Tuesday, January 21, 2025

ಸತ್ಯ | ನ್ಯಾಯ |ಧರ್ಮ

ಈ ಹಿಂದೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಇಬ್ಬರು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಬ್ರಾಹ್ಮಣ ಸಮಾವೇಶದಲ್ಲಿ!

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರಾದ ನ್ಯಾಯಮೂರ್ತಿಗಳಾದ ವೇದವ್ಯಾಸಾಚಾರ್ ಶ್ರೀಶಾನಂದ ಮತ್ತು ಕೃಷ್ಣ ಎಸ್ ದೀಕ್ಷಿತ್ ಅವರು ಕಳೆದ ಶನಿವಾರ ಹಾಗೂ ಭಾನುವಾರ ಬೆಂಗಳೂರಿನ ನಗರದ ಅರಮನೆ ಮೈದಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ “ಬ್ರಾಹ್ಮಣ ಮಹಾ ಸಮ್ಮೇಳನ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಈ ಸಂದರ್ಭದಲ್ಲಿ ಅವರು ಸಮಾಜಕ್ಕೆ ಸಮುದಾಯದ ಕೊಡುಗೆಗಳನ್ನು ಶ್ಲಾಘಿಸಿದರು ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.

“ನಾವು ‘ಬ್ರಾಹ್ಮಣರು’ ಎಂದು ಹೇಳುವುದೇ ಹೆಮ್ಮೆಯ ವಿಷಯವಾಗಿದೆ. ಯಾಕೆ? ಏಕೆಂದರೆ ಅವರು ದ್ವೈತ, ಅದ್ವೈತ, ವಿಶಿಷ್ಟ ಅದ್ವೈತ ಮತ್ತು ಸುಧಾ ಅದ್ವೈತ ಮುಂತಾದ ಅನೇಕ ಸಿದ್ಧಾಂತಗಳಿಗೆ ಜನ್ಮ ನೀಡಿದರು. ಈ ಸಮುದಾಯವೇ ಜಗತ್ತಿಗೆ [ತತ್ವಜ್ಞಾನಿ] ಬಸವನನ್ನು ಕೊಟ್ಟಿದೆ,” ಎಂದು ದೀಕ್ಷಿತ್ ಹೇಳಿಕೆಯನ್ನು ಬಾರ್ ಅಂಡ್ ಬೆಂಚ್ ಉಲ್ಲೇಖಿಸಿದೆ.

ಬ್ರಾಹ್ಮಣ ಸಮುದಾಯವು ಸಮಾಜಕ್ಕೆ ಹಲವಾರು ಮಹತ್ವದ ಕೊಡುಗೆಗಳನ್ನು ನೀಡಿದೆ ಮತ್ತು ಸಂವಿಧಾನವನ್ನು ರಚಿಸುವಲ್ಲಿ ಪಾತ್ರವನ್ನು ವಹಿಸಿದೆ ಎಂದು ದೀಕ್ಷಿತ್ ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವು ಜನವರಿ 18 ಮತ್ತು 19 ರಂದು ಬೆಂಗಳೂರಿನಲ್ಲಿ ವಿಶ್ವಾಮಿತ್ರ ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

“ಸಂವಿಧಾನದ ಕರಡು ಸಮಿತಿಯನ್ನು ರಚಿಸಿದಾಗ ಇದ್ದ ಏಳು ಸದಸ್ಯರಲ್ಲಿ ಮೂವರು ಬ್ರಾಹ್ಮಣರು. ಇದರಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಮತ್ತು ಗೋಪಾಲಸ್ವಾಮಿ ಅಯ್ಯಂಗಾರ್ ಸೇರಿದ್ದರು. ತರುವಾಯ, ಮತ್ತೊಬ್ಬ ಬ್ರಾಹ್ಮಣ ಬಿಎನ್ ರಾವ್ ಅವರನ್ನು ಸಲಹೆಗಾರರನ್ನಾಗಿ ನೇಮಿಸಲಾಯಿತು,” ಎಂದು ದೀಕ್ಷಿತ್ ಉಲ್ಲೇಖಿಸಿದ್ದಾರೆ.

“ಬಿಎನ್ ರಾವ್ ಅವರು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊದಲ ಭಾರತೀಯ ನ್ಯಾಯಾಧೀಶರಾದರು. ಅಂಬೇಡ್ಕರ್ ಕೂಡ ಒಮ್ಮೆ, ಬಿಎನ್ ರಾವ್ ಅವರು ಸಂವಿಧಾನವನ್ನು ಬರೆಯದೇ ಇದ್ದಿದ್ದರೆ ಅದು ರಚನೆಯಾಗಲು ಇನ್ನೂ 25 ವರ್ಷಗಳು ಬೇಕಾಗುತ್ತಿತ್ತು ಎಂದು ಭಂಡಾರ್ಕರ್ ಇನ್‌ಸ್ಟಿಟ್ಯೂಟ್‌ನಲ್ಲಿ ಹೇಳಿದ್ದರು” ಎಂದು ದೀಕ್ಷಿತ್‌ ಹೇಳಿದ್ದಾರೆ.

ಬ್ರಾಹ್ಮಣ ಎಂಬ ಪದವು ” ಒಂದು ವರ್ಣ, ಆದು ಜಾತಿಯ ಸೂಚಕವಾಗಿರಬಾರದು,” ದೀಕ್ಷಿತ್ ಹೇಳಿರುವುದನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ವರ್ಣವು ಹಿಂದೂ ಧರ್ಮಗ್ರಂಥಗಳಲ್ಲಿ ಬೇರೂರಿರುವ ಸಾಮಾಜಿಕ ಶ್ರೇಣೀಕರಣದ ವ್ಯವಸ್ಥೆ, ಅದು ಸಮಾಜವನ್ನು ಪುರೋಹಿತರು, ಯೋಧರು ಮತ್ತು ಆಡಳಿತಗಾರರು, ವ್ಯಾಪಾರಿಗಳು ಮತ್ತು ರೈತರು ಹಾಗೂ ಸೇವಕರು ಎಂದು ವಿಭಜಿಸುತ್ತದೆ ಮತ್ತು ಅವುಗಳಲ್ಲಿ ಪ್ರತಿಯೊಂದಕ್ಕೂ ಕರ್ತವ್ಯಗಳನ್ನು ನಿಗದಿಪಡಿಸುತ್ತದೆ.

“ವೇದವನ್ನು [ನಾಲ್ಕು ವೇದಗಳಾಗಿ] ವಿಭಾಗಿಸಿದ ವೇದವ್ಯಾಸರು ಒಬ್ಬ ಮೀನುಗಾರ ಮಹಿಳೆಯ ಮಗ ಮತ್ತು ರಾಮಾಯಣವನ್ನು ಬರೆದ ವಾಲ್ಮೀಕಿ ಎಸ್ಸಿ [ಪರಿಶಿಷ್ಟ ಜಾತಿ] ಅಥವಾ ಎಸ್ಟಿ [ಪರಿಶಿಷ್ಟ ಪಂಗಡ]. ನಾವು [ಬ್ರಾಹ್ಮಣರು] ಅವರನ್ನು ಕೀಳಾಗಿ ನೋಡಿದ್ದೇವೆಯೇ? ನಾವು ಶತಮಾನಗಳಿಂದ ರಾಮನನ್ನು ಪೂಜಿಸಿದ್ದೇವೆ ಮತ್ತು ಅವನ ಮೌಲ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ,” ಎಂದು ದೀಕ್ಷಿತ್ ಹೇಳಿದ್ದಾರೆ.

ಎಲ್ಲ ಸಮುದಾಯಗಳು ಸಹಬಾಳ್ವೆಯಿಂದ ಬಾಳಬೇಕು ಮತ್ತು ಪರಸ್ಪರ ಗೌರವಿಸಬೇಕು ಎಂದು ಅವರು ಹೇಳಿದರು. “ನಾವು ಎಲ್ಲಾ ಸಮುದಾಯಗಳನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು ಮತ್ತು ಒಟ್ಟಿಗೆ ಮುನ್ನಡೆಯಬೇಕು. ನನ್ನ ಹೇಳಿಕೆಗಳನ್ನು ಈ ಅರ್ಥದಲ್ಲಿ ನೋಡಬೇಕು,” ಎಂದು ದೀಕ್ಷಿತ್ ಹೇಳಿದ್ದಾರೆ.

“ಅವರ [ಸಮುದಾಯಗಳ] ಸಮಸ್ಯೆಗಳನ್ನು ಚರ್ಚಿಸಲು” ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಶ್ರೀಶಾನಂದ ಹೇಳಿದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ಸಮಾಜದಲ್ಲಿ ಅನೇಕ ಜನರು ಒಪ್ಪತ್ತಿನ ಊಟಕ್ಕಾಗಿ, ಶಿಕ್ಷಣ ಪಡೆಯಲು ಕಷ್ಟಪಡುತ್ತಿರುವಾಗ ಇಂತಹ ಮಹಾಸಭೆ ಮತ್ತು ಸಮ್ಮೇಳನದ ಅಗತ್ಯವಿದೆಯೇ ಎಂಬ ಪ್ರಶ್ನೆಗಳು ನನಗೆ ಎದುರಾಗಿವೆ. ಎಲ್ಲರನ್ನೂ ಒಟ್ಟಿಗೆ ಸೇರಿಸುವುದು ಮತ್ತು ನಮ್ಮ ಸಮಸ್ಯೆಗಳನ್ನು ಪ್ರಸ್ತುತಪಡಿಸುವುದು ಇದರ ಗುರಿಯಾಗಿದೆ. ಬೇರೆ ಯಾವುದೇ ಉದ್ದೇಶವಿಲ್ಲ. ಅಂತಹ ಸ್ಥಳ ಮತ್ತು ಅಂತಹ ವೈಭವ ಏಕೆ ಇರಬಾರದು? ನಮಗೆ ಯಾವುದರಲ್ಲಿ ಕೊರತೆಯಿದೆ? ನಾವು ಯಾವುದರಲ್ಲಿ ಬಡವರು? ದೇವರ ಕೃಪೆಯ ದೃಷ್ಟಿಯಲ್ಲಿ ಎಲ್ಲರೂ ಶ್ರೀಮಂತರೇ. ಪ್ರತಿಯೊಂದು ಕಾರ್ಯವನ್ನು ಭಕ್ತಿಯಿಂದ ಮಾಡಿದರೆ ಅದು ಭಗವಂತನಿಗೆ ಇಷ್ಟವಾದಂತೆ ಎಂಬುದು ಭಗವದ್ಗೀತೆಯ ಸಾರ,” ಎಂದು ಶ್ರೀಶಾನಂದ ಅವರ ಹೇಳಿಕೆಯನ್ನು ಉಲ್ಲೇಖಿಸಿ ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಇಬ್ಬರೂ ನ್ಯಾಯಾಧೀಶರ ಹಿಂದಿನ ವಿವಾದಗಳು:

2020 ರಲ್ಲಿ, ಅತ್ಯಾಚಾರದ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ದೀಕ್ಷಿತ್ ಮಹಿಳಾ ದೂರುದಾರರ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಅತ್ಯಾಚಾರಚಾದ ಮೇಲೆ ಮಲಗುವುದು ʼಭಾರತೀಯ ಮಹಿಳೆಗೆʼ ಯೋಗ್ಯವಲ್ಲ ಎಂಬ ಹೇಳಿಕೆ ನೀಡಿದ್ದರು. ವಕೀಲರ ಮತ್ತು ಸಾಮಾಜಿಕ ಕಾರ್ಯಕರ್ತರ ವಿರೋಧಗಳ ನಂತರ ಅವರ ಹೇಳಿಕೆಯನ್ನು ತೆಗೆದುಹಾಕಲಾಯಿತು.

ಸೆಪ್ಟೆಂಬರ್‌ನಲ್ಲಿ, ಎರಡು ಪ್ರತ್ಯೇಕ ವಿಚಾರಣೆಗಳಲ್ಲಿ ಶ್ರೀಶಾನಂದ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದಾಗ ಸುಪ್ರೀಂ ಕೋರ್ಟ್ ಸ್ಪಷ್ಟನೆಯನ್ನುಕೇಳಿತ್ತು.

ವಿಚಾರಣೆಯೊಂದರಲ್ಲಿ, ಶ್ರೀಶಾನಂದ ಅವರು ಬೆಂಗಳೂರಿನ ಗೋರಿ ಪಾಳ್ಯದ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶವನ್ನು “ಪಾಕಿಸ್ತಾನ” ಎಂದು ಉಲ್ಲೇಖಿಸಿ ವ್ಯಾಪಕ ವಿರೋಧಕ್ಕೆ ಗುರಿಯಾಗಿದ್ದರು. ಆಗಸ್ಟ್‌ 28, 2024 ರಂದು ದೇಶದಲ್ಲಿ ಸಂಚಾರಿ ಶಿಸ್ತನ್ನು ರೂಢಿಸಿಕೊಳ್ಳುವ ಅಗತ್ಯದ ಕುರಿತು ಮಾತನಾಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿ ಹಿಂಸಾಚಾರದ ಬೆದರಿಕೆಯನ್ನು ಎದುರಿಸುತ್ತಿರುವುದರಿಂದ ಈ ಪ್ರದೇಶದಲ್ಲಿ ಸಂಚಾರ ನಿಯಮಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.

ಆ ನಂತರ ಸುಪ್ರೀಂ ಕೋರ್ಟ್ ಶ್ರೀಶಾನಂದ ಅವರ ಕ್ಷಮೆಯಾಚನೆಯನ್ನು ಅಂಗೀಕರಿಸಿತು ಮತ್ತು ಅವರ ವಿರುದ್ಧದ ವಿಚಾರಣೆಯನ್ನು ಮುಕ್ತಾಯಗೊಳಿಸಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page