಪ್ರತಿ ಬಾರಿಯೂ ಗುಕೇಶ್ ಗೆಲ್ಲಬೇಕೆಂಬ ನಿರೀಕ್ಷೆ ಇಟ್ಟುಕೊಳ್ಳುವುದು ಸರಿಯಲ್ಲ. ನಿರೀಕ್ಷೆಯ ಭಾರಕ್ಕೆ ಆತನೂ ಕುಸಿದು ಹೋಗಬಹುದು. ವಿಶ್ವನಾಥನ್ ಆನಂದ್, ಗುಕೇಶ್ ರೀತಿಯಲ್ಲಿ ನಮ್ಮಲ್ಲಿ ಹಲವು ಚಾಂಪಿಯನ್ ಗಳು ತಯಾರಾಗಬೇಕು. ನಮ್ಮ ನಮ್ಮಲ್ಲೇ ಆರೋಗ್ಯಕರ ಸ್ಫರ್ಧೆ ಏರ್ಪಡಬೇಕು.

145 ಕೋಟಿ ಜನರಿರುವ ದೇಶದಲ್ಲಿ ಇದೇನು ಅಸಾಧ್ಯವಾದ ಮಾತಲ್ಲ. ಸರಕಾರಗಳು ಪ್ರತಿಭೆ, ಶ್ರದ್ಧೆ ಇರುವವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಆಟಗಳು ಕೆಲವೇ ನಗರಗಳ, ಆರ್ಥಿಕವಾಗಿ ಸಬಲರಾಗಿರುವವರ ಸೊತ್ತಾಗಬಾರದು. ಹಳ್ಳಿ, ಪಟ್ಟಣಗಳ ಮಕ್ಕಳನ್ನು ಉತ್ತೇಜಿಸಬೇಕು. ತಮಿಳುನಾಡು ಮಾದರಿಯಲ್ಲಿ ಅಲ್ಲಲ್ಲಿ ತರಬೇತಿ ಕೇಂದ್ರಗಳನ್ನು ಮುತುವರ್ಜಿಯಿಂದ ಸ್ಥಾಪಿಸಬೇಕು. ಸಾಮಾನ್ಯರು ಗುಕೇಶ್ ತಂದೆ ಡಾಕ್ಟರ್ ರಜನಿಕಾಂತ್ ರಂತೆ ವೃತ್ತಿ ಬಿಟ್ಟು ಮಕ್ಕಳ ಏಳಿಗೆಗೆ ಶ್ರಮಿಸಲಾರರು. ಪ್ರತಿಭೆ ಇರುವ ಮಕ್ಕಳು ಸೌಲಭ್ಯಗಳ ಕೊರತೆಯಿಂದ ಸೊರಗದಂತೆ, ಯೋಜನೆಗಳನ್ನು ಹಾಕಿಕೊಂಡರೆ ಚೆಸ್ ಮಾತ್ರವಲ್ಲ, ಒಲಿಂಪಿಕ್ಸ್, ಏಷ್ಯನ್ ಕ್ರೀಡಾಕೂಟಗಳಲ್ಲೂ ಭಾರತದ ಧ್ವಜ ಮೇಲ್ಮಟ್ಟದಲ್ಲಿ ಹಾರಾಡುವಂತಾಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page