Monday, January 13, 2025

ಸತ್ಯ | ನ್ಯಾಯ |ಧರ್ಮ

ಕ್ಯಾಪ್ಟನ್ ಪ್ರಿಯಾ ಜೈನರ ‘ವೀಲ್ಸ್ ಅಪ್’, ಕಾಕ್ ಪಿಟ್ ನ ಕಥೆಗಳು

“ಬಾನಲ್ಲಿ ಹಾರುವ ಒಂದೇ ಆಸೆ ಹೊತ್ತ ಹುಡುಗಿಯೊಬ್ಬಳು ಪೈಲಟ್ ತರಬೇತಿ ಮುಗಿಸಿ ನಂತರ ಏಳು ವರ್ಷ ಕಾದು, ದಾರಿ ಕವಲೊಡೆದೀತೆಂದು ಬೇರೆ ಯಾವ ಕೆಲಸವನ್ನೂ ಆರಿಸದೆ, ನಂಬಿಕೆ ಒಂದರಿಂದಲೇ ತನ್ನ ಕನಸನ್ನು ಕಾಪಾಡಿಕೊಂಡ ಕಥೆ ಕ್ಯಾಪ್ಟನ್ ಪ್ರಿಯಾ ಜೈನರ “ವೀಲ್ಸ್ ಅಪ್! – ಕಾಕ್’ಪಿಟ್ ನ ಕಥೆಗಳು”… ರೇಖಾ ಹೆಚ್ ಎಸ್ ಅವರ ಬರಹದಲ್ಲಿ

ಯಾವ ಕೆಲಸವನ್ನು ಮಾಡದೆ ಇರಲಾಗುವುದಿಲ್ಲವೋ, ನೆಮ್ಮದಿ, ಉತ್ಸಾಹ, ಖುಷಿಗಳಿರುವುದಿಲ್ಲವೋ, ನಿದ್ದೆ ಆಗುವುದಿಲ್ಲವೋ ಬಹುತೇಕ ಅದೇ ನಮ್ಮ ಜೀವನದ ನಿಜವಾದ ಗುರಿಯಾಗಿರುತ್ತದೆ. ನಮ್ಮ ಹೃದಯದ ದನಿಯನ್ನು ಅನುಸರಿಸಿದರೆ ಬ್ರಹ್ಮಾಂಡವೇ ನಮ್ಮ ಬೆನ್ನಿಗಿರುತ್ತದೆ ಎಂದು ಎಲ್ಲೋ ಓದಿದ ನೆನಪು.

ಬಾನಲ್ಲಿ ಹಾರುವ ಒಂದೇ ಆಸೆ ಹೊತ್ತ ಹುಡುಗಿಯೊಬ್ಬಳು ಪೈಲಟ್ ತರಬೇತಿ ಮುಗಿಸಿ ನಂತರ ಏಳು ವರ್ಷ ಕಾದು, ದಾರಿ ಕವಲೊಡೆದೀತೆಂದು ಬೇರೆ ಯಾವ ಕೆಲಸವನ್ನೂ ಆರಿಸದೆ, ನಂಬಿಕೆ ಒಂದರಿಂದಲೇ ತನ್ನ ಕನಸನ್ನು ಕಾಪಾಡಿಕೊಂಡ ಕಥೆ ಕ್ಯಾಪ್ಟನ್ ಪ್ರಿಯಾ ಜೈನರ “ವೀಲ್ಸ್ ಅಪ್! – ಕಾಕ್’ಪಿಟ್ ನ ಕಥೆಗಳು”.

ಈ ಪಯಣದ ಹಾದಿಯಲ್ಲಿ ಈಕೆ ಕಂಡುಕೊಂಡ ಜೀವನದ ಗುರಿ, ಪ್ರೇಮಗಳ ಸತ್ಯ, ಅರ್ಥ, ಬೆರಗುಗೊಳಿಸುವ ಸಾಕ್ಷಾತ್ಕಾರಗಳು ನಮ್ಮ ಅರಿವನ್ನೂ ವಿಸ್ತರಿಸುತ್ತವೆ.

ಮನಸು, ದೇಹವನ್ನು ಏರುಪೇರುಗೊಳಿಸಬಲ್ಲ ಸಮಯ ವಲಯ, ಗಾಳಿಯ ಒತ್ತಡದಲ್ಲಿ ಕೆಲಸ ಮಾಡಬೇಕಾದ್ದು, ದಿನದಿನವೂ ಮಲಗುವ ಸ್ಥಳದ ಬದಲಾವಣೆ, ತನ್ನವರೆಲ್ಲರಿಂದ ದೂರ ಇರಬೇಕಾದ್ದು ಹೀಗೆ ಏನೆಲ್ಲವನ್ನೂ ಎದುರಿಸುವವಳ ಜೀವನದ ನಿಜವಾದ ಗುರಿ ಹಾರುವುದೆಂಬುದನ್ನು ಕಾಣಿಸಿಕೊಡುತ್ತದೆ. ಉದ್ಯೋಗದಲ್ಲಿ ಬೆಳೆಯಬಲ್ಲಂಥ ದೊಡ್ಡ ಅವಕಾಶ ಮತ್ತು ತಾಯಿಯಾಗುವ ಆಯ್ಕೆ ಬಂದಾಗ ಆಕೆಯ ನಿರ್ಣಯ ಏನು ಮತ್ತು ಹೇಗೆ ತೀರ್ಮಾನ ಕೈಗೊಳ್ಳುತ್ತಾಳೆಂಬುದನ್ನು ಓದಿಯೇ ತಿಳಿಯಬೇಕು.

ದೇಶ ಸುತ್ತುವ ಈಕೆಯ ಹಾದಿಯಲ್ಲಿ ಸ್ತ್ರೀವಾದ, ಧರ್ಮ ಸಹಿಷ್ಣುತೆಗಳ ಅರಿವಿನ ಬೆಳಕಿದೆ. ವಿಶ್ವವನ್ನೇ ಕುಟುಂಬವೆಂದು ಬಗೆದು ಅದರೊಡನೆ ತನ್ನ ಕಲಿಕೆ, ಅನುಭವಗಳನ್ನು ಹಂಚಿಕೊಳ್ಳಬಯಸುವ ಈಕೆ ತನ್ನ ದಾರಿ ಹೇಗೆ ತನ್ನನ್ನು ವಿನೀತಳಾಗಿರಲು ಆದರೆ ಸೋಲೊಪ್ಪದೆ ಛಲದಿಂದ ಮುಂದುವರೆಯುವ ಆತ್ಮವಿಶ್ವಾಸವನ್ನು ಕಲಿಸಿತೆಂಬುದನ್ನೆಲ್ಲಾ ಮನಗಾಣಿಸುತ್ತಾರೆ.

ವಿಮಾನ ಹಾರಾಟ, ಸಿದ್ಧತೆ, ಪ್ರಯಾಣದ ಅನೇಕ ಹಂತಗಳಲ್ಲಿನ ಸವಾಲುಗಳು, ಸಾಮಾನ್ಯವಾಗಿ ತಿಳಿದಿರದ ಅನೇಕ ಸಂಗತಿಗಳು ಎಲ್ಲರಿಗೂ ಉಪಯುಕ್ತವಾಗಿದ್ದು ವಿಮಾನ ಪ್ರಯಾಣವನ್ನು ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಸುಗಮಗೊಳಿಸುವಂತಿದೆ. ಪೈಲಟ್ ಆಗಬೇಕೆನ್ನುವವರಂತೂ ಓದಲೇಬೇಕಾದ ಕೃತಿಯಿದು. ವಿಮಾನಯಾನದ ತಂತ್ರಜ್ಞಾನ, ಹಲವು ಆಯಾಮಗಳಂತಹ ಸಂಕೀರ್ಣ ವಿಷಯಗಳೂ ಸರಳವಾಗಿ ನಿರೂಪಿತವಾಗಿರುವ, ಭಿನ್ನ ಪ್ರಕಾರದ, ಭಿನ್ನ ರುಚಿಯ, ಉತ್ತಮ ಬರಹಗಾರರ ಲಕ್ಷಣಗಳಿರುವ ಒಂದೊಳ್ಳೆ ಓದು ಇದು.

~ ರೇಖಾ ಎಚ್ ಎಸ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page