Tuesday, April 15, 2025

ಸತ್ಯ | ನ್ಯಾಯ |ಧರ್ಮ

ಮೀಸಲಾತಿಯಿಂದ `ಪ್ರತಿಭೆ’ಗೆ ಅನ್ಯಾಯ ಎನ್ನುವವರಿಗೆ ಬಾಬಾಸಾಹೇಬರ ಉತ್ತರ

“..ಮನುಸ್ಮೃತಿ ಎಂಬ ಶೋಷಣೆಯ-ಮೀಸಲಾತಿ ಗ್ರಂಥದಿಂದಾಗಿ ಸಾವಿರಾರು ವರ್ಷಗಳ ಕಾಲ ಅಮಾನವೀಯ ಆದ್ಯತೆಗಳನ್ನು ಅನುಭವಿಸುತ್ತಾ ಬಂದ ಸಮುದಾಯದವರು, ಅರ್ಹತೆಯಿದ್ದರೂ ಶೂದ್ರರು-ಅಸ್ಪೃಶ್ಯರಿಗೆ ಅವಕಾಶವನ್ನೇ ಕೊಡದೆ ಶೋಷಿಸುತ್ತಲೇ ಬಂದಿದ್ದಾರೆ..” ಮಾಚಯ್ಯ ಎಂ ಹಿಪ್ಪರಗಿ ಅವರ ಬರಹದಲ್ಲಿ

ಬಹುಶಃ ಇದು 1921-22ರ ಆಸುಪಾಸಿನಲ್ಲಿ ಬಾಬಾ ಸಾಹೇಬರು ಬರೆದಿದ್ದ ಬರಹವಿರಬಹುದು. ಅವರ ಯಾವ ಪುಸ್ತಕದಲ್ಲೂ ಪ್ರಕಟವಾಗದೆ ಉಳಿದಿತ್ತು. ಯಾಕೆಂದರೆ, ಮಧ್ಯಭಾಗದ ಕೆಲವು ಪುಟಗಳಷ್ಟು ಹಸ್ತಪ್ರತಿ ಬಿಟ್ಟರೆ ಆರಂಭದ ಒಂದಷ್ಟು ಮತ್ತು ಅಂತ್ಯದ ಪುಟಗಳು ಲಭಿಸಿರಲಿಲ್ಲ. ಕೊನೆಗೆ, 2013ರಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದ DR. BABASAHEB AMBEDKAR WRITINGS AND SPEECHES Vol. 12 ಕೃತಿಯಲ್ಲಿ ಅಪೂರ್ಣ ರೂಪದಲ್ಲೇ ಇದನ್ನು ಪ್ರಕಟಿಸಲಾಗಿದೆ. ಈ ಕೃತಿಯ ಪುಟ ಸಂಖ್ಯೆ 709ರಿಂದ ಶುರುವಾಗುವ Manu and the Shudras ಎನ್ನುವ ಶೀರ್ಷಿಕೆಯ ಅಧ್ಯಾಯದಲ್ಲಿ ಈ ಬರಹವನ್ನು ಕಾಣಬಹುದು. ಕೃತಿರೂಪದಲ್ಲಿ ಅವು ಅಪೂರ್ಣ ಪುಟಗಳೆನಿಸಿದರೂ, ಅಲ್ಲಿರುವ ಬಾಬಾಸಾಹೇಬರ ಮಾತುಗಳು ಅರ್ಥಪೂರ್ಣವಾಗಿಯೂ, ಪ್ರಸ್ತುತವಾಗಿಯೂ ಗೋಚರಿಸುತ್ತವೆ.

ಮನುಸ್ಮೃತಿ ಎಂಬ ಕಟ್ಟಳೆ ಭಾರತೀಯ ಸಮಾಜವನ್ನು ಹೇಗೆ ಶೋಷಣೆಗೆ ತಳ್ಳುತ್ತಾ ಬಂದಿದೆ ಅನ್ನೋದನ್ನು ಚಾರಿತ್ರಿಕ ಪುರಾವೆಗಳ ಸಹಿತ ವಿವರಿಸುವ ಬರಹ ಅದು. ಅದರಲ್ಲಿ ಒಂದುಕಡೆ, ಡಾ. ಆರ್‍‌.ಪಿ ಪರಾಂಜಪೆ ಎನ್ನುವವರು ಗುಜರಾತಿ ಪತ್ರಿಕೆಯಲ್ಲಿ ಬರೆದಿದ್ದ ಲೇಖನವೊಂದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ತಮ್ಮ ಒಂದೆರಡು ಮಾತುಗಳನ್ನು ಬಾಬಾ ಸಾಹೇಬರು ದಾಖಲಿಸಿದ್ದಾರೆ. ಇವತ್ತು, ಮೀಸಲಾತಿಯಿಂದಾಗಿ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ, ದೇಶದ ಪ್ರಗತಿಗೆ ಹಿನ್ನಡೆಯಾಗುತ್ತಿದೆ ಎಂದೆಲ್ಲ ಮೂದಲಿಸುತ್ತಿರುವವರಿಗೆ ಅಂಬೇಡ್ಕರರು ನೂರು ವರ್ಷಗಳ ಹಿಂದೆಯೇ, ಅಂದರೆ ಮೀಸಲಾತಿ ಶಾಸನಬದ್ಧವಾಗಿ ಜಾರಿಗೆ ಬರುವುದಕ್ಕು ಇಪ್ಪತ್ತೈದು ವರ್ಷಗಳ ಹಿಂದೆಯೇ ಖಡಕ್‌ ಉತ್ತರಕೊಟ್ಟಿದ್ದರು.

ಅಂದಹಾಗೆ, ಬ್ರಿಟಿಷ್‌ ಆಳ್ವಿಕೆಯ ಮದ್ರಾಸ್‌ ಮತ್ತು ಬಾಂಬೆ ಪ್ರೆಸಿಡೆನ್ಸಿಗಳಲ್ಲಿ ಜಾರಿಗೆ ತರಲು ಮುಂದಾಗಿದ್ದ ಮೀಸಲಾತಿಯನ್ನು ವಿರೋಧಿಸಿ ಆರ್‍‌.ಪಿ. ಪರಾಂಜಪೆಯವರು ಆ ಲೇಖನ ಬರೆದಿದ್ದರು. ಆಗೆಲ್ಲಾ, ಸರ್ಕಾರಿ ಆಡಳಿತದ ಆಯಕಟ್ಟಿನ ಹುದ್ದೆಗಳಲ್ಲಿ ಬ್ರಾಹ್ಮಣರೇ ತುಂಬಿಕೊಂಡಿದ್ದರು. ಈ ರೀತಿ ಒಂದೇ ಸಮುದಾಯದವರ ಏಕಸ್ವಾಮ್ಯ ಉತ್ತಮ ಆಡಳಿತಕ್ಕೆ ಒಳಿತಲ್ಲ ಎಂಬ ತೀರ್ಮಾನಕ್ಕೆ ಬಂದ ಪ್ರೆಸಿಡೆನ್ಸಿಗಳು ಬ್ರಾಹ್ಮಣೇತರ ಹಿಂದೂಗಳು, ಮಹಮದೀಯರು, ಕ್ರೈಸ್ತರು, ಆಂಗ್ಲೋ ಇಂಡಿಯನ್ನರು ಮತ್ತು ಇತರರಿಗೆ ನೇಮಕಾತಿಯಲ್ಲಿ ಅವಕಾಶಗಳನ್ನು ಕಲ್ಪಿಸುವ `ಕಮ್ಯುನಲ್ ರೇಷಿಯೋ’ ನೀತಿಯನ್ನು ಅಳವಡಿಸಲು ಮುಂದಾಗಿದ್ದವು. ಆ ಪ್ರೆಸಿಡೆನ್ಸಿಗಳಲ್ಲಿ ಬ್ರಾಹ್ಮಣೇತರರು ಅಧಿಕಾರದಲ್ಲಿ ಇದ್ದುದರಿಂದ ಅಂತಹ ಕ್ರಾಂತಿಕಾರಿ ನೀತಿ ಜಾರಿಗೆ ತರಲು ಧೈರ್ಯ ತೋರಿದ್ದವು. ಆ ನೀತಿಯನ್ನು ವಿರೋಧಿಸಿ ಪರಾಂಜಪೆಯವರು ಲೇಖನ ಬರೆದಿದ್ದರು. ಅದಕ್ಕೆ ಬಾಬಾಸಾಹೇಬರು ನೀಡಿದ ಪ್ರತಿಕ್ರಿಯೆ (ಅವರದೇ ಮಾತುಗಳಲ್ಲಿ) ಹೀಗಿದೆ…


“ಬಾಂಬೆ, ಮದ್ರಾಸ್‌ ಮತ್ತು ಸೆಂಟ್ರಲ್‌ ಪ್ರಾವಿನ್ಸ್‌ಗಳಲ್ಲಿ ಅಧಿಕಾರದಲ್ಲಿರುವ ಬ್ರಾಹ್ಮಣೇತರ ಆಡಳಿತಗಾರರ ವಿರುದ್ಧ ಬರೆದಂತಿದೆ (ಆರ್‍‌ ಜೆ ಪರಾಂಜಪೆಯವರ) ಈ ಲೇಖನ. ರಾಜ್ಯಾಡಳಿತ ಸೇವೆಗಳ ಹುದ್ದೆಗಳಲ್ಲಿ ಒಂದೇ ಸಮುದಾಯ ಏಕಸ್ವಾಮ್ಯ ಹೊಂದಿರುವುದನ್ನು ಕೊನೆಗಾಣಿಸಲು ಆ ಬ್ರಾಹ್ಮಣೇತರ ಆಡಳಿತಗಾರರು ಮುಂದಾಗಿದ್ದಾರೆ. ಭಾರತದ ಎಲ್ಲಾ ಸಂಸ್ಥಾನಗಳು ಮತ್ತು ಸರ್ಕಾರದ ಎಲ್ಲಾ ಇಲಾಖೆಗಳ ಸೇವೆಗಳಲ್ಲಿ ಬ್ರಾಹ್ಮಣರೇ ಹೆಚ್ಚೂಕಮ್ಮಿ ಪಾರಮ್ಯ ಹೊಂದಿದ್ದಾರೆ. ಸರ್ಕಾರಿ ಸೇವೆಗಳಿಗೆ ನೇಮಕಾತಿ ಮಾಡಿಕೊಳ್ಳುವಾಗ, ಆ ಹುದ್ದೆಗೆ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆ ಹೊಂದಿದ ಬ್ರಾಹ್ಮಣೇತರ ಅಭ್ಯರ್ಥಿಗಳಿಗೆ, ಬ್ರಾಹ್ಮಣ ಅಭ್ಯರ್ಥಿಗಳಿಗಿಂತ ಮೊದಲ ಆದ್ಯತೆ ನೀಡಬೇಕು ಎನ್ನುವ ಆಶಯದ `ಕಮ್ಯುನಲ್‌ ರೇಷಿಯೋ’ ನೀತಿಯನ್ನು ಈ ಸಂಸ್ಥಾನಗಳು ಜಾರಿಗೆ ತರಲು ಮುಂದಾಗಿವೆ. ನನ್ನ ಪ್ರಕಾರ ಈ ನೀತಿಯಲ್ಲಿ ಟೀಕಿಸುವಂತಹ ಯಾವ ದೋಷವೂ ಇಲ್ಲ. ಒಂದು ಸಮುದಾಯ ಎಷ್ಟೇ ಬುದ್ದಿವಂತವೆನಿಸಿದ್ದರು ಕೂಡಾ, ಆ ಸಮುದಾಯದ ಕೈಯಲ್ಲೆ ದೇಶವೊಂದರ ಸಮಗ್ರ ಆಡಳಿತ ವ್ಯವಸ್ಥೆ ಇರಬೇಕೆಂದು ವಾದಿಸುವುದು ಖಂಡಿತ ತಪ್ಪು.”

“ಬಹುಶಃ ಇದನ್ನು ಜಾರಿಗೆ ತರಲು ಮುಂದಾಗಿರುವ ಆಡಳಿತಗಾರರಿಗೆ, ಉತ್ತಮ ಸರ್ಕಾರವೆನ್ನುವುದು ಸಮರ್ಥ ಸರ್ಕಾರಕ್ಕಿಂತಲೂ ಒಳಿತೆನ್ನುವ ನೀತಿ ಕೇವಲ ಶಾಸನಸಭೆಗೆ ಮಾತ್ರ ಸೀಮಿತವಾದುದಲ್ಲ, ಅದು ಆಡಳಿತಾಂಗಕ್ಕೂ ಅನ್ವಯವಾಗಬೇಕು ಎಂಬುದು ಮನದಟ್ಟಾಗಿರಬಹುದು. ಒಂದು ಸರ್ಕಾರ ಜನರ ಜೊತೆ ನೇರ ಸಂಪರ್ಕ ಸಾಧಿಸುವುದೇ ತನ್ನ ಆಡಳಿತಾಂಗದ ಮೂಲಕ. ಯಾವುದೇ ಆಡಳಿತಾಂಗ (ಕಾರ್ಯಾಂಗ) ಒಳ್ಳೆಯ ಕೆಲಸ ಮಾಡಬೇಕೆಂದರೆ ಅದು ತನ್ನೊಳಗೆ ಜನರೆಡೆಗೆ ಸಹಾನುಭೂತಿಯನ್ನು ಹೊಂದಿರಬೇಕು. ಕೇವಲ ಬ್ರಾಹ್ಮಣರ ಅಂಕೆಯಲ್ಲಿರುವ ಯಾವ ಆಡಳಿತಾಂಗವು ಸಹಾನುಭೂತಿಯನ್ನು ಹೊಂದಲು ಸಾಧ್ಯವಿಲ್ಲ. ಬೇರೆಲ್ಲರಿಗಿಂತ ತಾನು ಶ್ರೇಷ್ಠ ಎಂಬ ಭಾವನೆಯಲ್ಲಿರುವ; ಆ ಕಾರಣಕ್ಕೆ ಇತರರನ್ನು ಕೆಳಜಾತಿಯವರು ಮತ್ತು ಶೂದ್ರರೆಂದು ಕೇವಲವಾಗಿ ಕಾಣುವ; ಅಂತವರ ಆಶೋತ್ತರಗಳಿಗೆ ವಿರುದ್ಧವಾಗಿ ವರ್ತಿಸುವ; ತನ್ನ ಸಮುದಾಯದೆಡೆಗೆ ಸಹಜ ಪಕ್ಷಪಾತ ಧೋರಣೆ ಹೊಂದಿರುವ; ಬೇರೆ ಜನರತ್ತ ಅನಾದರ ಹೊಂದಿರುವ… ಬ್ರಾಹ್ಮಣ ವ್ಯಕ್ತಿ ಒಬ್ಬ ಉತ್ತಮ ಆಡಳಿತಗಾರನಾಗಲು ಹೇಗೆ ಸಾಧ್ಯ? ಅಂತಹ ವ್ಯಕ್ತಿ ಭಾರತೀಯರ ಪಾಲಿಗೆ ಇತರೆ ವಿದೇಶಿಗಳಂತೆಯೇ ಒಬ್ಬ ಪರಕೀಯನಷ್ಟೆ.”

“ಬ್ರಾಹ್ಮಣೇತರರಿಗೆ ಆದ್ಯತೆ ಕಲ್ಪಿಸುವ ಈ ನೀತಿಯ ವಿರುದ್ಧ ಬ್ರಾಹ್ಮಣರು ಪ್ರತಿಭಾ ಸಾಮರ್ಥ್ಯವನ್ನು ಮುಂದೊಡ್ಡುತ್ತಿರುವುದು ಸರಳ ಮತ್ತು ಸಹಜವಾಗಿದೆ. ಯಾಕೆಂದರೆ, ಅವರಿಗೆ ಗೊತ್ತು, ಶಿಕ್ಷಣದಲ್ಲಿ ಬೇರೆಲ್ಲ ಸಮುದಾಯಗಳಿಗಿಂತ ಬಹಳಷ್ಟು ಮುಂದಿರುವ ಅವರಿಗೆ ಈ ನೀತಿ ವಿರೋಧಿಸಲು ಇರುವ ಏಕೈಕ ಕಾರ್ಡ್‌ ಎಂದರೆ ಇದು ಮಾತ್ರವೇ ಅಂತ. ಆದರೆ, ಅವರಿಗೆ ಒಂದು ಸಂಗತಿ ಗೊತ್ತಿಲ್ಲ. ಒಂದುವೇಳೆ, ಪ್ರತಿಭಾ ಸಾಮರ್ಥ್ಯವೇ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಏಕೈಕ ಮಾನದಂಡವಾಗುವುದಾದರೆ, ಬ್ರಾಹ್ಮಣರು ಇದುವರೆಗೆ ದಕ್ಕಿಸಿಕೊಂಡಿರುವ ಏಕಸ್ವಾಮ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಪ್ರತಿಭಾ ಸಾಮರ್ಥ್ಯವೆ ನೇಮಕಾತಿಯ ಮಾನದಂಡವಾಗುವುದಾದರೆ ಸರ್ಕಾರಿ ಹುದ್ದೆಗಳಿಗೆ ಭಾರತದ ಬ್ರಾಹ್ಮಣರಿಗಿಂತ ಪರದೇಶಿಗಳಾದ ಇಂಗ್ಲಿಷರನ್ನೊ, ಫ್ರೆಂಚರನ್ನೋ, ಜರ್ಮನರನ್ನೋ ಅಥವಾ ಟರ್ಕರನ್ನೋ ನೇಮಕ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ ಅಲ್ಲವೇ. ಆ ಕಾರಣಕ್ಕೇ, ಈಗ ಆ ಬ್ರಾಹ್ಮಣೇತರ ಆಡಳಿತಗಾರರು ಸರ್ಕಾರಿ ನೇಮಕಾತಿಗಳಿಗೆ ಪ್ರತಿಭಾ ಸಾಮರ್ಥ್ಯವೊಂದನ್ನೇ ಆರಾಧಿಸುವುದರ ಬದಲು ಕಮ್ಯುನಲ್‌ ರೇಷಿಯೋ ಮೂಲಕ ಇತರರಿಗೆ ಆದ್ಯತೆಯನ್ನು ನೀಡಿ, ಆಡಳಿತದಲ್ಲಿ ಜಾತಿ-ಜನಾಂಗೀಯ ವೈವಿಧ್ಯತೆಯನ್ನು ತರಲು ಮತ್ತು ಆ ಮೂಲಕ ಉತ್ತಮ ಆಡಳಿತವನ್ನು ಸಾಧ್ಯವಾಗಿಸಲು ಮುಂದಾಗಿದ್ದಾರೆ.”

“ತಾವು ಅಧಿಕಾರದಲ್ಲಿರುವ ಅವಧಿಯಲ್ಲೆ, ಆಡಳಿತಾಂಗದ ಬ್ರಾಹ್ಮಣೀಕರಣವನ್ನು ಕೊನೆಗಾಣಿಸಿ ಸರ್ಕಾರಿ ಹುದ್ದೆಗಳಲ್ಲಿ ಬ್ರಾಹ್ಮಣರು-ಅಬ್ರಾಹ್ಮಣರ ಸಮಾನುಪಾತವನ್ನು ಸಾಧಿಸಿಬಿಡಬೇಕೆಂಬ ಉಮೇದಿನಲ್ಲಿರುವ ಆ ಸಂಸ್ಥಾನಗಳ ಅಧಿಕಾರಸ್ಥರು, ತಮ್ಮ ಈ ಯತ್ನಕ್ಕೆ ಕನಿಷ್ಠ ಪ್ರತಿಭಾ ಸಾಮರ್ಥ್ಯವೇ ಮಿತಿಯಾಗಲಿದೆ ಎಂಬುದನ್ನು ಮರೆಯಬಾರದು. ಹಾಗಂತ, ಅವರು ಈಗ ಜಾರಿಗೆ ತರಲು ಮುಂದಾಗಿರುವ ನೀತಿಯು ಜನರ ಆಶೋತ್ತರಗಳನ್ನು ಈಡೇರಿಸುವ ವಿಚಾರದಲ್ಲಿ ಪ್ರಶಂಸನೀಯವಲ್ಲ ಎಂದು ಹೇಳಲಾಗದು.”

“ಈ ನೀತಿಯ ವಿರುದ್ಧ ಬಹಳಷ್ಟು ಬ್ರಾಹ್ಮಣರು ಸಿಟ್ಟೆಗೇಳುವುದರಲ್ಲಿ ಅನುಮಾನವಿಲ್ಲ. ಅವರು ತಮ್ಮ ಕೋಪವನ್ನು ಬಹಳ ಉತ್ಕಟವಾಗಿ ಹೊರಹಾಕುತ್ತಾರೆ. ಡಾ. ಪರಾಂಜಪೆಯವರ ಈ ಬರಹ ಬ್ರಾಹ್ಮಣೇತರ ಆಡಳಿಗಾರರ ಆ ನೀತಿಯ ಅತ್ಯುತ್ತಮ ವಿಡಂಬನೆ ಎನ್ನಬಹುದು. ಬ್ರಾಹ್ಮಣೇತರರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡುವ ನೀತಿಯನ್ನು ಈ ಬರಹ ಅನುಕರಣೀಯವಲ್ಲದ ನೀತಿಯಂತೆ ಬಿಂಬಿಸಿದೆ. ಪರಾಂಜಪೆಯವರಿಗೆ ನನ್ನ ಒಂದೇಒಂದು ಆಕ್ಷೇಪಣೆಯೇನೆಂದರೆ, ಅವರು ಈ ನೀತಿಯಲ್ಲಿರುವ ವಿಡಂಬನೆಯನ್ನೆ ಅರ್ಥಮಾಡಿಕೊಂಡಿಲ್ಲ. ಬ್ರಾಹ್ಮಣೇತರ ಆಡಳಿತಗಾರರು ಈ ನೀತಿಯ ಮೂಲಕ ಹೊಸದೇನನ್ನೂ ಮಾಡಹೊರಟಿಲ್ಲ. ಕೇವಲ ಮನುಸ್ಮೃತಿಯನ್ನು ತಿರುಗಮುರುಗಾಗಿಸುತ್ತಿದ್ದಾರೆ ಅಷ್ಟೆ. ಚಕ್ರ ಒಂದು ಸುತ್ತು ಸುತ್ತಿದಂತೆ. ಮನು, ಶೂದ್ರರನ್ನು ಯಾವ ಸ್ಥಾನದಲ್ಲಿಟ್ಟಿದ್ದನೋ, ಆ ಸ್ಥಾನದಲ್ಲಿ ಈಗ ಬ್ರಾಹ್ಮಣರನ್ನು ಇರಿಸಲು ಈ ನೀತಿ ಮುಂದಾಗಿದೆಯಷ್ಟೆ. ಹುಟ್ಟಿನಿಂದ ಬ್ರಾಹ್ಮಣ ಎಂಬ ಕಾರಣಕ್ಕೆ ಮನು ತನ್ನ ಸ್ಮೃತಿಯಲ್ಲಿ ಬ್ರಾಹ್ಮಣರಿಗೆ ವಿಶೇಷ ಆದ್ಯತೆ, ಮೀಸಲಾತಿಗಳನ್ನು ನೀಡಿಲ್ಲವೇ? ಅರ್ಹತೆಯಿದ್ದರೂ, ಪ್ರತಿಭಾ ಸಾಮರ್ಥ್ಯವಿದ್ದರೂ ಮನುಸ್ಮೃತಿ ಶೂದ್ರನಿಗೆ ಹಕ್ಕು, ಅವಕಾಶಗಳನ್ನು ನಿರಾಕರಿಸಿಲ್ಲವೇ? ಇದೇ ಮನುಸ್ಮೃತಿಯ ಮೀಸಲಾತಿ ನೀತಿಯನ್ನು ಅನುಸರಿಸಿ, ಈಗ ಶೂದ್ರರಿಗೆ ಶೂದ್ರರೆಂಬ ಕಾರಣಕ್ಕೆ ಆದ್ಯತೆ ನೀಡಲು ಮುಂದಾದರೆ, ಇಷ್ಟು ದಿನ ಆ ಮನುಸ್ಮೃತಿಯಿಂದಾಗಿ ಆದ್ಯತೆಗಳನ್ನು ಅನುಭವಿಸಿದವರಿಗೆ ಪ್ರಶ್ನಿಸುವ ಅರ್ಹತೆ ಇದೆಯೇ?”

“ಮದ್ರಾಸ್‌, ಬಾಂಬೆ ಪ್ರೆಸಿಡೆನ್ಸಿಯವರು ಜಾರಿಗೆ ತರಲು ಮುಂದಾಗಿರುವ ಈ ನೀತಿ ಕೆಲವರಿಗೆ ಅಸಂಬದ್ಧವಾಗಿ ಗೋಚರಿಸಬಹುದು; ಆದರೆ, ಅಂತಹ ಅಸಂಬದ್ಧತೆಗೂ ಒಂದು ಚರಿತ್ರೆಯಿದೆ ಹಾಗೂ ಆ ಚರಿತ್ರೆ ಮನುಸ್ಮೃತಿಯೇ ಆಗಿದೆ! ಈಗ ಈ ನೀತಿಯನ್ನು ಟೀಕಿಸುವ ನೈತಿಕತೆ ಮನುಸ್ಮೃತಿಯ ಫಲಾನುಭವಿಗಳಿಗಿದೆಯೇ? ಪಾಪಪ್ರಜ್ಞೆಯಿಲ್ಲದ ಬ್ರಾಹ್ಮಣರು ಮಾತ್ರ ಇದನ್ನು ಟೀಕಿಸಬೇಕಷ್ಟೆ. ಆ ಲೇಖನದ ಲೇಖಕರು ಹಾಗೂ ಮನುಸ್ಮೃತಿಯ ಸಮರ್ಥಕರು ತಮ್ಮನ್ನು ತಾವು ಪಾಪಪ್ರಜ್ಞೆಯಿಲ್ಲದವರು ಎಂದು ಘೋಷಿಸಿಕೊಳ್ಳಲು ಸಿದ್ದರಿದ್ದಾರಾ? ಡಾ. ಪರಾಂಜಪೆಯವರ ಲೇಖನ ಪರೋಕ್ಷವಾಗಿ ಟೀಕಿಸಿರುವುದು ಅಸಮಾನತೆಯನ್ನೆ ಅಡಿಪಾಯವಾಗಿಸಿಕೊಂಡ ಮನುಸ್ಮೃತಿಯನ್ನು! ಶೂದ್ರನ ಸ್ಥಾನದಲ್ಲಿ ಒಬ್ಬ ಬ್ರಾಹ್ಮಣನನ್ನು ಇರಿಸಿದಾಗ, ಆತನಿಗೆ ಹೇಗನ್ನಿಸುತ್ತಿದೆ ಎಂಬುದನ್ನು ಇದಕ್ಕಿಂತ ಚೆನ್ನಾಗಿ ಬೇರೊಂದು ವಿವರಿಸಲಾಗದು.”


ಮನುಸ್ಮೃತಿ ಎಂಬ ಶೋಷಣೆಯ-ಮೀಸಲಾತಿ ಗ್ರಂಥದಿಂದಾಗಿ ಸಾವಿರಾರು ವರ್ಷಗಳ ಕಾಲ ಅಮಾನವೀಯ ಆದ್ಯತೆಗಳನ್ನು ಅನುಭವಿಸುತ್ತಾ ಬಂದ ಸಮುದಾಯದವರು, ಅರ್ಹತೆಯಿದ್ದರೂ ಶೂದ್ರರು-ಅಸ್ಪೃಶ್ಯರಿಗೆ ಅವಕಾಶವನ್ನೇ ಕೊಡದೆ ಶೋಷಿಸುತ್ತಲೇ ಬಂದಿದ್ದಾರೆ. ಆ ಶೋಷಣೆಯ ಅನ್ಯಾಯವನ್ನು ಮಾನವೀಯ ನೆಲೆಗಟ್ಟಿನಲ್ಲಿ ನಾಗರಿಕ ಮಿತಿಗೊಳಪಟ್ಟು ಸರಿಪಡಿಸುವ ಸಲುವಾಗಿ ಮೀಸಲಾತಿಯನ್ನು ಜಾರಿಗೆ ತಂದಾಕ್ಷಣ, ಪ್ರತಿಭಾ ಸಾಮರ್ಥ್ಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಗೊಣಗಾಟ ಶುರು ಮಾಡಿಕೊಂಡಿದ್ದಾರೆ. ಇಂತಹ ಗೊಣಗಾಟಗಳಿಗೆ ಬಾಬಾಸಾಹೇಬರು ನೂರು ವರ್ಷಗಳ ಹಿಂದೆಯೇ ಉತ್ತರ ಕೊಟ್ಟುಹೋಗಿದ್ದಾರೆ. ಮೀಸಲಾತಿಯ ಬಗ್ಗೆ ಶೂದ್ರರಿಗೆ-ಅಂತ್ಯಜರಿಗೆ ಯಾವ ಅಳುಕೂ ಬೇಡ. ಸಾವಿರ ವರ್ಷಗಳ ಶೋಷಣೆಯ-ಮೀಸಲಾತಿಗೆ ಪ್ರತಿಯಾಗಿ ಅದು ನಮಗೆ ಸಿಗುತ್ತಿರುವ, ಸಿಗಲೇಬೇಕಿದ್ದ ನ್ಯಾಯಬದ್ಧ ಪ್ರತಿ-ಮೀಸಲಾತಿ, ಅರ್ಥಾತ್ ಕಾಂಪನ್ಸೇಷನ್!

https://www.mea.gov.in/Images/attach/amb/Volume_12.pdf

  • ಮಾಚಯ್ಯ ಎಂ ಹಿಪ್ಪರಗಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page