Friday, April 18, 2025

ಸತ್ಯ | ನ್ಯಾಯ |ಧರ್ಮ

ತಮಿಳುನಾಡು ಎಂದಿಗೂ ದೆಹಲಿ ಆಡಳಿತಕ್ಕೆ ಮಣಿಯುವುದಿಲ್ಲ: ಎಂ.ಕೆ. ಸ್ಟಾಲಿನ್

ಚೆನ್ನೈ: ತಮಿಳುನಾಡು ಎಂದಿಗೂ ದೆಹಲಿ ಆಡಳಿತಕ್ಕೆ ಮಣಿಯುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದಾರೆ. 2026ರಲ್ಲಿ ತಮಿಳುನಾಡಿನಲ್ಲಿ ಸರ್ಕಾರ ರಚಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಸ್ಟಾಲಿನ್ ಶುಕ್ರವಾರ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

“ನಾನು ಸವಾಲು ಹಾಕುತ್ತಿದ್ದೇನೆ. ದೆಹಲಿ ಆಡಳಿತಕ್ಕೆ ತಲೆಬಾಗದ ಹೆಗ್ಗಳಿಕೆ ತಮಿಳುನಾಡು ಹೊಂದಿದೆ. ಇತರ ರಾಜ್ಯಗಳಂತೆ ಪಕ್ಷಗಳನ್ನು ಒಡೆದು ಸರ್ಕಾರ ರಚಿಸುವ ಕೇಸರಿ ಪಕ್ಷದ ಪಿತೂರಿಗಳು ತಮಿಳುನಾಡಿನಲ್ಲಿ ಕೆಲಸ ಮಾಡುವುದಿಲ್ಲ” ಎಂದು ಅವರು ಹೇಳಿದರು. ನೀಟ್ ಪರೀಕ್ಷೆ ಮತ್ತು ಹಿಂದಿ ಹೇರಿಕೆಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಈಗಾಗಲೇ ವಿಷಯವನ್ನು ಸ್ಪಷ್ಟಪಡಿಸಿದ್ದೇನೆ ಎಂದು ಸ್ಟಾಲಿನ್ ಪುನರುಚ್ಚರಿಸಿದರು.

“ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನಾನು ಕೇಳಲು ಬಯಸುತ್ತೇನೆ, ನಮ್ಮ ರಾಜ್ಯಕ್ಕೆ ನೀಟ್ ನಿಂದ ವಿನಾಯಿತಿ ನೀಡಲಾಗುವುದು ಎಂದು ಅವರು ಖಾತರಿ ನೀಡಬಹುದೇ, ಹಿಂದಿ ಹೇರುವುದಿಲ್ಲ ಎಂದು ಅವರು ಖಾತರಿ ನೀಡಬಹುದೇ? ತಮಿಳುನಾಡಿಗೆ ವಿಶೇಷ ನಿಧಿ ಬಿಡುಗಡೆಯ ಖಾತರಿ ನೀಡುವರೇ? ಮತ್ತು ಕ್ಷೇತ್ರ ಮರುವಿಂಗಡಣೆಯಿಂದಾಗಿ ಸಂಸತ್‌ ಸ್ಥಾನಗಳು ಕಡಿಮೆಯಾಗುವುದಿಲ್ಲ ಎಂದು ಅವರು ಖಾತರಿ ನೀಡಬಹುದೇ? ನಾವು ತಮಿಳುನಾಡಿನ ಜನರನ್ನು ದಾರಿ ತಪ್ಪಿಸುತ್ತಿದ್ದಲ್ಲಿ ನಿಮ್ಮಿಂದ ಸರಿಯಾದ ಉತ್ತರಗಳನ್ನು ನೀಡಲು ಏಕೆ ಸಾಧ್ಯವಾಗುತ್ತಿಲ್ಲ?” ಎಂದು ಅವರು ಅಮಿತ್ ಶಾ ಅವರನ್ನು ಪ್ರಶ್ನಿಸಿದರು.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮಿಳುನಾಡು ಸರ್ಕಾರವನ್ನು ಅಪ್ರಾಮಾಣಿಕ ಮತ್ತು ರಾಜ್ಯದ ಜನರನ್ನು ಅನಾಗರಿಕರು ಎಂದು ಕರೆದಿದ್ದಾರೆ ಮತ್ತು ಕೇಂದ್ರದ ರಾಜಕೀಯವು ತಮಿಳುನಾಡನ್ನು ವಿಭಜಿಸಲು ಸಾಧ್ಯವಿಲ್ಲ ಎಂದು ಸ್ಟಾಲಿನ್ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page