Friday, April 25, 2025

ಸತ್ಯ | ನ್ಯಾಯ |ಧರ್ಮ

ಶಿಮ್ಲಾ ಒಪ್ಪಂದ ರದ್ದು, ಭಾರತೀಯರ ವಿಸಾ ರದ್ದು ; ಭಾರತಕ್ಕೆ ಪಾಕಿಸ್ತಾನ ಕೊಟ್ಟ ಸಂದೇಶವೇನು?

ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳ ವಿಸಾ ರದ್ದು ಮಾಡಿ ದೇಶ ಬಿಡುವಂತೆ ಭಾರತ ಸರ್ಕಾರ ಸೂಚಿಸಿದ ಬೆನ್ನಲ್ಲೇ ಈಗ ಪಾಕಿಸ್ತಾನ ಪಾಕಿಸ್ತಾನದಲ್ಲಿರುವ ಭಾರತೀಯ ಪ್ರಜೆಗಳ ವಿಸಾ ರದ್ದು ಮಾಡಲು ಮುಂದಾಗಿದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ಏಪ್ರಿಲ್ 30 ರ ಒಳಗೆ ಪಾಕಿಸ್ತಾನದಲ್ಲಿ ಇರುವ ಎಲ್ಲಾ ಭಾರತೀಯ ಪ್ರಜೆಗಳು ದೇಶ ಬಿಡಬೇಕು ಎಂದು ಆದೇಶ ಹೊರಡಿಸಿದೆ.

ಭಾರತ ಪಾಕಿಸ್ತಾನ ಗಡಿ ಭಾಗದಲ್ಲಿರುವ ವಾಘಾ ಗಡಿ ಪೋಸ್ಟ್ ನ್ನು ತಕ್ಷಣವೇ ಮುಚ್ಚಲಾಗುವುದು, ಹೀಗಾಗಿ ಈ ಮಾರ್ಗದಿಂದ ಯಾರೇ ದೇಶದ ಒಳಗೆ ಬಂದರೂ ಅವರು ಏಪ್ರಿಲ್ 30 ರ ಒಳಗೆ ಇದೇ ಮಾರ್ಗವಾಗಿ ಹೊರ ಹೋಗಬೇಕು ಎಂದು ಪಾಕಿಸ್ತಾನ ತಿಳಿಸಿದೆ.

ಇದರ ಜೊತೆಗೆ ಭಾರತ ಸಿಂಧೂ ನದಿ ಒಪ್ಪಂದ ಮುರಿದುಕೊಂಡ ಬೆನ್ನಲ್ಲೇ 1972ರ ಶಿಮ್ಲಾ ಒಪ್ಪಂದವನ್ನು ಪಾಕಿಸ್ತಾನವು ರದ್ದುಗೊಳಿಸಿರುವುದಾಗಿ ಘೋಷಿಸಿದೆ, ಇದು ಎರಡು ಪರಮಾಣು ಶಕ್ತಿ ಹೊಂದಿರುವ ರಾಷ್ಟ್ರಗಳ ನಡುವಿನ ಸಂಬಂಧವನ್ನು ತೀವ್ರವಾಗಿ ಒತ್ತಡಕ್ಕೆ ಸಿಲುಕಿಸಿದೆ.

1972ರ ಜುಲೈ 2ರಂದು ಭಾರತದ ಶಿಮ್ಲಾದಲ್ಲಿ ಸಹಿ ಮಾಡಲಾದ ಈ ಒಪ್ಪಂದವು 1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಶಾಂತಿಯುತ ಸಂಬಂಧಗಳನ್ನು ಸ್ಥಾಪಿಸಲು ಒಂದು ಐತಿಹಾಸಿಕ ಹೆಜ್ಜೆಯಾಗಿತ್ತು. ಭಾರತದ ಪ್ರಧಾನಮಂತ್ರಿ ಇಂದಿರಾ ಗಾಂಧಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಜುಲ್ಫಿಕಾರ್ ಅಲಿ ಭುಟ್ಟೊ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಆದರೆ ಈಗ ಪಾಕಿಸ್ತಾನದ ಪ್ರಧಾನಮಂತ್ರಿ ಕಾರ್ಯಾಲಯವು ಭಾರತವು ಗಡಿಪಾರದ ಭಯೋತ್ಪಾದನೆ, ಗುರಿಯಿಟ್ಟ ಕೊಲೆಗಳು ಮತ್ತು ಕಾಶ್ಮೀರದ ಕುರಿತಾದ ವಿಶ್ವಸಂಸ್ಥೆಯ ತೀರ್ಮಾನಗಳ ಉಲ್ಲಂಘನೆಯಲ್ಲಿ ತೊಡಗಿದೆ ಎಂದು ಆರೋಪಿಸಿದೆ. ಇದಕ್ಕೆ ಉತ್ತರವಾಗಿ ಶಿಮ್ಲಾ ಒಪ್ಪಂದ ಸೇರಿದಂತೆ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.

ಇದೊಂದು ಯುದ್ಧದ ಮುನ್ಸೂಚನೆಯಾಗಿದ್ದು ಗಡಿ ಭಾಗದಲ್ಲಿ ಭಯದ  ವಾತಾವರಣ ನಿರ್ಮಾಣವಾಗಿದೆ. ಯಾವುದೇ ಸಂದರ್ಭದಲ್ಲೂ ಎರಡೂ ಸರ್ಕಾರಗಳು ಯುದ್ಧ ಘೋಷಣೆ ಮಾಡಬಹುದಾದ ಹಿನ್ನೆಲೆಯಲ್ಲಿ ಸಂಪೂರ್ಣ ಪ್ರವಾಸಿಗರನ್ನೇ ನಂಬಿಕೊಂಡ ಗಡಿ ರಾಜ್ಯ ಜಮ್ಮು ಕಾಶ್ಮೀರ ಪಹಲ್ಗಾಮ್ ದಾಳಿಯ ನಂತರ ಪ್ರವಾಸಿಗರಿಲ್ಲದೇ ಬಣಗುಡುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page