Monday, May 12, 2025

ಸತ್ಯ | ನ್ಯಾಯ |ಧರ್ಮ

ಶ್ರೀ ರೇಣುಕಾಂಬ ಕಲಾಸಂಘದಿಂದ ಪ್ರಕೃತಿ ಸಂರಕ್ಷಣೆ ಹಾಗೂ ಆತ್ಮಹತ್ಯೆ ತಡೆ ಜಾಗೃತಿ, ಸನ್ಮಾನ ಕಾರ್ಯಕ್ರಮ

ಶ್ರೀ ರೇಣುಕಾಂಬ ಕಲಾಸಂಘ (ರಿ)ಬೆಂಗಳೂರು ಇವರ ಆಯೋಜನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮತ್ತು ಬೆಂಗಳೂರು ಮಹಾನಗರ ಪಾಲಿಕೆಯ ಆರ್ಥಿಕ ನೆರವಿನೊಂದಿಗೆ ಪ್ರಕೃತಿ ಸಂರಕ್ಷಣೆ ಹಾಗೂ ಆತ್ಮಹತ್ಯೆ ತಡೆ ಜಾಗೃತಿ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಅಂತರ ರಾಷ್ಟ್ರೀಯಮಟ್ಟದ ಕುಚಿಪುಡಿ, ಭರತನಾಟ್ಯ ಹಾಗೂ ನೃತ್ಯಗಳು, ರಾಜ್ಯಮಟ್ಟದ ಗೀತಗಾಯನ, ವಚನ ವಾಚನ ಹಾಗೂ ಕವಿಗೋಷ್ಠಿ ಕಾರ್ಯಕ್ರಮಗಳು ದಿನಾಂಕ 8/5/2025 ಗುರುವಾರದಂದು
ಬೆಂಗಳೂರಿನ ನಯನ ಸಭಾಂಗಣದಲ್ಲಿ ನೆರವೇರಿದವು.

ಬೆಂಗಳೂರು ಮಹಾನಗರ ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರ್ ರಾವ್ ರವರು, ಬೆಂಗಳೂರು ಮಹಾನಗರ ಪಾಲಿಕೆಯ ಮಾನ್ಯ ಆಡಳಿತಾಧಿಕಾರಿಯಾದ ಶ್ರೀ ತುಷಾರ್ ಗಿರಿನಾಥ್ ರವರು, ಕಲ್ಯಾಣದ ಐ.ಎ.ಎಸ್ ವಿಶೇಷ ಆಯುಕ್ತರಾದ ಶ್ರೀ ಸೂರಳ್ಕರ್ ವಿಕಾಶ್ ಕಿಶೋರ್ ರವರು, ಆರ್. ಆರ್. ನಗರ ವಲಯದ ಆಯುಕ್ತರಾದ ಶ್ರೀ ಡಾll ಸತೀಶ್ ರವರು ಹಾಗೂ ಆರ್. ಆರ್. ನಗರ ವಲಯದ ಜಂಟಿ ಆಯುಕ್ತರಾದ ಶ್ರೀಮತಿ ಡಾll ಆರತಿ ಆನಂದ್ ಇವರೆಲ್ಲರೂ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಬೆಂಗಳೂರಿನ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ನಾಗರಾಜ್ ಮೂರ್ತಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತ ಸಾರಥಿ ದಿನಪತ್ರಿಕೆಯ ಸಂಪಾದಕರು ಹಾಗೂ ಚಲನ ಚಿತ್ರ ನಟ ಮತ್ತು ನಿರ್ಮಾಪಕರು ಆದಂತಹ ಶ್ರೀ ಗಂಡಸಿ ಸದಾನಂದ ಸ್ವಾಮಿ, ಹಿರಿಯ ರಂಗಭೂಮಿ ಕಲಾವಿದರು ಹಾಗೂ ಸಮಾಜ ಸೇವಕರು ಆದಂತಹ ಶ್ರೀ ಗುರುರಾಜ ಪಟೇಲ್ ಬೆಟ್ಟಳ್ಳಿಯವರು, ಅಖಿಲ ಕರ್ನಾಟಕ ಡಾll ಮಾಯಣ್ಣಗೌಡ ಕಲಾವಿದ ಬಳಗದ ಶ್ರೀ ಮಾಯಣ್ಣಗೌಡರು, ಮೂಡಲಪಾಳ್ಯದ ಗೋವಿಂದರಾಜ ನಗರದ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರವೀಶ್ ರವರು, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜನಪ್ರಿಯ ನಿರೂಪಕರು ಆದಂತಹ ಶ್ರೀ ಆರ್. ವೆಂಕಟರಾಜು, ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕರು ಆದಂತಹ ಶ್ರೀ ಮಂಜು ಪಾಂಡವಪುರ, ಮಾರುತಿ ಮೆಡಿಕಲ್ಸ್ ಮಾಲಿಕರು ಹಾಗೂ ಗೋ ಸಂರಕ್ಷಕರು ಆದಂತಹ ಶ್ರೀ ಮಹೇಂದ್ರ ಮನೋತ್ ರವರು, ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೆ. ನಾಗರಾಜ್ ರವರು, ಹಿರಿಯ ರಂಗಭೂಮಿ ಕಲಾವಿದರಾದ ಶ್ರೀ ಕಾಂತೇಶ್ ಸಿ. ಮಾರನಪುರ ರವರು, ಬೆಂಗಳೂರಿನ ರಂಗಭೂಮಿ ಕಲಾವಿದರು ಹಾಗೂ ನಾಟಕ ಮತ್ತು ಚಲನಚಿತ್ರ ನಿರ್ದೇಶಕರಾದ ಶ್ರೀ ನಾಗೇಂದ್ರಪ್ರಸಾದ್ ರವರು, ನಾಗಾವರದ ಸಮಾಜ ಸೇವಕರು ಹಾಗೂ ಹಿರಿಯ ರಂಗಭೂಮಿ ಕಲಾವಿದರು ಆದಂತಹ ಶ್ರೀ ಆರ್. ಕೃಷ್ಣಮೂರ್ತಿ ಫೈಯರ್ ರವರು, ಹಿರಿಯ ರಂಗಭೂಮಿ ಕಲಾವಿದರು ಹಾಗೂ ಸಮಾಜ ಸೇವಕರು ಆದಂತಹ ಶ್ರೀ ವಜ್ರಮೂರ್ತಿರವರು, ಬೆಂಗಳೂರಿನ ಚಲನಚಿತ್ರ ನಟರು ಹಾಗೂ ರಂಗಭೂಮಿ ಕಲಾವಿದರಾದ ಶ್ರೀ ಸೂರ್ಯರವರು, ಬೆಂಗಳೂರಿನ ರಂಗಭೂಮಿ ಕಲಾವಿದರಾದ ಶ್ರೀ ನವೀನ್ ಗೌಡರವರು ಹಾಗೂ ಕಿರುತೆರೆ ಹಾಗೂ ಚಲನಚಿತ್ರ ನಟಿ ಮತ್ತು ರಂಗಭೂಮಿ ಕಲಾವಿದೆಯಾದಂತಹ ಶ್ರೀಮತಿ ಲಲಿತಾ ಶ್ರೀಧರ್ ಇವರೆಲ್ಲರೂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಗೀತ ಗಾಯನ, ವಚನ ವಾಚನ ಹಾಗೂ ಕವಿಗೋಷ್ಠಿ ಕಾರ್ಯಕ್ರಮಗಳು ನಡೆದವು. ಈ ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಬೆಂಗಳೂರಿನ ವಿಜಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀ ವಾದಿರಾಜರು ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಬಸವಲಿಂಗ ಎಲ್ ರವರು ನಡೆಸಿಕೊಟ್ಟರು.

ಕವಿಗೋಷ್ಠಿಯಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಿಂದ ಆಗಮಿಸಿದ ಸುಮಾರು ಮೂವತ್ತು ಕವಿ/ ಕವಯಿತ್ರಿಯರು ಪಾಲ್ಗೊಂಡಿದ್ದರು. ಎಲ್ಲರೂ ಅನೇಕ ಉತ್ತಮ ವಿಷಯಗಳನ್ನು ಒಳಗೊಂಡ ತಮ್ಮ ಸ್ವಯಂ ರಚಿತ ಕವನಗಳನ್ನು ವಾಚನ ಮಾಡಿದರು. ಕವನ ವಾಚನದಲ್ಲಿ ಶ್ರೀ ರೇಣುಕಾಂಬ ಕಲಾಸಂಘದ ಸದಸ್ಯೆಯೊಬ್ಬರು ಕೂಡಾ ತಮ್ಮ ಸ್ವಯಂ ರಚಿತ ಕವನವನ್ನು ವಾಚನ ಮಾಡುತ್ತಾ “ನನ್ನ ದೇಹ ನನ್ನ ಹಕ್ಕು” ಎನ್ನುವ ಸಂದೇಶ ಹೊತ್ತ ಕವನದ ಮೂಲಕ ಸಮಾಜದ ಕಣ್ಣು ತೆರೆಸುವ ಪ್ರಯತ್ನವನ್ನು ಮಾಡಿದ್ದಾರೆ.

ನಂತರ ಅಂತರರಾಷ್ಟ್ರೀಯ ಕುಚಿಪುಡಿ ಮತ್ತು ಭರತನಾಟ್ಯ ಕಲಾವಿದೆ ಗುರು ಡಾll ಎನ್ ಅನುಪಮಾ ಭೂಷಣ್ ರವರಿಂದ ಮತ್ತು ಅವರ ಶಿಷ್ಯವೃಂದದಿಂದ ಹಾಗೂ ರಸಜ್ಞ ಆಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ತಂಡದವರಿಂದ ಅಮೋಘವಾದ ನೃತ್ಯ ಪ್ರದರ್ಶನಗಳು ನೆರವೇರಿದವು. ತದನಂತರ ಜಿತುರೇಶಾ ಕಾವ್ಯನಾಮದ ಪ್ರೊ. ತುಕ್ಕಪ್ಪ ರವರ ರಚನೆ ಹಾಗೂ ನಿರ್ದೇಶನದ “ಕೈಲಾಸದ ಬಾಗಿಲಲ್ಲಿ ಆತ್ಮಗಳು” (ಆತ್ಮಹತ್ಯೆ ತಡೆಯಿರಿ ಜೀವ ಉಳಿಸಿರಿ) ನಾಟಕವು ನವಭಾರತ ಉದಯ ಪ್ರತಿಷ್ಠಾನದ ಅಭಿನಯ ರಂಗಕಲಾ ತಂಡದಿಂದ ಮೂಡಿಬಂತು. ಈ ನಾಟಕದ ಮೂಲಕ ಆತ್ಮಹತ್ಯೆಯು ಪರಿಹಾರವಲ್ಲ ಎನ್ನುವ ಸಂದೇಶವನ್ನು ಸಮಾಜಕ್ಕೆ ರವಾನೆ ಮಾಡಲಾಯಿತು. ನಾಟಕ ಪಾತ್ರಧಾರಿಗಳೆಲ್ಲರ ಅಭಿನಯವು ಅದ್ಭುತವಾಗಿತ್ತು. ಕಾರ್ಯಕ್ರಮಗಳ ನಿರೂಪಣೆಯನ್ನು ಬೆಂಗಳೂರಿನ ಸಂಗೀತಾ ಗಿರೀಶ್ ರವರು ಮಾಡಿದರು.

ನಾಟಕದ ನಡುವಿನ ವಿರಾಮದ ವೇಳೆಯಲ್ಲಿ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ ಕವಿ/ಕವಯಿತ್ರಿಯರಿಗೆ ಹಾಗೂ ಸಮಾಜದ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ,ಸನ್ಮಾನ,ಗೌರವಗಳನ್ನು ಪ್ರದಾನ ಮಾಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕವಿಗಳು ಹಾಗೂ ಕವಯಿತ್ರಿಯರೆಲ್ಲರಿಗೂ ಹಾಗೂ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೂ ಆದರಪೂರ್ವಕವಾಗಿ ಶಾಲು ಹೊದಿಸಿ, ಹಾರ ಹಾಕಿ, ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ಜೊತೆಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದವರು ಶ್ರೀ ರೇಣುಕಾಂಬ ಕಲಾಸಂಘದ ಸದಸ್ಯರು ಎನ್ನುವುದು ಹೆಮ್ಮೆಯ ವಿಚಾರ. ಶ್ರೀ ರೇಣುಕಾಂಬ ಕಲಾಸಂಘದ ಈ ಮಹತ್ತರ ಕಾರ್ಯಕ್ಕೆ ಕೈಜೋಡಿಸಿದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಹಾಗೂ ಬೆಂಗಳೂರಿನ ಮಹಾನಗರ ಪಾಲಿಕೆಯವರು ಎನ್ನುವುದು ಅತ್ಯಂತ ಸಂತೋಷದ ಸಂಗತಿ.

ಶ್ರೀ ರೇಣುಕಾಂಬ ಕಲಾಸಂಘದವರು ಗಾಯನ,ನಾಟ್ಯ,ನಾಟಕ ಮುಂತಾದ ಕಲೆಗಳನ್ನು ಪೋಷಿಸುತ್ತಿರುವುದಲ್ಲದೇ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮನ್ನು ಗುರುತಿಸಿಕೊಂಡು ಅನೇಕ ವರ್ಷಗಳಿಂದ ಸಮಾಜದ ಒಳಿಗಾಗಿ ದುಡಿಯುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ, ಅನುಕರಣೀಯ ಹಾಗೂ ಅಭಿನಂದನಾರ್ಹ.

ಶಿಕ್ಷಕಿ ಹಾಗೂ ಕವಯಿತ್ರಿಯಾದಂತಹ ಶ್ರೀಮತಿ ಸಾವಿತ್ರಮ್ಮ ಓಂಕಾರ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿ ಗಣ್ಯರ ಹಾಗೂ ಶ್ರೀ ರೇಣುಕಾಂಬ ಕಲಾಸಂಘದ ಸದಸ್ಯರ ರೇಖಾ ಚಿತ್ರವನ್ನು ರಚಿಸಿದರು. ಇವರು ಹೀಗೆ ತಮ್ಮ ಹಲವು ಪ್ರಿಯ ಸಾಹಿತಿಗಳ ರೇಖಾ ಚಿತ್ರಗಳನ್ನು ಬಿಡಿಸಿದ್ದಾರೆ. ಈ ಚಿತ್ರಗಳನ್ನು ನಯನ ಸಭಾಂಗಣದ ಆವರಣದಲ್ಲಿ ಕಾರ್ಯಕ್ರಮದ ದಿನದಂದು ಪ್ರದರ್ಶಿಸಲಾಗಿತ್ತು.

ಇಂದಿನ ಈ ಕಾರ್ಯಕ್ರಮಕ್ಕೆ ಕೈಜೋಡಿಸಿರುವ ಜಿತುರೇಶಾ ಕಾವ್ಯನಾಮದ ಪ್ರೊ. ತುಕ್ಕಪ್ಪನವರು ಕಾರ್ಯಕ್ರಮದ ಪ್ರಾರಂಭದಲ್ಲಿ ಮಾತನಾಡಿ ಶ್ರೀ ರೇಣುಕಾಂಬ ಕಲಾಸಂಘದವರ ಪರಿಚಯವನ್ನು ಹಾಗೂ ಅವರು ಮಾಡುತ್ತಿರುವ ಸಮಾಜ ಸೇವೆಯನ್ನು ಎಲ್ಲರಿಗೂ ಪರಿಚಯಿಸಿದರು. ಅವರ ಮಾತುಗಳನ್ನು ಆಲಿಸಿದಾಗ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಶ್ರೀ ರೇಣುಕಾಂಬ ಕಲಾಸಂಘದ ಬಗ್ಗೆ ಹೆಮ್ಮೆ ಎನಿಸಿತು. ಈ ಕಲಾಸಂಘದ ಪ್ರತಿಯೊಬ್ಬ ಸದಸ್ಯರೂ ಅಭಿನಂದನಾರ್ಹರು. ಸಮಾಜಕ್ಕೆ ಇವರೆಲ್ಲರೂ ಮಾಡುತ್ತಿರುವ ಸೇವೆ ಅಪಾರ. ಇವರ ಸೇವೆಯು ಇತರರಿಗೂ ಮಾದರಿಯಾಗಿದೆ. ಶ್ರೀ ರೇಣುಕಾಂಬ ಕಲಾಸಂಘದಿಂದ ಇನ್ನೂ ಇಂತಹಾ ಅನೇಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ನಡೆಯುತ್ತಿರಲಿ ಎಂದು ಒಮ್ಮನಸ್ಸಿನಿಂದ ಎಲ್ಲರೂ ಹಾರೈಸೋಣ.

ವರದಿ: ರುಕ್ಮಿಣಿ. ಎಸ್. ನಾಯರ್
ಬೆಂಗಳೂರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page