Wednesday, February 5, 2025

ಸತ್ಯ | ನ್ಯಾಯ |ಧರ್ಮ

ವಿಜಯೇಂದ್ರ ಮತ್ತೆ ಬಿಜೆಪಿ ಅಧ್ಯಕ್ಷರಾದರೆ ನಾವು ನಮ್ಮ ದಾರಿ ನೋಡಿಕೊಳ್ಳುತ್ತೇವೆ: ಯತ್ನಾಳ್‌ ಬಣ

ಬಿಜೆಪಿಯ ಬಣ ಗುದ್ದಾಟ ತಾರ್ಕಿಕ ಅಂತ್ಯಕ್ಕೆ ತಲುಪಿದ್ದು, ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಪುನರಾಯ್ಕೆ ಆದರೆ ನಮ್ಮ ತೀರ್ಮಾನವನ್ನು ತಿಳಿಸುತ್ತೇವೆ ಎಂದು ಭಿನ್ನರ ಬಣದ ನಾಯಕ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ಕುರಿತು ಚರ್ಚಿಸಲು ಹಾಗೂ ಪಕ್ಷದ ಸಂಘಟನೆ ಕುರಿತು ನಮ್ಮ ದೂರು ಆಲಿಸಲು ಪಕ್ಷದ ವರಿಷ್ಠರು ನನಗೆ ಹಾಗೂ ನಮ್ಮ ತಂಡದ ಭೇಟಿಗೆ ಸಮಯಾವಕಾಶ ನೀಡಿದ್ದಾರೆ.

ನಮ್ಮ ತಂಡದ ಇತರರೆಲ್ಲರೂ ಒಬ್ಬೊಬ್ಬ ಬಿಜೆಪಿ ವರಿಷ್ಠರನ್ನು ಭೇಟಿಯಾಗಲಿದ್ದಾರೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಮ್ಮ ತಂಡದಿಂದ ಅಭ್ಯರ್ಥಿ ಯಾರು ಆಗಬೇಕು ಎಂಬುದನ್ನು ಸಮಾಲೋಚಿಸಲಾಗುತ್ತಿದೆ. ವರಿಷ್ಠರು ಇಂತಹ ವರ್ಗದವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಎಂದರೆ ಅಂತಹ ವರ್ಗದವರನ್ನೇ ನಿಲ್ಲಿಸಲಾಗುವುದು. ಹಿಂದುಳಿದ ವರ್ಗ ಇಲ್ಲವೇ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರನ್ನೇ ಅಭ್ಯರ್ಥಿ ಎನ್ನುವುದಾದರೂ ತಮ್ಮ ತಂಡದಲ್ಲಿದ್ದಾರೆ. ಒಂದು ವೇಳೆ ಪುನಃ ಲಿಂಗಾಯತರೇ ಎನ್ನುವುದಾದರೆ ವಿಜಯೇಂದ್ರ ಎದುರು ನಾನೇ ಅಭ್ಯರ್ಥಿಯಾಗುವುದು ಖಚಿತ ಎಂದರು.

ಚುನಾವಣೆ ನಡೆದರೆ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ಮುಖಂಡರಿಗೆ ಬೆಲೆ ಬರುತ್ತದೆ. ಕೊನೆಯ ಪಕ್ಷ ಯಾರಿಗೂ ಕೈ ಮುಗಿಯದವರು ಈ ಸಂದರ್ಭದಲ್ಲಾದರೂ ಕೈ ಮುಗಿಯಲಿ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಪುನರಾಯ್ಕೆಯಾದರೆ ನಮ್ಮ ನಿಲುವು ಏನು ಎಂಬುದನ್ನು ಅಂದೇ ವಿವರವಾಗಿ ಹೇಳಲಾಗುವುದು.

ನಾನು ನಿನ್ನೆಯಿಂದ ರಾಜಕೀಯ ಮಾಡುತ್ತಿಲ್ಲ. ಯಡಿಯೂರಪ್ಪ ಸಮಕಾಲೀನ ವ್ಯಕ್ತಿ. ನನ್ನಿಂದ ಪಕ್ಷಕ್ಕೆ ಯಾವುದೇ ಹಾನಿ ಆಗಿಲ್ಲ. ನಾನು ಧ್ವನಿ ಎತ್ತಿದ್ದರಿಂದಲೇ ಕಾರ್ಯಕರ್ತರು ಜೀವಂತವಾಗಿದ್ದಾರೆ. ನಾನೇ ಪಕ್ಷಕ್ಕೆ ಆಶಾಕಿರಣ. ಹಿಂದುತ್ವ ವಾದ ಮೈಗೂಡಿಸಿಕೊಳ್ಳುವುದು, ವಂಶಪಾರಂಪರ್ಯ ಮತ್ತು ಭ್ರಷ್ಟಾಚಾರಮುಕ್ತ ಆಗಿರುವುದು ನಮ್ಮ ತಂಡದ ಧ್ಯೇಯವಾಗಿದೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page