Thursday, February 13, 2025

ಸತ್ಯ | ನ್ಯಾಯ |ಧರ್ಮ

ಇಂತಹ ಚಿರಂಜೀವಿಗಳು ನಮ್ಮ ಸುತ್ತಮುತ್ತವೇ ಇರುವಾಗ..

“…ಇವತ್ತಿಗೂ ಹೆಣ್ಮಕ್ಕಳ ಬಗ್ಗೆ ಉದಾಹರಣೆ ಕೊಡಬೇಕು ಅಂದರೆ, ಇಂದಿರಾ ಗಾಂಧಿ, ಕಲ್ಪನಾಚಾವ್ಲಾ, ಮದರ್‌ ತೆರೆಸಾ, ಕಿರಣ್‌ ಮಜುಂದಾರ್‌, ಸುಧಾಮೂರ್ತಿ ತರಹದ ಬೆರಳೆಣಿಕೆಯ ಮಂದಿಯಷ್ಟೇ ಸಿಗೋದು! ಊರಿಗೊಂದು ಇಂತಹ ಹೆಣ್ಣು ಹುಟ್ಟುವಂತೆ ನೋಡಿಕೊಳ್ಳಬಹುದಾ ನೋಡಿ…” ವೀರಕಪುತ್ರ ಶ್ರೀನಿವಾಸ್ ಅವರ ಬರಹದಲ್ಲಿ

ಸಂಬಂಧಿಕರು: ನಿಂಗೊಂದು ಗಂಡ್‌ ಆಗ್ಬೇಕಿತ್ತು ಸೀನಪ್ಪಾ!
ಸ್ನೇಹಿತರು: ಹೇ, ಒಂದು ಗಂಡ್‌ ಮಗು ಮಾಡ್ಕೋಂಡುಬಿಡು.
ಹಿತೈಷಿಗಳು: ಇಷ್ಟೆಲ್ಲಾ ಯಾರಿಗಾಗಿ? ಒಂದು ಮಾಡ್ಕೋ.

ಇಂತಹ ಚಿರಂಜೀವಿಗಳು ನಮ್ಮ ಸುತ್ತಮುತ್ತವೇ ಇರುವಾಗ ನಾವು ನಟ ಚಿರಂಜೀವಿಯನ್ನೇ ಯಾಕೆ ಟೀಕಿಸ್ತಾ ಇದ್ದೀವಿ ಅನ್ನೋದು ನನಗೆ ಅರ್ಥವಾಗದ ವಿಷಯ. ನಮ್ಮ ಇಡೀ ಸಮಾಜ ಯೋಚಿಸುವುದೇ ಹಾಗೆ. ಮನೆಗೊಂದು ಗಂಡು ಬೇಕು ಅಂತ ಕೇವಲ ಗಂಡಸು ಮಾತ್ರ ಬಯಸಲ್ಲ ಪ್ರತಿ ಹೆಣ್ಣೂ ಬಯಸ್ತಾಳೆ. ಹಾಗೆ ಬಯಸುವುದರಲ್ಲಿ ತಪ್ಪೇನಿಲ್ಲ. ಏಕೆಂದರೆ ಗಂಡಿನಿಂದ ಮಾತ್ರ ಕೌಟುಂಬಿಕ ಘನತೆ ಉಳಿಯುತ್ತೆ ಅನ್ನೋದನ್ನು ನಾವೆಲ್ಲರೂ ನಂಬಿ ಪೋಷಿಸುತ್ತಿದ್ದೇವೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅನ್ನೋ ಮಾತನ್ನು ನಾವು ಒಪ್ಪಿಕೊಂಡಾಗಲೇ ನಾವೆಲ್ಲರೂ ಚಿರಂಜೀವಿಗಳಾಗಿದ್ದೇವೆ. ರಕ್ತಹಂಚಿಕೊಂಡು ಹುಟ್ಟಿದ ಮಗಳು, ಮದುವೆಯಾದ ತಕ್ಷಣ ನಮ್ಮ ಕುಲ, ಕುಟುಂಬದ ಹೊರಗೆ ಅನ್ನೋ ಮಾತನ್ನು ಒಪ್ಪಿದ ಯಾರಿಗೇ ಆದರೂ ಚಿರಂಜೀವಿಯನ್ನು ಟೀಕಿಸುವ ಹಕ್ಕಿಲ್ಲ. ರಕ್ತಹಂಚಿಕೊಂಡು ಹುಟ್ಟಿದ ಮಗಳು ಮದುವೆಯಾದ ಕ್ಷಣದಿಂದ ನನ್ನ ಕುಲದವಳಲ್ಲವಂತೆ. ಅವಳು ಇನ್ಯಾರೋ ಕುಲ ಬೆಳಗೋ ದೇವತೆ. ಅಂದ ಮೇಲೆ, ನಮ್ಮಲ್ಲಿ ಉಳಿದವನು ಗಂಡು ತಾನೇ? ಹಾಗಿದ್ದ ಮೇಲೆ, ಆ ಗಂಡಿನಿಂದಲೇ ಕುಟುಂಬದ ಘನತೆ ಉಳಿಯುತ್ತೆ ಅಂತ ಭಾವಿಸುವುದರಲ್ಲಿ ಯಾವ ತಪ್ಪಿದೆ? ಅದೆಲ್ಲಾ ಬಿಡಿ, ಒಂದು ಹೆಣ್ಣಿಗೆ ಗಂಡು ಮಗುವಾಗಲಿಲ್ಲವೆಂದರೆ ಮೊದಲ ದೂಷಣೆ ಕೇಳಿಬರೋದೇ ಅವಳ ಅತ್ತೆಯಿಂದ. ಈ ಮೂದೇವಿ ನಮ್ಮ ವಂಶಕ್ಕೊಂದು ಗಂಡನ್ನು ಕೊಡಲಿಲ್ಲ ಅಂತ. ನೆನಪಿರಲಿ ಅವಳೂ ಹೆಣ್ಣೇ! ಗಂಡಿನ ತಪ್ಪಿದ್ದಾಗಲೂ ಹೆಣ್ಣನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಬೈಯುವುದು ನಮಗೆಲ್ಲಾ ಅಭ್ಯಾಸವಾಗಿಬಿಟ್ಟಿದೆ. ಅಂದ್ಮೇಲೆ ಚಿರಂಜೀವಿಯನ್ನು ಯಾಕೆ ಟೀಕಿಸ್ತಾ ಕೂರ್ತೀರಿ? ಓಹ್…‌ ಆತ ಸೆಲೆಬ್ರಿಟಿ, ಆತನ ಮಾತುಗಳಿಂದ ಜನ ಪ್ರೇರಿತರಾಗಿಬಿಡ್ತಾರೆ ಅಂತಾನ? ಡೋಂಟ್‌ ವರಿ, ಜನರಿಗೆ ಇದೇನು ಹೊಸ ವಿಷ್ಯವಲ್ಲ. ಅವರೆಲ್ಲರ ಮನಸಲ್ಲಿರೋದನ್ನೇ ಚಿರಂಜೀವಿ ಹೇಳಿರುವುದರಿಂದ ಹೊಸದಾಗಿ ಪ್ರೇರಿತರಾಗಲು ಅಲ್ಲಿ ಏನೂ ಇಲ್ಲ.

ಚಿರಂಜೀವಿಯನ್ನು ಟೀಕಿಸುವ ಬದಲು,

ನಮ್ಮ ನಮ್ಮ ಹೆಣ್ಮಕ್ಕಳನ್ನು ಚಿರಂಜೀವಿಯಂತಾಗಿಸಬಹುದೇ ನೋಡಿ. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ದೊಡ್ಡ ದೊಡ್ಡ ನಟಿಯರೂ ತಮ್ಮ ಅಸ್ತಿತ್ವವನ್ನು ತೋರುವುದು ಮೈಮಾಟದಿಂದಲೇ! ಅದು ಬದಲಾಗಬಹುದಾ ನೋಡಿ. ಇವತ್ತಿಗೂ ಹೆಣ್ಮಕ್ಕಳ ಬಗ್ಗೆ ಉದಾಹರಣೆ ಕೊಡಬೇಕು ಅಂದರೆ, ಇಂದಿರಾ ಗಾಂಧಿ, ಕಲ್ಪನಾಚಾವ್ಲಾ, ಮದರ್‌ ತೆರೆಸಾ, ಕಿರಣ್‌ ಮಜುಂದಾರ್‌, ಸುಧಾಮೂರ್ತಿ ತರಹದ ಬೆರಳೆಣಿಕೆಯ ಮಂದಿಯಷ್ಟೇ ಸಿಗೋದು! ಊರಿಗೊಂದು ಇಂತಹ ಹೆಣ್ಣು ಹುಟ್ಟುವಂತೆ ನೋಡಿಕೊಳ್ಳಬಹುದಾ ನೋಡಿ. ಸಾನಿಯಾ ಮಿರ್ಜಾ ಆಗಲಿ, ಪಿವಿ ಸಿಂಧು, ಶ್ರೇಯಾಂಕ್‌ ಪಟೇಲ್ ಆಗಲಿ ಅವರು ಎಷ್ಟೇ ಸಾಧನೆ ಮಾಡಿದ್ರೂ, ಸುದ್ದಿಯಾಗೋದು, ಪೋಸ್ಟರ್‌ ಆಗೋದು ಮಾತ್ರ ಹೆಚ್ಚು ಸುಂದರಿಯಾಗಿದ್ದರೆ ಮಾತ್ರ! ಈ ಮನಸ್ಥಿತಿ ಬದಲಾಗಬಹುದಾ ನೋಡಿ. ಮಗಳನ್ನು ಅದ್ಯಾರದ್ದೋ ಮನೆಗೆ ಮಗಳನ್ನಾಗಿಸುವ ಬದಲು, ಅದ್ಯಾರದ್ದೋ ಮಗನನ್ನು ನಿಮ್ಮನೆಗೆ ಮಗನನ್ನಾಗಿಸಿಕೊಳ್ಳಬಹುದಾ ನೋಡಿ! ಮಗಳಿಗೆ ವರ ಹುಡುಕುವಾಗ ಹುಡುಗನ ಉದ್ಯೋಗ, ವಿದ್ಯಾಭ್ಯಾಸ, ಆಸ್ತಿ ನೋಡುವುದು. ಮಗಳಿಗೆ ವಧು ಹುಡುಕುವಾಗ ಹುಡುಗಿಯ ರೂಪ, ಕ್ಯಾರೆಕ್ಟರ್ ಮಾತ್ರ ನೋಡುವುದು. ಅದನ್ನು ಬದಲಾಗಿಸಬಹುದಾ ನೋಡಿ. ಅದ್ಯಾವುದೂ ಆಗದಿದ್ರೆ, ಚಿರಂಜೀವಿಯನ್ನು ಮರೆತು ಆಗೋ ಕೆಲಸ ನೋಡಿ.

#Chiranjeevi #boybaby #controversy

Related Articles

ಇತ್ತೀಚಿನ ಸುದ್ದಿಗಳು

You cannot copy content of this page