Thursday, April 24, 2025

ಸತ್ಯ | ನ್ಯಾಯ |ಧರ್ಮ

ಧರ್ಮೋಪದೇಶಕನ ‘ವೈಯಕ್ತಿಕ ದ್ವೇಷ’ ಸುಳ್ಳು ಮತಾಂತರ ಪ್ರಕರಣವಾಗಿ ಬದಲಾದ ಕಥೆ.

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ಗಳಲ್ಲಿ ಬಿಜೆಪಿ ಸರ್ಕಾರಗಳು ಜಾರಿಗೆ ತಂದ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಸುಳ್ಳು ಆರೋಪ ಹೊರಿಸಿ ಕಾನೂನು ಹೋರಾಟಗಳಲ್ಲಿ ಗೆದ್ದ ಜನರ ಕುರಿತಾದ ವರದಿಗಳ ಸರಣಿಯಲ್ಲಿ ಒಮರ್‌ ರಾಶಿದ್ ಅವರ ಬರಹ. ಇದು ದಿ ವೈರ್ ಅಂಕಣದ ಐದನೇ ಅನುವಾದವಾಗಿದೆ.

ತನ್ನ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಸತೀಶ್ ವರ್ಮಾ ದೂರು ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಸತೀಶ್ ವರ್ಮಾ ಮತ್ತು ದುರ್ಗಾ ಚೌಹಾಣ್ ವಿರುದ್ಧ ಪ್ರಕರಣ ದಾಖಲಾಗುತ್ತದೆ.

ಭಾಗ 1 |
ಭಾಗ 2 |
ಭಾಗ 3 |

ಭಾಗ 4 |


ನವದೆಹಲಿ: ದಂತ ಶಸ್ತ್ರಚಿಕಿತ್ಸೆಯಲ್ಲಿ ಪದವಿ ಓದುತ್ತಿದ್ದ ಸತೀಶ್ ವರ್ಮಾ ಒಂದು ವರ್ಷವನ್ನು ಪೂರೈಸುವುದರೊಳಗೆ ತನ್ನ ಓದನ್ನು ಬಿಟ್ಟು ಯೇಸುಕ್ರಿಸ್ತನ ಸೇವೆಗೆ ಬದುಕನ್ನು ಅರ್ಪಿಸಲು ನಿರ್ಧರಿಸಿದ್ದರು. 2020ರ ಜನವರಿಯ ಒಂದು ಸಂಜೆ, ಮಧ್ಯಪ್ರದೇಶದ ತನ್ನ ಹಳ್ಳಿಯ ಗೋಧಿ ತೋಟದ ಬಳಿ ಬೆಂಚಿನ ಮೇಲೆ ಕುಳಿತಿದ್ದಾಗ ಸತೀಶ್‌ ವರ್ಮಾ ಅವರಿಗೆ ಅಸೌಖ್ಯ ಮತ್ತು ವಿಚಿತ್ರ ತಲೆನೋವು ಕಾಣಿಸಿಕೊಳ್ಳತೊಡಗಿತ್ತು. ಆಗಲೇ ಅವರಿಗೆ ದೈವೀಕ ‘ಕರೆ’ ಬರುವುದು.

ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಬುಡಕಟ್ಟು ಕೆಲಸಗಾರರು ಅವರ ರಕ್ಷಣೆಗೆಂದು ಓಡಿ ಬರುತ್ತಾರೆ. “ನನ್ನ ಮೇಲೆ ದುಷ್ಟಾತ್ಮ ದಾಳಿ ಮಾಡಿತ್ತು. ಈ ಬುಡಕಟ್ಟು ಕೆಲಸಗಾರರು ಯೇಸುವಿನಲ್ಲಿ ನಂಬಿಕೆಯುಳ್ಳವರಾಗಿದ್ದರು. ಅವರು ತಮ್ಮ ಪ್ರಾರ್ಥನೆಗಳಿಂದ ನನ್ನ ಪರಿಸ್ಥಿತಿಯನ್ನು ತಿಳಿಗೊಳಿಸಿದರು” ಎಂದು ವರ್ಮಾ ಹೇಳುತ್ತಾರೆ. ತನ್ನನ್ನು ತಾನು ಧರ್ಮಪ್ರಚಾರಕ ಎಂದು ಕರೆದುಕೊಳ್ಳುವ 27 ವರ್ಷದ ಮಾಜಿ ವೈದ್ಯಕೀಯ ವಿದ್ಯಾರ್ಥಿಯಾದ ಸತೀಶ್‌ ವರ್ಮಾ, ನೈಋತ್ಯ ಮಧ್ಯಪ್ರದೇಶದ ಆರ್ಥಿಕವಾಗಿ ಹಿಂದುಳಿದ ಜಿಲ್ಲೆಯಾದ ಬರ್ವಾನಿಯಲ್ಲಿ ವಾಸಿಸುತ್ತಾರೆ. ಬರ್ವಾನಿಯ ಜನಸಂಖ್ಯೆಯಲ್ಲಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ಬುಡಕಟ್ಟು ಸಮುದಾಯಗಳಿವೆ.

ಸತೀಶ್‌ ವರ್ಮಾ ಅವರಿಗೆ ಜೀಸಸ್‌ ಮೇಲೆ ಮೊದಮೊದಲಿಗೆ ಇದ್ದ ಆಕರ್ಷಣೆಯು ಕ್ರಮೇಣ ಪೂರ್ಣಕಾಲಿಕ ಸಮರ್ಪಣೆಯಾಗಿ ಬದಲಾಗುತ್ತದೆ. ಅವರು ತಾನು ಜನಿಸಿದ್ದ ಹಿಂದೂ ಧರ್ಮದಿಂದ ದೂರ ಸರಿಯಲು ಪ್ರಾರಂಭಿಸಿದ್ದರು. ಅವರು ಹಿಂದೂ ದಲಿತ ಜಾತಿಯಾದ ಬಲಾಯಿ ಸಮುದಾಯಕ್ಕೆ ಸೇರಿದವರು. ಸ್ಥಳೀಯ ಚರ್ಚ್‌ನೊಂದಿಗೆ ಸಂಪರ್ಕಕ್ಕೆ ಬಂದ ನಂತರ ಅವರು ತಮ್ಮದೇ ಆದ ಪ್ರಾರ್ಥನಾ ಸೇವೆಗಳನ್ನು ನಡೆಸಲು ಪ್ರಾರಂಭಿಸಿದ್ದರು. ಈ ಹೊಸ ದಾರಿಯನ್ನು ಆಯ್ದುಕೊಂಡ ಆರು ತಿಂಗಳೊಳಗೆ, ಅವರ ಸಭೆಗಳು ನಾಲ್ಕು ಜನರಿಂದ 240 ಜನರು ಭಾಗವಹಿಸುವ ತನಕ ಬೆಳೆದಿತ್ತು.

ಹಾಗಿದ್ದರೂ ಕೂಡ, ಅವರ ಕ್ರಿಶ್ಚಿಯನ್ ನಂಬಿಕೆ ಮತ್ತು ಧರ್ಮೋಪದೇಶವನ್ನು ಬರ್ವಾನಿಯ ಬುಡಕಟ್ಟು ಹಳ್ಳಿಗಳಲ್ಲಿ ಕೆಲವರು ವಿರೋಧಿಸಿದ್ದರು. ಅವರು ಆ ಪ್ರದೇಶದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕೂಡ ಆರೋಪಿಸಿದ್ದರು. ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದ ಕಾರಣಕ್ಕೆ ವರ್ಮಾ ಅವರ ಮೇಲೆ ಹಿಂದುತ್ವವಾದಿ ಜನರಿಂದ ಬೆದರಿಕೆಗಳು ಬರಲು ಪ್ರಾರಂಭಿಸಿದ್ದವು.

2023ರ ಅಕ್ಟೋಬರ್‌ನಲ್ಲಿ, ವೃತ್ತಿಯಲ್ಲಿ ಚಾಲಕನಾಗಿರುವ ಕಮಲ್ ಸಿಂಗ್ ಎಂಬ ಬುಡಕಟ್ಟು ವ್ಯಕ್ತಿ ದಾಖಲಿಸಿದ ದೂರಿನ ಮೇರೆಗೆ ಭಾರತೀಯ ಜನತಾ ಪಕ್ಷ ಸರಕಾರ ಜಾರಿಗೆ ತಂದ ಮಧ್ಯಪ್ರದೇಶ ಮತಾಂತರ ನಿಷೇಧ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಒತ್ತಾಯಿಸುತ್ತಿದ್ದಾರೆ ಮತ್ತು ಆಮಿಷವೊಡ್ಡಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಸತೀಶ್‌ ವರ್ಮಾ ಮೇಲಿದ್ದ ಆರೋಪ.

ವರ್ಮಾ ತನ್ನ ದಲಿತ ಹಿಂದೂ ಗುರುತನ್ನು ದಾಖಲೆಗಳಲ್ಲಿ ಮಾತ್ರವೇ ಉಳಿಸಿಕೊಂಡಿದ್ದಾರೆ. ಈಗವರು ಸಂಪೂರ್ಣವಾಗಿ ಕ್ರಿಸ್ತನಿಗೆ ಶರಣಾಗಿದ್ದಾರೆ. ಕಳೆದ ಏಳು ವರ್ಷಗಳಿಂದ ಎಲ್ಲಾ ರೀತಿಯ ಹಿಂದೂ ಹಬ್ಬಗಳ ಆಚರಣೆಯನ್ನು ನಿಲ್ಲಿಸಿದ್ದಾರೆ. ಬರ್ವಾನಿಯ ದೇವಡಾ ಗ್ರಾಮದಲ್ಲಿ ಅವರು ಸ್ಥಾಪಿಸಿರುವ ಸಣ್ಣ ಚರ್ಚ್‌ನ ಲೆಟರ್‌ಹೆಡ್‌ನಲ್ಲಿ ಅವರು ತಮ್ಮನ್ನು ತಾವು “ಪ್ರವಾದಿ” ಎಂದು ಸಂಬೋಧಿಸುತ್ತಾರೆ.

ಆದರೆ, ಸತೀಶ್‌ ವರ್ಮಾ ತನ್ನ ಮೇಲೆ ಎಫ್‌ಐಆರ್‌ ದಾಖಲಾಗುವ ಮೊದಲೇ ಕಮಲ್‌ ಸಿಂಗ್‌ ವಿರುದ್ಧ ಪೊಲೀಸರಿಗೆ ಹಲವು ದೂರುಗಳನ್ನು ಅದಾಗಲೇ ನೀಡಿದ್ದರು. ತನ್ನ ಗ್ರಾಮದಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸುವಾಗೆಲ್ಲ ಸಿಂಗ್‌ ತನಗೆ ಬೆದರಿಕೆ ಒಡ್ಡುತ್ತಿದ್ದರು ಎಂಬುದು ವರ್ಮಾ ಅವರ ದೂರಾಗಿತ್ತು. ಸಿಂಗ್‌ ಭಿಲಾಲ ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿ.

ಕಳೆದ ಕೆಲ ತಿಂಗಳುಗಳಿಂದ ಕಮಲ್‌ ಸಿಂಗ್‌ ಮತ್ತವರ ಸಹಚರರಿಂದ ಜೀವ ಬೆದರಿಕೆಯೂ ಬಂದಿದ್ದರಿಂದ, ಸ್ಥಳಿಯಾಡಳಿತವು ಅವರಿಗೆ ಇಬ್ಬರು ಭದ್ರತಾ ಸಿಬ್ಬಂಧಿಗಳನ್ನೂ ಒದಗಿಸಿತ್ತು.

ಕೊನೆಗೆ, ಫೆಬ್ರವರಿ 2024ರಲ್ಲಿ, ಬರ್ವಾನಿಯ ಸ್ಥಳೀಯ ನ್ಯಾಯಾಲಯವು ಅಕ್ರಮ ಮತಾಂತರ ಪ್ರಕರಣದಲ್ಲಿ ವರ್ಮಾ ಅವರನ್ನು ಖುಲಾಸೆಗೊಳಿಸುತ್ತದೆ.

ಸತೀಶ್‌ ವರ್ಮಾ ಮತ್ತು ಅವರ ಸ್ನೇಹಿತ ಭಿಲಾಲ ಬುಡಕಟ್ಟು ಸಮುದಾಯದ ಕೃಷಿ ಕಾರ್ಮಿಕ ದುರ್ಗಾ ಚೌಹಾಣ್ ಅವರುಗಳ ಮೇಲೆ ಪ್ರತೀಕಾರ ಭಾವನೆಯಿಂದ ಭಿಲಾಲ ಚಾಲಕ ಕಮಲ್‌ ಸಿಂಗ್‌ ಸುಳ್ಳು ಮತಾಂತರ ಪ್ರಕರಣ ಹೆಣೆದ ಕಥೆ ಹೀಗಿದೆ.

ಹಿಂಸಾತ್ಮಕ ಗಲಾಟೆ
ಮೂಲತಃ ಖಾರ್ಗೋನ್‌ನಿನವರಾದ ವರ್ಮಾ, ಕ್ರಿಸ್ತನಲ್ಲಿ ನಂಬಿಕೆ ಬೆಳೆಸಿಕೊಂಡ ನಂತರ ನೆರೆಯ ಬರ್ವಾನಿ ಜಿಲ್ಲೆಯ ಥಿಕ್ರಿ ಪಟ್ಟಣಕ್ಕೆ ತೆರಳಿ ಅಲ್ಲಿ ವಾಸಿಸಲು ಪ್ರಾರಂಭಿಸಿದರು. ಅದು 2020ರ COVID-19 ಮೊದಲ ಅಲೆಯ ಸಮಯ. ಅವರು ಸೇವಾಕೈ (ಸೇವೆ)ಯನ್ನು ಪೂರ್ಣಕಾಲಿಕವಾಗಿ ಅಳವಡಿಸಿಕೊಂಡಿದ್ದರು. ಮನೆಗಳಿಗೆ ತೆರಳಿ ಸೇವೆ ನೀಡಲು ಪ್ರಾರಂಭಿಸಿದ್ದರು. ಪ್ರಾರ್ಥನೆ ಮತ್ತು ಚಿಕಿತ್ಸಕ ಸೇವೆಗಳನ್ನು ಅವರು ನಡೆಸುತ್ತಿದ್ದರು.

ಕಮಲ್ ಸಿಂಗ್ ಮತ್ತು ದುರ್ಗಾ ಚೌಹಾಣ್ ವಾಸವಿದ್ದ ದೇವಾಡ ಗ್ರಾಮದಲ್ಲಿ, ಸತೀಶ್‌ ವರ್ಮಾ ಒಂದು ಕಚ್ಚಾ ಗುಡಿಸಲನ್ನು ಚರ್ಚ್ ಆಗಿ ಮಾಡಿಕೊಳ್ಳುತ್ತಾರೆ. ಅವರು ಅದಕ್ಕೆ ಹೋಲಿ ಫೈರ್ ಚರ್ಚ್ ಎಂದು ಹೆಸರಿಟ್ಟು ಅದನ್ನು ನೋಂದಾಯಿಸುತ್ತಾರೆ. ದುರ್ಗಾ ಚೌಹಾಣ್‌ ಅವರ ಕುಟುಂಬವು ಕ್ರೈಸ್ತರಾಗಿದ್ದರಿಂದ ಅವರು ಅದನ್ನು ನಡೆಸುತ್ತಿದ್ದರು. ಸತೀಶ್‌ ವರ್ಮಾ ಅದರ ಸ್ಥಾಪಕರಾಗಿದ್ದರು.

ಪ್ರಸ್ತುತ ಘಟನೆಯ ದಿನವಾದ ಅಕ್ಟೋಬರ್ 1, 2023ರ ಭಾನುವಾರ, ಸಾಮೂಹಿಕ ಪ್ರಾರ್ಥನೆಗೆಂದು ಇವರಿಬ್ಬರು ದುರ್ಗಾ ಚೌಹಾಣ್ ಅವರ ತಂದೆಯ ಜಮೀನಿನಲ್ಲಿ ಶಾಮಿಯಾನ ಹಾಕಿದ್ದರು. ದೇವಾಡ ಮತ್ತು ನೆರೆಯ ಗ್ರಾಮಗಳಾದ ರೂಪಖೇಡಾ, ಮಗರ್ಖೇಡಿ ಮೊದಲಾದ ಕಡೆಗಳಿಂದ ಒಂದು ಡಜನ್‌ಗಿಂತಲೂ ಹೆಚ್ಚು ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು. ಅವರೆಲ್ಲ ವರ್ಮಾ ಕಟ್ಟಿಕೊಂಡಿದ್ದ ಒಂದು ಸಣ್ಣ ಸಂಘದ ಭಾಗವಾಗಿದ್ದರು.

ಮಧ್ಯಾಹ್ನ 12:30ರ ಸುಮಾರಿಗೆ ಕಮಲ್ ಸಿಂಗ್ ತನ್ನ ಚಿಕ್ಕಪ್ಪ ಲಾಲ್ ಸಿಂಗ್ ಮತ್ತು ಲಾಲ್ ಸಿಂಗ್ ಎಂಬ ಅದೇ ಹೆಸರಿನ ಇನ್ನೊಬ್ಬ ವ್ಯಕ್ತಿಯೊಂದಿಗೆ ಅಲ್ಲಿ ಹಾಜರಾದಗಲೇ ಗಲಾಟೆ ಪ್ರಾರಂಭವಾಗುವುದು. ಈ ಹಿಂದೆಯೂ ಸತೀಶ್‌ ವರ್ಮಾ ಅವರನ್ನು ಬೆದರಿಸಿದ್ದ ಕಮಲ್‌ ಸಿಂಗ್ ಪುನಹ ನಿಂದಿಸಲು ಪ್ರಾರಂಭಿಸುತ್ತಾರೆ. ಸತೀಶ್‌ ವರ್ಮಾ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸುತ್ತಾರೆ.

“ನೀವು ನಮ್ಮ ಹಳ್ಳಿಗೆ ಬರಬೇಡಿ ಎಂದು ಹೇಳಿದರೂ ನೀವು ಯಾಕೆ ಬರುತ್ತಿದ್ದೀರಿ! ಎಂದು ಅವರು ನನ್ನ ಬಳಿ ಪ್ರಶ್ನಿಸಿದರು” ಎಂದು ವರ್ಮಾ ನಂತರ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿಕೊಳ್ಳುತ್ತಾರೆ.

ಕಮಲ್ ಸಿಂಗ್ ನೇತೃತ್ವದಲ್ಲಿ ಅವರು ಸತೀಶ್‌ ವರ್ಮಾ ಮೇಲೆ ಹಲ್ಲೆ ನಡೆಸುತ್ತಾರೆ. ಪ್ಲಾಸ್ಟಿಕ್ ಪೈಪ್ ಹಿಡಿದುಕೊಂಡಿದ್ದ ಕಮಲ್ ಸಿಂಗ್ ತನ್ನ ತಲೆಯ ಬಲಭಾಗ ಮತ್ತು ಹಿಂಭಾಗಕ್ಕೆ ಹೊಡೆದ ಕಾರಣ ರಕ್ತಸ್ರಾವವಾಯಿತು ಎಂದು ವರ್ಮಾ ಆರೋಪಿಸುತ್ತಾರೆ. ನಂತರ ವರ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಕಮಲ್ ಸಿಂಗ್ ಅವರ ಸಹಚರರಾದ ಸಂತೋಷ್ ಮತ್ತು ದೀಪಕ್ ಕೂಡ ತನ್ನ ಮೆಲೆ ಒದೆಯುವ ಮೂಲಕ ಹಲ್ಲೆ ನಡೆಸಿದರು. ಪ್ರಾರ್ಥನಾ ಸಭೆಗಳ ವೇಳೆ ಅವರ ಸುರಕ್ಷತೆಗಾಗಿ ಸ್ಥಳೀಯಾಡಳಿತವು ಒದಗಿಸಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗಳಿಂದ ಕೂಡ ಆ ದಾಳಿಯನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ವರ್ಮಾ ಹೇಳುತ್ತಾರೆ.

ದೂರಿನ ಮೇಲೆ ದೂರು
ದಾಳಿಯ ನಂತರ ಸತೀಶ್ ವರ್ಮಾ ಕಮಲ್ ಸಿಂಗ್, ದೀಪಕ್ ಸಿಂಗ್ ಮತ್ತು ಸಂತೋಷ್‌ ಭಿಲಾಲ ಎಂಬ ಹೆಸರಿನ ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತಾರೆ.

ಐದು ಜನರ ವಿರುದ್ಧ ಸ್ವಯಂಪ್ರೇರಣೆಯಿಂದ ದಾಳಿ ಮಾಡುವುದು, ಅಶ್ಲೀಲ ಕೃತ್ಯ ಎಸಗುವುದು, ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಹಾಡನ್ನು ಹಾಡುವುದು ಮತ್ತು ಶಾಂತಿ ಕದಡಲೆಂದು ಉದ್ದೇಶಪೂರ್ವಕವಾಗಿ ಅವಮಾನಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಮಧ್ಯಾಹ್ನ 3:44ಕ್ಕೆ ಎಫ್‌ಐಆರ್ ದಾಖಲಾಗುತ್ತದೆ. ಇಲ್ಲಿ ಎಫ್‌ಐಆರ್‌ ಸಮಯ ಬಹಳ ಪ್ರಮುಖವಾಗುತ್ತದೆ. ಏಕೆಂದರೆ ಸಂಜೆ 6:26ಕ್ಕೆ ಕಮಲ್ ಸಿಂಗ್ ಅವರು ವರ್ಮಾ ಮತ್ತು ಚೌಹಾಣ್ ವಿರುದ್ಧ ಎಫ್‌ಐಆರ್ ದಾಖಲಿಸುತ್ತಾರೆ. ಸತೀಶ್‌ ವರ್ಮಾ ಅವರ ಆಹ್ವಾನದ ಮೇರೆಗೆ ತಾನು ತನ್ನ ಚಿಕ್ಕಪ್ಪನೊಂದಿಗೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋದಾಗ ಇಬ್ಬರು ವ್ಯಕ್ತಿಗಳು ತಮ್ಮನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸಿದರು ಎಂಬುದು ಸಿಂಗ್‌ ಮಾಡಿದ್ದ ಆರೋಪವಾಗಿತ್ತು.

ಸತೀಶ್‌ ವರ್ಮಾ ಮತ್ತು ದುರ್ಗಾ ಚೌಹಾಣ್ ವಿರುದ್ಧ ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2021ರ ಸೆಕ್ಷನ್ 3 ಮತ್ತು 5ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. 1968ರಲ್ಲಿಯೇ ಮತಾಂತರದ ವಿರುದ್ಧ ಕಾನೂನು ಜಾರಿಗೆ ತಂದ ಮೊದಲ ರಾಜ್ಯಗಳಲ್ಲಿ ಮಧ್ಯಪ್ರದೇಶವೂ ಒಂದು. ಡಿಸೆಂಬರ್ 2020ರಲ್ಲಿ, ರಾಜ್ಯದ ಬಿಜೆಪಿ ಸರ್ಕಾರವು ನೆರೆಯ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ಜಾಡನ್ನು ಅನುಸರಿಸಿ 1968ರ ಕಾನೂನನ್ನು ಬದಲಿಸಿ ಹೊಸ ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತಂದಿತ್ತು.

ಪ್ರಕರಣದ ಉದ್ದಕ್ಕೂ, ಸತೀಶ್‌ ವರ್ಮಾ ಮತ್ತು ದುರ್ಗಾ ಚೌಹಾಣ್ ಬಂಧನದಿಂದ ತಪ್ಪಿಸಿಕೊಳ್ಳುತ್ತಾರೆ. ಬರ್ವಾನಿ ನ್ಯಾಯಾಲಯವು ಅವರ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸುತ್ತದೆ. ಆದರೆ ನವೆಂಬರ್ 29, 2023ರಂದು ಮಧ್ಯಪ್ರದೇಶ ಹೈಕೋರ್ಟ್ ಅವರಿಗೆ ಜಾಮೀನು ನೀಡುತ್ತದೆ.

ವಿಚಾರಣೆಯ ಸಮಯದಲ್ಲಿ, ಅಕ್ಟೋಬರ್ 1ರ ಘಟನೆಗೂ ಮೊದಲು, ಕಮಲ್ ಸಿಂಗ್ ಮತ್ತು ಅವರ ಸಹಚರರ ವಿರುದ್ಧ ಹಲವಾರು ದೂರುಗಳನ್ನು ನೀಡಿರುವುದಾಗಿ ಸತೀಶ್‌ ವರ್ಮಾ ಹೈಕೋರ್ಟ್‌ಗೆ ತಿಳಿಸುತ್ತಾರೆ. ಕಮಲ್‌ ಸಿಂಗ್‌ ವಿರುದ್ಧ ತಮ್ಮ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಎಫ್‌ಐಆರ್‌ ದಾಖಲಿಸಿದ ಕಾರಣ ಅದಕ್ಕೆ ಪ್ರತೀಕಾರವಾಗಿ ಕಮಲ್‌ ಸಿಂಗ್‌ ತಮ್ಮಿಬ್ಬರ ಮೇಲೆ ದೂರು ದಾಖಲಿಸಿದ್ದಾರೆಂದು ವರ್ಮಾ ನ್ಯಾಯಾಲಯಕ್ಕೆ ತಿಳಿಸುತ್ತಾರೆ.

ಕಮಲ್ ಸಿಂಗ್ ಅವರಿಂದ ತಮಗೆ ಕೊಲೆ ಬೆದರಿಕೆ ಬರುತ್ತಿದೆ ಎಂಬ ಆರೋಪದ ಬಗ್ಗೆ ಜನವರಿ 1, 2023ರಂದು ಬರ್ವಾನಿಯ ಪೊಲೀಸ್ ವರಿಷ್ಠಾಧಿಕಾರಿಗೆ ತಾನು ದೂರು ನೀಡಿದ್ದರೂ ಅದರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸತೀಶ್‌ ವರ್ಮಾ ತಮ್ಮ ಪೊಲೀಸ್ ದೂರಿನಲ್ಲಿ ಹೇಳಿಕೊಳ್ಳುತ್ತಾರೆ. ಅದರ ನಂತರ ಮೇ 27ರಂದು ಅವರು ಮತ್ತೆ ಥಿಕ್ರಿ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಅದಕ್ಕೂ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ.

ಕಮಲ್ ಸಿಂಗ್ ಸತೀಶ್‌ ವರ್ಮಾ ಮತ್ತು ದುರ್ಗಾ ಚೌಹಾಣ್ ವಿರುದ್ಧದ ದೂರಿನಲ್ಲಿ, ಈ ಇಬ್ಬರು ಕಳೆದ ಎರಡು ವರ್ಷಗಳಿಂದ ತಮ್ಮ ಗ್ರಾಮದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಸಕ್ರಿಯವಾಗಿ ಬೋಧಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಹಿಂದೂ ಧರ್ಮವನ್ನು ತ್ಯಜಿಸಿ ಕ್ರಿಶ್ಚಿಯನ್ ಧರ್ಮ ಸ್ವೀಕರಿಸುವಂತೆ ಅವರು ಕೇಳಿಕೊಂಡಿದ್ದಾರೆ. ಹಾಗೆ ಮಾಡಿದರೆ, ಅದರಿಂದ ಅವರಿಗೆ ಬಹಳಷ್ಟು ಪ್ರಯೋಜನಗಳು ದೊರೆಯಲಿವೆ. ಅವರ ಎಲ್ಲಾ ಕಾಯಿಲೆಗಳು ಮತ್ತು ತೊಂದರೆಗಳು ಇಲ್ಲವಾಗಲಿವೆ ಎಂದು ಅವರು ಭರವಸೆ ನೀಡಿದ್ದಾಗಿ ಸಿಂಗ್‌ ಆರೋಪಿಸಿದ್ದರು.

2023ರ ಅಕ್ಟೋಬರ್ ಘಟನೆಗೆ ಒಂದು ತಿಂಗಳ ಹಿಂದೆಯಷ್ಟೇ ತಮ್ಮ ಸಭೆಗಳನ್ನು ಶಾಂತಿಯುತವಾಗಿ ನಡೆಸಲೆಂದು ಸತೀಶ್‌ ವರ್ಮಾ ಪ್ರತಿ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ತನಗೆ ಪೊಲೀಸ್ ರಕ್ಷಣೆ ಕೋರಿ ಬರ್ವಾನಿ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು.

ಚೌಹಾಣ್ ಅವರ ಕುಟುಂಬವು ಗ್ರಾಮದಲ್ಲಿ ಕಾರ್ಯನಿರ್ವಹಿಸಲು ಜಾಗ ಮತ್ತು ಓಡಾಟದ ವ್ಯವಸ್ಥೆಯನ್ನು ಒದಗಿಸಿತ್ತು ಎಂದು ವರ್ಮಾ ಹೇಳುತ್ತಾರೆ. ಅಲ್ಲಿ, ಸತೀಶ್‌ ವರ್ಮಾ ಕಮಲ್ ಸಿಂಗ್ ಕುಟುಂಬದೊಂದಿಗೆ ಸಂಪರ್ಕಕ್ಕೆ ಬಂದಿದ್ದರು. ಸಿಂಗ್‌ ಅವರ ಹಾಸಿಗೆ ಹಿಡಿದಿದ್ದ ತಾಯಿಯನ್ನು ವರ್ಮಾ ನೆನಪಿಸಿಕೊಳ್ಳುತ್ತಾರೆ. ಕಮಲ್ ಸಿಂಗ್ ಅವರ ಪತ್ನಿ “ದುಷ್ಟಶಕ್ತಿಗಳ ಪ್ರಭಾವದಲ್ಲಿದ್ದರು” ಎಂದು ವರ್ಮಾ ಹೇಳುತ್ತಾರೆ.

ಅವರಿಬ್ಬರಿಗೋಸ್ಕರ ಪ್ರಾರ್ಥಿಸಿ, ಅವರು ಗುಣಮುಖರಾಗಲು ತಾನು ಸಹಾಯ ಮಾಡಿದೆ ಎಂದು ವರ್ಮಾ ಹೇಳುತ್ತಾರೆ. “ನಾನು ಅವರನ್ನು ಮೂರು ಭಾನುವಾರ ಭೇಟಿ ಮಾಡಿದ್ದೇನೆ” ಎಂದು ಅವರು ಹೇಳುತ್ತಾರೆ. ವರ್ಮಾ ಆ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದೇನೆ ಎಂದು ಭಾವಿಸಿದ್ದರು. ಆದರೆ ಕಮಲ್ ಸಿಂಗ್ ಅದನ್ನು ಒಪ್ಪಲು ತಯಾರಿರಲಿಲ್ಲ. ಸಿಂಗ್ ವರ್ಮಾರ ಸಭೆಗಳಿಗೆ ಅಡ್ಡಿಪಡಿಸುತ್ತಿದ್ದರು. ಅವರ ವಾಹನವನ್ನು ಗ್ರಾಮಕ್ಕೆ ಪ್ರವೇಶಿಸದಂತೆ ತಡೆಯಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಅಕ್ರಮ ಮತಾಂತರ ಪ್ರಕರಣ ದಾಖಲಿಸುವ ಮೊದಲು, ಆತ್ಮಹತ್ಯೆ ಪ್ರಕರಣವೊಂದರಲ್ಲಿ ತನ್ನನ್ನು ಆರೋಪಿಯನ್ನಾಗಿ ಮಾಡಲು ಪ್ರಯತ್ನಿಸಲಾಗಿತ್ತು ಎಂದು ವರ್ಮಾ ಹೇಳುತ್ತಾರೆ. ಪ್ರಾರ್ಥನಾ ಸಭೆಗಳಿಗೆ ಬರುತ್ತಿದ್ದ ವ್ಯಕ್ತಿಯೊಬ್ಬರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಆರೋಪವನ್ನು ತನ್ನ ಮೇಲೆ ಹೊರಿಸುವ ಪ್ರಯತ್ನ ನಡೆದಿತ್ತು ಎಂದು ವರ್ಮಾ ಹೇಳುತ್ತಾರೆ. ಲೈಂಗಿಕ ಕಿರುಕುಳದ ಪ್ರಕರಣವನ್ನೂ ತನ್ನ ತಲೆಗೆ ಕಟ್ಟಲು ಪ್ರಯತ್ನಗಳು ನಡೆದಿತ್ತು ಎಂದು ಅವರು ಹೇಳುತ್ತಾರೆ. ಮಹಿಳೆಯರು ಪ್ರಾರ್ಥನೆಯ ಹೊತ್ತು ಕಣ್ಣು ಮುಚ್ಚಿ ಕುಳಿತಿರುವಾಗ ಅವರನ್ನು ಅಸಭ್ಯವಾಗಿ ಸ್ಪರ್ಶಿಸುತ್ತಿದ್ದೆ ಎಂದೆಲ್ಲ ತನ್ನ ವಿರೋಧಿಗಳು ಆರೋಪಿಸಿದ್ದರು ಎಂದು ವರ್ಮಾ ಹೇಳುತ್ತಾರೆ.

ಅಕ್ರಮ ಮತಾಂತರದ ಆರೋಪ ಸೇರಿದಂತೆ ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ವರ್ಮಾ ತಳ್ಳಿಹಾಕುತ್ತಾರೆ. “ಇದು ಸುಳ್ಳಾರೋಪ. ಇದೊಂದು ಕಟ್ಟುಕಥೆ. ನಾನು ಪ್ರಾರ್ಥನೆಗಾಗಿ ಮಾತ್ರ ಅಲ್ಲಿಗೆ ಹೋಗುತ್ತಿದ್ದೆ” ಎಂದು ಅವರು ಹೇಳುತ್ತಾರೆ.

ಲಿಖಿತ ದೂರೇ ಇಲ್ಲ
ವರ್ಮಾ ಅಕ್ರಮ ಮತಾಂತರ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಅರ್ಜಿಯನ್ನು ಸಲ್ಲಿಸುತ್ತಾರೆ. ಮಧ್ಯಪ್ರದೇಶ ಕಾನೂನಿನ ಸೆಕ್ಷನ್ 4ರ ಪ್ರಕಾರ, ಪ್ರಕರಣದಲ್ಲಿ ಕ್ರಮ ಕೈಗೊಳ್ಳಬೇಕೆಂದು ಯಾವ ನೊಂದ ವ್ಯಕ್ತಿಯೂ ಲಿಖಿತ ದೂರು ನೀಡಿಲ್ಲ. ಆ ಕುರಿತು ಎಫ್‌ಐಆರ್‌ನಲ್ಲಿ ಯಾವ ಉಲ್ಲೇಖವೂ ಎಂದು ಇಲ್ಲ ಎಂದು ಅವರು ವಾದಿಸುತ್ತಾರೆ. ಹಾಗಿದ್ದರೂ ಕೂಡ, ಪೊಲೀಸರು “ಪೊಳ್ಳು ಆಧಾರಗಳ ಮೇಲೆ” ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ವಾದಿಸುತ್ತಾರೆ.

ಸೆಕ್ಷನ್ 4ರ ಪ್ರಕಾರ, ಅಕ್ರಮವಾಗಿ ಮತಾಂತರಗೊಂಡ ವ್ಯಕ್ತಿ ಅಥವಾ ಆ ವ್ಯಕ್ತಿಯ  ಪೋಷಕರು, ಒಡಹುಟ್ಟಿದವರು ಮಾತ್ರ ದೂರು ದಾಖಲಿಸಬಹುದು.  ರಕ್ತ ಸಂಬಂಧಿಗಳು, ವಿವಾಹದ ಮೂಲಕ ಸಂಬಂಧವೇರ್ಪಟ್ಟವರು, ದತ್ತು ಸ್ವೀಕಾರಕ್ಕೆ ಒಳಗಾದವರು ಅಥವಾ  ಪಾಲಕರು ನ್ಯಾಯಾಲಯದ ಅನುಮತಿಯೊಂದಿಗೆ ಮಾತ್ರವೇ ದೂರು ದಾಖಲಿಸಬಹುದು. ಈ ರೀತಿ ಲಿಖಿತ ದೂರು ಇಲ್ಲದಿದ್ದರೆ ಪೊಲೀಸರಿಗೆ ವಿಚಾರಣೆ ನಡೆಸಲು ಸಾಧ್ಯವಿಲ್ಲ.

ಯಾವುದೇ ವ್ಯಕ್ತಿಯು ನೇರವಾಗಿ ಅಥವಾ ಪರೋಕ್ಷವಾಗಿ, ತಪ್ಪು ನಿರೂಪಣೆ, ಆಮಿಷ, ಬೆದರಿಕೆ, ಬಲವಂತ, ಅನಗತ್ಯ ಪ್ರಭಾವ, ಮದುವೆ ಅಥವಾ ಇತರ ಯಾವುದೇ ಮೋಸದ ವಿಧಾನದಿಂದ ಮತಾಂತರಕ್ಕೊಳಗಾಗಬಾರದು ಅಥವಾ ಮತಾಂತರಗೊಳಿಸಲು ಪ್ರಯತ್ನಿಸಬಾರದು ಎಂದು ಕಾನೂನಿನ ಸೆಕ್ಷನ್ 3 ಹೇಳುತ್ತದೆ. ಬುಡಕಟ್ಟು ವ್ಯಕ್ತಿಯನ್ನು ಅಕ್ರಮವಾಗಿ ಮತಾಂತರಿಸಿದರೆ ಕನಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದು, ಇದನ್ನು 10 ವರ್ಷಗಳವರೆಗೆ ವಿಸ್ತರಿಸಬಹುದು. ಕಮಲ್ ಸಿಂಗ್ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯಾಗಿದ್ದರಿಂದ, ವರ್ಮಾ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುವ ಅಪಾಯವಿತ್ತು.

ಆದರೆ ನ್ಯಾಯಾಲಯವು ಸತೀಶ್ ವರ್ಮಾ ಪರವಾಗಿ ತೀರ್ಪು ನೀಡುತ್ತದೆ.

ಬರ್ವಾನಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಸಂಧ್ಯಾ ಮನೋಜ್ ಶ್ರೀವಾಸ್ತವ ಅವರು, ಕಮಲ್ ಸಿಂಗ್ ಅವರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ, ಆದರೆ ಅವರು ವರ್ಮಾ ವಿರುದ್ಧ ಲಿಖಿತ ದೂರು ಸಲ್ಲಿಸಿಲ್ಲ ಎಂಬುದನ್ನು ಬೊಟ್ಟು ಮಾಡುತ್ತಾರೆ. 2021ರ ಕಾನೂನಿನ ಸೆಕ್ಷನ್ 4ರ ಪ್ರಕಾರ ಲಿಖಿತ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿಲ್ಲ ಎಂದು ಅವರು ತೀರ್ಪು ನೀಡುತ್ತಾರೆ. “2021ರ ಕಾಯ್ದೆಯ ಸೆಕ್ಷನ್ 3 ಮತ್ತು 5ರ ಅಡಿಯಲ್ಲಿ ಆರೋಪಗಳನ್ನು ಹೊರಿಸಲು ಯಾವುದೇ ಆಧಾರವಿಲ್ಲ” ಎಂದು ನ್ಯಾಯಾಧೀಶರು ಸತೀಶ್ ವರ್ಮಾ ಅವರ ಬಿಡುಗಡೆ ಅರ್ಜಿಯನ್ನು ಪುರಸ್ಕರಿಸುತ್ತಾ ಹೇಳುತ್ತಾರೆ.

ಪ್ರಕರಣದಿಂದ ಖುಲಾಸೆಗೊಂಡ ನಂತರವೂ, ತಾನು ಕಿರುಕುಳಕ್ಕೊಳಗಾಗುತ್ತಲೇ ಇದ್ದೇನೆ ಮತ್ತು ಬೆದರಿಕೆಗಳು ನಿರಂತರವಾಗಿ ಬರುತ್ತಿವೆ ಎಂದು ಸತೀಶ್ ವರ್ಮಾ ಹೇಳುತ್ತಾರೆ. ಆದರೆ ಅಕ್ರಮ ಮತಾಂತರ ಪ್ರಕರಣ ಮುಗಿಯಿತು ಎಂದು ನಿರಾಳರಾಗಿದ್ದಾರೆ. ತನ್ನ್ನನ್ನು ಎಲ್ಲಾ ರೀತಿಯ ಅಪಾಯಗಳಿಂದ ರಕ್ಷಿಸಲು ದೈವಿಕ ಶಕ್ತಿಯೊಂದು ಇದೆ ಎಂದು ಅವರು ನಂಬುತ್ತಾರೆ. “ನನ್ನ ಪವಿತ್ರಾತ್ಮ ನನ್ನನ್ನು ಕಾಪಾಡಿತು” ಎಂದು ಅವರು ಹೇಳಿದರು.

*ಅನಾಮಧೇಯತೆಗಾಗಿ ಹೆಸರು ಬದಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page