Saturday, January 4, 2025

ಸತ್ಯ | ನ್ಯಾಯ |ಧರ್ಮ

ಕಡೆಗೂ ರಾಜ್ಯಶಾಸ್ತ್ರದ ಮೇಷ್ಟ್ರಿಗೆ ತಾನೊಬ್ಬ ರಾಜಕೀಯದ ಬಲಿಪಶು ಎಂಬುದು ಅರ್ಥವಾಗಲೇ ಇಲ್ಲ..!

“ಅಪಾರ ಪಾಂಡಿತ್ಯದ ತುಂಬಿದ ಕೊಡದಂತಿದ್ದ ಅಸ್ಸಾದಿಯವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ, ಕಾಪು ತಾಲೂಕಿನ ಶಿರ್ವ ಗ್ರಾಮದವರು. ಅಂತರಾಷ್ಟ್ರೀಯ ಮಟ್ಟದ ವಿದ್ವಾಂಸರಾದರು ಯಾವುದೇ ಗರ್ವ ಇಲ್ಲದ ತೀರಾ ಸಜ್ಜನಿಕೆಯ ವ್ಯಕ್ತಿತ್ವ ಅವರದ್ದು. ಅಂತಹ ಮಹತ್ವದ ವಿದ್ವಾಂಸನಿಗೆ ಸಿಗಬೇಕಾದ ಗೌರವಗಳು, ದೊರಕಬೇಕಾದ ಅವಕಾಶಗಳು ಲಭ್ಯವಾದದ್ದು ಕಡಿಮೆ..” ಮುನೀರ್ ಕಾಟಿಪಳ್ಳ ಅವರ ಬರಹದಲ್ಲಿ

ಮುಜ಼ಾಫರ್ ಅಸ್ಸಾದಿ ಅವರ ಅಗಲಿಕೆ ನಿಜಕ್ಕೂ ದೊಡ್ಡ ನಷ್ಟ. ಕಳೆದ ಒಂದು ದಶಕದಿಂದ ಆತ್ಮೀಯ ಒಡನಾಟ ಹೊಂದಿದ್ದ ಅವರ ದಿಢೀರ್ ನಿರ್ಗಮನ ತುಂಬಾ ದುಃಖ ಉಂಟು ಮಾಡಿದೆ. ಪ್ರಜಾವಾಣಿಯಲ್ಲಿ ಅವರು ಬರೆಯುತ್ತಿದ್ದ ಅಂಕಣದ ಮೂಲಕ ಗಮನ ಸೆಳೆದವರು. ಆ ತರುವಾಯ ವಿವಿಧ ಸೆಮಿನಾರ್ ಗಳಲ್ಲಿ ಅವರ ಮಾತುಗಳನ್ನು ಆಲಿಸುವ, ವೇದಿಕೆ ಹಂಚಿಕೊಳ್ಳುವ ಅವಕಾಶ ದೊರಕಿತು. ಮಂಗಳೂರಿನಲ್ಲಿ ಜನನುಡಿ ಆರಂಭಗೊಂಡಾಗ ಅದರ ಭಾಗವಾದರು, ಅದರ ಗೋಷ್ಟಿಗಳಲ್ಲಿ ವಿಚಾರ ಮಂಡಿಸಿ ಜನನುಡಿಯ ತೂಕ ಹೆಚ್ಚಿಸಿದರು. ಜನನುಡಿಯ ಒಂದು ಸಮಾವೇಶದಲ್ಲಿ ಅರಳಿದ ಚರ್ಚೆಗಳ ಪ್ರೇರಣೆಯಿಂದ ಹುಟ್ಟಿದ “ಮುಸ್ಲಿಂ ಚಿಂತಕರ ಚಾವಾಡಿ” ಯ ಮೊದಲ ಅಧ್ಯಕ್ಷರೂ ಆದರು. ನಾನು ಕಾರ್ಯದರ್ಶಿಯಾದೆ. ಬಹುಷ, ಮೈಸೂರಿನ ಅವರ ಮನೆಯಲ್ಲಿಯೇ ಚಿಂತಕರ ಚಾವಡಿಯ ಮೊದಲ ಸಭೆ ನಡೆದಿತ್ತು ಎಂಬುದು ನೆನಪು.

ಮೈಸೂರು, ಹಾಸನ, ದಾವಣಗೆರೆ, ಕೊಪ್ಪಳ, ಹೊಸಪೇಟೆ, ಹರಿಹರ, ಮಂಗಳೂರು… ಹೀಗೆ, ಚಿಂತಕರ ಚಾವಡಿಯ ಸರಣಿ ಸಭೆಗಳಲ್ಲಿ ದಿನಗಟ್ಟಲೆ ಚರ್ಚೆಗಳು ನಡೆಯುತ್ತಿದ್ದವು. ಭಾನು ಮುಸ್ತಾಕ್, ರಹಮತ್ ತರೀಕೆರೆ, ದರ್ಗಾ, ಪುತ್ತಿಗೆ, ಪೀರ್ ಭಾಷಾ‌‌… ಹೀಗೆ ಘಟಾನುಘಟಿ ವಿದ್ವಾಂಸರ ಒಳನೋಟಗಳುಲ್ಲ ಮಾತುಗಳು, ಅಸ್ಸಾದಿಯವರಂತೂ ಕರಾವಳಿಯ ರಾಜಕಾರಣದಿಂದ ಹಿಡಿದು ಅಂತರಾಷ್ಟ್ರೀಯ ರಾಜಕಾರಣದ ವರಗೆ ವಿದ್ವತ್ ಪೂರ್ಣ ಚರ್ಚೆ ನಡೆಸುತ್ತಿದ್ದರು. ಈ ರಾಜಕಾರಣ ಮುಸ್ಲಿಮರ ಮೇಲೆ ಬೀರಿರುವ ಪರಿಣಾಮ, ಜಾಗತಿಕ ಸಾಮ್ರಾಜ್ಯಶಾಹಿ, ದೇಶೀಯ ಕೋಮುವಾದದ ಜಂಟಿ ಧಾಳಿಯ ಸಂದರ್ಭ ಮುಸ್ಲಿಮರು ಕಂಡುಕೊಳ್ಳಬೇಕಾದ ದಾರಿಯ ಕುರಿತು ಅಪರೂಪದ ವಿಷಯಗಳನ್ನು ಮಂಡಿಸುತ್ತಿದ್ದರು. ಅದು ನಮ್ಮಂತಹ ರಾಜಕೀಯ ಕಾರ್ಯಕರ್ತರಿಗೆ ಜ್ಞಾನವನ್ನು ಹರಿತಗೊಳಿಸಲು ತುಂಬಾ ಸಹಕಾರಿ ಆಗುತ್ತಿತ್ತು.

ಅಪಾರ ಪಾಂಡಿತ್ಯದ ತುಂಬಿದ ಕೊಡದಂತಿದ್ದ ಅಸ್ಸಾದಿಯವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ, ಕಾಪು ತಾಲೂಕಿನ ಶಿರ್ವ ಗ್ರಾಮದವರು.  ಅಂತರಾಷ್ಟ್ರೀಯ ಮಟ್ಟದ ವಿದ್ವಾಂಸರಾದರು ಯಾವುದೇ ಗರ್ವ ಇಲ್ಲದ ತೀರಾ ಸಜ್ಜನಿಕೆಯ ವ್ಯಕ್ತಿತ್ವ ಅವರದ್ದು. ಅಂತಹ ಮಹತ್ವದ ವಿದ್ವಾಂಸನಿಗೆ ಸಿಗಬೇಕಾದ ಗೌರವಗಳು, ದೊರಕಬೇಕಾದ ಅವಕಾಶಗಳು ಲಭ್ಯವಾದದ್ದು ಕಡಿಮೆ. ನಾಡಿನ ಯಾವುದಾದರು ವಿಶ್ವ ವಿದ್ಯಾನಿಲಯಕ್ಕೆ ದಶಕದ ಹಿಂದೆಯೆ ಅವರು ಕುಪಪತಿ ಆಗಬೇಕಿತ್ತು. ಲಾಬಿ ಮಾಡಲು ಬರದ ಅವರು ಅವಕಾಶ ವಂಚಿತರಾಗುತ್ತಲೇ ಸಾಗಿದರು. ಕಳೆದ ವರ್ಷ ಮಂಗಳೂರು ವಿ ವಿ ಗೆ ವಿಸಿ ಆಗಿಯೇ ಬಿಟ್ಟರು ಎಂದು ಎಲ್ಲರೂ ಭಾವಿಸುವಷ್ಟರಲ್ಲೆ ಯಾವುದೇ ಮುಲಾಜಿಲ್ಲದೆ ಅವರನ್ನು ಅಲ್ಲಿಗೆ ಬರದಂತೆ ತಡೆಯಲಾಗಿತ್ತು. ಆ ಅವಕಾಶ ನಿರಾಕರಣೆ, ನಿರಾಕರಣೆಯ ಕಾರಣಗಳು, ಆ ಸಂದರ್ಭದ ಬೆಳವಣಿಗೆಗಳು ಅವರನ್ನು ತೀರಾ ನೋವಿಗೆ ದೂಡಿತ್ತು. ಒಂದಿಷ್ಟು ಖಿನ್ನತೆಯೂ ಅವರ ಮಾಸದ ನಗುಮುಖದಲ್ಲಿ ಆ ತರುವಾಯ ಕಾಣುತ್ತಿತ್ತು. ಬಹುಷ, ಅವರು ಮುಸ್ಲಿಮರಲ್ಲದೆ ಇನ್ಯಾವುದೆ ರಾಜಕೀಯ ಬಲ ಉಳ್ಳ ಸಮುದಾಯದ ಹಿನ್ನಲೆ ಹೊಂದಿದ್ದರೆ ಕುಲಪತಿ ಬಿಡಿ ಅದರ ಹತ್ತು ಪಟ್ಟು ಮಹತ್ವದ ಖುರ್ಚಿಗಳು ಅವರನ್ನು ಹುಡುಕಿಕೊಂಡು ಬರುತ್ತಿತ್ತು‌. ಅವರ ಪರವಾಗಿ ಬಡಿದಾಡಲು ವಿಧಾನ ಸೌಧದಲ್ಲಿ, ಮುಖ್ಯಮಂತ್ರಿಯ ನಿವಾಸದಲ್ಲಿ ಯಾರೂ ಇರಲಿಲ್ಲ. 

ಕೆಲವು ವಿಷಯಗಳಲ್ಲಿ ತೀರಾ ಮುಗ್ಧರಾದ ಅಸ್ಸಾದಿಯವರು ಈ ಒಳರಾಜಕಾರಣವನ್ನು ಅರ್ಥಮಾಡುವುದರಲ್ಲಿ ಕೊನೆಯವರೆಗೂ ಸೋತರು‌. ತಮಗೆ ವಂಚನೆ ಆಗಿದೆ, ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದಾರೆ ಎಂದು ನಂಬಲು ಅವರು ಸುಲಭದಲ್ಲಿ ಸಿದ್ದರಿರಲಿಲ್ಲ. ತಾನು ನಂಬಿದವರು ಅವಕಾಶ ಒದಗಿಸುತ್ತಾರೆ ಎಂಬ ನಿರೀಕ್ಷೆಯನ್ನು ಅವರು ಕಳೆದುಕೊಂಡಿರಲಿಲ್ಲ. ಶಕ್ತಿ ರಾಜಕಾರಣದ ಒಳಹೊರಗನ್ನು, ಅದರ ಸಮೀಕರಣಗಳನ್ನು ತಲೆದೂಗುವಂತೆ ಮಂಡಿಸುತ್ತಿದ್ದ ರಾಜ್ಯಶಾಸ್ತ್ರದ ಈ ಮೇಷ್ಟ್ರು ಅದರ ತೀರಾ ಕೆಳದರ್ಜೆಯ ಕಾಲೆಳೆದಾಟಕ್ಕೆ ತಾನು ಬಲಿಪಶು ಆಗಿರುವುದನ್ನು ಅರ್ಥ ಮಾಡಿಕೊಳ್ಳಲೇ ಸಾಧ್ಯವಾಗದಿರುವುದು ನಿಜಕ್ಕೂ ಚೋದ್ಯ.

ಕಳೆದ ಮೇ ತಿಂಗಳಲ್ಲಿ ಸ್ನೇಹಿತರು, ಕುಟುಂಬದ ಜೊತೆಗೆ ಮೈಸೂರಿನ ಅವರ ಮನೆಯಲ್ಲಿ ಭೇಟಿಯಾಗಿದ್ದೆವು. ಗಂಟೆಗಟ್ಟಲೆ ಹರಟಿದ್ದೆವು. ಅದೇ ಪ್ರೀತಿಯನ್ನು ತೋರಿದ್ದರು. ಮಂಗಳೂರು ವಿ ವಿ ಕುಲಪತಿ ಸ್ಥಾನದಿಂದ ಅವರನ್ನು ವ್ಯವಸ್ಥೆ ಪ್ರಜ್ಞಾಪೂರ್ವಕ ಹೊರಗಿಟ್ಟಾಗ ನಾನು ಅವರ ಪರ ಎತ್ತಿದ ಧ್ವನಿಯನ್ನು ನೆನಪಿಸಿಕೊಂಡರು. ಮೊನ್ನೆ ಮೊನ್ನೆಯಷ್ಟೆ ಪುತ್ತೂರಿನಲ್ಲಿ ನಡೆದ ಎರಡು ದಿನಗಳ ವಿಚಾರ ಸಂಕಿರಣಕ್ಕೆ ಬಂದಿದ್ದರು. ನನ್ನ ಗೋಷ್ಟಿಗೆ ತಲುಪುವಷ್ಟರಲ್ಲಿ ಅವರ ಗೋಷ್ಟಿ ಮುಗಿಸಿ ತೆರಳಿದ್ದರು. ಭೇಟಿ ಸಾಧ್ಯವಾಗಿರಲಿಲ್ಲ. ಈಗ ಬದುಕು ಮುಗಿಸಿ ತೆರಳಿದ್ದಾರೆ, ಇನ್ನು ಭೇಟಿ ಸಾಧ್ಯವಿಲ್ಲ. ವಿದಾಯಗಳು ಸಾರ್.
ಮುನೀರ್ ಕಾಟಿಪಳ್ಳ

Related Articles

ಇತ್ತೀಚಿನ ಸುದ್ದಿಗಳು

You cannot copy content of this page