Thursday, March 6, 2025

ಸತ್ಯ | ನ್ಯಾಯ |ಧರ್ಮ

ಪ್ರಜಾಪ್ರಭುತ್ವದ ಆಶಯಗಳನ್ನು ಪೋಷಿಸುವ ಜಾಗದಲ್ಲಿಯೇ ಸಮಾನತೆ ಇಲ್ಲವಾಗಿದೆ-ಪೂಜಾ ಸಿಂಗೆ

‘ಶತಮಾನಗಳಿಂದ ಜಾತಿಯಿಂದ, ಹೆಣ್ಣು ಎಂಬ ಕಾರಣದಿಂದ ಇವತ್ತಿನವರೆಗೂ ಅವಳು ದ್ವಿತೀಯ ದರ್ಜೆಯ ಪ್ರಜೆಯೆ ಹೊರತು ಈ ಸಮಾಜದಲ್ಲಿ ಮಹಿಳೆಯು ಪ್ರಮುಖಳಾಗಿ ಕಾಣಿಸಿಕೊಳ್ಳುವುದೇ ಇಲ್ಲ’

ನಾಯಕತ್ವ ಪದದಲ್ಲಿ ನಾಯಕ‌ ಮಾತ್ರವಿದ್ದು,  ನಾಯಕಿ ಕಾಣೆಯಾಗಿದ್ದಾಳೆ. ಆದರೂ, ಹೆಣ್ಣೊಬ್ಬಳ ಕಾಳಜಿ ನಾಯಕತ್ವದಲ್ಲಿಯೇ ಉಳಿದಿದೆ. ಪಿತೃಪ್ರಧಾನವಾದ ಸಮಾಜದಲ್ಲಿ ಹೆಣ್ಣು ಗಂಡಿನ ನಡುವೆ ಲಿಂಗ ತಾರತಮ್ಯ ಯತಾವತ್ತಾಗಿ ಪಾಲಿಸುವ ವ್ಯವಸ್ಥೆ ಜಾರಿಯಲ್ಲಿದೆ ಎಂಬುದಕ್ಕೆ ವಿಧಾನ ಸೌಧದ ಆವರಣದಲ್ಲಿ ಫೆಬ್ರುವರಿ 28 ರ ಮಧ್ಯಾಹ್ನ ಏರ್ಪಡಿಸಿದ್ದ, ‘ನಾಯಕತ್ವ ಇಂದು ಮತ್ತು ನಾಳೆʼ ಅನ್ನುವ ವಿಚಾರ ಸಂಕಿರಣದಲ್ಲಿ ಸಾಬೀತಾಗಿದ್ದೇ ಶೋಚನೀಯ. 

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುನಿತಾ ವಿಲಿಯಮ್ಸ್, ಕಲ್ಪನಾ ಚಾವ್ಲಾ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಚೆನ್ನ ಭೈರಾದೇವಿ, ಬೆಳವಾಡಿ ಮಲ್ಲಮ್ಮ, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಇಂದಿನ ರಾಷ್ಟ್ರಾಧ್ಯಕ್ಷೆ ದ್ರೌಪದಿ ಮುರ್ಮು, ಮಮತಾ ಬ್ಯಾನರ್ಜಿ, ಪಿ. ಟಿ. ಉಷಾ, ಪಿ.ವಿ. ಸಿಂಧು, ಮಾಯಾವತಿ ಹೀಗೆ ಅನೇಕ ನಾಯಕಿರಿಯರಿದ್ದರೂ ಸಹ ವೇದಿಕೆಯ ಮೇಲಿದ್ದ ಸಂಪನ್ಮೂಲ ನಾಯಕರ ನಾಲಿಗೆ ಮೇಲೆ ಮಹಿಳಾ ಮಣಿಯರ ಮುಂದಾಳತ್ವದ ಬಗ್ಗೆ ತಪ್ಪಿಯೂ ಹೊರಳಲೇ ಇಲ್ಲ.

ಈ ಗೋಷ್ಠಿಯುದ್ದಕ್ಕೂ, ಪುರುಷರಿಂದ-ಪುರುಷರಿಗಾಗಿ, ಪುರುಷರೇ ನಡೆಸಿದ ಮಾತಿನ ಚಾವಡಿಯಂತೆ ಕಾಣಿಸಿತು. ಪಕ್ಕದಲ್ಲಿಯೇ ಉತ್ಸವಮೂರ್ತಿಯಂತೆ ಮಹಿಳೆಯೊಬ್ಬರು ಕುಳಿತುಕೊಂಡಿದ್ದರು. ಇಡೀ ಗೋಷ್ಠಿ ಬರೀ ಪುರುಷ ನಾಯಕತ್ವದ ಬಗ್ಗೆಯೇ. ‘ನಾಯಕನಾದವನಿಗೆ ಸ್ವಾಭಿಮಾನವಿರಬೇಕು, ಸ್ವಾರ್ಥವಿರಬಾರದು, ಎದೆ ಗುಂದಬಾರದು, ಸಮಾಜದ ಮೇಲೆ ಕಳಕಳಿ ಇರಬೇಕು’ ಎನ್ನುವುದರ ಮೂಲಕ ಕುವೆಂಪು, ಕೊಲಂಬಸ್, ಗಾಂಧಿ, ನಂಜುಂಡಸ್ವಾಮಿ ಹೀಗೆ ಪುರುಷರದ್ದೇ ಉದಾಹರಣೆಗಳು ನೀಡಿದ್ದು ಬೇಸರ ತರಿಸಿತು. 

ಮಾತುಗಳು ಮುಗಿದ ನಂತರ ಸಂವಾದ ಏರ್ಪಡಿಸಿದ್ದರು, ಮಹಿಳಾ ನಾಯಕಿಯರ ಪರವಾಗಿ ಮಾತನಾಡುವರು ಯಾರು ಇಲ್ಲವೆಂಬ ಪ್ರಶ್ನೆಗೆ ಥಟ್ಟಂತ ಉತ್ತರ ಬಂದಿದ್ದು, ಇಷ್ಟೆಲ್ಲ ಅಚ್ಚಕಟ್ಟಾಗಿ ಕಾರ್ಯಕ್ರಮ ನಿರ್ವಹಿಸುತ್ತಿರುವವರು ಮಹಿಳೆಯರೆ ಅವರೆ ನಿಮ್ಮ ಮಾತಿಗೆ ಉತ್ತರಿಸುತ್ತಾರೆ ಎಂದು ಮೈಕ್ ಅವರಿಗೆ ಕೊಟ್ಟರು. ಅವರು ಬೇರೇನೊ ಉತ್ತರ ನೀಡುವವರು ಎಂಬ ನಿರೀಕ್ಷೆ ಇತ್ತು. ಆದರೆ, ಹುಸಿಯಾಯಿತು.

‘ನಾಯಕತ್ವ ಎನ್ನುವ ಪದದಲ್ಲಿಯೇ ನಾಯಕಿ ಇದ್ದಾಳೆ. ನೀವು ಬೇರೆ ಬೇರೆಯಾಗಿ ನೋಡ್ತಾ ಇದಿರಾ. ಗಂಡು – ಹೆಣ್ಣು ಸಮಾನರು ಆದರೆ, ಇವತ್ತಿನ ಶಾಲಾ, ಕಾಲೇಜುಗಳಲ್ಲಿ ಜಂಡರ್ ಬಗ್ಗೆ ತಪ್ಪಾಗಿ ಅರ್ಥೈಸುತ್ತಿದ್ದಾರೆ. ನನ್ನ ಅನುಭವದಲ್ಲಿ ಹೇಳಬೇಕೆಂದರೆ ಯಾವುದೇ ಅಸಮಾನತೆ ಇಲ್ಲ’ ಎಂದು ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಯವರ ಮಾತು ತುಂಬ ಚಿಂತೆಗೀಡು ಮಾಡಿತು. ಬೇರೆ ಕಡೆಗಳೆಲ್ಲ ಕಾರ್ಯಕ್ರಮಗಳಲ್ಲಿ ಮಹಿಳೆಯರು ಕಾಣಿಸುವುದೇ ಇಲ್ಲ.

ಆದರೆ, ಅವರಿಗೆಲ್ಲ ಅದು ಗಂಭೀರದ ವಿಷಯವೇ ಅಲ್ಲ. ಅಷ್ಟು ನಿರ್ಲಕ್ಷ್ಯಕ್ಕೊಳಗಾಗಿದ್ದಾಳೆ. ಆದರೆ, ವಿಧಾನಸೌಧ ಎಂಬುದು ಸಮಾನತೆಯ ಜಾಗ, ಇಲ್ಲಿ ಮಹಿಳಾ ನಾಯಕಿಯರೂ ಇದ್ದಾರೆ. ಪ್ರಜಾಪ್ರಭುತ್ವದ ಆಶಯಗಳನ್ನು ಪೋಷಿಸುವ ಜಾಗದಲ್ಲಿಯೇ ಮಹಿಳಾ ಮುಂದಾಳತ್ವದ ಕುರಿತು ಮಾತನಾಡಲು ಪ್ರತಿನಿಧಿಯಾಗಿ ಯಾರು ಇರಲ್ಲಿಲ್ಲ. 

ಕಾರ್ಯಕ್ರಮಕ್ಕೆ ಬರುವ ಮುಂಚಿತವಾಗಿ, ಆಮಂತ್ರಣ ಪತ್ರಿಕೆ ನೋಡಿದ ಮೇಲಾದರು ಸಂಪನ್ಮೂಲ ವ್ಯಕ್ತಿಗಳಲ್ಲಿ ಸಣ್ಣ ಪ್ರಶ್ನೆ ಮೂಡಬೇಕಾಗಿತ್ತು. ಮಹಿಳೆಯರ ಪ್ರಾತಿನಿಧ್ಯವಿಲ್ಲದ ಕಾರ್ಯಕ್ರಮಕ್ಕೆ ನಾವು ಹೋಗುವುದರ ಕುರಿತು ಯೋಚಿಸಬೇಕಿತ್ತು. 

ಈ ಸಮಾಜ ಎಷ್ಟು ಟ್ರೈನ್ ಮಾಡಿದೆ ಎಂದರೆ ಹೆಣ್ಣೊಬ್ಬಳು ತನ್ನ ವಿರುದ್ಧವಾಗಿ ತಾನೇ ಮಾತಾಡಿಕೊಂಡರು ಅದು ತಪ್ಪು ಅಂತ ಕಾಣಿಸುವುದಿಲ್ಲ. ಯಾಕೆಂದರೆ, ಬೆಟ್ಟದ ಮೇಲೆ ನಿಂತು ಕೆಳಗಡೆ ನೋಡಿದಾಗ ಕಾಣುವುದು ಸಪಾಟಾಗಿಯೇ; ಬೆಟ್ಟದ ಕೆಳಗಿಳಿದು ಬಂದು ನೋಡಿದಾಗ ಇಲ್ಲಿರುವ ಅಸಮಾನತೆ ಕಾಣುತ್ತೆ.

ಆದರೂ, ಶತಮಾನಗಳಿಂದ ಜಾತಿಯಿಂದ, ಹೆಣ್ಣು ಎಂಬ ಕಾರಣದಿಂದ ಇವತ್ತಿನವರೆಗೂ ಅವಳು ದ್ವಿತೀಯ ದರ್ಜೆಯ ಪ್ರಜೆಯೆ ಹೊರತು ಈ ಸಮಾಜದಲ್ಲಿ ಮಹಿಳೆಯು ಪ್ರಮುಖಳಾಗಿ ಕಾಣಿಸಿಕೊಳ್ಳುವುದೇ ಇಲ್ಲ. 

ಬಹುತೇಕ ಮಹಿಳೆಯರು ಕೇವಲ ಪ್ರಾರ್ಥನಾ ಗೀತೆ, ಸ್ವಾಗತ ಗೀತೆ, ನಿರೂಪಣೆ, ಬೊಕ್ಕೆ ಕೊಡುವುದು ಇಂತಹವುಗಳಲ್ಲೇ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ. ಆದರೆ, ವೇದಿಕೆಗಳ ಮೇಲೆ ಕಾಣಿಸಿಕೊಳ್ಳುವುದು ವಿರಳ. ಒಂದು ವೇಳೆ ಕಾಣಿಸಿಕೊಂಡರೂ ಉತ್ಸವ ಮೂರ್ತಿಗಳಾಗಿರುತ್ತಾರೆ.

ಪೂಜಾ ಸಿಂಗೆ, ಕಲಬುರಗಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page