Tuesday, January 21, 2025

ಸತ್ಯ | ನ್ಯಾಯ |ಧರ್ಮ

ಮಂಗಳೂರಿನಲ್ಲಿ ಕೊರಗರ ‘ಆಕ್ರೋಶ’ ಸಂಭ್ರಮ – ನವೀನ್ ಸೂರಿಂಜೆ

ಕೊರಗರ ಸ್ವಾಭಿಮಾನಿ ಚಳವಳಿಯ ಮುಂದುವರೆದ ಭಾಗವಾಗಿ ಮಂಗಳೂರಿನಲ್ಲಿ ಆದಿವಾಸಿ ಆಕ್ರೋಶ ರ್ಯಾಲಿ ನಡೆಯುತ್ತಿದೆ. ಭೂ ಮಾಲಕರು ಮತ್ತು ಪ್ರಭುತ್ವಕ್ಕೆ ತಮ್ಮ ನೆರಳೂ ಸೋಕದಂತೆ, ಶತಶತಮಾನದಿಂದ ಶೋಷಣೆ ಅನುಭವಿಸುತ್ತಲೇ ಅಳಿವಿನಂಚಿಗೆ ಸರಿದಿರುವ ಕೊರಗ ಸಮುದಾಯ ಬೆನ್ನು ಸೆಟೆದು ನಿಂತಿದೆ. ಆಕ್ರೋಶದ ಘೋಷಣೆಯೊಂದಿಗೆ ಕೊರಗರು ಡೋಲು, ಬಿಲ್ಲು, ಬಾಣಗಳೊಂದಿಗೆ ಮಂಗಳೂರಿನ ನಗರಕ್ಕೆ ಬರುತ್ತಿದ್ದಾರೆ. ಕರಾವಳಿಯ ಪ್ರಜ್ಞಾವಂತ ನಾಗರಿಕರು ಕೊರಗರ ಧ್ವನಿಗೆ ಧ್ವನಿ ಸೇರಿಸಬೇಕಿದೆ - ನವೀನ್‌ ಸೂರಿಂಜೆ

‘ಧ್ವನಿಯೇ ಇಲ್ಲದ ಸಮುದಾಯವಾಗಿರುವ ಕೊರಗರ ಆಕ್ರೋಶ-ಪ್ರತಿಭಟನೆ ಎಂಬುದೇ ಒಂದು ಸಂಭ್ರಮ’ ಎಂದು 2000 ನೇ ಇಸವಿಯಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ಹೇಳಿದ್ದರು. ಇಂತದ್ದೊಂದು ಸಂಭ್ರಮ 2025 ಜನವರಿ 23 ರಂದು ಮಂಗಳೂರಿನಲ್ಲಿ ‘ಆದಿವಾಸಿ ಆಕ್ರೋಶ ರ್ಯಾಲಿ’ ಹೆಸರಿನಲ್ಲಿ ನಡೆಯಲಿದೆ.

ಕಳತ್ತೂರು ಭೂ ಆಂದೋಲನವು 2000ನೇ ಇಸವಿಯಲ್ಲಿ ಒಂದು ತಿಂಗಳ ಕಾಲ ನಡೆದ ಪಾದಯಾತ್ರೆಯಾಗಿತ್ತು. ಕೊರಗರಿಗೆ ಭೂಮಿಗಾಗಿ ಆಗ್ರಹಿಸಿ ಉಡುಪಿಯಿಂದ ಹೊರಟು ಉಡುಪಿಯಾದ್ಯಂತ ಸಂಚರಿಸಿ ಹೆಬ್ರಿಯ ಕಳತ್ತೂರಿನಲ್ಲಿ ಕೊನೆಗೊಂಡು 200 ಎಕರೆ ಮೀಸಲು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು 200 ತಾತ್ಕಾಲಿಕ ಮನೆಗಳನ್ನು ನಿರ್ಮಿಸಲಾಯಿತು. ಇದಾದ 15 ದಿನಗಳಲ್ಲಿ ಅರಣ್ಯ ಇಲಾಖೆ ನೀಡಿದ ದೂರಿನಂತೆ ಪೊಲೀಸರು ಕೊರಗ ಮುಖಂಡರನ್ನು ಬಂಧಿಸಿದರು. 27 ಮಂದಿ ಕೊರಗರನ್ನು ಬಂಧಿಸಲಾಗಿದ್ದು ಅದರಲ್ಲಿ 20 ಮಂದಿ ಮಹಿಳೆಯರು. ಈ ಆಂದೋಲನದ ಫಲವಾಗಿ ಉಡುಪಿ ಜಿಲ್ಲೆಯಲ್ಲಿ ಕೊರಗ ಬುಡಕಟ್ಟು ಜನಾಂಗಕ್ಕೆ 350 ಎಕರೆ ಜಮೀನು ಮಂಜೂರಾಗಿದೆ.

ಭೂ ಹೋರಾಟ ನಡೆಸಿದ ಕೊರಗರ ಮೇಲೆ ಪ್ರಕರಣ ದಾಖಲಿಸಿರುವುದು ಕರ್ನಾಟಕ ವಿಧಾನಸಭೆಯಲ್ಲೂ ಚರ್ಚೆಯಾಯಿತು. ಆಗಿನ ಬ್ರಹ್ಮಾವರ ಶಾಸಕ ಜಯಪ್ರಕಾಶ್ ಹೆಗ್ಡೆಯವರು ‘ಕೊರಗ ಸಮುದಾಯದ ಮೇಲೆ ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದ್ದರು. ಆಗ ಸಮಾಜ ಕಲ್ಯಾಣ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ಪ್ರತಿಕ್ರಿಯೆ ನೀಡುತ್ತಾ ‘ಇಲ್ಲಿಯವರೆಗೆ ಧ್ವನಿಯೇ ಇಲ್ಲದ ಕೊರಗ ಸಮುದಾಯಕ್ಕೆ ಭೂ ಒಡೆತನ ಬೇಕು ಎಂಬ ಪ್ರಜ್ಞೆ ಬಂದಿರುವುದಕ್ಕೆ ನಾವುಗಳು ಸಂಭ್ರಮ ಪಡಬೇಕು. ಇದು ಕೇಸ್ ಹಾಕುವಂತಹ ಘಟನೆಯಲ್ಲ. ಸಂಭ್ರಮ ಪಡುವ ವಿಚಾರ. ಹಾಗಾಗಿ ಗೃಹ ಸಚಿವರ ಜೊತೆ ಮಾತಾಡಿ ಕೇಸ್ ವಾಪಸ್ ಪಡೆಯಲು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

ಪಳ್ಳಿ ಗೋಕುಲದಾಸರ ಬಳಿಕ ಕರಾವಳಿಯಲ್ಲಿ ಅಲ್ಲಲ್ಲಿ ಹಲವಾರು ಕೊರಗ ಸಂಘಟನೆಗಳು ಭೂಮಿಗಾಗಿ ಚಳವಳಿ ನಡೆಸುತ್ತಿವೆ. ಉಪವಾಸ ಸತ್ಯಾಗ್ರಹಗಳು, ಧರಣಿಗಳು ಬೇಕಾದಷ್ಟು ನಡೆದಿವೆ. ಆದರೆ ಆಕ್ರೋಶದ ಧ್ವನಿಯಲ್ಲಿ ಕೊರಗ ಸಮುದಾಯ 25 ವರ್ಷಗಳ ಬಳಿಕ ಬೀದಿಗಿಳಿದಿದೆ. 1993 ರಿಂದ 2000 ನೇ ಇಸವಿಯವರೆಗೆ ನಡೆದ ಭೂ ಹೋರಾಟಗಳು ಪ್ರಭುತ್ವಕ್ಕೆ ಕೊರಗರ ಆಗ್ರಹವಾಗಿತ್ತು. ಆದರೆ ಈ ಬಾರಿಯ ಆದಿವಾಸಿ ಆಕ್ರೋಶ ರ್ಯಾಲಿ ಪ್ರಭುತ್ವ-ಭೂಮಾಲಕರು-ಬಂಡವಾಳಶಾಹಿಗಳ ವಿರುದ್ಧದ ಹೋರಾಟವಾಗಿದೆ. ಸರ್ಕಾರದ ನಿರ್ಲಕ್ಷ್ಯತನ, ಜನವಿರೋಧಿ ನೀತಿಗಳು, ಜಾಗತೀಕರಣ ಪರಿಣಾಮಗಳ ಬಗ್ಗೆ ಕೊರಗ ಸಮುದಾಯ ಮೊದಲ ಬಾರಿ ಸಾರ್ವಜನಿಕವಾಗಿ ಮಾತನಾಡಲಿದೆ.

ಈಗ ಕೊರಗರು ಏಕಾಂಗಿ ಸಮುದಾಯವಾಗಿ ಉಳಿದಿಲ್ಲ. ಕೊರಗರೊಂದಿಗೆ ಆದಿವಾಸಿ ಸಮುದಾಯಗಳೆಲ್ಲವೂ ಕೈಜೋಡಿಸಿದೆ. ಆದಿವಾಸಿಗಳೊಳಗಿನ ಸ್ಪೃಶ್ಯ-ಅಸ್ಪೃಶ್ಯ ಎಂಬ ಅಂತರಗಳನ್ನು ಆದಿವಾಸಿ ಸಮನ್ವಯ ಸಮಿತಿ ತೊಡೆದು ಹಾಕಿದೆ. ಆದಿವಾಸಿ-ದಲಿತರು ತಮ್ಮೊಳಗಿನ ಅಸಮಾನತೆಯನ್ನು ಮೊದಲು ಅಳಿಸಿದ ಬಳಿಕ ಮೇಲ್ವರ್ಗಗಳು ನಡೆಸುವ ಅಸಮಾನತೆಯನ್ನು ಪ್ರಶ್ನಿಸಲು ಸದೃಡರಾಗುತ್ತಾರೆ ಎಂಬುದನ್ನು ಆದಿವಾಸಿ ಸಮನ್ವಯ ಸಮಿತಿಯು ತನ್ನ ವ್ಯಾಪ್ತಿಯೊಳಗಿರುವ ಆದಿವಾಸಿಗಳಿಗೆ ಕಲಿಸಿಕೊಟ್ಟಿದೆ. ಹಾಗಾಗಿ ಕೊರಗರ ಸಂಬಂಧ ನಡೆಯುತ್ತಿರುವ ಆದಿವಾಸಿ ಆಕ್ರೋಶ ರ್ಯಾಲಿಗೆ ಆದಿವಾಸಿ ಮಲೆಕುಡಿಯ/ ಗೌಡ್ಲು ಸಮುದಾಯಗಳು ಬೆಂಬಲ ಸೂಚಿಸಿವೆ. ನೂರಾರು ಸಂಖ್ಯೆಯ ಮಲೆಕುಡಿಯರೂ ಕೂಡಾ ಆದಿವಾಸಿಗಳ ಘೋಷಣೆಗೆ ಧ್ವನಿಗೂಡಿಸಲಿದ್ದಾರೆ. ಆ ಕಾರಣಕ್ಕೂ ಇದೊಂದು ಚಾರಿತ್ರಿಕ ಹೋರಾಟವಾಗಲಿದೆ.

ಕೊರಗರ ಸ್ವಾಭಿಮಾನಿ ಚಳವಳಿಯ ಮುಂದುವರೆದ ಭಾಗವಾಗಿ ಮಂಗಳೂರಿನಲ್ಲಿ ಆದಿವಾಸಿ ಆಕ್ರೋಶ ರ್ಯಾಲಿ ನಡೆಯುತ್ತಿದೆ. ಭೂ ಮಾಲಕರು ಮತ್ತು ಪ್ರಭುತ್ವಕ್ಕೆ ತಮ್ಮ ನೆರಳೂ ಸೋಕದಂತೆ, ಶತಶತಮಾನದಿಂದ ಶೋಷಣೆ ಅನುಭವಿಸುತ್ತಲೇ ಅಳಿವಿನಂಚಿಗೆ ಸರಿದಿರುವ ಕೊರಗ ಸಮುದಾಯ ಬೆನ್ನು ಸೆಟೆದು ನಿಂತಿದೆ. ಆಕ್ರೋಶದ ಘೋಷಣೆಯೊಂದಿಗೆ ಕೊರಗರು ಡೋಲು, ಬಿಲ್ಲು, ಬಾಣಗಳೊಂದಿಗೆ ಮಂಗಳೂರಿನ ನಗರಕ್ಕೆ ಬರುತ್ತಿದ್ದಾರೆ. ಕರಾವಳಿಯ ಪ್ರಜ್ಞಾವಂತ ನಾಗರಿಕರು ಕೊರಗರ ಧ್ವನಿಗೆ ಧ್ವನಿ ಸೇರಿಸಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page