Thursday, January 30, 2025

ಸತ್ಯ | ನ್ಯಾಯ |ಧರ್ಮ

ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ಆರು ಆರೋಪಿಗಳಿಗೂ ಜಾಮೀನು ಮಂಜೂರು

ಮುಂಬೈ: ಖ್ಯಾತ ವಿಚಾರವಾದಿ ಮತ್ತು ಬರಹಗಾರ ಗೋವಿಂದ ಪನ್ಸಾರೆ ಅವರ ಹತ್ಯೆ ಪ್ರಕರಣದ ಆರು ಆರೋಪಿಗಳಿಗೆ ಬಾಂಬೆ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ. ಆರು ಆರೋಪಿಗಳು ದೀರ್ಘಕಾಲ ಜೈಲಿನಲ್ಲಿ ಇರುವುದರಿಂದ ಅವರಿಗೆ ಜಾಮೀನು ನೀಡುತ್ತಿರುವುದಾಗಿ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕಿಲೋರ್ ಹೇಳಿದ್ದಾರೆ.

ಮತ್ತೊಬ್ಬ ಆರೋಪಿ ವೀರೇಂದ್ರ ಸಿಂಗ್ ತವಾಡೆ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುವುದು ಎಂದು ಅವರು ಹೇಳಿದರು. ಆರೋಪಿಗಳನ್ನು 2018-2019ರ ನಡುವೆ ಬೇರೆ ಬೇರೆ ದಿನಾಂಕಗಳಲ್ಲಿ ಪೊಲೀಸರು ಬಂಧಿಸಿದ್ದರು.

2015ರ ಫೆಬ್ರವರಿ 20ರಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬೆಳಗಿನ ನಡಿಗೆಯಿಂದ ಮನೆಗೆ ಮರಳುತ್ತಿದ್ದ ಪನ್ಸಾರೆ ಮೇಲೆ ಮೋಟಾರ್ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ್ದರು. ಈ ಪ್ರಕರಣವನ್ನು ಆರಂಭದಲ್ಲಿ ಕೊಲ್ಲಾಪುರದ ರಾಜಾರಾಂಪುರಿ ಪೊಲೀಸ್ ಠಾಣೆ ತನಿಖೆ ನಡೆಸಿತ್ತು. ನಂತರ ಅದನ್ನು ಮಹಾರಾಷ್ಟ್ರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ (ಸಿಐಡಿ) ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸಲಾಯಿತು.

ಆರೋಪಿಗಳನ್ನು ಗುರುತಿಸುವಲ್ಲಿ ಯಾವುದೇ ಪ್ರಗತಿ ಇಲ್ಲದ ಕಾರಣ ಪ್ರಕರಣವನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ವರ್ಗಾಯಿಸಬೇಕೆಂದು ಪನ್ಸಾರೆ ಅವರ ಕುಟುಂಬ ಸದಸ್ಯರು ಕೋರಿದ್ದಾರೆ. ಆಗಸ್ಟ್ 3, 2022 ರಂದು, ಬಾಂಬೆ ಹೈಕೋರ್ಟ್ ಪ್ರಕರಣವನ್ನು ಎಟಿಎಸ್‌ಗೆ ವರ್ಗಾಯಿಸಿತು.

12 ಜನರಲ್ಲಿ ಹತ್ತು ಜನರನ್ನು ಬಂಧಿಸಲಾಯಿತು ಮತ್ತು ನಾಲ್ಕು ಪೂರಕ ಆರೋಪಪಟ್ಟಿಗಳನ್ನು ಸಲ್ಲಿಸಲಾಯಿತು. ಈ ಹತ್ತು ಆರೋಪಿಗಳ ವಿರುದ್ಧ ತನಿಖೆ ಮುಂದುವರೆದಿದೆ. ಈ ಪ್ರಕರಣದಲ್ಲಿ ಇಬ್ಬರು ಶೂಟರ್‌ಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.

ಆರಂಭದಿಂದಲೂ ಪ್ರಕರಣವನ್ನು ಮೇಲ್ವಿಚಾರಣೆ ಮಾಡುತ್ತಿರುವ ಹೈಕೋರ್ಟ್, ಈ ತಿಂಗಳ ಆರಂಭದಲ್ಲಿ ಮೇಲ್ವಿಚಾರಣೆಯನ್ನು ಮುಂದುವರಿಸುವುದಾಗಿ ಹೇಳಿದೆ. ಆದರೆ, ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಬೇಕು ಮತ್ತು ದೈನಂದಿನ ತನಿಖೆ ನಡೆಸಬೇಕೆಂದು ಅದು ಆದೇಶಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page