Saturday, March 29, 2025

ಸತ್ಯ | ನ್ಯಾಯ |ಧರ್ಮ

ರಾಹುಲ್‌ ಗಾಂಧಿ ತಾನು ಸಂಸತ್ತಿನಲ್ಲಿ ಮಾತನಾಡಬೇಕಿದ್ದ ಸಮಯದಲ್ಲಿ ವಿಯೆಟ್ನಾಮ್‌ ಹೋಗಿ ಕುಳಿತಿದ್ದರು: ಅಮಿತ್‌ ಶಾ

ದೆಹಲಿ: ಸಂಸತ್ತಿನಲ್ಲಿ ಮಾತನಾಡಲು ಅವಕಾಶವನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆಯಲ್ಲಿ ಮಾತನಾಡಲು ನಿಗದಿಯಾದ ಸಮಯದಲ್ಲಿ ವಿರೋಧ ಪಕ್ಷದ ನಾಯಕರು ವಿಯೆಟ್ನಾಂನಲ್ಲಿ ಇದ್ದರು ಎಂದು ಅವರು ದೂರಿದ್ದಾರೆ.

‘ಟೈಮ್ಸ್ ನೌ ಶೃಂಗಸಭೆ 2025’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾ, “ಧರ್ಮದ ಆಧಾರದ ಮೇಲಿನ ಯಾವುದೇ ಮೀಸಲಾತಿ ಸಂವಿಧಾನವನ್ನು ಉಲ್ಲಂಘಿಸುತ್ತದೆ. ನ್ಯಾಯಾಲಯಗಳು ಅಂತಹ ಮೀಸಲಾತಿಯನ್ನು ರದ್ದುಪಡಿಸುತ್ತವೆ. ಧರ್ಮದ ಆಧಾರದ ಮೇಲಿನ ಮೀಸಲಾತಿಗೆ ನಾವು ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತೇವೆ” ಎಂದು ಹೇಳಿದರು.

ರಾಹುಲ್ ಗಾಂಧಿ ಅವರ ಸಂಸತ್ ಕಾರ್ಯವೈಖರಿ ಟೀಕೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, “ಸಂಸತ್‌ನಲ್ಲಿ ಮಾತನಾಡಲು ನಿರ್ದಿಷ್ಟ ನಿಯಮಗಳಿವೆ, ಅದನ್ನು ಯಾರ ಇಚ್ಛೆಯಂತೆಯೂ ನಡೆಸಲಾಗುವುದಿಲ್ಲ ಎಂಬುದು ಲೋಕಸಭೆಯ ವಿರೋಧ ಪಕ್ಷದ ನಾಯಕರಿಗೆ ತಿಳಿದಿಲ್ಲದಿರಬಹುದು. ಬಜೆಟ್ ಚರ್ಚೆಯ ಸಂದರ್ಭದಲ್ಲಿ ರಾಹುಲ್ ಅವರಿಗೆ ಶೇ 42ರಷ್ಟು ಸಮಯವನ್ನು ಒದಗಿಸಲಾಗಿತ್ತು” ಎಂದು ವಿವರಿಸಿದರು.

“ಸಂಸತ್ತಿನಲ್ಲಿ ಗಂಭೀರ ವಿಷಯಗಳ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ರಾಹುಲ್ ಗಾಂಧಿ ವಿಯೆಟ್ನಾಂನಲ್ಲಿದ್ದರು. ಮರಳಿ ಬಂದ ನಂತರ ಅವರು ತಮ್ಮ ಮನಸ್ಸಿಗೆ ಬಂದಂತೆ ಮಾತನಾಡಲು ಶುರುಮಾಡಿದರು. ಸಂಸತ್ ತನ್ನ ನಿಯಮಗಳು ಮತ್ತು ಕಾರ್ಯವಿಧಾನಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ, ಕಾಂಗ್ರೆಸ್ ಪಕ್ಷದಂತೆ ಅಲ್ಲ. ರಾಹುಲ್ ಗಾಂಧಿ ಸಂಸತ್ತಿನ ನಿಯಮಗಳನ್ನು ಮತ್ತು ಷರತ್ತುಗಳನ್ನು ಪಾಲಿಸುವುದು ಅಗತ್ಯ” ಎಂದು ಶಾ ಒತ್ತಿ ಹೇಳಿದರು.

ಲೋಕಸಭೆಯ ಕಲಾಪಗಳನ್ನು ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ನಡೆಸಲಾಗುತ್ತಿದೆ ಮತ್ತು ತನಗೆ ಮಾತನಾಡಲು ಅವಕಾಶವನ್ನು ತಡೆಯಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page