Monday, June 17, 2024

ಸತ್ಯ | ನ್ಯಾಯ |ಧರ್ಮ

ಪಂಜಾಬ್ ನಲ್ಲಿ ‘ಆಪರೇಷನ್ ಕಮಲ’ಕ್ಕೆ ಬಿಜೆಪಿ ಯತ್ನ : ಎಎಪಿ ಗಂಭೀರ ಆರೋಪ

ಪಂಜಾಬ್ ನಲ್ಲಿ ಆಡಳಿತಾರೂಢ ಎಎಪಿ ಸರ್ಕಾರವನ್ನು ಅಭದ್ರಗೊಳಿಸಲು ಬಿಜೆಪಿ ಪಕ್ಷ, ಎಎಪಿ ಶಾಸಕರಿಗೆ ದೊಡ್ಡ ಮೊತ್ತದ ಹಣದ ಆಮಿಷ ಒಡ್ಡುತ್ತಿದೆ ಎಂದು ಪಂಜಾಬಿನ ಹಣಕಾಸು ಸಚಿವ ಹರಪಾಲ್ ಸಿಂಗ್ ಚೀಮಾ ಆರೋಪಿಸಿದ್ದಾರೆ. ಆ ಮೂಲಕ ದೆಹಲಿಯ ನಂತರ ಪಂಜಾಬಿನಲ್ಲೂ ಎಎಪಿ ಸರ್ಕಾರವನ್ನು ಬೀಳಿಸುವ ಆಪರೇಷನ್ ಕಮಲ ಕುತಂತ್ರಗಾರಿಕೆಯ ಆರೋಪವನ್ನು ಬಿಜೆಪಿ ಎದುರಿಸುವಂತಾಗಿದೆ.

ಈ ಸಂಬಂಧ ರಾಜ್ಯದ ಹಣಕಾಸು ಸಚಿವ ಹರಪಾಲ್ ಸಿಂಗ್ ಚೀಮಾ ಅವರು ಪಕ್ಷದ ಶಾಸಕರೊಂದಿಗೆ ಡಿಜಿಪಿ ಗೌರವ್ ಯಾದವ್ ಅವರನ್ನು ಭೇಟಿಯಾಗಿ ಈ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಪಂಜಾಬ್ ಪೊಲೀಸರು IPC ದಂಡ ಸಂಹಿತೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 8 ಮತ್ತು ಸೆಕ್ಷನ್ 171-ಬಿ ಮತ್ತು 120-ಬಿ ಅಡಿಯಲ್ಲಿ FIR ದಾಖಲಿಸಿದ್ದಾರೆ.

ಪಂಜಾಬ್ ಎಎಪಿ ಸರ್ಕಾರವನ್ನು ಉರುಳಿಸಲು 10 ಶಾಸಕರನ್ನು ಈಗಾಗಲೇ ಬಿಜೆಪಿ ಸಂಪರ್ಕಿಸಿ ತಲಾ 25 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದೆ ಎಂದು ಎಎಪಿ ಈ ಹಿಂದೆಯೂ ಆರೋಪಿಸಿತ್ತು. ಈಗ ಈ ಬಗ್ಗೆ ದೂರು ದಾಖಲು ಮಾಡಿದ್ದು ಪ್ರಕರಣ ಯಾವ ಹಂತಕ್ಕೆ ತಲುಪಲಿದೆ ಎಂಬ ಕುತೂಹಲ ಮೂಡಿಸಿದೆ.

ಪಂಜಾಬ್ ಹಣಕಾಸು ಸಚಿವ ಹರಪಾಲ್ ಸಿಂಗ್ ಚೀಮಾ ನಿನ್ನೆ ಪಕ್ಷದ ಶಾಸಕರುಗಳಾದ ಬುಧ್ ರಾಮ್, ಕುಲ್ವಂತ್ ಪಂಡೋರಿ, ಮಂಜಿತ್ ಸಿಂಗ್ ಬಿಲಾಸ್ಪುರ್, ದಿನೇಶ್ ಚಡ್ಡಾ, ರಮಣ್ ಅರೋರಾ, ನರಿಂದರ್ ಕೌರ್ ಭರಾಜ್, ರಜನೀಶ್ ದಹಿಯಾ, ರೂಪಿಂದರ್ ಸಿಂಗ್ ಹ್ಯಾಪಿ, ಶೀತಲ್ ಅಂಗುರಾಲ್ ಮತ್ತು ಲಾಭ್ ಸಿಂಗ್ ಉಗೋಕೆ ಅವರೊಂದಿಗೆ ಡಿಜಿಪಿ ಕಛೇರಿಗೆ ಆಗಮಿಸಿ ‘ಆಪರೇಷನ್ ಕಮಲ’ದ ಆರೋಪದ ಮೇಲೆ ದೂರು ನೀಡಿದ್ದಾರೆ.

ಬಿಜೆಪಿ ಈಗಾಗಲೇ ಎಲ್ಲಾ ಸರ್ಕಾರಿ ತನಿಖಾ ಸಂಸ್ಥೆಗಳ ಮೇಲೆ ಎಲ್ಲಾ ರೀತಿಯಲ್ಲೂ ಹಿಡಿತ ಹೊಂದಿದ ಪರಿಣಾಮ ತನಿಖೆಯನ್ನು ದಾರಿ ತಪ್ಪಿಸುವ ಸಾಧ್ಯತೆ ಇದೆ, ಹಾಗಾಗಿ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖಾ ಸಂಸ್ಥೆಗೆ ಈ ಪ್ರಕರಣದ ತನಿಖೆ ನಡೆಸುವಂತೆ ಪ್ರತಿಪಕ್ಷ ಕಾಂಗ್ರೆಸ್ ಎಎಪಿಗೆ ಸಲಹೆ ನೀಡಿದೆ.

ಇನ್ನು ಈ ಆರೋಪದ ಬಗ್ಗೆ ಬಿಜೆಪಿ “ಇದೊಂದು ಹಾಸ್ಯಾಸ್ಪದ ಜೋಕ್” ಎಂದು ಲೇವಡಿ ಮಾಡಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಪಂಜಾಬಿನ ಮದ್ಯ ನೀತಿಯಲ್ಲಿ ಎಎಪಿ ಸರ್ಕಾರ ಮಾಡಿರುವ ಭೀಕರ ಭ್ರಷ್ಟಾಚಾರದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಸಧ್ಯ ಎಎಪಿ ‘ಆಪರೇಷನ್ ಕಮಲ’ದ ಮೇಲಿನ ಗಂಭೀರ ಆರೋಪದಿಂದ ಬಿಜೆಪಿಯನ್ನು ಮುಜುಗರಕ್ಕೆ ಸಿಕ್ಕಿಸಿದೆ. ಪ್ರಕರಣ ತನಿಖೆ ಯಾವ ಹಂತಕ್ಕೆ ಸಾಗಬಹುದು ಎಂಬುದನ್ನು ಸಧ್ಯದಲ್ಲೇ ಕಾದು ನೋಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು