Saturday, March 1, 2025

ಸತ್ಯ | ನ್ಯಾಯ |ಧರ್ಮ

ಬಜೆಟ್ಟಿನಲ್ಲಿ ಬಿಜೆಪಿಯ ಜನವಿರೋಧಿ ನೀತಿಗಳನ್ನು ರದ್ದುಗೊಳಿಸಿ: ಸಿಎಂಗೆ ರೈತ ಕಾರ್ಮಿಕರ ಆಗ್ರಹ

ಬಿಜೆಪಿಯ ಜನವಿರೋಧಿ, ರೈತ ವಿರೋಧಿ ನೀತಿಗಳನ್ನು ರದ್ದು ಗೊಳಿಸಬೇಕು ಹಾಗೂ ರೈತ, ಕಾರ್ಮಿಕ ವಿರೋಧಿ ನೀತಿಗಳನ್ನು ಕೂಡ ಮುಂಬರುವ ಬಜೆಟ್ಟಿನಲ್ಲಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ಮುಖಂಡರು ಪತ್ರ ಬರೆದಿದ್ದಾರೆ.

ಈ ಕುರಿತು ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮುಖಂಡರು, ಈ ಬಜೆಟ್‌ ಅಧಿವೇಶನ ಕೇವಲ ಆಯವ್ಯಯದ ಮಂಡನೆಗೆ ಮಾತ್ರ ಸೀಮಿತವಾಗದೆ ಸರ್ಕಾರದ ದಿಕ್ಸೂಚಿಯಾಗಲಿ, ಬಿಜೆಪಿ ತಂದಿದ್ದ ಜನವಿರೋಧಿ ನೀತಿಗಳನ್ನು ರದ್ದುಗೊಳಿಸಿ, ಜನಪರ ನೀತಿಗಳನ್ನು ರೂಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಡಲಿ ಎಂದು ಆಶಿಸಿದರು.

ಸಮಿತಿಯ ಮುಖಂಡರಲ್ಲಿ ಒಬ್ಬರಾದ ಬಡಗಲಪುರ ನಾಗೇಂದ್ರ ಅವರು ಮಾತನಾಡಿ,
ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಹಾಗೂ ಈ ಹಿಂದೆ ನಮ್ಮ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯು ಸಾಲು ಸಾಲು ಜನ ವಿರೋಧಿ ನೀತಿಗಳನ್ನು ಜಾರಿಗೆ ತಂದಿದೆ. ಆ ನೀತಿಗಳು ರೈತ, ಕಾರ್ಮಿಕ ಇತ್ಯಾದಿ ದುಡಿಯುವ ವರ್ಗದ ಜನರನ್ನು ಹಾಗೂ ತಳ ಸಮುದಾಯಗಳನ್ನು ಆತಂಕದ ಕೂಪಕ್ಕೆ ತಳ್ಳಿವೆ. ಈ ಸಂದರ್ಭದಲ್ಲಿ ನಡೆದ ಹೋರಾಟಗಳಲ್ಲಿ ತಾವೂ ಬಂದಿರಿ, ನಮ್ಮ ಜೊತೆಯಲ್ಲಿ ಬೀದಿಯಲ್ಲೂ ಕುಂತಿರಿ. ಅಧಿಕಾರಕ್ಕೆ ಬಂದರೆ ಇವನ್ನೆಲ್ಲಾ ರದ್ದುಗೊಳಿಸಿ, ಜನಪರ ನೀತಿಗಳನ್ನು ಜಾರಿಗೆ ತರುವ ಭರವಸೆಯನ್ನೂ ನೀಡಿದಿರಿ. ಆದರೆ ನೇರ ಮಾತುಗಳಲ್ಲಿ ಹೇಳಬೇಕೆಂದರೆ ಕಳೆದ 25 ತಿಂಗಳಲ್ಲಿ ನಿಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಇದುವರೆಗೂ ಬಿಜೆಪಿ ತಂದಿದ್ದ ಮನೆಹಾಳು ನೀತಿಗಳನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇಟ್ಟಿಲ್ಲ ಎಂದು ಆರೋಪಿಸಿದರು.

ನಾವುಗಳು ತಮ್ಮನ್ನು ಭೇಟಿಯಾದಾಗ ಭರವಸೆಗಳನ್ನು ನೀಡುತ್ತೀರಿ. ಆದರೆ, ಅವು ಭರವಸೆಗಳಾಗಿ ಮಾತ್ರವೇ ಉಳಿಯುತ್ತಿವೆ. ವಿವಿಧ ಜನವರ್ಗಗಳ ನಡುವೆ ನಡೆಸುವ ಬಜೆಟ್‌ ಪೂರ್ವ ಮಾತುಕತೆಗಳು ನಮ್ಮಲ್ಲಿ ಹುಸಿ ಸಮಾಧಾನ ಮೂಡಿಸುವ ತಂತ್ರಗಳು ಅನಿಸತೊಡಗಿವೆ. ಕಾರ್ಮಿಕ ವರ್ಗವನ್ನಂತೂ ಕನಿಷ್ಟ ಸಮಾಲೋಚನೆಗೂ ಕರೆಯದ ಸರ್ಕಾರದ ಧೋರಣೆ ಖಂಡನೀಯ. ಒಟ್ಟಿನಲ್ಲಿ ಕೊನೆ ಇಲ್ಲದ ಈ ಕಾಯುವಿಕೆ ನಮಗೆ ಸಾಕಾಗಿದೆ. ಸರ್ಕಾರದ ಸ್ಪಷ್ಟ ತೀರ್ಮಾನ ಈ ಸಲ ಗೊತ್ತಾಗಲೇಬೇಕಿದೆ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಬಡಗಲಪುರ ನಾಗೇಂದ್ರ, ಸಿಐಟಿಯುನ ಎಸ್.ವರಲಕ್ಷ್ಮಿ, ಸುನಂದ, ಜನಶಕ್ತಿಯ ನೂರ್‌ ಶ್ರೀಧರ್‌, ಜನವಾದಿ ಸಂಘಟನೆಯ ದೇವಿ, ಕೃಷಿ ಕೂಲಿಕಾರರ ಸಂಘಟನೆಯ ಚಂದ್ರಪ್ಪ ಹೂಸ್ಕೂರು, ಡಿಎಸ್‌ಎಸ್‌ನ ಗುರುಪ್ರಸಾದ್‌ ಕೆರಗೋಡು, ಕೆಆರ್‌ಆರ್‌ಎಸ್‌ನ ಗೋಪಾಲ್‌ ಶಿವಪ್ಪ, ಮತ್ತಿತರರು ಉಪಸ್ಥಿತರಿದ್ದರು.

ಸಮಿತಿಯ ಹಕ್ಕೊತ್ತಾಯಗಳು ನಂತಿವೆ.

  1. ಈ ಹಿಂದಿನ ಬಿಜೆಪಿ ಸರ್ಕಾರ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಕಾಯ್ದೆಗಳಿಗೆ ತಂದಿದ್ದ ತಿದ್ದುಪಡಿಗಳನ್ನು ಈ ಕೂಡಲೇ ರದ್ದುಗೊಳಿಸಬೇಕು.
  2. ಕೇಂದ್ರ ಸರ್ಕಾರವು ಜಾರಿ ಮಾಡಿರುವ “ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿ ಚೌಕಟ್ಟಿ” ನ ಕರಡನ್ನು [The National Policy Framework on Agricultural Marketing] ರಾಜ್ಯ ಸರ್ಕಾರವು ಸಾರಾಸಗಟು ತಿರಸ್ಕರಿಸಬೇಕು.
  3. ರೈತ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿ ಕೃಷಿ ಬೆಳೆ ಆಯೋಗಕ್ಕೆ ಹೊಸ ಮಾರ್ಗಸೂಚಿಯನ್ನು ನೀಡಬೇಕು.
  4. ವಿದ್ಯುತ್‌ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಖಾಸಗೀಕರಿಸಬಾರದು. ವಿದ್ಯುತ್‌ ಸಂಪರ್ಕ ಪಡೆದುಕೊಳ್ಳುವ ಆರ್ಥಿಕ ಹೊರೆಯನ್ನು ರೈತರು ಹಾಗೂ ಜನಸಾಮಾನ್ಯರ ಮೇಲೆ ಹೊರೆಸಬಾರದು.
  5. ಬಗರ್‌ ಹುಕುಂ ರೈತರ ಭೂಮಿಗಳನ್ನು ಕೂಡಲೇ ಮಂಜೂರು ಮಾಡಬೇಕು. ಕಾನೂನಿನ ತೊಡಕನ್ನು ಕಾರಣವಾಗಿ ನೀಡಿ, ಬಡ ರೈತರ ಅರ್ಜಿಗಳನ್ನು ತಿರಸ್ಕರಿಸಬಾರದು ಮತ್ತು ಒಕ್ಕಲೆಬ್ಬಿಸಬಾರದು.
  6. ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಕಾರ್ಮಿಕರ ಕುರಿತ ನಾಲ್ಕು ಕೋಡ್‌ ಗಳನ್ನು ತಿರಸ್ಕರಿಸುವ ತೀರ್ಮಾನ ತೆಗೆದುಕೊಳ್ಳಬೇಕು.
  7. ಅಂತರಾಷ್ಟ್ರೀಯ ಶ್ರಮ ಒಡಂಬಡಿಕೆಗೆ ವಿರುದ್ಧವಾಗಿ ದುಡಿಮೆಯ ಅವಧಿಯನ್ನು 8ರಿಂದ 12 ಗಂಟೆಗೆ ಏರಿಸಿರುವ ಕಾರ್ಮಿಕ ವಿರೋಧಿ ತಿದ್ದುಪಡಿಯನ್ನು ರದ್ದುಗೊಳಿಸಬೇಕು.
  8. ಖಾಯಂ ಸ್ವರೂಪದ ಉದ್ಯೋಗಗಳಲ್ಲಿನ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಶಾಸನ ರೂಪಿಸಬೇಕು. ವಿವಿಧ ಅಸಂಘಟಿತ ಕಾರ್ಮಿಕರ ಮಂಡಳಿಗಳಿಗೆ ಅಗತ್ಯ ಅನುದಾನ ಮೀಸಲಿಡಬೇಕು.
  9. ಕಾರ್ಮಿಕ ಸಮ್ಮೇಳನ [KLC] ಏರ್ಪಡಿಸಿ ಕಾರ್ಮಿಕ ಸಂಘಟನೆಗಳ ಜೊತೆಗೂಡಿ ವೇತನ ಶ್ರಮಿಕ ನೀತಿಯನ್ನು ರೂಪಿಸುವ ಪರಿಪಾಠವನ್ನು ಕರ್ನಾಟಕ ಅಳವಡಿಸಿಕೊಳ್ಳಬೇಕು.
  10. ದೀರ್ಘಕಾಲದಿಂದ ಏರದೇ ನಿಂತಿರುವ ಕನಿಷ್ಟ ವೇತನವನ್ನು ಪರಿಷ್ಕರಿಸಿ ಮಾಸಿಕ 36 ಸಾವಿರ ಮಾಡಬೇಕು ಮತ್ತು ಎಲ್ಲಾ ಸೆಕ್ಟರ್‌ ನ ಕೂಲಿ ದರವನ್ನು ಒಮ್ಮೆಗೆ ಘೋಷಿಸಬೇಕು.
  11. ಕೊಟ್ಟ ಆಶ್ವಾಸನೆಯಂತೆ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು ಮುಂತಾದ ಕ್ಷೇತ್ರಗಳ ದುಡಿಯುವ ಜನರಿಗೆ ವೇತನ ಹೆಚ್ಚಿಸಬೇಕು.
    SCSP/TSP ನಿಧಿಯ ದುರುಪಯೋಗವನ್ನು ತಡೆಯಬೇಕು. ಗ್ಯಾರಂಟಿ ಯೋಜನೆಗಳಿಗೂ ಒಳಗೊಂಡಂತೆ ಬೇರೆ ಉದ್ದೇಶಗಳಿಗೆ ಬಳಕೆಯಾಗಿದ್ದ ಹಣವನ್ನು ಮತ್ತೆ ಈ ನಿಧಿಗೆ ಮರು ಭರ್ತಿ ಮಾಡಬೇಕು.
  12. ಎಲ್ಲಾ ಹಣ ಸೂಚಿತ ಉದ್ದೇಶಕ್ಕೆ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಸಮುದಾಯದ ಯುವಜನರ ಉದ್ಯೋಗ ಸೃಷ್ಟಿಗೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆ ಮೀಸಲಾಗಬೇಕು.
    ಮೈಕ್ರೋಫೈನಾನ್ಸ್‌ ಹಾವಳಿಯಿಂದ ಜನರನ್ನು, ವಿಶೇಷವಾಗಿ ಮಹಿಳೆಯರನ್ನು ಪಾರುಮಾಡಲು ಸಮಗ್ರ ನೀತಿ ರೂಪಿಸಬೇಕು. ರೈತರು ಹಾಗೂ ಎಲ್ಲಾ ದುಡಿಯುವ ಜನರನ್ನು ಋಣಮುಕ್ತರನ್ನಾಗಿಸಲು ಹಾಗೂ ಅವರಿಗೆ ಸರಳ ಸಾಲಸೌಲಭ್ಯ ದೊರಕುವಂತೆ ಮಾಡಲು ಸೂಕ್ತ ನೀತಿಯನ್ನು ರೂಪಿಸಬೇಕು.
  13. ಹೈಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ರೈತ ಋಣ ಆಯೋಗವನ್ನು ರಚಿಸಬೇಕು. ರಾಷ್ಟ್ರೀಯ ಬ್ಯಾಂಕುಗಳ ಮೂಲಕ ಸ್ವಸಹಾಯ ಸಂಘಗಳಿಗೆ 10 ಲಕ್ಷದವರೆಗೆ ದೀರ್ಘಕಾಲಿನ ಬಡ್ಡಿ ರಹಿತ ಸಾಲ ಒದಗಿಸಬೇಕು.
  14. ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರ, ಭ್ರೂಣ ಹತ್ಯೆ, ಮರ್ಯಾದೆಗೇಡು ಹತ್ಯೆ ಮುಂತಾದ ಹಿಂಸೆಗಳಿಂದ ಮಹಿಳೆಯರನ್ನು ಪಾರುಮಾಡಲು ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಬೇಕು.
  15. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ [NEP] ಯನ್ನು ತಿರಸ್ಕರಿಸಬೇಕು. ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಸಂರಕ್ಷಿಸಲು, ಕರ್ನಾಟಕದಲ್ಲಿ ತನ್ನದೇ ಆದ ಜೀವಪರ ಶಿಕ್ಷಣ ನೀತಿಯನ್ನು ರೂಪಿಸಲು ಮುಂದಾಗಬೇಕು.
  16. ಉದ್ಯೋಗ ಸೃಷ್ಟಿಗೆ ಮತ್ತು ಉದ್ಯೋಗ ಖಾತ್ರಿಗೆ ವಿಶೇಷ ಆಯೋಗ ರಚಿಸಿ, ಸಮಗ್ರ ನೀತಿ ಮತ್ತು ಕಾರ್ಯಯೋಜನೆ ಸಿದ್ಧಪಡಿಸಬೇಕು.
  17. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ [MNREGA] ಯೋಜನೆಯನ್ನು ಬಲಪಡಿಸಿ, 200 ದಿನಕ್ಕೆ ವಿಸ್ತರಿಸಿ, ನಗರ ಪ್ರದೇಶಗಳಿಗೂ ಅನ್ವಯಿಸಿ, ದಿನಕ್ಕೆ 600 ರೂಪಾಯಿಗಳಿಗೆ ಹೆಚ್ಚಿಸಿ ಬಲಪಡಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ವಿದಾನಸಭಾ ಅಧಿವೇಶನ ತೀರ್ಮಾನ ತೆಗೆದುಕೊಳ್ಳಬೇಕು.
  18. ಬೆಲೆ ಏರಿಕೆಗೆ ಕಡಿವಾಣ ಹಾಕಲೇಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಅಗತ್ಯ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದ ಮೇಲೂ ಒತ್ತಡ ಹೇರಬೇಕು.
  19. ರಾಜ್ಯದ ಆರ್ಥಿಕ ಸ್ವಾವಲಂಬನೆಯನ್ನು ನಾಶಗೊಳಿಸುತ್ತಿರುವ ಮತ್ತು ಜನಸಾಮಾನ್ಯರನ್ನು ಸುಲಿಯುತ್ತಿರುವ ಜಿಎಸ್‌ಟಿ ಪದ್ದತಿಯನ್ನು ರದ್ದುಗೊಳಿಸುಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ರಾಜ್ಯದ ನ್ಯಾಯಸಮ್ಮತ ಪಾಲನ್ನು ನೀಡುವಂತೆ ಬಲವಾಗಿ ಆಗ್ರಹಿಸಿ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು. ಬೀದಿ ಹೋರಾಟಕ್ಕೂ ಸಜ್ಜಾಗಬೇಕು.
    ನೋವಿನೊಂದಿಗೆ ವಂದಿಸುತ್ತಾ
    ಸಂಯುಕ್ತ ಹೋರಾಟ ಕರ್ನಾಟಕದ ಪರವಾಗಿ :

Related Articles

ಇತ್ತೀಚಿನ ಸುದ್ದಿಗಳು

You cannot copy content of this page