Wednesday, February 12, 2025

ಸತ್ಯ | ನ್ಯಾಯ |ಧರ್ಮ

ಪಂಚ ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ಬೆಳಕಾಗುವಂತೆ ಅನುಷ್ಠಾನವಾಗಲಿ: ಅಧ್ಯಕ್ಷ ಎಸ್ ಆರ್ ಪಾಟೀಲ

ರಾಜ್ಯ ಸರಕಾರವು ಬಡ ಹಾಗೂ ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಇವುಗಳಿಂದ ಜನರ ಬದುಕಿನಲ್ಲಿ ಬೆಳಕು ಮೂಡಬೇಕೆಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಸ್.ಆರ್.ಪಾಟೀಲ ಅವರು ಹೇಳಿದರು.

ಅವರು ಇಂದು (ಫೆ.11) ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಬಗ್ಗೆ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು.

ಹುಬ್ಬಳ್ಳಿ ಧಾರವಾಡಕ್ಕೆ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡುವುದರಿಂದ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಸರಿಯಾಗಿ ಬಸ್‍ಗಳನ್ನು ಸಮಯಕ್ಕೆ ಸರಿಯಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್‍ಗಳ ವ್ಯವಸ್ಥೆಯಾಗಬೇಕು. ಹಳ್ಳಿಗಳಲ್ಲಿ ಸರಿಯಾಗಿ ಬಸ್ ಸಂಚಾರದ ವ್ಯವಸ್ಥೆಯನ್ನೂ ಸರಿಯಾಗಿ ಮಾಡಿ. ಯಾರಿಗೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಹೇಳಿದರು.

ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬಗಳು, ಜೋತು ಬಿದ್ದ ತಂತಿಗಳು ಬೆಂಡು ಆಗಿರುವ ಕಂಬಗಳು ಇದರಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ತೊಂದರೆ ಆಗುತ್ತಿದೆ, ಹೆಸ್ಕಾಂ ಅಧಿಕಾರಿಗಳು ಈ ಕುರಿತು ಗಮನಹರಿಸಿ ಕೂಡಲೇ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಹೇಳಿದರು.

ಯುವಕರಿಗೆ ಕೌಶಲ್ಯ ಅಭಿವೃಧ್ಧಿ ತರಬೇತಿಯನ್ನು ನೀಡುವಂತಹ ಕಾರ್ಯವನ್ನು ಮಾಡುವದರ ಜೊತೆಗೆ ಅದರಿಂದ ಎಷ್ಟು ಉಪಯೋಗವಾಗಿದೆ. ಜಿಲ್ಲಾ ಮಟ್ಟದಲ್ಲಿ ನಡೆಯುವ ಉದ್ಯೋಗ ಮೇಳದಂತೆ, ಎಲ್ಲಾ ತಾಲೂಕುಗಳಲ್ಲಿಯೂ ಸಹ ಉದ್ಯೋಗ ಮೇಳಗಳನ್ನು ಪ್ರಾರಂಭಿಸಲು ತಿಳಿಸಿದರು.

ಯುವನಿಧಿ ಯೋಜನೆಯು ಎಷ್ಟು ಜನರಿಗೆ ಉಪಯೋಗವಾಗಿದೆ, ಅದರಿಂದ ಎಷ್ಟು ಜನರಿಗೆ ಕೆಲಸ ಹುಡುಕುವುದಕ್ಕೆ ಸಹಾಯಕವಾಗಿದೆ ಎಂದು ವರದಿ ತಯಾರಿಸಿ, ಮುಂದಿನ ಸಭೆಯಲ್ಲಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಬಾಕಿ ಉಳಿದ ಪಡಿತರ ಚೀಟಿಯ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಆದಷ್ಟು ಬೇಗನೆ ಪಡಿತರ ಚೀಟಿ ವಿತರಿಸಬೇಕು. ಇದರಲ್ಲಿ ವಿಳಂಬವಾಗದಂತೆ ಕ್ರಮವಹಿಸಲು ಸೂಚಿಸಿದರು.

ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯದ ಹಣ ಡಿಬಿಟಿ ಮೂಲಕ ಸಂದಾಯವಾಗದ ಪಡಿತದಾರರ ಹೆಸರನ್ನು ನ್ಯಾಯಬೆಲೆ ಅಂಗಡಿಗಳ ಸೂಚನಾಫಲಕದಲ್ಲಿ ಪ್ರದರ್ಶಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಅನ್ನ ಭಾಗ್ಯ, ಯುವ ನಿಧಿ ಯೋಜನೆಗಳ ಬಾಕಿ ಫಲಾನುಭವಿಗಳಿಗೆ ಪರಿಶೀಲಿಸಿ ಆದಷ್ಟು ಬೇಗ ಸೌಲಭ್ಯ ಕಲ್ಪಿಸಬೇಕು.

ಅಧಿಕಾರಿಗಳು ಜನಪರ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಬೇಕೆಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಪ್ರತಿದಿನ 1080 ಬಸ್ ಸಂಚರಿಸುತ್ತವೆ. ಶಕ್ತಿ ಯೋಜನೆಯಡಿ ಹುಬ್ಬಳ್ಳಿ ಗ್ರಾಮೀಣ, ಹುಬ್ಬಳ್ಳಿ ಧಾರವಾಡ ಶಹರ ಮತ್ತು ಧಾರವಾಡ ಗ್ರಾಮೀಣ ವಿಭಾಗದಲ್ಲಿ ಪ್ರತಿದಿನ 3.53 ಲಕ್ಷ ಮಹಿಳೆಯರು ಉಚಿತವಾಗಿ ಸಂಚರಿಸುತ್ತಾರೆ. ಇದರಿಂದ ಪ್ರತಿದಿನ ರೂ. 68.81 ಲಕ್ಷ ಆಗುತ್ತದೆ. ಇಲ್ಲಿಯವರೆಗೆ ಈ ಯೋಜನೆಯಡಿ 2,118.31 ಲಕ್ಷ ಮಹಿಳೆಯರು ಸಂಚರಿಸಿದ್ದು, ರೂ. 41,287.86 ಲಕ್ಷ ಆದಾಯವಾಗಿದೆ ಎಂದು ಹುಬ್ಬಳ್ಳಿ ಗ್ರಾಮೀಣ ಸಂಚಾರ ವಿಭಾಗದ ವಿಭಾಗೀಯ ಅಧಿಕಾರಿ ಎಚ್.ರಾಮನಗೌಡರ್ ಸಭೆಯಲ್ಲಿ ತಿಳಿಸಿದರು.
ಗೃಹ ಜ್ಯೋತಿ ಯೋಜನೆಗೆ ಧಾರವಾಡ ಜಿಲ್ಲೆಯಲ್ಲಿ ಭಾಗ್ಯ ಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಯ 65,930 ಗ್ರಾಹಕರು ನೋಂದಣಿ ಆಗಿದ್ದು, ಶೇ. 100 ರಷ್ಟು ಸಾಧನೆ ಆಗಿದೆ. ಮತ್ತು 4,29,704 ಗೃಹ ಬಳಕೆ ಗ್ರಾಹಕರು ನೋಂದಣಿ ಆಗಿದ್ದು, ಶೇ. 86.48 ರಷ್ಟು ಸಾಧನೆ ಆಗಿದೆ. ಒಟ್ಟಾರೆ ಗೃಹ ಜ್ಯೋತಿ ಯೋಜನೆಯಡಿ 4,95,634 ಗ್ರಾಹಕರು ನೋಂದಣಿ ಮತ್ತು ಶೇ. 88.07 ರಷ್ಟು ಸಾಧನೆ ಆಗಿದೆ. ಮತ್ತು ಶೇ. 11.93 ರಷ್ಟು ಗ್ರಾಹಕರ ನೋಂದಣಿ ಆಗಬೇಕಿದೆ ಎಂದು ಧಾರವಾಡ ಶಹರ ವಿಭಾಗದ ಹೆಸ್ಕಾಂ ಕಾರ್ಯಪಾಲಕ ಅಭಿಯಂತರರಾದ ಅರವಿಂ ಗದಕರ ಹಾಗೂ ಗ್ರಾಮೀಣ ವಿಭಾಗದ ಇಇ ಎಂ.ಟಿ. ದೊಡಮನಿ ಅವರು ಸಭೆಯಲ್ಲಿ ತಿಳಿಸಿದರು.

ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರರಿಗೆ ನಗದು ವರ್ಗಾವಣೆ ಸೌಲಭ್ಯವನ್ನು ಕಳೆದ ಜುಲೈ 2023 ರಿಂದ ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆಯ ಹಾಗೂ ಬಿಪಿಎಲ್ ಸೇರಿ ಒಟ್ಟು 3,50,324 ಪಡಿತರ ಚೀಟಿಗಳಿವೆ. ಇಲ್ಲಿವರೆಗೆ ಡಿಬಿಟಿ ಮೂಲಕ ರೂ.296.167 ಕೋಟಿ ಹಣ ಸಂದಾಯ ಮಾಡಲಾಗಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಅವರು ಸಭೆಗೆ ತಿಳಿಸಿದರು.

ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ 3,89,184 ಫಲಾನುಭವಿಗಳಿದ್ದು, ಇದರಲ್ಲಿ 3,87,201 ಜನ ನೋಂದಣಿ ಆಗಿದ್ದಾರೆ. ಶೇ. 99.49 ರಷ್ಟು ಗುರಿ ಸಾಧನೆ ಆಗಿದ್ದು, ಆಗಸ್ಟ್ 2023 ರಿಂದ ಅಕ್ಟೋಬರ 2024 ರವರೆಗೆ ಈಗಾಗಲೆ ಹಣ ಜಮೆ ಆಗಿದ್ದು, ಉಳಿದಂತೆ ಬಾಕಿ ಜಮೆ ಕಾರ್ಯ ಪ್ರಗತಿಯಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಡಾ. ಎಚ್.ಎಚ್.ಕುಕನೂರ ಅವರು ಸಭೆಗೆ ಹೇಳಿದರು.

ಯುವನಿಧಿ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ 4,323 ಜನ ಪಧವಿದರರು ಮತ್ತು 100 ಡಿಪ್ಲೋಮಾ ಮಾಡಿರುವವರು ಸೇರಿ ಒಟ್ಟು 4,423 ಜನರಿಗೆ ಮಾಸಿಕ ಸಹಾಯಧನ ನೀಡಲಾಗುತ್ತದೆ. ಬಾಕಿ ಇರುವ 2,205 ಜನ ಫಲಾನುಭವಿಗಳಿಗೆ ಹಂತಹಂತವಾಗಿ ಆರ್ಥಿಕ ಸಹಾಯಧನ ಬಿಡುಗಡೆ ಮಾಡಲಾಗುತ್ತದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಬಸವಂತ ಪಿ.ಎಸ್. ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರವೀಂದ್ರ ದ್ಯಾಬೇರಿ ಅವರು ಸಭೆಯಲ್ಲಿ ತಿಳಿಸಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುμÁ್ಠನ ಪ್ರಾಧಿಕಾರದ ಉಪಾಧ್ಯಕ್ಷರುಗಳಾದ ಮುರಗಯ್ಯಾ ವಿರಕ್ತಮಠ, ಅರವಿಂದ ಏಗನಗೌಡರ, ಸುಧೀರ ಗೋಳಾರ, ಅಬ್ದುಲ್ ರಶೀದ್ ಬೋಳಾಬಾಯಿ, ರತ್ನಾ ತೇಗೂರಮಠ ಅವರು ಸಭೆಯಲ್ಲಿ ಉಪಸ್ಥಿತರಿದ್ದು, ಮಾತನಾಡಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಗ್ಯಾರಂಟಿ ಯೋಜನೆಗಳ ಅನುμÁ್ಠನದ ಪ್ರಾಧಿಕಾರದ ಸದಸ್ಯರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page