Thursday, February 27, 2025

ಸತ್ಯ | ನ್ಯಾಯ |ಧರ್ಮ

SCSP/TSP ಹಣ ಗ್ಯಾರಂಟಿ ಯೋಜನೆಗೆ ಬಳಕೆಯಾಗುವುದು ನಿಲ್ಲಬೇಕು: ದಲಿತ ಸಂಘಟನೆಗಳ ಒಕ್ಕೂಟದಿಂದ ಸರ್ಕಾರಕ್ಕೆ ಎಚ್ಚರಿಕೆ

ಗ್ಯಾರಂಟಿಗಳಿಗೆ ಬಳಸಿರುವ SCSP/TSP ಹಣವನ್ನು ದಲಿತರ ಅಭಿವೃದ್ಧಿಗೆ ಕೂಡಲೇ ಹಿಂದಿರುಗಿಸಬೇಕೆಂದು ಹಾಗೂ ಕಾಯ್ದೆಯ ‘7ಡಿ’ ಸೆಕ್ಷನ್ ರದ್ದುಪಡಿಸಿದಂತೆ ‘ಸಿ’ ಯನ್ನೂ ರದ್ದುಪಡಿಸಬೇಕೆಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟವು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದೆ.

ಅಷ್ಟೇ ಅಲ್ಲದೇ ಸಂವಿಧಾನ ವಿಧಿ 46ರ ಆಶಯವನ್ನು ಪಾಲಿಸಬೇಕೆಂದು ಒಕ್ಕೂಟ ಒತ್ತಾಯಿಸಿದೆ. ಜೊತೆಗೆ ಅಂಬೇಡ್ಕ‌ರ್ ಅಭಿವೃದ್ಧಿ ನಿಗಮದಲ್ಲಿ ಬಾಕಿ ಉಳಿದಿರುವ 5 ಲಕ್ಷ ಅರ್ಜಿಗಳನ್ನು ಸೂಕ್ತ ನೆರವು ನೀಡಿ ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.

2013 ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವೇ ಜಾರಿಗೆ ತಂದ SCSP/TSP ಯೋಜನೆಯ ಕಾಯ್ದೆಯು ತನ್ನ ಪರಿಭಾಷೆಯಲ್ಲಿ SCSP/TSP ಎಂಬುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಯಲ್ಲಿನ ಅಂತರವನ್ನು ತುಂಬಲು ಅನುಮೋದಿಸಿರುವ ಯೋಜನೆ ಎನ್ನುತ್ತದೆ. ಅದರಲ್ಲಿಯೇ ‘ಅಭಿವೃದ್ಧಿಯ ಅಂತರ’ ಎಂದರೆ ಮಾನವ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಿರ್ದಿಷ್ಟವಾಗಿ ಗೊತ್ತುಪಡಿಸಬಹುದಾದಂತೆ ರಾಜ್ಯ ಸರಾಸರಿಗೆ ಹೋಲಿಸಿದಾಗ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಸೂಚಕಗಳಲ್ಲಿರುವ ವ್ಯತ್ಯಾಸಗಳು ಎಂದು ವ್ಯಾಖ್ಯಾನಿಸುತ್ತದೆ. ಸಾರಾಂಶದಲ್ಲಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು (ದಲಿತರು) ಮತ್ತು ಇತರ ಸಮುದಾಯಗಳ ನಡುವಿನ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ಅಂತರವನ್ನು ಕಡಿಮೆ ಮಾಡುವುದೇ ಈ ಯೋಜನೆಯ ಮೂಲ ಉದ್ದೇಶ” ಎಂದು ಒಕ್ಕೂಟವು ಸರ್ಕಾರಕ್ಕೆ ಯೋಜನೆಯ ಬಗ್ಗೆ ಸ್ಪಷ್ಟನೆ ನೀಡಿದೆ.

“2023-24ನೇ ಸಾಲಿನಿಂದಲೂ SCSP/TSP ಹಣದಲ್ಲಿ ಸುಮಾರು ರೂ. 25000 ಕೋಟಿಯನ್ನು ಗ್ಯಾರಂಟಿಗಳಿಗೂ, ರೂ. 15000 ಕೋಟಿಯನ್ನು ಅನ್ನ ಉದ್ದೇಶಕ್ಕೂ ಬಳಸಿರುವುದು ಕಾಯ್ದೆಯನ್ನು ಉಲ್ಲಂಘಿಸಿದಂತೆ ಆಗುತ್ತದೆ. ಅಷ್ಟೇ ಅಲ್ಲ, ಕಳೆದ ಬಿಜೆಪಿ ಸರ್ಕಾರ ಮಾಡಿದ ಕೆಲಸವನ್ನೇ ಕಾಂಗ್ರೆಸ್ ಸರ್ಕಾರ ಮಾಡಿದಂತಾಗಿದೆ. ಅದಷ್ಟೇ ಅಲ್ಲದೆ ಸರ್ಕಾರದ ಸಮಾಜ ಕಲ್ಯಾಣ ಸಚಿವರೂ ಸೇರಿದಂತೆ ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವುದು ಶೋಚನೀಯ, ದಲಿತರ ಒಗ್ಗಟ್ಟಿನ ಓಟುಗಳಿಂದ ಸರ್ಕಾರ ರಚಿಸಿದ ಕಾಂಗ್ರೆಸ್, ಈಗ ದಲಿತರ ಅಭಿವೃದ್ಧಿಗೆ ಮೀಸಲಿರಿಸಿದ ಹಣವನ್ನು ಅನ್ನ ಉದ್ದೇಶಕ್ಕೆ ಬಳಸುತ್ತಿರುವುದು ಸಮುದಾಯದಲ್ಲಿ ಆಸಮಾಧಾನವನ್ನು ಉಂಟು ಮಾಡಿದೆ” ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟವು ಕರ್ನಾಟಕ ಸರ್ಕಾರಕ್ಕೆ ತಿಳಿಸಿದೆ.

ಗ್ಯಾರಂಟಿ ಯೋಜನೆಗಳು ಉತ್ತಮ ಯೋಜನೆಗಳೇ. ಆದರೆ ಅವುಗಳ ಉದ್ದೇಶವೇ ಬೇರೆ. SCSP/TSP ಕಾಯ್ದೆಯ ಉದ್ದೇಶವೇ ಬೇರೆ. ಕರ್ನಾಟಕ ಮಾನವ ಅಭಿವೃದ್ಧಿ ವರದಿ – 2015ರ ಪ್ರಕಾರ ಇತರೆ ಸಮುದಾಯಗಳಿಗೆ ಹೋಲಿಸಿಕೊಂಡರೆ ದಲಿತರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಹೀಗಿರುವಾಗ ಸಚಿವರು ಮತ್ತು ಮುಖ್ಯಮಂತ್ರಿಗಳು ಹೇಳುತ್ತಿರವಂತೆ, ದಲಿತರಿಗೆ ಮೀಸಲಿಟ್ಟ ಹಣವನ್ನು SCSP/TSP ಯ ಹೊರತಾದ ಅಭಿವೃದ್ಧಿ ಯೋಜನೆಗಳಿಗೆ ಬಳಸುವುದೂ ಬಡತನ ನಿರ್ಮೂಲನೆಯ ಉದ್ದೇಶವನ್ನೇ ಹೊಂದಿದೆ ಎಂಬ ಸಮರ್ಥನೆ ಒಪ್ಪತಕ್ಕುದಲ್ಲ; ಹಾಗೇನಾದರೂ ಅವರ ಮಾತು ನಿಜವಾಗಿದ್ದರೆ ಕಳೆದ 2014ರಿಂದ ಇದೇ ದಲಿತರಿಗಾಗಿ ಮೀಸಲಿಟ್ಟ 29.5687 ಕೋಟಿ ಹಣವನ್ನು ಯಾವುದಕ್ಕೆಲ್ಲಾ ಖರ್ಚು ಮಾಡಲಾಗಿದೆ: ಎಷ್ಟು ಕುಟುಂಬಗಳು ಬಡತನ ರೇಖೆಗಿಂತ ಮೇಲೆ ಬಂದಿವೆ ಎಂಬ ಅಂಕಿ ಅಂಶಗಳನ್ನು ಸರ್ಕಾರ ಬಿಡಗಡೆ ಮಾಡಬೇಕಿದೆ ಹಾಗೂ ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಿಸಿ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಎಲ್ಲಿಗೆ ಹೋಗುತ್ತಿದೆ; ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ಅಧ್ಯಯನ ಮಾಡಿ ವರದಿ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page