Tuesday, April 8, 2025

ಸತ್ಯ | ನ್ಯಾಯ |ಧರ್ಮ

ಇಂದಿನಿಂದ ಎಐಸಿಸಿ ಕಾರ್ಯಕಾರಿಣಿ ಸಮಾವೇಶ ; ಮಹತ್ವ, ಅಜೆಂಡಾಗಳು ಏನು?

ಇಂದಿನಿಂದ ಎರಡು ದಿನಗಳ ಕಾಲ ಎಐಸಿಸಿ ಸಮಾವೇಶ ನಡೆಯಲಿದ್ದು, ಗುಜರಾತಿನ ಅಹಮದಾಬಾದ್ ನಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ದೇಶದ ಎಲ್ಲಾ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ಪಕ್ಷದ ಪುನರುಜ್ಜೀವನ ಮತ್ತು ಸತತ ಸೋಲಿನ ಪರಾಮರ್ಶೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎರಡು ದಿನಗಳ ಕಾಲ ಈ ಅಧಿವೇಶನ ನಡೆಯಲಿದ್ದು, ಬಿಜೆಪಿ ವಿರುದ್ಧ ಹೋರಾಟ ನಡೆಸುವ ನಿಟ್ಟಿನಲ್ಲಿ ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಜಿಲ್ಲಾ ಘಟಕಗಳನ್ನು ಪುನಾರಚಿಸಿ, ಸಂಘಟಿಸುವ ಉದ್ದೇಶ ಹೊಂದಿದೆ.

ವಿಶೇಷವಾಗಿ ಈ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಬಿಹಾರ ಚುನಾವಣೆ, 2026ರ ಮಾರ್ಚ್-ಎಪ್ರಿಲ್ನಲ್ಲಿ ನಡೆಯಲಿರುವ ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಲ ಮತ್ತು ಅಸ್ಸಾಂ ವಿಧಾನಸಭೆ ಚುನಾವಣೆ ಬಗ್ಗೆಯೂ ಚರ್ಚೆ ನಡೆಯಲಿದೆ.

2027ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಮಹಾ ಅಧಿವೇಶನ ಮಹತ್ವ ಪಡೆದಿದೆ. 1995 ರ ನಂತರ ಗುಜರಾತ್ ನಲ್ಲಿ ಕಾಂಗ್ರೆಸ್ ಸರ್ಕಾರವೇ ಕೊನೆಯ ಪಕ್ಷದ ಆಡಳಿತವಾಗಿದೆ. ಹೀಗಾಗಿ ಈ ಬಾರಿಯ ಅಹಮದಾಬಾದ್ ರಾಷ್ಟ್ರೀಯ ಸಮಾವೇಶ ಮಹತ್ವ ಪಡೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಇಂದಿನ ಕಾರ್ಯಕ್ರಮಗಳೇನು?
ಮಂಗಳವಾರ ಬೆಳಗ್ಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಮಾರಕದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ನಡೆಯಲಿದೆ. ಅದರಲ್ಲಿ ಮುಖ್ಯಮಂತ್ರಿಗಳ ಸಹಿತ 169 ಮಂದಿ ನಾಯಕರು, ಕಾಂಗ್ರೆಸ್ ಚುನಾವಣ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ. ಬುಧವಾರ ಸಬರಮತಿ ನದಿ ದಂಡೆಯಲ್ಲಿ ಅಖೀಲ ಭಾರತ ಕಾಂಗ್ರೆಸ್ ಮಹಾ ಅಧಿವೇಶನ ನಡೆಯಲಿದೆ. ಸಂಸದರು, ಎಐಸಿಸಿ ಸದಸ್ಯರು, ಮುಖ್ಯಮಂತ್ರಿಗಳ ಸಹಿತ 1,725 ಮಂದಿ ಮುಖಂಡರು ಭಾಗವಹಿಸಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page