Tuesday, January 14, 2025

ಸತ್ಯ | ನ್ಯಾಯ |ಧರ್ಮ

ಮೋದಿಗೂ ಕೇಜ್ರೀವಾಲ್‌ಗೂ ಏನೂ ವ್ಯತ್ಯಾಸ ಇಲ್ಲ, ಇಬ್ಬರೂ ಸುಳ್ಳು ಭರವಸೆ ಕೊಡುತ್ತಾರೆ: ರಾಹುಲ್‌ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಇಬ್ಬರೂ “ಸುಳ್ಳು ಭರವಸೆಗಳನ್ನು ನೀಡುತ್ತಾರೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.

“ಕೇಜ್ರಿವಾಲ್ ಅಧಿಕಾರಕ್ಕೆ ಬಂದಾಗ ದೆಹಲಿ ಹೇಗಿತ್ತು ಎಂದು ನಿಮಗೆ ನೆನಪಿದೆಯೇ? ಅವರು ಭ್ರಷ್ಟಾಚಾರವನ್ನು ತೊಡೆದುಹಾಕುತ್ತೇನೆ ಎಂದು ಹೇಳಿದರು. ಆದರೆ ನಿಜವಾಗಿ ಏನಾಯಿತು? ಮಾಲಿನ್ಯ ಮತ್ತು ಹಣದುಬ್ಬರ ಹೆಚ್ಚುತ್ತಲೇ ಇದೆ,” ಎಂದು‌ ರಾಹುಲ್ ಗಾಂಧಿ ಕೇಳಿದರು.

“ಮೋದೀಜಿಯಂತೆ ಅವರು ಒಂದರ ಮೇಲೊಂದರಂತೆ ಸುಳ್ಳು ಭರವಸೆಗಳನ್ನು ನೀಡುತ್ತಲೇ ಇರುತ್ತಾರೆ. ಇವರಿಬ್ಬರ ನಡುವೆ ಯಾವುದೇ ವ್ಯತ್ಯಾಸವಿಲ್ಲ,” ಎಂದು‌ ರಾಹುಲ್ ಗಾಂಧಿ ಹೇಳಿದರು.

ರಾಷ್ಟ್ರ ರಾಜಧಾನಿಯಲ್ಲಿ ಅಸೆಂಬ್ಲಿ ಚುನಾವಣೆಗೆ ಮುನ್ನ ಈಶಾನ್ಯ ದೆಹಲಿಯಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ ಬಂದವು.

“ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕೇಜ್ರಿವಾಲ್ ಮತ್ತು ಮೋದಿ ಕಾರಣ , ಇಬ್ಬರೂ ʼಕೆಲವು ಬಿಲಿಯನೇರ್‌ಗಳʼ ಸೇವೆ ಮಾಡುತ್ತಿದ್ದಾರೆ,” ಎಂದು ಆರೋಪಿಸಿದರು .

ಜಾತಿ ಗಣತಿ ನಡೆಸುವ ಬಗ್ಗೆ ಮತ್ತು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಮೇಲಿನ 50% ಮಿತಿಯನ್ನು ತೆಗೆದುಹಾಕುವ ಬೇಡಿಕೆಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಗಾಂಧಿ ಅವರು ಕೇಜ್ರಿವಾಲ್ ಅವರನ್ನು ಒತ್ತಾಯಿಸಿದರು. “ಹಿಂದುಳಿದವರಿಗೆ ಮೀಸಲಾತಿ ಮತ್ತು ಜಾತಿ ಗಣತಿಯನ್ನು ನಡೆಸುವಲ್ಲಿ ಅವರ ನಿಲುವು ಏನು ಎಂದು ಜನರು ಕೇಜ್ರಿವಾಲ್ ಅವರನ್ನು ಕೇಳಬೇಕು,” ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಇದಕ್ಕೆ ಪ್ರತಿಯಾಗಿ ಕೇಜ್ರಿವಾಲ್ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಹೇಳಿದ್ದಾರೆ: “ಇಂದು ರಾಹುಲ್ ಗಾಂಧಿ ದೆಹಲಿಗೆ ಬಂದಿದ್ದಾರೆ. ಅವರು ನನ್ನನ್ನು ತುಂಬಾ ನಿಂದಿಸಿದ್ದಾರೆ. ಆದರೆ ಅವರ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಕಾಂಗ್ರೆಸ್ ಉಳಿಸುವ ಹೋರಾಟ ಅವರದು. ದೇಶವನ್ನು ಉಳಿಸುವ ಹೋರಾಟ ನನ್ನದು.”

ಫೆಬ್ರವರಿ 5 ರಂದು ದೆಹಲಿಯ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ.

ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಆಪ್ ಇಂಡಿಯಾ ಬ್ಲಾಕ್ ಸದಸ್ಯರಾಗಿದ್ದರೂ ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ.

2024 ರ ಲೋಕಸಭಾ ಚುನಾವಣೆಯಲ್ಲಿ, ಎಎಪಿ-ಕಾಂಗ್ರೆಸ್ ಮೈತ್ರಿಯು ದೆಹಲಿಯ ಎಲ್ಲಾ ಏಳು ಸಂಸದೀಯ ಸ್ಥಾನಗಳನ್ನು ಬಿಜೆಪಿಯ ಮುಂದೆ ಕಳೆದುಕೊಂಡಿತು.

ಡಿಸೆಂಬರ್ 26 ರಂದು, ಆಮ್ ಆದ್ಮಿ ಪಕ್ಷವು ಕೇಜ್ರಿವಾಲ್ ಅವರನ್ನು “ರಾಷ್ಟ್ರ ವಿರೋಧಿ” ಎಂದು ಕರೆದ ಆರೋಪದ ಮೇಲೆ ಕಾಂಗ್ರೆಸ್‌ನ ದೆಹಲಿ ನಾಯಕ ಅಜಯ್ ಮಾಕೆನ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಅನ್ನು INDIA ಬಣದಿಂದ ತೆಗೆದುಹಾಕುವುದಾಗಿ ಹೇಳಿತ್ತು.

ದೆಹಲಿ ಚುನಾವಣೆಗೆ ಮುನ್ನ ಕಾಂಗ್ರೆಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಎಎಪಿ ನಾಯಕಿ ಮತ್ತು ಮುಖ್ಯಮಂತ್ರಿ ಅತಿಶಿ ಆರೋಪಿಸಿದ್ದಾರೆ. ಆಮ್ ಆದ್ಮಿ ಪಕ್ಷವನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ದೆಹಲಿಯ ಕಾಂಗ್ರೆಸ್ ಚುನಾವಣಾ ಅಭ್ಯರ್ಥಿಗಳು ಬಿಜೆಪಿಯಿಂದ ಹಣವನ್ನು ಪಡೆಯುತ್ತಿದ್ದಾರೆ ಎಂದು “ವಿಶ್ವಾಸಾರ್ಹ ಮೂಲಗಳಿಂದ” ತನ್ನ ಪಕ್ಷಕ್ಕೆ ಗೊತ್ತಾಗಿದೆ ಎಂದು ಅತಿಶಿ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page