Thursday, January 9, 2025

ಸತ್ಯ | ನ್ಯಾಯ |ಧರ್ಮ

ಶರಣಾದ ನಕ್ಸಲರನ್ನು ಸರ್ಕಾರ ಹೇಗೆ ನಡೆಸಿಕೊಳ್ಳುವುದು ಎಂದು ಮುಂದಿನ ದಿನಗಳು ಹೇಳುತ್ತದೆ

ಸುಮಾರು ನಾಲ್ಕು ದಶಕದ ಹಿಂದೆ ನಮ್ಮ ತಂಡಕ್ಕಾಗಿಯೇ ಒಂದು ನಾಟಕ ಬರದಿದ್ದೆ. ನಾಟಕದ ಹೆಸರು‌‌ “ಅನಾಮಿಕರು “
ಅದು ಭೂಮಾಲೀಕತ್ವ ಮತ್ತು ನಕ್ಸಲ್ ಹೋರಾಟ ಹುಟ್ಟಿದ ಬಗೆಗಿನ ವಿಷಯದ್ದಾಗಿತ್ತು.

‌ಆ ಕಾಲದಲ್ಲಿ ನಾನು ಗಮನಿಸಿದ್ದ ಒಂದು ಸಂಗತಿಯೆಂದರೆ, “ಉಳುವವನಿಗೇ ಭೂಮಿ” ಹೋರಾಟದಲ್ಲಿ ಎಲ್ಲಾ ಎಡಪಂಥೀಯ ಕಾರ್ಮಿಕ ಸಂಘಟನೆಗಳು ರೈತರ ಪರವಾಗಿ ಕೆಲಸ ಮಾಡಿದ್ದವು.

ಆದರೆ ದೇವರಾಜ ಅರಸರ ಸರ್ಕಾರದ ಕಾಲದಲ್ಲಿ ಭೂಮಾಲಿಕರಾದ ರೈತರು ( ಇವರೆಲ್ಲರೂ ಸಣ್ಣ ಅತಿ‌ಸಣ್ಣ ರೈತರೇ) ನಂತರ ಇತರ ಹಳೆಯ ಭೂಮಾಲಿಕರ ಮನಸ್ಥಿತಿಯನ್ನು ಹೊಂದಿ ಆಚಾರ ವಿಚಾರ ಗಳಲ್ಲಿ ಅವರಂತೆಯೇ ವರ್ತಿಸತೊಡಗಿದ್ದು ಮತ್ತು ಕಾರ್ಮಿಕ ‌ವಿರೋಧಿಗಳಾದದ್ದು.

ಇದರಿಂದಾಗಿ ಆಗ ದ.ಕ ಜಿಲ್ಲೆಯಲ್ಲಿ ಬಹಳ ಪ್ರಬಲವಾಗಿದ್ದ ಎಡಪಂಥೀಯ ರಾಜಕೀಯ ಪಕ್ಷ ( ಸಿ.ಪಿ.ಎಂ) ದೊಡ್ಡ ಪ್ರಮಾಣದಲ್ಲಿ ತನ್ನ ಮತದಾರರನ್ನು ಕಳೆದುಕೊಂಡಿತು. ಯಾಕೆಂದರೆ ಭೂಸುಧಾರಣೆಯ ಫಲಾನುಭವಿಗಳಲ್ಲಿ ಹೆಚ್ಚಿನವರು ಕಾಂಗ್ರೆಸ್ ಬೆಂಬಲಿಗರಾದರು. ( ಇದನ್ನು ಖ್ಯಾತ ಬರಹಗಾರ ಜಿ.ರಾಜಶೇಖರ್ ಕೂಡಾ ದಾಖಲಿಸಿದ್ದಾರೆ)

ಈಗ ಅದೇ ಭೂಸುದಾರಣೆಯ ಫಲಾನುಭವಿಗಳ ಮುಂದಿನ ಪೀಳಿಗೆ ಹಿಂದುತ್ವದ ಬೆಂಬಲಿಗರಾಗಿದ್ದಾರೆ.

ನನ್ನ ನಾಟಕದಲ್ಲಿ ಹೀಗೆ ಭ್ರಮನಿರಸನ ಹಾಗೂ ವಂಚಿತರಾದೆವೆಂದುಕೊಂಡ ಕೆಲವರು ಶೋಷಿತು ಸಶಸ್ತ್ರ ಬಂಡಾಯಕ್ಕಿಳಿದು.. ಹುತಾತ್ಮರಾಗುವುದು ನಾಟಕದ ವಸ್ತು.

ನಮ್ಮ ಸುತ್ತ ಮತ್ತ ಇದ್ದ ಯುವಕರೆಲ್ಲ ನಾವೂ ನಾಟಕ ಕ್ಕೆ ಬರುತ್ತೇವೆ ಎಂದು ಸೇರಿ ನಾನು ನಿರಾಕರಿಸಲಾಗದೆ, ನಟರ ಸಂಖ್ಯೆ ನಲುವತ್ತು ದಾಟಿ. (ಅದರಲ್ಲಿ ನಾನೂ ಪಾತ್ರ ಮಾಡುತ್ತಿದ್ದೆ.!!)

ಆ ನಾಟಕ ವನ್ನು ಒಯ್ದು ಹೊರಗೆ ಎಲ್ಲಿಯೂ ಮಾಡಲಾಗದೆ. ನಮ್ಮಲ್ಲೇ ಎರಡು ಪ್ರದರ್ಶನ ಗಳಿಗೆ‌ ಪರಿಸಮಾಪ್ತಿ ಹೊಂದಿತು.!

ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ವಿಚಾರದಲ್ಲಿಯೂ ಅಷ್ಟೇ ಕಾಣದಿರುವ ದೊಡ್ಡ ಬಂಡವಾಳಿಗರು. ಮತ್ತು ಜವಾಬ್ದಾರಿ ಹೀನ‌ ಸರ್ಕಾರಕ್ಕಿಂತ ತಮ್ಮ ಎದುರುಗಿರುವ ಕೃಷಿ ಕಾರ್ಮಿಕರು, ಸಣ್ಣ ಕಸುಬುದಾರರು. ರಿಕ್ಷಾ ದವರು ಟ್ಯಾಕ್ಸಿ ಯವರು‌ ಶತ್ರುಗಳಂತೆ ಕಂಡದ್ದು ‌ಮತ್ತು ರೈತ ನಾಯಕರು ಅವರನ್ನು ತಿದ್ದದೆ ಹೋದದ್ದು.ರೈತ ಚಳುವಳಿ ಆಳ ವಿಸ್ತಾರ ಪಡೆಯದೆ. ಬಹಳ ಬೇಗ ಜನರಿಂದ ದೂರವಾಯಿತು..

ಇದೆಲ್ಲಾ ನಮ್ಮ‌ಚಳುವಳಿಗಳ ನೇತಾರರ ಸಮಸ್ಯೆಗಳು ಅಹಂಗಳು ಒತ್ತಟ್ಟಿಗಿರಲಿ, ನಮ್ಮ ಚಿಂತನಾ ಕ್ರಮದಲ್ಲಿಯೇ ಸಮಸ್ಯೆ ಇದೆ ಎನ್ನಿಸುವುದಿಲ್ಲವೇ..

ಯಾಕೆಂದರೆ ನಮಗೆ ಕಾಣದ ಕೈಗಳ ವಿರುದ್ದ ಸಂಘಟನೆ ಮಾಡುವುದಕ್ಕಿಂತ ನಮ್ಮ ಪಕ್ಕದಲ್ಲೇ ಇರುವ ಸಣ್ಣ ಭೂಮಾಲಿಕ. ಹಾಗೆಯೇ ಕಾರ್ಮಿಕ ರು, ರಿಕ್ಷಾದವರು, ಸಣ್ಣ ಸಣ್ಣ ಕಸುಬಿನವರನ್ನು ಪರಸ್ಪರ ವಿರುದ್ದವಾಗಿಸಿ ಸಂಘಟನೆ ಕಟ್ಟುವುದು ಸುಲಭ.

ಆದರೆ ಆ ಹೋರಾಟಗಳ ಅಷ್ಟೇ ಬೇಗ ಜನ ವಿರೋಧಿ ಎನಿಸಿಕೊಂಡು ಸೋಲುತ್ತವೆ. ಆಳುವವರು‌ ಅದಕ್ಕೆ ದೊಡ್ಡ ಪ್ರಚಾರ ಬೆಂಬಲವನ್ನು ಕೊಡುತ್ತಾರೆ.

ಇಷ್ಟಲ್ಲದೆ ಇನ್ನೂ ಹಲವಾರು ಸಮಸ್ಯೆ ಗಳ ನಡುವೆ ಜನಪರ ಹೋರಾಟಗಳು ನಡೆಯ ಬೇಕು. ಹೀಗಿದ್ದಾಗ ಐದಾರು ಜನರಿರಲಿ ಐದಾರು ಸಾವಿರ ಸಂಖ್ಯೆ ಯ ಹೋರಾಟ ಗಾರರನ್ನೂ ಹಣ ಮತ್ತು ರಾಜ್ಯ ಶಕ್ತಿ ಹೊಸಕಿ ಹಾಕಬಲ್ಲದು. ಇಂತಹ ಹೋರಾಟಗಾರರ ಬದುಕು ಎರಡೂ ಕಡೆ ಅತಂತ್ರ ವಾಗಿ ಬಿಡುತ್ತದೆ. ಈಗ ಆರು ಜನರು ಶರಣಾಗಿದ್ದಾರೆ.

ಇವರನ್ನು ಸರ್ಕಾರ ಹೇಗೆ ನಡೆಸಿಕೊಳ್ಳುತ್ತಿದೆ ಎನ್ನುವುದು ಮುಂದಿನ ದಿನಗಳು ಹೇಳುತ್ತವೆ.

ಇವರಿಗೆ ಮುಖ್ಯಮಂತ್ರಿ ಗಳು ಸಂವಿಧಾನದ ಪ್ರತಿ.ನೀಡಿದ್ದಾರೆ.
ಇವರನ್ನು ಯುವಪೀಳಿಗೆಯಲ್ಲಿ ಸಂವಿಧಾನದ ಅರಿವು ಮತ್ತು ಸಂವಿಧಾನದ ಅಡಿಯಲ್ಲಿಯೇ ಪ್ರಜಾಸತ್ತಾತ್ಮಕ ಹೋರಾಟಗಳ ಬಗ್ಗೆ ತಿಳುವಳಿಕೆ ನೀಡಲು ಬಳಸಿಕೊಳ್ಳಬಹುದು..

ಇದು ಸಾಧ್ಯವಾಗಬೇಕು….

ಪ್ರಸಾದ್‌ ರಕ್ಷಿದಿ
ಪರಿಸರವಾದಿಗಳು, ಚಿಂತಕರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page