Wednesday, May 21, 2025

ಸತ್ಯ | ನ್ಯಾಯ |ಧರ್ಮ

ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೆ ಈವರೆಗೆ 7 ಮಂದಿ ಬಲಿ

ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಬಾರಿ ಮಳೆಗೆ ಈ ವರೆಗೆ 7 ಮಂದಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಬೆಂಗಳೂರು, ಕರಾವಳಿ ಹಾಗೂ ಮಲೆನಾಡು ಸೇರಿದಂತೆ ರಾಜ್ಯದ 18 ಜಿಲ್ಲೆಗಳಲ್ಲಿ ಚಂಡಮಾರುತದ ಅಬ್ಬರಕ್ಕೆ ಹಲವು ಕಡೆ ತೀವ್ರ ಹಾನಿ ಸಂಭವಿಸಿದೆ. ಅವಧಿ ಪೂರ್ವ ಮಳೆಗೇ ಈ ಮಟ್ಟದ ಸಂಭವಿಸಿರುವ ಹಿನ್ನೆಲೆಯಲ್ಲಿ ಮಳೆಗಾಲಕ್ಕೆ ಇನ್ನೆಂತಹ ಅನಾಹುತ ಸೃಷ್ಟಿಯಾಗಬಹುದು ಎಂಬ ಆತಂಕ ಎದುರಾಗಿದೆ.

ಕೇವಲ ಮಂಗಳವಾರ ಮಾತ್ರ ಸುರಿದ ಸಿಡಿಲಬ್ಬರದ ಮಳೆಗೆ 6 ಮಂದಿ ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಇಬ್ಬರು, ಧಾರವಾಡ, ಬಳ್ಳಾರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್‌ನ ಸುಂಕಸಾಲೆ ಬಳಿ ಮಿನಿ ಬಸ್‌ ಹಾಗೂ ಬೈಕ್‌ ಮೇಲೆ ಬೃಹತ್‌ ಮರ ಬಿದ್ದಿದ್ದು, ಬೈಕ್‌ ಸವಾರನಿಗೆ ಗಾಯವಾಗಿದೆ. ಮಿನಿ ಬಸ್‌ನ ಮುಂಭಾಗ ಜಖಂಗೊಂಡಿದೆ. ಉಡುಪಿ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ಮಣಿಪಾಲದ ಸಿಂಡಿಕೇಟ್ ವೃತ್ತದಲ್ಲಿ ಮಳೆ ನೀರು ಕಾಲುವೆಯಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದು, ಕೃತಕ ಪ್ರವಾಹದ ಪರಿಸ್ಥಿತಿ ಸೃಷ್ಟಿಸಿತ್ತು.

ಇದರಿಂದ ಕೆಲವು ದ್ವಿಚಕ್ರ ವಾಹನಗಳು ಉರುಳಿಬಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಈ ಕೃತಕ ನೆರೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೇ ವೇಳೆ, ಮಂಡ್ಯ, ಬೆಂಗಳೂರು, ಧಾರವಾಡ, ಚಿಕ್ಕೋಡಿ ಸೇರಿ ರಾಜ್ಯದ ಇತರಡೆಯೂ ಮಳೆಯಾದ ವರದಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page