Wednesday, February 26, 2025

ಸತ್ಯ | ನ್ಯಾಯ |ಧರ್ಮ

ಚಂದದ ಕಣ್ಣಿನ ಹುಡುಗಿಯೂ, ಜಾಣ ಕುರುಡಾದ ಸಮಾಜವೂ..

“…ಒಂದು ಹೆಣ್ಣಿನ ಅಂದ ಶೇರ್‌ ಆಗುವಷ್ಟು ಜಾಸ್ತಿ,ಒಂದು ಹೆಣ್ಣಿನ ಮೇಲಾದ ದೌರ್ಜನ್ಯ ಎಲ್ಲಿಯೂ ಮಾತುಕತೆಗೆ ಬರುವುದೇ ಇಲ್ಲ. ಪ್ರತಿದಿನ ನಡೆಯುತ್ತಿರುವ ಅಪರಾಧಗಳನ್ನು ನೋಡುತ್ತಾ ನೋಡುತ್ತಾ ನಾವು ಮರಗಟ್ಟಿ ಹೋಗಿದ್ದೇವೆ. ವಿಕೃತತೆಯಿಲ್ಲದ ಸುದ್ದಿಗಳು ಮುನ್ನೆಲೆಗೆ ಬರುವುದೂ ಇಲ್ಲ, ಚರ್ಚೆಯಾಗುವುದೂ ಇಲ್ಲ…” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ

ಕುಂಭಮೇಳದಲ್ಲಿ ಕಂಡ ಚಂದದ ಕಣ್ಣಿನ ಹುಡುಗಿ ಮೊನಾಲಿಸಾ ದೇಶಾದ್ಯಂತ ಸುದ್ದಿಯಾಗಿದ್ದಾಳೆ. ಆಧ್ಯಾತ್ಮ ಸಾಧನೆಗೆ ಹೋದವರು, ಕುಂಭಮೇಳವನ್ನು ಕಣ್ತುಂಬಿಕೊಳ್ಳಲು ಹೋದವರು, ನಾಗಾ ಸಾಧುಗಳ ಸಾಲು ಸಾಲನ್ನು ಬೈದವರು, ಹೊಗಳಿದವರು, ಅನಾಗರೀಕವೆಂದವರು ಪ್ರತಿಯೊಬ್ಬರೂ ಈ ಹುಡುಗಿಯ ಕಣ್ಣಿನ ಕುರಿತು ಒಂದಲ್ಲಾ ಒಂದು ರೀತಿ ಮೆಚ್ಚಿಕೊಂಡವರೇ. ಸಹಜವೆಂಬಂತೆ ಯಾರಿಗೂ ಆ ಹುಡುಗಿ ಚುರುಕು, ಆಕೆಯ ವಯಸ್ಸೆಷ್ಟಿರಬಹುದು, ಓದುತ್ತಿದ್ದಾಳಾ, ನನ್ನ ಅಕ್ಕ -ತಂಗಿಯ ಥರ ಇದ್ದಾಳಲ್ಲ, ನನ್ನ ಮಗಳ ವಯಸ್ಸಿನವಳಲ್ಲವಾ ಎಂದು ಅನ್ನಿಸಲೇ ಇಲ್ಲ. ಅಲ್ಲಿರುವ ಜನರು ಆಕೆಯನ್ನು ಮುತ್ತಿ ಆಕೆ ಅಲ್ಲಿಂದ ಮತ್ತೆ ಊರಿಗೆ ಮರಳುವಾ ಹಾಗೆ ಮಾಡಿದರೆ, ಸುಶಿಕ್ಷಿತರು ಎನ್ನುವ ನೆಟ್ಟಿಗರು ಮಾಡಿದ್ದು ಸಹ ಅದನ್ನೇ. ಕಂಡಕಂಡಲ್ಲಿ ಆಕೆಯ ಫೋಟೋವನ್ನು ಶೇರ್‌ ಮಾಡ್ತಾ ಹೋಗಿದ್ದು.

ಒಬ್ಬ ಹೆಣ್ಣುಮಗಳ ಮೇಲೆ ಈ ರೀತಿಯಾಗಿ ಜನ ಮೇಲೆ ಬೀಳುವುದು ಇದೇ ಹೊಸತಲ್ಲ. ಮತ್ತು ಈ ರೀತಿಯಾಗಿ ಸೆಲೆಕ್ಟಿವ್‌ ಆಗಿ ಪ್ರತಿಕ್ರಿಯಿಸುವುದು ಸಹ ಹೊಸತಲ್ಲ. ಒಬ್ಬ ವೇಶ್ಯೆಯನ್ನು ಸಹ ಆಕೆ ಒಬ್ಬ ಪುರುಷನ ಜೊತೆಯಲ್ಲಿದ್ದಾಗ ವಿಡಿಯೋ ಮಾಡಿ ಹರಿಬಿಟ್ಟು ಟ್ರೋಲ್‌ ಮಾಡಿದಂತಹ ಸಮಾಜ ನಮ್ಮದು. ಬಡವರ, ದಮನಿತರ, ಮಹಿಳೆಯರ ಬದುಕುಗಳು ನಮ್ಮ ಚೆಲ್ಲಾಟಕ್ಕೆ ಎಂತಹಾ ಸಂಕಟಕ್ಕೆ ಬಲಿಯಾಗುತ್ತದೆ ಎನ್ನುವ ಸಣ್ಣ ಅರಿವೂ ಇಲ್ಲದೇ, ಅರಿಯುವ ಸೂಕ್ಷ್ಮತೆಯನ್ನೂ ಕಳೆದುಕೊಂಡು ಇನ್ನೊಬ್ಬ ಮನುಷ್ಯನನ್ನು ವಸ್ತುವಾಗಿ ನೋಡುವುದು ದಿನ ದಿನಕ್ಕೆ ಹೆಚ್ಚುತ್ತಲೇ ಹೋಗಿದೆ.

ರಾತ್ರೋ ರಾತ್ರಿ ಸಿನಿಮೀಯವಾಗಿ ಜನಪ್ರಿಯವಾಗುವವರು ಅಷ್ಟೇ ಬೇಗ ಅಧಪತನಕ್ಕಿಳಿಯುತ್ತಾರೆ ಎನ್ನುವುದಕ್ಕೆ ರಾನು ಮಂಡಲ್‌ ಒಂದು ಉದಾಹರಣೆ. ಒಂದೇ ದಿನದಲ್ಲಿ ಆಕೆಯ ಹಾಡು ವೈರಲ್‌ ಆಗಿದ್ದೂ ಆಯಿತು, ಆಕೆಯನ್ನು ಯಾವುದೋ ಸಿನೆಮಾಗೆ ಹಾಡಿಸ್ತಾ ಇದಾರೆ ಅಂತ ಸುದ್ದಿಯಾದ ಕೂಡಲೇ ಆಕೆ ಬ್ಯೂಟಿ ಪಾರ್ಲರ್‌, ಮೇಕಪ್‌ ಎಂದು ಸಂಪೂರ್ಣವಾಗಿ ಬದಲಾಗಿ ನಗೆಪಾಟಲಿಗೀಡಾಗಿದ್ದೂ ಆಯಿತು. ಇದ್ದಕ್ಕಿದ್ದ ಹಾಗೆ ತಮ್ಮದಲ್ಲದ ಜಗತ್ತನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಹೋಗಿ ಅದಕ್ಕೆ ಹೊಂದಿಕೊಳ್ಳಲು ಆಗದೇ ಇದ್ದಾಗ ಎಷ್ಟೋ ಜನರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೂ ಇದೆ. ಯಾವುದೋ ರಿಯಾಲಿಟಿ ಶೋದ ಹುಡುಗ, ರಸ್ತೆಬದಿ ಹಾಡಿ ಇದ್ದಕ್ಕಿಂದಂತೆ ಜನಪ್ರಿಯವಾಗುವವರು ಎಲ್ಲರದ್ದೂ ಇದೇ ಕತೆ.

ಈಗ ಮೊನಾಲಿಸಾ ಕೂಡ ಸಿನಿಮಾಗೆ ಬರ್ತಾಳಂತೆ ಎನ್ನುವ ಸುದ್ದಿಗಳೂ ಶುರುವಾಗಿವೆ. ಆಕೆಯ ಮೇಕಪ್‌ ಇಲ್ಲದ ಲುಕ್‌ ನೋಡಿ ಜನರು ಟೀಕಿಸಲು ಶುರು ಮಾಡಿದ್ದಾರೆ, ಮೇಕಪ್‌ ಹಾಕಿದ್ದನ್ನು ನೋಡಿ ಕೂಡ ಟೀಕಿಸಲು ಶುರು ಮಾಡಿದ್ದಾರೆ. ತಮ್ಮ ಶ್ರಮ, ಕಲೆಯ ಹೊರತಾಗಿ ಬಂದವರಿಗೆ ಜಾಸ್ತಿ ದಿನ ಗೆಲುವಿರೋದಿಲ್ಲ ಎನ್ನುವುದನ್ನು ಮರೆತು ಬಣ್ಣದ ಲೋಕಕ್ಕೆ ಬಲಿಯಾಗುವ ಪಟ್ಟಿಗೆ ಇನ್ನೊಂದು ಹೆಸರು ಸೇರಿಕೊಳ್ಳುತ್ತದೆ ಅಷ್ಟೇ,

ಒಂದು ಹೆಣ್ಣಿನ ಅಂದ ಶೇರ್‌ ಆಗುವಷ್ಟು ಜಾಸ್ತಿ,ಒಂದು ಹೆಣ್ಣಿನ ಮೇಲಾದ ದೌರ್ಜನ್ಯ ಎಲ್ಲಿಯೂ ಮಾತುಕತೆಗೆ ಬರುವುದೇ ಇಲ್ಲ. ಪ್ರತಿದಿನ ನಡೆಯುತ್ತಿರುವ ಅಪರಾಧಗಳನ್ನು ನೋಡುತ್ತಾ ನೋಡುತ್ತಾ ನಾವು ಮರಗಟ್ಟಿ ಹೋಗಿದ್ದೇವೆ. ವಿಕೃತತೆಯಿಲ್ಲದ ಸುದ್ದಿಗಳು ಮುನ್ನೆಲೆಗೆ ಬರುವುದೂ ಇಲ್ಲ, ಚರ್ಚೆಯಾಗುವುದೂ ಇಲ್ಲ. ಪ್ರತಿ ದಿನವೂ ಅತ್ಯಾಚಾರ, ಕೊಲೆಯ ಸುದ್ದಿಗಳಾದಗಲೂ ವಿಕೃತತೆಯ ಕಾರಣದಿಂದಾಗಿ ನಿರ್ಭಯಾ ಸುದ್ದಿಯಾದಳು. ಅದಾಧ ನಂತರ ಆ ಮಟ್ಟಿಗಿನ ವಿಕೃತಿ ಸಹಜ ಎಂಬಂತೆ ಜನ ಪ್ರತಿಕ್ರಿಯಿಸಲು ಆರಂಭಿಸಿದರು. ಇತ್ತೀಚಿಗಿನ ಕೊಲ್ಕತಾ ಡಾಕ್ಟರ್‌ ಅತ್ಯಾಚಾರ ಸುದ್ದಿಯಾಗಿದ್ದು ಸಹ ಆಕೆಯ ಮೇಲಾದ ಕ್ರೂರತೆಯಿಂದಾಗಿ. ರಾಜಕಾರಣಿಗಳಿಂದ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಹಾಗಾದರೆ ಉಳಿದ ಅತ್ಯಾಚಾರ, ಕೊಲೆ, ದೌರ್ಜನ್ಯಗಳು ಮಾತನಾಡುವ ವಿಷಯವೇ ಅಲ್ಲ ಅನ್ನುವ ಹಾಗಾಗಿದ್ದು ಹೇಗೆ ಎನ್ನುವುದು ಸದಾ ಕಾಡುವ ಪ್ರಶ್ನೆ. ಅಷ್ಟಕ್ಕೂ ಅಂಥಾ ಕ್ರೂರವಾಗಿ ನಡೆದ ಅತ್ಯಾಚಾರವನ್ನು ಯಾರೋ ವಿಡಿಯೋ ಮಾಡಿದ್ದರಂತೆ ಎಂದರೆ ಹೆಚ್ಚಿನ ಜನರು ಮೊದಲು ಮಾಡುವ ಕೆಲಸ ಆ ವಿಡಿಯೋ ಎಲ್ಲಿದೆ ಎಂದು ಹುಡುಕುವುದು, ಅಥವಾ ನಿಮ್ಮ ಹತ್ರ ಇದ್ದರೆ ನಮಗೆ ಕಳಿಸಿ ಎಂದು ಮರ್ಯಾದೆಯ ಜೊತೆಗೆ ಮಾನವೀಯತೆಯನ್ನೂ ಬಿಟ್ಟು ಕೇಳುವುದು.

ಕಛೇರಿಯಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸುತ್ತಲೇ ತಾಯಿಗೆ ನರ್ಸರಿಗೆ ಹೋಗುವ ಹೆಣ್ಣುಮಗು ಹುಷಾರಾಗಿ ಮನೆ ತಲುಪಿದರೆ ಸಾಕು ಎನ್ನುವ ಆತಂಕ ಕಾಡಿರುತ್ತದೆ. ಹೋಗಿ ಬರುವ ಅವಧಿಯಲ್ಲಿ ಮಗುವನ್ನು ಯಾರು ಮುಟ್ಟಿದರೋ ಎನ್ನುವ ಆತಂಕ ಕಾಡಿರುತ್ತದೆ. ಮೊನ್ನೆ ಮೊನ್ನೆಯಷ್ಟೇ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ. ಇನ್ನೆಲ್ಲೋ ಎಳೆ ಕೂಸನ್ನು ಅತ್ಯಾಚಾರ ಮಾಡಿ ಕೊಂದ ಆರೋಪಿ ಹೆದರಿ ನೇಣು ಹಾಕಿಕೊಂಡರೆ ಅವನನ್ನು ಮಾಧ್ಯಮಗಳು ದುರ್ದೈವಿ ಎಂದು ಬಣ್ಣಿಸುತ್ತವೆ.

ದೇಶಭಕ್ತಿಯ ಪ್ರತೀಕವೇ ಆಗಿರುವ ಮಾಜಿ ಸೈನಿಕನೊಬ್ಬ ಗರ್ಭಿಣಿ ಪತ್ನಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿ, ಕುಕ್ಕರಿನಲ್ಲಿ ಬೇಯಿಸಿ ಒಣಗಿಸಿ ಎಸೆದ ಸುದ್ದಿ ಕುಕ್ಕರಿನ ವಿಷಲ್‌ ನಷ್ಟು ಸಹ ಜೋರಾಗಿ ಸದ್ದಾಗಿಲ್ಲ. ಈ ದೇಶದಲ್ಲಿ ಗಂಡನಿಂದ ಹೆಂಡತಿ ಕೊಲೆಯಾಗುವುದು ಸುದ್ದಿಯೇ ಆಗುವುದಿಲ್ಲ. ಚರ್ಚೆಗಳಲ್ಲಿ ಆಕೆನೇ ಸರಿ ಇರಲಿಲ್ಲ, ಆಕೆಯ ಬಾಯಿ ಜೋರು ಹಾಗಾಗಿ ಗಂಡ ಸರಿಯಾಗಿನೇ ಮಾಡಿದಾರೆ ಎಂದು ತಮ್ಮಲ್ಲಿ ತಾವೇ ಮಾತಾಡಿಕೊಂಡು ವಿಷಯ ಮುಚ್ಚಿಸುತ್ತಾರೆ.

ಯಾರದೋ ಕಣ್ಣು ಚಂದ ಎಂದು ಮೈಮರೆತು ಹೊಗಳುವ ಭರದಲ್ಲಿ, ಇನ್ಯಾರನ್ನೋ ಶೌಚಾಲಯದ ಒಳಗೂ ಬಿಡದೇ ಚಿತ್ರೀಕರಿಸುವ ಭರದಲ್ಲಿ ಅನ್ನಕ್ಕೇ ಕಲ್ಲು ಹಾಕುವ ಜನರು ಸ್ವಲ್ಪ ಸೂಕ್ಷ್ಮತೆ, ಸಂವೇದನೆಯಿಂದ ಯೋಚಿಸುವುದನ್ನು ಕಲಿಯಬೇಕಿದೆ. ಎಳೆ ಕೂಸಿನಿಂದ ಹಿಡಿದು, ಗರ್ಭಿಣಿ ಪತ್ನಿಯನ್ನೂ ಬಿಡದೆ ಕೊಂದು ಹಾಕುವ ಸಮಾಜದಲ್ಲಿ ಕನಿಷ್ಟ ಸಂವೇದನೆ ಹೊಂದಿದವರು ಎನ್ನುವವರು ಸಹ ಇನ್ನೊಮ್ಮೆ ಕನ್ನಡಿಯೆದುರು ನಿಲ್ಲಬೇಕಿದೆ. ಜಾಣ ಕುರುಡಿನಿಂದ ಹೊರಬಂದು ಸುತ್ತಲಿನ ದೌರ್ಜನ್ಯ, ಅಪರಾಧಗಳತ್ತ ಕಣ್ಣು ಹಾಯಿಸಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page